ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ರೈತರ ಸಂಭ್ರಮದ ಜೀವನಾಡಿ: ಮಣ್ಣೆತ್ತಿನ ಅಮವಾಸ್ಯೆ

On: July 14, 2026 6:16 PM
Follow Us:

ಜಗತ್ತಿನ ಭೂಪಟದಲ್ಲಿ ತನ್ನದೇ ಆದ ಸಾಂಸ್ಕೃತಿಕ ಭವ್ಯತೆಯಿಂದ ಕಂಗೊಳಿಸುವ ದೇಶ ನಮ್ಮ ಭಾರತ. ಇದು ಹಳ್ಳಿಗಳ ನಾಡು, ಕೃಷಿಯನ್ನೇ ಉಸಿರಾಗಿಸಿಕೊಂಡ ಜನಪದರ ಬೀಡು. ಅದರಲ್ಲೂ ನಮ್ಮ ಕರ್ನಾಟಕದ, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ರೈತಾಪಿ ವರ್ಗದಲ್ಲಿ ಹಬ್ಬಗಳ ಆಚರಣೆಗೆ ಅಪಾರವಾದ ಮಹತ್ವವಿದೆ. ಹತ್ತಾರು ವರ್ಷಗಳ ಕಾಲ ಬಾದಾಮಿ ತಾಲೂಕಿನಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ, ಪ್ರತಿವರ್ಷ ‘ಮಣ್ಣೆತ್ತಿನ ಅಮವಾಸ್ಯೆ’ ಹಬ್ಬದ ಊಟಕ್ಕೆ ನಮಗೆ ಖಾಯಂ ಆಹ್ವಾನವಿರುತ್ತಿತ್ತು. ಅಂದು ನನ್ನ ಶಾಲೆಯ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಮಣ್ಣಿನಿಂದ ಜೋಡೆತ್ತುಗಳನ್ನು ಮಾಡಿ, ತಂದು ಪೂಜಿಸಿ ಶಾಲೆಯಲ್ಲಿಡುತ್ತಿದ್ದ ಆ ದಿನಗಳು ಇಂದಿಗೂ ಹಸಿರಾಗಿ ನೆನಪಿನಲ್ಲಿವೆ. ಪ್ರಕೃತಿ ಮತ್ತು ಮಾನವನ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಈ ‘ಮಣ್ಣೆತ್ತಿನ ಅಮವಾಸ್ಯೆ’ಯ ಹಿನ್ನೆಲೆ ಹಾಗೂ ಮಹತ್ವ ನಿಜಕ್ಕೂ ಅನನ್ಯ.

ಸಂಪ್ರದಾಯ ಮತ್ತು ಪ್ರಕೃತಿಯ ಆರಾಧನೆ

ನಮ್ಮ ಭಾರತ ವೈವಿಧ್ಯತೆಯ ತವರೂರು. ಇಲ್ಲಿನ ಆಚರಣೆಗಳು ಕೇವಲ ವಿಧಿವಿಧಾನಗಳಲ್ಲ, ಅವು ಜೀವನ ಪ್ರೀತಿಯ ಸಂಕೇತಗಳು. ರೈತರ ಉಸಿರೇ ಮಣ್ಣು ಮತ್ತು ಜಾನುವಾರುಗಳು. ಹಾಗಾಗಿಯೇ, ಮಣ್ಣೆತ್ತಿನ ಅಮಾವಾಸ್ಯೆ ಅನ್ನದಾತನಿಗೆ ಅತ್ಯಂತ ಪ್ರಿಯವಾದ ಹಬ್ಬ. ಕೃಷಿಕನ ಬದುಕಿಗೆ ಹೆಗಲುಕೊಟ್ಟು ದುಡಿಯುವ ಎತ್ತುಗಳನ್ನು ಕೃತಜ್ಞತೆಯಿಂದ ಪೂಜಿಸುವ ಪವಿತ್ರ ದಿನವಿದು.

ವೈಶಾಖದ ಬಿಸಿಲ ಬೇಗೆಯಿಂದ ಬೆಂದು ಕಂಗಾಲಾದ ಭೂಮಿಗೆ ತಂಪೆರೆಯಲು ಮುಂಗಾರು ಮೋಡಗಳು ಆಕಾಶದಲ್ಲಿ ಕವಿಯುತ್ತಿದ್ದಂತೆ, ಮಳೆಯ ಸಿಂಚನಕ್ಕೆ ಹಲುಬುವ ರೈತನಿಗೆ ಕೃಷಿ ಚಟುವಟಿಕೆಯ ತವಕ ಆರಂಭವಾಗುತ್ತದೆ. ಕಾರಹುಣ್ಣಿಮೆಯ ಸಡಗರ ಮುಗಿಯುತ್ತಿದ್ದಂತೆ ಮುಳುಗೇಳುವ ರೈತಾಪಿ ವರ್ಗವು ಭಕ್ತಿ-ಭಾವದಿಂದ ಆಚರಿಸುವ ಹಬ್ಬವೇ ಈ ಮಣ್ಣೆತ್ತಿನ ಅಮವಾಸ್ಯೆ.

ಕೃಷಿ ಚಟುವಟಿಕೆ ಮತ್ತು ಹಬ್ಬದ ಹಿನ್ನೆಲೆ

ಮುಂಗಾರು ಮಳೆಯು ಸಾಮಾನ್ಯವಾಗಿ ಗ್ರೀಷ್ಮ ಋತುವಿನ ಅಂತ್ಯಭಾಗ ಹಾಗೂ ವರ್ಷ ಋತುವಿನ ಆರಂಭದಲ್ಲಿ, ಅಂದರೆ ಜೂನ್ ತಿಂಗಳ ವೇಳೆಗೆ ಧರೆಗಿಳಿಯುತ್ತದೆ. ಮಳೆಯಾಗುತ್ತಿದ್ದಂತೆ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ಪುನರ್ವಸು ಮಳೆ ಪ್ರಾರಂಭವಾಗುವ ಹೊತ್ತಿಗೆ ಬಿತ್ತನೆ ಮುಗಿದು, ನಾಟಿ ಕಾರ್ಯವೂ ಸಂಪೂರ್ಣವಾಗಿರುತ್ತದೆ. ಶ್ರಮದ ಕೆಲಸ ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಡುವ ಈ ಸುಸಮಯದ ಸಂಭ್ರಮಾಚರಣೆಯೇ ಮಣ್ಣೆತ್ತಿನ ಅಮವಾಸ್ಯೆ.

ಈ ದಿನ ರೈತರು ಸಡಗರದಿಂದ ತಮ್ಮ ಹೊಲಕ್ಕೆ ಹೋಗಿ ಅಲ್ಲಿಂದ ಪವಿತ್ರವಾದ ಮಣ್ಣನ್ನು ತರುತ್ತಾರೆ. ಆ ಮಣ್ಣಿನಿಂದ ಸುಂದರವಾದ ಜೋಡಿ ಎತ್ತುಗಳ (ವೃಷಭ) ಮೂರ್ತಿಗಳನ್ನು ತಯಾರಿಸುತ್ತಾರೆ. ನಂತರ ಅವುಗಳಿಗೆ ಆಕರ್ಷಕ ಬಣ್ಣಗಳನ್ನು ಹಚ್ಚಿ, ನಾನಾ ರೀತಿಯಲ್ಲಿ ಶೃಂಗರಿಸಿ ಪೂಜೆಗೆ ಸಿದ್ಧಗೊಳಿಸಲಾಗುತ್ತದೆ. ಗಣೇಶ ಚತುರ್ಥಿಯಂದು ಮಣ್ಣಿನ ಗಣಪತಿಯನ್ನು, ನಾಗರ ಪಂಚಮಿಯಂದು ಮಣ್ಣಿನ ನಾಗಪ್ಪನನ್ನು ಆರಾಧಿಸುವಷ್ಟೇ ಪವಿತ್ರ ಭಾವನೆಯಿಂದ ರೈತರು ಈ ಮಣ್ಣೆತ್ತುಗಳನ್ನು ಆರಾಧಿಸುತ್ತಾರೆ.

ಪೂಜಾ ವಿಧಾನ ಮತ್ತು ಸಂಭ್ರಮ

ಮನೆಯ ಒಳಗೆ ಜಗಲಿಯ ಮೇಲೋ ಅಥವಾ ಮಂಟಪದಲ್ಲೋ ಮಣ್ಣಿನ ಜೋಡೆತ್ತುಗಳನ್ನು ಪ್ರತಿಷ್ಠಾಪಿಸಿ, ಧೂಪ-ದೀಪಗಳಿಂದ ಪೂಜಿಸಲಾಗುತ್ತದೆ. ಈ ದಿನದ ವಿಶೇಷವಾಗಿ ತಯಾರಿಸಿದ ಹೋಳಿಗೆ (ಒಬ್ಬಟ್ಟು) ಮತ್ತು ಸಿಹಿ ಕಡಬುಗಳನ್ನು ಎತ್ತುಗಳಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ತದನಂತರ, ಈ ಮಣ್ಣೆತ್ತುಗಳನ್ನು ಜಮೀನಿಗೆ ಕೊಂಡೊಯ್ದು ಪ್ರತಿಷ್ಠಾಪಿಸಿ, “ಭೂತಾಯಿಯೇ, ಕಷ್ಟಪಟ್ಟು ಬಿತ್ತಿದ ಬೆಳೆಯನ್ನು ಹಾಗೂ ಸಾಕಿ ಬೆಳೆಸಿದ ಎತ್ತುಗಳನ್ನು ನೀನೇ ರಕ್ಷಿಸು” ಎಂದು ಪ್ರಾರ್ಥಿಸುವುದು ತಲೆತಲಾಂತರದಿಂದ ನಡೆದುಬಂದಿರುವ ವಾಡಿಕೆ.

ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮಹತ್ವ

ನಮ್ಮ ದೇಹವು ಪಂಚಭೂತಗಳಿಂದ ನಿರ್ಮಿತವಾಗಿದ್ದು, ಅದರಲ್ಲಿ ಮಣ್ಣು (ಪೃಥ್ವಿ) ಪ್ರಮುಖ ಅಂಶವಾಗಿದೆ. ಈ ಹಬ್ಬದಲ್ಲಿ ಮಣ್ಣಿನ ಆರಾಧನೆ ಮಾಡುವುದರ ಮೂಲಕ ಪ್ರಕೃತಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ. ಭೂಮಿಯಲ್ಲಿ ಬೀಜ ಮೊಳಕೆಯೊಡೆದು, ಫಸಲಾಗಿ ಬಂದು, ನಮ್ಮ ಕೈ ಸೇರುವವರೆಗಿನ ಪ್ರತಿಯೊಂದು ಹಂತದಲ್ಲೂ ವೃಷಭಗಳ ಸೇವೆ ಅತ್ಯಗತ್ಯ. ವೃಷಭವು ಸಾಕ್ಷಾತ್ ಶಿವನ (ರುದ್ರದೇವರ) ವಾಹನವಾದ್ದರಿಂದ, ಶಿವನನ್ನು ‘ನಂದೀಶ’ ಎಂದೇ ಆರಾಧಿಸಲಾಗುತ್ತದೆ. ಹೀಗಾಗಿ, ಮಣ್ಣೆತ್ತಿನ ಪೂಜೆಯಲ್ಲಿ ಭೂದೇವಿಯ ಆರಾಧನೆಯೂ ಅಡಗಿದೆ. ಈ ದಿವಸ ವಿಶೇಷ ಅಡುಗೆಯನ್ನು ಮಾಡಿ ಭೂತಾಯಿ, ಅಗ್ನಿ, ವಾಯು ಮತ್ತು ಇಷ್ಟದೇವತೆಗಳಿಗೆ ನಿವೇದಿಸಿ, ವೃಷಭಗಳಿಗೆ ನೈವೇದ್ಯ ಸಲ್ಲಿಸಿದ ನಂತರವೇ ಮನೆಯವರೆಲ್ಲರೂ ಒಟ್ಟಾಗಿ ಪ್ರಸಾದ ಸ್ವೀಕರಿಸುವುದು ಈ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ.

ಇಂದಿನ ಯಾಂತ್ರಿಕ ಯುಗದಲ್ಲಿ ಹಬ್ಬದ ಪ್ರಸ್ತುತತೆ

ಇಂದಿನ ಆಧುನಿಕ ಯಂತ್ರೋಪಕರಣಗಳ ಕಾಲದಲ್ಲಿ ಹಳ್ಳಿಗಳಲ್ಲಿ ರೈತರ ಮನೆಗಳಲ್ಲಿ ಎತ್ತುಗಳು ಇರುವುದೇ ಅಪರೂಪವಾಗಿಬಿಟ್ಟಿದೆ. ಟ್ರ್ಯಾಕ್ಟರ್‌ಗಳ ಅಬ್ಬರದಲ್ಲಿ ಎತ್ತು-ದನಕರುಗಳನ್ನು ಸಾಕುವುದು ಇಂದಿನ ಜನರಿಗೆ ಬೇಡದ ಕೆಲಸವಾಗಿ ಪರಿಣಮಿಸಿದೆ. ಎತ್ತುಗಳನ್ನು ಸಾಕಿ, ಅವುಗಳಿಗೆ ಮೇವು-ನೀರು ಒದಗಿಸಿ, ಪೋಷಿಸುವುದು ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಕಷ್ಟದಾಯಕವಾಗಿದೆ ಎನ್ನುವುದು ಕೂಡ ಅಷ್ಟೇ ನಿಜ.

ಆದರೆ, ಬದುಕು ಎಷ್ಟೇ ವಿಲಾಸಿಯಾದರೂ, ಆಧುನಿಕತೆ ಎಷ್ಟೇ ಬೆಳೆದರೂ, ನಾವು ಎಷ್ಟೇ ಹಣ-ಆಸ್ತಿ-ಸಂಪತ್ತನ್ನು ಗಳಿಸಿದರೂ ಹೊಟ್ಟೆಗೆ ಉಣ್ಣಲು ಅನ್ನ ಬೆಳೆಯುವ ರೈತನ ಕಾಯಕ ಮತ್ತು ಆತನ ಶ್ರಮವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಕೃಷಿ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಈ ಮಣ್ಣೆತ್ತಿನ ಅಮವಾಸ್ಯೆಯಂತಹ ಹಬ್ಬಗಳು ಪ್ರಮುಖ ಮಾಧ್ಯಮಗಳಾಗಿವೆ.

ಜಾಗತೀಕರಣದ ಅಬ್ಬರದಲ್ಲಿ ನಮ್ಮ ಗ್ರಾಮೀಣ ಸಂಸ್ಕೃತಿ ನಶಿಸಿಹೋಗಬಾರದು. ಬಾಲ್ಯದಲ್ಲಿ ಮಣ್ಣಿನಲ್ಲಿ ಜೋಡೆತ್ತುಗಳನ್ನು ಮಾಡಿ ಆಡಿದ ಆ ಸುಂದರ ನೆನಪುಗಳನ್ನು ಇಂದಿನ ಪೀಳಿಗೆಗೂ ದಾಟಿಸಬೇಕಿದೆ. ಕನಿಷ್ಠ ಇಂತಹ ಹಬ್ಬಗಳ ಮೂಲಕವಾದರೂ ಮಣ್ಣಿನ ಎತ್ತುಗಳನ್ನು ಮಾಡಿ, ಸಿಂಗರಿಸಿ ಪೂಜಿಸುವ ಮೂಲಕ ನಮ್ಮ ಕೃಷಿ ಮೂಲದ ಬೇರುಗಳನ್ನು ಗಟ್ಟಿಗೊಳಿಸೋಣ. ನಮ್ಮ ಪೂರ್ವಜರು ಕೊಟ್ಟುಹೋದ ಈ ಸುಂದರ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಲ್ಲವೇ? ಏನಂತೀರಾ..?

– ಸಂತೋಷ್ ಬಿದರಗಡ್ಡೆ, ಶಿಕ್ಷಕರು, ಶಿವಮೊಗ್ಗ

K.M.Sathish Gowda

Join WhatsApp

Join Now

Facebook

Join Now

Read more

ರಾಜಯೋಗ ಧ್ಯಾನ; ಒತ್ತಡ ಮತ್ತು ಆತಂಕ ನಿವಾರಣೆಗೆ ದಿವ್ಯೌಷಧ: ಬ್ರಹ್ಮಕುಮಾರಿ ಜಯಂತಿ ಅಕ್ಕನವರು

ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಯೋಗ, ಪ್ರಾಣಾಯಾಮ ಮತ್ತು ಧ್ಯಾನದಿಂದ ಆರೋಗ್ಯಕರ, ಒತ್ತಡಮುಕ್ತ ಜೀವನ ಸಾಧ್ಯ: ಎಸ್. ರುದ್ರೇಗೌಡ

ಒತ್ತಡದ ಬದುಕಿಗೆ ಯೋಗವೇ ಸಂಜೀವಿನಿ; ಆರೋಗ್ಯವೇ ಅಮೂಲ್ಯ ಆಸ್ತಿ: ಸಿ.ಎಸ್. ಷಡಾಕ್ಷರಿ

ಹುಬ್ಬಳ್ಳಿಯಲ್ಲಿ ಉಚಿತ ಆಯುರ್ವೇದ ಔಷಧ ವಿತರಣೆ:“ಕೋಟಿ ಹಣ ಕೊಟ್ಟರೂ ಕಳೆದುಹೋದ ಆರೋಗ್ಯವನ್ನು ಮರಳಿ ಪಡೆಯಲು ಸಾಧ್ಯವಿಲ್ಲ” – ಶ್ರೀ ರಂಭಾಪುರಿ ಜಗದ್ಗುರುಗಳು

​ಫ್ರೆಂಡ್ಸ್ ಸೆಂಟರ್ ವತಿಯಿಂದ ಸೌಹಾರ್ದಯುತ ‘ಕುಟುಂಬ ಮಿಲನ’ ಸಂಭ್ರಮ: “ಒಂದೆಡೆ ಸೇರುವುದರಿಂದ ಬಾಂಧವ್ಯ ಹಾಗೂ ಆರೋಗ್ಯ ವೃದ್ಧಿ”; ಅಧ್ಯಕ್ಷ ಬಿ.ಜಿ. ಧನರಾಜ್‌

ಭಾರತದಲ್ಲಿ ಕೇವಲ ಶೇ.17 ಜನರಿಗಷ್ಟೇ ಬಿಪಿ ತಪಾಸಣೆಯ ಕಾಳಜಿ: ಹೆಚ್ಚುತ್ತಿರುವ ಒತ್ತಡದ ಬದುಕಿಗೆ ‘AI’ ಸಂಜೀವಿನಿ — ಡಾ. ಬಾಲು

Leave a Comment