ಶಿವಮೊಗ್ಗ: ರಾಜ್ಯದಲ್ಲಿ ಜಾತಿ ಜನಗಣತಿ ವಿಚಾರವನ್ನು ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದು, ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯದ ಆಶಯವನ್ನು ಪದೇಪದೆ ವಂಚಿಸಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಬಿಜೆಪಿ ಒಬಿಸಿ ರಾಜ್ಯಾಧ್ಯಕ್ಷರಾದ ರಘು ಕೌಟಿಲ್ಯ ಆರೋಪಿಸಿದರು.
ಶಿವಮೊಗ್ಗದ ಜಿಲ್ಲಾ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಹತ್ತು ವರ್ಷಗಳ ಕಾಲಹರಣ; 600 ಕೋಟಿ ರೂ. ಸಾರ್ವಜನಿಕ ಹಣ ನೀರು ಪಾಲು!: ರಘು ಕೌಟಿಲ್ಯಾ
2013ರಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಸಂಪೂರ್ಣವಾಗಿ ಮೂಲೆಗೆ ತಳ್ಳಿ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರು, ಜಾತಿ ಜನಗಣತಿಯ ವಿಷಯದಲ್ಲಿ ಕೇವಲ ‘ಮಾತಿನ ಶೂರ’ರಾಗಿದ್ದಾರೆ. ಒಬಿಸಿ ಸಮುದಾಯಗಳ ಆಶೋತ್ತರಗಳಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದ ಇವರು, ಸುಮಾರು 600 ಕೋಟಿ ರೂಪಾಯಿಗಳಷ್ಟು ಭಾರಿ ಮೊತ್ತದ ಸಾರ್ವಜನಿಕ ತೆರಿಗೆ ಹಣವನ್ನು ವ್ಯರ್ಥ ಮಾಡಿ ಕೈತೊಳೆದುಕೊಂಡಿದ್ದಾರೆ.
■ ಆಯೋಗಗಳ ಚೆಲ್ಲಾಟ:
2014ರಲ್ಲಿ ಮೊದಲು ಕಾಂತರಾಜ ಆಯೋಗಕ್ಕೆ ‘ಜಾತಿ ಜನಗಣತಿ’ಯ ಜವಾಬ್ದಾರಿ ನೀಡಲಾಯಿತು. ಆನಂತರ ಅದನ್ನು ಜಯಪ್ರಕಾಶ್ ಹೆಗ್ಡೆ ಆಯೋಗಕ್ಕೆ ವಹಿಸಲಾಯಿತು. ಆದರೆ, ಕೊನೆಗೆ ಹತ್ತು ವರ್ಷಗಳ ಸುದೀರ್ಘ ಅವಧಿಯ ನಂತರವೂ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ಹೆಸರಿನ ಈ ಜಾತಿ ಜನಗಣತಿಯ ವರದಿ ಸದ್ದಿಲ್ಲದೆ ಮೂಲೆ ಸೇರಿತು.
■ ಇತರ ರಾಜ್ಯಗಳಿಗೆ ಹೋಲಿಕೆ:
ಬಿಹಾರದ ನಿತೀಶ್ ಕುಮಾರ್ ಆಗಲಿ ಅಥವಾ ತೆಲಂಗಾಣದ ರೇವಂತ್ ರೆಡ್ಡಿಯಾಗಲಿ ಕೇವಲ ಒಂದು ವರ್ಷದ ಕಾಲಮಿತಿಯೊಳಗೆ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಆದರೆ ಸಿದ್ದರಾಮಯ್ಯನವರು ಹತ್ತು ವರ್ಷಗಳ ಕಾಲ ಕೇವಲ ಕಾಲಹರಣ ಮಾಡುತ್ತಾ ಒಬಿಸಿ ಸಮುದಾಯಗಳ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ.

ಸುಳ್ಳು ಭರವಸೆ ಮತ್ತು ತರಾತುರಿಯ ನಾಟಕ
ಕಳೆದ ವರ್ಷ ಸಿದ್ದರಾಮಯ್ಯನವರು ಮತ್ತೊಂದು ಜಾತಿಗಣತಿಯ ನಾಟಕಕ್ಕೆ ಮುಂದಾದರು. ಜೂನ್ 15, 2025 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಹಿಂದುಳಿದ ವರ್ಗಗಳ ಆಯೋಗದ ಆಗಿನ ಅಧ್ಯಕ್ಷ ಮಧುಸೂದನ್ ನಾಯಕ್ ನೇತೃತ್ವದಲ್ಲಿ ಮತ್ತೊಂದು ‘ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ’ಯನ್ನು ಘೋಷಿಸಲಾಯಿತು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕೇವಲ ಮೂರೇ ತಿಂಗಳಲ್ಲಿ ವರದಿ ಸಿದ್ಧವಾಗುತ್ತದೆ ಎಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಿದ್ದರು.
ವಾಸ್ತವ ಹೀಗಿದೆ: ಮೂರು ತಿಂಗಳು ಹಾಗಿರಲಿ, ಆರು ತಿಂಗಳಾದರೂ ಪ್ರಕ್ರಿಯೆ ಮುಗಿಯಲಿಲ್ಲ. ಸಮೀಕ್ಷೆ ಆರಂಭವಾಗಿದ್ದೇ ಸೆಪ್ಟೆಂಬರ್ 22ಕ್ಕೆ! ಅಂದರೆ ಘೋಷಣೆಯಾದ ಮೊದಲ ಮೂರು ತಿಂಗಳು ಸುಮ್ಮನೆ ಕಳೆಯಿತು. ನವೆಂಬರ್ 10ಕ್ಕೆ ಸಮೀಕ್ಷೆ ಮುಗಿದರೂ, ನಂತರದ ಆರು ತಿಂಗಳ ಕಾಲ ವರದಿಯನ್ನೇ ಪೂರ್ಣಗೊಳಿಸಲಿಲ್ಲ.
ತದನಂತರ ಮೇ 26ರಂದು ಸಿದ್ದರಾಮಯ್ಯನವರಿಗೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಆದೇಶಿಸಿತು. ತಕ್ಷಣವೇ ಎಚ್ಚೆತ್ತ ಸಿದ್ದರಾಮಯ್ಯನವರು, ತಮ್ಮ ಸ್ಥಾನ ಕಳೆದುಕೊಳ್ಳುವ ಮುನ್ನಾದಿನ, ಅಂದರೆ ಮೇ 27ರಂದು ತರಾತುರಿಯಲ್ಲಿ ವರದಿ ಸ್ವೀಕರಿಸುವ ಕೇವಲ ಒಂದು ಔಪಚಾರಿಕ ‘ಶಾಸ್ತ್ರ’ ಮಾಡಿದರು. ಸರ್ಕಾರಕ್ಕೆ ನಿಜವಾಗಿಯೂ ಬದ್ಧತೆ ಇದ್ದಿದ್ದರೆ ಆಯೋಗ ಚುರುಕಾಗಿ ಕಾರ್ಯನಿರ್ವಹಿಸುವಂತೆ ಮಾಡಿ, ಶಿಫಾರಸುಗಳನ್ನು ಜಾರಿಗೆ ತರಲು ಮುಂದಾಗಬೇಕಿತ್ತಲ್ಲವೇ? ಎಂದು ರಘು ಕೌಟಿಲ್ಯಾ ಪ್ರಶ್ನಿಸಿದರು.

ಕಾನೂನು ವೈಫಲ್ಯ ಮತ್ತು ಸರ್ಕಾರದ ನಿರ್ಲಕ್ಷ್ಯ
ವರದಿಯ ಕೆಲವು ಪ್ರಮುಖ ಅಂಶಗಳು ಪತ್ರಿಕೆಗಳಲ್ಲಿ ಸೋರಿಕೆಯಾದ ಬೆನ್ನಲ್ಲೇ, ಜೂನ್ 16 ರಂದು ಈ ಜಾತಿ ಜನಗಣತಿಯ ವಿಷಯ ಹೈಕೋರ್ಟ್ ಮೆಟ್ಟಿಲೇರಿತು. ಸದ್ಯ ಪ್ರಕರಣವು ಆಗಸ್ಟ್ 20 ಕ್ಕೆ ಮುಂದೂಡಲ್ಪಟ್ಟಿದೆ. ಆದರೆ, ಕರ್ನಾಟಕ ಸರ್ಕಾರ ಈ ಕಾನೂನು ಹೋರಾಟದಲ್ಲೂ ಸರಿಯಾದ ಸಿದ್ಧತೆ ಮಾಡಿಕೊಳ್ಳದೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ರಘು ಕೌಟಿಲ್ಯ ಹೇಳಿದರು.
ಪ್ರಸ್ತುತ ರಾಜ್ಯದ ಹೊಸ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಜಾತಿ ಜನಗಣತಿಯ ಬಗ್ಗೆ ಒಂದು ಶಬ್ದವನ್ನೂ ಮಾತನಾಡುತ್ತಿಲ್ಲ. ಇತ್ತ ಕಾಂಗ್ರೆಸ್ನಲ್ಲಿರುವ ಹಿಂದುಳಿದ ವರ್ಗಗಳ ನಾಯಕರಿಗೆ ಕೇವಲ ತಮ್ಮ ಮಂತ್ರಿ ಸ್ಥಾನ ಹಾಗೂ ಖಾತೆಗಳ ಚಿಂತೆಯಾಗಿದೆಯೇ ಹೊರತು ಸಮುದಾಯದ ಹಿತಾಸಕ್ತಿಯಲ್ಲ. ಫೆಬ್ರವರಿ ತಿಂಗಳಲ್ಲಿ ನಡೆದ ರಾಜ್ಯಪಾಲರ ಭಾಷಣದಲ್ಲಾಗಲಿ ಅಥವಾ ಮುಖ್ಯಮಂತ್ರಿಗಳ ಬಜೆಟ್ ಭಾಷಣದಲ್ಲಾಗಲಿ ಈ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಒಂದು ಸಾಲಿನ ಉಲ್ಲೇಖವೂ ಇರಲಿಲ್ಲ. ಸರ್ಕಾರದ ಈ ನಿಷ್ಕಾಳಜಿಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ?
ಕೇಂದ್ರ ಸರ್ಕಾರದಿಂದ ಮಾತ್ರವೇ ಸಾಮಾಜಿಕ ನ್ಯಾಯ ಸಾಧ್ಯ!
ಕಾಂಗ್ರೆಸ್ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಏಳಿಗೆ ಬೇಕಾಗಿಲ್ಲ, ಅವರಿಗೆ ಜಾತಿ ಜನಗಣತಿಯ ಹೆಸರಿನಲ್ಲಿ ಕೇವಲ ‘ವೋಟ್ ಬ್ಯಾಂಕ್’ ರಾಜಕಾರಣ ಮಾಡುವುದಷ್ಟೇ ಗೊತ್ತು. ಪ್ರಸ್ತುತ ಕೇಂದ್ರ ಸರ್ಕಾರವೇ ಅಧಿಕೃತವಾಗಿ ಜಾತಿ ಜನಗಣತಿಯ ಸಿದ್ಧತೆ ಮತ್ತು ಪ್ರಕ್ರಿಯೆಗಳನ್ನು ಆರಂಭಿಸಿದೆ. ಆ ಮೂಲಕವೇ ಕರ್ನಾಟಕದ ಜನತೆ ನೈಜ ಸಾಮಾಜಿಕ ನ್ಯಾಯವನ್ನು ಪಡೆದುಕೊಳ್ಳಬೇಕಾಗಿದೆ. ಕಾಂಗ್ರೆಸ್ ಸರ್ಕಾರದ ಈ ವಂಚನೆಯ ನೀತಿಯಿಂದ ರೋಸಿ ಹೋಗಿರುವ ಹಿಂದುಳಿದ ವರ್ಗಗಳ ಜನತೆ, ರೊಚ್ಚಿಗೆದ್ದು ಬೀದಿಗಿಳಿದು ಹೋರಾಡುವ ದಿನಗಳು ದೂರವಿಲ್ಲ ಎಂದು ರಘು ಕೌಟಿಲ್ಯಾ ಎಚ್ಚರಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷರಾದ ಜಗದೀಶ್ ಎನ್ ಕೆ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯರಾದ ಶ್ರೀಮತಿ ಶ್ಯಾಮಲಾ ಕುಂದರ್, ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಮಾಜಿ ಉಪಾಧ್ಯಕ್ಷರಾದ ಪೂರ್ಣಿಮ ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಲತೇಶ್ ಮತ್ತು ಹರಿಕೃಷ್ಣ, ಚಿಕ್ಕಮಗಳೂರು ಬಿಜೆಪಿ ಒಬಿಸಿ ಜಿಲ್ಲಾಧ್ಯಕ್ಷರಾದ ಲಕ್ಕಪ್ಪ, ಶಿವಮೊಗ್ಗ ಜಿಲ್ಲಾ ಒಬಿಸಿ ಅಧ್ಯಕ್ಷರಾದ ಸುಧಾಕರ್, ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಸುನೀತಾ ಅಣ್ಣಪ್ಪ, ಒಬಿಸಿ ಪ್ರಮುಖರುಗಳಾದ ಮಮತಾ ರೆಡ್ಡಿ, ಪ್ರಭಾಕರ್, ಭೋಜರಾವ್, ರಂಗನಾಥ ಹಾಗೂ ಮಾಧ್ಯಮ ಪ್ರಮುಖರಾದ ಚಂದ್ರಶೇಖರ್ ಎಸ್ ಮತ್ತು ಮಂಜುನಾಥ್ ಎನ್ ಉಪಸ್ಥಿತರಿದ್ದರು.





