ಶಿವಮೊಗ್ಗ / ಬೆಂಗಳೂರು: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಶಿವಮೊಗ್ಗ ಘಟಕದ ವತಿಯಿಂದ ಇದೇ 2026ರ ಸೆಪ್ಟೆಂಬರ್ 22ರಂದು (ಮಂಗಳವಾರ) ಶಿವಮೊಗ್ಗ ನಗರದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶ್ರೀ ವೀರಭದ್ರೇಶ್ವರ ಜಯಂತೋತ್ಸವ, ಶ್ರೀಮದ್ ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಜನಜಾಗೃತಿ ಹಾಗೂ ಧಾರ್ಮಿಕ ಮಹಾಸಮಾರಂಭವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು, ಈ ಶುಭ ಸಮಾರಂಭಕ್ಕೆ ದಿವ್ಯ ಸಾನ್ನಿಧ್ಯ ವಹಿಸಿ ಭಕ್ತ ಸಮುದಾಯಕ್ಕೆ ಆಶೀರ್ವಚನ ನೀಡುವಂತೆ ಶ್ರೀಮದ್ ಶ್ರೀಶೈಲ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ, ಶ್ರೀ 1008 ಜಗದ್ಗುರು ಡಾ. ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರುಗಳನ್ನು ಬೆಂಗಳೂರಿನಲ್ಲಿ ಭಕ್ತಿಪೂರ್ವಕವಾಗಿ ಆಹ್ವಾನಿಸಲಾಯಿತು.

ಶ್ರೀಶೈಲ ಜಗದ್ಗುರುಗಳಿಗೆ ಆಹ್ವಾನ ಸಲ್ಲಿಸಿದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಪದಾಧಿಕಾರಿಗಳು
ಬೆಂಗಳೂರಿನಲ್ಲಿ ಶ್ರೀಗಳನ್ನು ಭೇಟಿ ಮಾಡಿದ
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಶಿವಮೊಗ್ಗ ಘಟಕದ ನಿಯೋಗವು, ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನೀಡಿ ಮಹಾಸಮಾರಂಭಕ್ಕೆ ಆಗಮಿಸಿ ಭಕ್ತ ಸಮುದಾಯವನ್ನು ಹಾರೈಸಬೇಕೆಂದು ವಿನಂತಿಸಿಕೊಂಡಿತು. ನಿಯೋಗದ ಆಹ್ವಾನವನ್ನು ಪ್ರೀತಿಯಿಂದ ಸ್ವೀಕರಿಸಿದ ಶ್ರೀಗಳು ಕಾರ್ಯಕ್ರಮಕ್ಕೆ ಆಗಮಿಸಲು ಸಮ್ಮತಿಸಿ, ಸಮಾಜಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಅಧ್ಯಕ್ಷರಾದ ಪ್ರದೀಪ್ ವಿ. ಎಲಿ ಅವರು, ಸೆಪ್ಟೆಂಬರ್ 22ರಂದು ಶಿವಮೊಗ್ಗದಲ್ಲಿ ನಡೆಯಲಿರುವ ಶ್ರೀ ವೀರಭದ್ರೇಶ್ವರ ಜಯಂತೋತ್ಸವ, ಶ್ರೀಮದ್ ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಜನಜಾಗೃತಿ ಹಾಗೂ ಧಾರ್ಮಿಕ ಮಹಾಸಮಾರಂಭದ ಉದ್ದೇಶ, ಕಾರ್ಯಕ್ರಮದ ರೂಪುರೇಷೆ ಮತ್ತು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಅಗತ್ಯತೆಯನ್ನು ಜಗದ್ಗುರುಗಳಿಗೆ ವಿವರಿಸಲಾಯಿತು. ಜಗದ್ಗುರುಗಳ ದಿವ್ಯ ಸಾನ್ನಿಧ್ಯ ಹಾಗೂ ಆಶೀರ್ವಾದದಿಂದ ಭಕ್ತ ಸಮುದಾಯಕ್ಕೆ ಆಧ್ಯಾತ್ಮಿಕ ಪ್ರೇರಣೆ ದೊರೆಯಲಿದ್ದು, ಸಮಾಜದಲ್ಲಿ ಧರ್ಮ, ಸಂಸ್ಕೃತಿ ಮತ್ತು ವೀರಶೈವ–ಲಿಂಗಾಯತ ತತ್ವಗಳ ಕುರಿತು ಹೆಚ್ಚಿನ ಜಾಗೃತಿ ಮೂಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಆಹ್ವಾನ ಸಲ್ಲಿಕೆಯ ಈ ಶುಭ ಸಂದರ್ಭದಲ್ಲಿ ಬಿಳಕಿ ಶ್ರೀಗಳು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ. ಎಸ್. ಷಡಾಕ್ಷರಿಯವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಅಧ್ಯಕ್ಷರಾದ ಪ್ರದೀಪ್ ವಿ. ಎಲಿ, ಉಪಾಧ್ಯಕ್ಷರಾದ ಕೆ. ಬಿ. ಉಮೇಶ್, ಮುಖಂಡರಾದ ಉಮೇಶ್ ಹಿರೇಮಠ್, ಧನರಾಜ್, ಅವಿನಾಶ್ ಸೇರಿದಂತೆ ವೇದಿಕೆಯ ಹಲವಾರು ಪದಾಧಿಕಾರಿಗಳು ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ಈ ಅಭೂತಪೂರ್ವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹೋತ್ಸವದಲ್ಲಿ ಶಿವಮೊಗ್ಗ ಜಿಲ್ಲೆ ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಶ್ರೀ ಜಗದ್ಗುರುಗಳ ಕೃಪಾಶೀರ್ವಾದ ಪಡೆದುಕೊಳ್ಳಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.









