ಶಿವಮೊಗ್ಗ: ಬೆಳಗಿನ ಜಾವ ಹಳ್ಳಿಯೊಂದರಲ್ಲಿ ಕೋಳಿ ಕೂಗುತ್ತದೆ. ಹೊಲದ ಕಡೆಗೆ ರೈತರು ಹೆಜ್ಜೆ ಹಾಕುತ್ತಾರೆ. ಅದೇ ಹೊತ್ತಿನಲ್ಲಿ ಪುಸ್ತಕಗಳ ಬ್ಯಾಗ್ ಹೆಗಲಿಗೇರಿಸಿಕೊಂಡು ವಿದ್ಯಾರ್ಥಿಯೊಬ್ಬ ಬಸ್ ನಿಲ್ದಾಣದತ್ತ ಓಡುತ್ತಾನೆ. ಕೈಯಲ್ಲಿ ಪುಸ್ತಕ, ಕಣ್ಣಲ್ಲಿ ದೊಡ್ಡ ಕನಸು. ಮುಂದೆ ಎಂಜಿನಿಯರಿಂಗ್ ಕಾಲೇಜು… ಹಿಂದೆ ಮಣ್ಣಿನ ಮನೆ, ಹೊಲ, ತಂದೆ-ತಾಯಿಯ ಪರಿಶ್ರಮ.
ಒಂದು ದಿನ ಇದೇ ಹಳ್ಳಿಯ ದಾರಿಯಲ್ಲಿ ಬಸ್ ಏರಿ ಹೊರಟಿದ್ದ ಆ ವಿದ್ಯಾರ್ಥಿಗಳು, ಇಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರ್ಯಾಂಕ್ ಪಟ್ಟಿಯಲ್ಲಿ ರಾಜ್ಯದ ಮುಂಚೂಣಿಯಲ್ಲಿ ನಿಂತಿದ್ದಾರೆ. ಇದು ಕೇವಲ ಅಂಕಗಳ ಕಥೆಯಲ್ಲ, ಗ್ರಾಮೀಣ ಪ್ರತಿಭೆ, ಪೋಷಕರ ತ್ಯಾಗ, ಅಧ್ಯಾಪಕರ ಮಾರ್ಗದರ್ಶನ ಹಾಗೂ ಅವಕಾಶ ಸಿಕ್ಕಾಗ ಮಲೆನಾಡಿನ ಮಕ್ಕಳು ಏನು ಸಾಧಿಸಬಲ್ಲರು ಎಂಬುದಕ್ಕೆ ಜೀವಂತ ಸಾಕ್ಷಿ.

ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಜವಾಹರಲಾಲ್ ನೆಹರು ನ್ಯೂ ಕಾಲೇಜ್ ಆಫ್ ಎಂಜಿನಿಯರಿಂಗ್ (ಜೆಎನ್ಎನ್ಸಿಇ) ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಇತ್ತೀಚಿನ ಫಲಿತಾಂಶದಲ್ಲಿ ಅಪ್ರತಿಮ ಸಾಧನೆ ಮೆರೆದಿದ್ದು, ಒಟ್ಟು 8 ವಿಶ್ವವಿದ್ಯಾಲಯ ರ್ಯಾಂಕ್ಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ ಪ್ರಥಮ ರ್ಯಾಂಕ್ ಪಡೆದ ಧನ್ಯಶ್ರೀ ಬಿ.ಎಂ. ಅವರು 7 ಚಿನ್ನದ ಪದಕಗಳನ್ನು ಗಳಿಸಿರುವುದು ಸಂಸ್ಥೆಯ ಶೈಕ್ಷಣಿಕ ಸಾಧನೆಗೆ ಮತ್ತೊಂದು ಗರಿಮೆ.
ರ್ಯಾಂಕ್ ಸಾಧನೆಯ ಸಂಖ್ಯೆಯಲ್ಲಿ ಜೆಎನ್ಎನ್ಸಿಇ ವಿಟಿಯು ವ್ಯಾಪ್ತಿಯ ಕಾಲೇಜುಗಳ ಪೈಕಿ 5ನೇ ಸ್ಥಾನ ಪಡೆದಿರುವುದು ವಿಶೇಷ. ಇದರೊಂದಿಗೆ 40 ವಿದ್ಯಾರ್ಥಿಗಳು ಬಿ.ಇ. ಆನರ್ಸ್ ಪದವಿ, 16 ವಿದ್ಯಾರ್ಥಿಗಳು ಬಿ.ಇ. ಮೈನರ್ ಪದವಿ ಹಾಗೂ 1,315 ವಿದ್ಯಾರ್ಥಿಗಳು ಸ್ವಯಂ–ಎನ್ಪಿಟಿಇಎಲ್ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ.
ಹಳ್ಳಿಯ ಹಾದಿಯಿಂದ ರಾಜ್ಯದ ರ್ಯಾಂಕ್ ಪಟ್ಟಿಯವರೆಗೆ…
ಸಾಧನೆ ಎಂದರೆ ನಗರದ ದೊಡ್ಡ ಕಟ್ಟಡಗಳಲ್ಲಿ ಮಾತ್ರ ಹುಟ್ಟುವುದಿಲ್ಲ. ಕೆಲವೊಮ್ಮೆ ಅದು ಮಣ್ಣಿನ ಮನೆಯಲ್ಲಿ ಹುಟ್ಟುತ್ತದೆ. ಹೊಲದ ಬದಿಯಲ್ಲಿ ಬೆಳೆಯುತ್ತದೆ. ಬಸ್ನ ಕಿಟಕಿಯಿಂದ ಹೊರಗೆ ನೋಡುತ್ತಾ ಸಾಗುವ ವಿದ್ಯಾರ್ಥಿಯ ಕಣ್ಣಲ್ಲಿ ಮೊಳಕೆಯೊಡೆಯುತ್ತದೆ. ಜೆಎನ್ಎನ್ಸಿಇಯ ರ್ಯಾಂಕ್ ವಿಜೇತರ ಯಶೋಗಾಥೆ ಇದನ್ನೇ ಸಾರುತ್ತದೆ.

ಆಯನೂರು ಸಮೀಪದ ಸಿರಿಗೆರೆ ಗ್ರಾಮದ ಕೃಷಿಕ ಕುಟುಂಬದ ಧನ್ಯಶ್ರೀ ಬಿ.ಎಂ. ಪ್ರತಿದಿನ ಬಸ್ನಲ್ಲಿ ಕಾಲೇಜಿಗೆ ಬಂದು ಶಿಕ್ಷಣ ಪಡೆದವರು. ಮನೆಯಲ್ಲಿನ ಕೃಷಿ ಕೆಲಸದ ನಡುವೆ ಪೋಷಕರು ಮಗಳ ಶಿಕ್ಷಣದ ಕನಸಿಗೆ ಬೆನ್ನೆಲುಬಾಗಿ ನಿಂತರು. ಆ ಪರಿಶ್ರಮಕ್ಕೆ ಇಂದು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಹಾಗೂ 7 ಚಿನ್ನದ ಪದಕಗಳ ರೂಪದಲ್ಲಿ ಫಲ ದೊರೆತಿದೆ.
ಒಂದು ಕಡೆ ಹೊಲದಲ್ಲಿ ದುಡಿಯುತ್ತಿದ್ದ ತಂದೆ-ತಾಯಿ, ಮತ್ತೊಂದು ಕಡೆ ಪುಸ್ತಕದೊಂದಿಗೆ ಹೋರಾಡುತ್ತಿದ್ದ ಮಗಳು. ಬೆಳಗ್ಗೆ ಬಸ್ ಪ್ರಯಾಣ, ಕಾಲೇಜಿನಲ್ಲಿ ಪಾಠ, ಸಂಜೆ ಓದು… ಹೀಗೆ ದಿನಗಳು ಉರುಳಿದವು. ಕೊನೆಗೆ ಫಲಿತಾಂಶ ಪ್ರಕಟವಾದ ದಿನ, ಆ ಕನಸು ರ್ಯಾಂಕ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು.
9.44 ಸಿಜಿಪಿಎ ಗಳಿಸಿರುವ ಧನ್ಯಶ್ರೀ, ಇನ್ನಷ್ಟು ಪದಕಗಳ ನಿರೀಕ್ಷೆಯಲ್ಲಿದ್ದರೂ 7 ಚಿನ್ನದ ಪದಕಗಳ ಸಾಧನೆಯೇ ತಮ್ಮ ಪಾಲಿಗೆ ಅಪಾರ ಸಂತಸ ತಂದಿದೆ ಎಂದು ಹೇಳುತ್ತಾರೆ. ಪ್ರಸ್ತುತ ಕೆಪಿಟಿಸಿಎಲ್ನಲ್ಲಿ ಸರ್ಕಾರಿ ಉದ್ಯೋಗದ ಅವಕಾಶಕ್ಕಾಗಿ ಪ್ರಯತ್ನಿಸುತ್ತಿರುವ ಅವರು ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದರು.
ಇದು ಕೇವಲ ಒಬ್ಬ ವಿದ್ಯಾರ್ಥಿನಿಯ ಕಥೆಯಲ್ಲ. ಜೆಎನ್ಎನ್ಸಿಇಯ ರ್ಯಾಂಕ್ ಪಟ್ಟಿಯಲ್ಲಿರುವ ಬಹುತೇಕ ಹೆಸರುಗಳ ಹಿಂದೆ ಮಲೆನಾಡಿನ ಹಳ್ಳಿಗಳ ಮಣ್ಣಿನ ವಾಸನೆ ಇದೆ.

ತರೀಕೆರೆಯಿಂದ 3ನೇ ರ್ಯಾಂಕ್
ಎಲೆಕ್ಟ್ರಿಕಲ್ ಮತ್ತು ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದ ನಯ್ಯರ್ ಫಾತಿಮಾ ಅಫ್ರೀನ್ ತರೀಕೆರೆ ತಾಲೂಕಿನವರು. ತಂದೆ ಸರ್ಕಾರಿ ವಕೀಲರು, ತಾಯಿ ಸರ್ಕಾರಿ ಶಿಕ್ಷಕಿ. ಮನೆಯಲ್ಲಿನ ಶಿಕ್ಷಣದ ವಾತಾವರಣ, ಪೋಷಕರ ಪ್ರೋತ್ಸಾಹ ಹಾಗೂ ಕಾಲೇಜಿನ ಮಾರ್ಗದರ್ಶನ ಅವರ ಸಾಧನೆಗೆ ಬಲ ನೀಡಿದೆ.

ಶೃಂಗೇರಿಯ ಪುರೋಹಿತರ ಪುತ್ರನ ಸಾಧನೆ
4ನೇ ರ್ಯಾಂಕ್ ಪಡೆದ ಯಶಸ್ಕರ ಟಿ.ಜಿ. ಶೃಂಗೇರಿಯವರು. ತಂದೆ ಪುರೋಹಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ವಾತಾವರಣದ ಕುಟುಂಬದಿಂದ ಬಂದ ಯಶಸ್ಕರ, ತಾಂತ್ರಿಕ ಶಿಕ್ಷಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಕಾಲೇಜು ಹಾಸ್ಟೆಲ್ನಿಂದ 5ನೇ ರ್ಯಾಂಕ್
5ನೇ ರ್ಯಾಂಕ್ ಪಡೆದ ಭೂಮಿಕಾ ಎಂ. ಸಾಗರದವರು. ಕಾಲೇಜಿನ ಹಾಸ್ಟೆಲ್ನಲ್ಲಿ ವಾಸ್ತವ್ಯವಿದ್ದು ಶಿಕ್ಷಣ ಪಡೆದಿದ್ದಾರೆ. ಪೋಷಕರು ಸಣ್ಣ ಕೈಗಾರಿಕೆ ನಡೆಸುತ್ತಿದ್ದು, ಕುಟುಂಬದ ಜವಾಬ್ದಾರಿಗಳ ನಡುವೆ ಮಗಳ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಪ್ರೋತ್ಸಾಹ ನೀಡಿದ್ದಾರೆ. ಪಾಠದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಪಾಲ್ಗೊಂಡ ಭೂಮಿಕಾ, ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಸಮತೋಲನ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ.

ಎನ್.ಆರ್.ಪುರದ ಕೃಷಿಕ ಕುಟುಂಬದಿಂದ 6ನೇ ರ್ಯಾಂಕ್
6ನೇ ರ್ಯಾಂಕ್ ಪಡೆದ ಜಾರ್ಜ್ ಟಿ. ಪೌಲ್ ಎನ್.ಆರ್.ಪುರದ ಕೃಷಿಕ ಕುಟುಂಬದವರು. ಕೃಷಿ ಹಿನ್ನೆಲೆಯಿಂದ ಬಂದರೂ ತಾಂತ್ರಿಕ ಶಿಕ್ಷಣದಲ್ಲಿ ರಾಜ್ಯಮಟ್ಟದ ಸಾಧನೆ ಮಾಡುವ ಮೂಲಕ ಗ್ರಾಮೀಣ ಪ್ರತಿಭೆಗೆ ಹೊಸ ಅರ್ಥ ನೀಡಿದ್ದಾರೆ. ಪೋಷಕರ ಬೆಂಬಲವೇ ತಮ್ಮ ಸಾಧನೆಗೆ ಪ್ರಮುಖ ಪ್ರೇರಣೆ ಎಂದು ಅವರು ಸ್ಮರಿಸಿದ್ದಾರೆ.

ತೀರ್ಥಹಳ್ಳಿಯ ರೈತಾಪಿ ಕುಟುಂಬದ ಮಗಳ ಸಾಧನೆ
8ನೇ ರ್ಯಾಂಕ್ ಪಡೆದ ನಿತ್ಯಶ್ರೀ ಹೆಗಡೆ ಕೆ.ಎನ್. ತೀರ್ಥಹಳ್ಳಿಯ ರೈತಾಪಿ ಕುಟುಂಬದಿಂದ ಬಂದವರು. ಗ್ರಾಮೀಣ ಹಿನ್ನೆಲೆಯಲ್ಲಿದ್ದರೂ ಉನ್ನತ ಶಿಕ್ಷಣದ ಕನಸನ್ನು ಕೈಬಿಡದೆ ಜೆಎನ್ಎನ್ಸಿಇಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಇಂದು ಟಿಸಿಎಸ್ ಕಂಪನಿಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿರುವುದು ಅವರ ಸಾಧನೆಯ ಮತ್ತೊಂದು ಹೆಜ್ಜೆ.

ನ್ಯಾಮತಿಯ ಬಸವನಹಳ್ಳಿಯಿಂದ ರ್ಯಾಂಕ್ ಪಟ್ಟಿಗೆ
10ನೇ ರ್ಯಾಂಕ್ ಪಡೆದ ಸ್ವಾತಿ ಎಸ್.ಜಿ. ನ್ಯಾಮತಿ ತಾಲೂಕಿನ ಬಸವನಹಳ್ಳಿಯ ಕೃಷಿ ಹಿನ್ನೆಲೆಯ ಕುಟುಂಬದವರು. ಜೆಎನ್ಎನ್ಸಿಇ ಹಾಸ್ಟೆಲ್ನಲ್ಲಿ ವಾಸ್ತವ್ಯವಿದ್ದು ಶಿಕ್ಷಣ ಪಡೆದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಸೂಕ್ತ ವಾತಾವರಣ ದೊರೆತರೆ ರಾಜ್ಯಮಟ್ಟದ ಸಾಧನೆ ಸಾಧ್ಯ ಎಂಬುದನ್ನು ತೋರಿಸಿದ್ದಾರೆ.

8 ರ್ಯಾಂಕ್ಗಳೊಂದಿಗೆ ಜೆಎನ್ಎನ್ಸಿಇಗೆ ಹೊಸ ಗರಿಮೆ
ಜೆಎನ್ಎನ್ಸಿಇ ವಿದ್ಯಾರ್ಥಿಗಳು ಪಡೆದಿರುವ ರ್ಯಾಂಕ್ಗಳ ಪಟ್ಟಿ ಹೀಗಿದೆ:
- ಧನ್ಯಶ್ರೀ ಬಿ.ಎಂ. – EEE – ಪ್ರಥಮ ರ್ಯಾಂಕ್, 7 ಚಿನ್ನದ ಪದಕಗಳು
- ನಯ್ಯರ್ ಫಾತಿಮಾ ಅಫ್ರೀನ್ – ETE – 3ನೇ ರ್ಯಾಂಕ್
- ಯಶಸ್ಕರ ಟಿ.ಜಿ. – ETE – 4ನೇ ರ್ಯಾಂಕ್
- ಹರ್ಷಿಕಾ ಎನ್. – AIML – 4ನೇ ರ್ಯಾಂಕ್
- ಭೂಮಿಕಾ ಎಂ. – ETE – 5ನೇ ರ್ಯಾಂಕ್
- ಜಾರ್ಜ್ ಟಿ. ಪೌಲ್ – ETE – 6ನೇ ರ್ಯಾಂಕ್
- ನಿತ್ಯಶ್ರೀ ಹೆಗಡೆ ಕೆ.ಎನ್. – ETE – 8ನೇ ರ್ಯಾಂಕ್
- ಸ್ವಾತಿ ಎಸ್.ಜಿ. – ETE – 10ನೇ ರ್ಯಾಂಕ್
ಈ ರ್ಯಾಂಕ್ಗಳ ಪೈಕಿ ಹಲವು ವಿದ್ಯಾರ್ಥಿಗಳು ಗ್ರಾಮೀಣ ಹಾಗೂ ಕೃಷಿ ಹಿನ್ನೆಲೆಯಿಂದ ಬಂದಿರುವುದು ವಿಶೇಷ.
ಪ್ರಥಮ ರ್ಯಾಂಕ್ನೊಂದಿಗೆ 7 ಚಿನ್ನದ ಪದಕ
EEE ವಿಭಾಗದ ಧನ್ಯಶ್ರೀ ಬಿ.ಎಂ. ಅವರ ಸಾಧನೆ ಜೆಎನ್ಎನ್ಸಿಇಯ ಈ ಬಾರಿಯ ಫಲಿತಾಂಶದ ಪ್ರಮುಖ ಆಕರ್ಷಣೆಯಾಗಿದೆ. ವಿಟಿಯು ಪ್ರಥಮ ರ್ಯಾಂಕ್ ಪಡೆದಿರುವ ಅವರು ಒಟ್ಟು 7 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅವರು ಪಡೆದ ಪ್ರಮುಖ ಪದಕಗಳಲ್ಲಿ ವಿಟಿಯು ಚಿನ್ನದ ಪದಕ, ಶ್ರೀ ಸಂಗಪ್ಪ ದೇಸಾಯಿ ಆಫ್ ಸೋನ್ನಾ ಚಿನ್ನದ ಪದಕ, ದಿವಂಗತ ಶ್ರೀ ಬಸವರಾಜ ಮುದ್ದೇಬಿಹಾಳ ಚಿನ್ನದ ಪದಕ, ಮೂರ್ತೀಸ್ ಮೆಡಲ್ ಆಫ್ ಎಕ್ಸಲೆನ್ಸ್, ಆರ್.ಎನ್. ಶೆಟ್ಟಿ ಚಿನ್ನದ ಪದಕ, ಜೈನ್ ಯೂನಿವರ್ಸಿಟಿ ಚಿನ್ನದ ಪದಕ ಹಾಗೂ ಡಾ. ಎಸ್. ರಾಮೇಗೌಡ ಸ್ಮಾರಕ ಚಿನ್ನದ ಪದಕ ಸೇರಿವೆ.

‘ದೊಡ್ಡ ನಗರವೇ ಬೇಕು’ ಎಂಬ ಮನಸ್ಥಿತಿಗೆ ಗ್ರಾಮೀಣ ಪ್ರತಿಭೆಗಳ ಉತ್ತರ: ಡಾ.ವೈ. ವಿಜಯಕುಮಾರ್
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಎನ್ಎನ್ಸಿಇ ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್ ಅವರ ಮಾತಿನಲ್ಲಿ ಸಂಸ್ಥೆಯ ಮುಂದಿನ ಗುರಿ ಸ್ಪಷ್ಟವಾಗಿದೆ. ಈ ಸಾಧನೆಯ ಹಿಂದೆ ವಿದ್ಯಾರ್ಥಿಗಳ ಪರಿಶ್ರಮ ಮಾತ್ರವಲ್ಲ, ಅವರ ಪ್ರತಿಭೆಯನ್ನು ಗುರುತಿಸಿ ಬೆಳೆಸಿದ ವ್ಯವಸ್ಥಿತ ಶೈಕ್ಷಣಿಕ ಕಾರ್ಯವಿಧಾನವೂ ಇದೆ.
ಕಳೆದ ಕೆಲವು ವರ್ಷಗಳಿಂದ ಶಿವಮೊಗ್ಗ ಹಾಗೂ ಮಲೆನಾಡು ಭಾಗದಲ್ಲಿ ಪಿಯುಸಿ ಮುಗಿದ ಕೂಡಲೇ ವಿದ್ಯಾರ್ಥಿಗಳು ಬೆಂಗಳೂರಿನಂತಹ ದೊಡ್ಡ ನಗರಗಳತ್ತ ತೆರಳುವ ಪ್ರವೃತ್ತಿ ಹೆಚ್ಚಾಗಿತ್ತು. ‘ಉತ್ತಮ ಭವಿಷ್ಯ ಬೇಕಾದರೆ ದೊಡ್ಡ ನಗರವೇ ಬೇಕು’ ಎಂಬ ನಂಬಿಕೆ ಅನೇಕ ಕುಟುಂಬಗಳಲ್ಲಿತ್ತು.
ಆದರೆ ಜೆಎನ್ಎನ್ಸಿಇ ವಿದ್ಯಾರ್ಥಿಗಳ ಸಾಧನೆ ಆ ಕಲ್ಪನೆಗೆ ಸವಾಲು ಹಾಕಿದೆ.

ದಕ್ಷಿಣ ಭಾರತದಲ್ಲಿ 70% ಪ್ರವೇಶವೂ ಸವಾಲಾಗಿದ್ದಾಗ ಜೆಎನ್ಎನ್ಸಿಇಯಲ್ಲಿ 94%
ಪ್ರಸ್ತುತ ಎಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಮಾಣದ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಜೆಎನ್ಎನ್ಸಿಇ ದಾಖಲಿಸಿರುವ ಅಂಕಿ-ಅಂಶವೂ ಗಮನ ಸೆಳೆಯುತ್ತದೆ.
ದಕ್ಷಿಣ ಭಾರತದಾದ್ಯಂತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪ್ರಮಾಣ ಸುಮಾರು 70ರ ಗಡಿ ದಾಟದ ಪರಿಸ್ಥಿತಿಯಲ್ಲೂ, ಜೆಎನ್ಎನ್ಸಿಇ 1,020 ಸೀಟುಗಳ ಪೈಕಿ 946 ವಿದ್ಯಾರ್ಥಿಗಳ ಪ್ರವೇಶದೊಂದಿಗೆ ಶೇ.94ರಷ್ಟು ಪ್ರವೇಶ ಪ್ರಮಾಣ ದಾಖಲಿಸಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಇದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಸಂಸ್ಥೆಯ ಮೇಲಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.
‘ವೀಕ್’ ಅಲ್ಲ… ‘ಸ್ಲೋ ಲರ್ನರ್ಸ್’: ಅವರನ್ನೂ ಕೈಬಿಡುವುದಿಲ್ಲ
ಜೆಎನ್ಎನ್ಸಿಇಯ ಮತ್ತೊಂದು ಗಮನಾರ್ಹ ಅಂಶವೆಂದರೆ ಕೇವಲ ಪ್ರತಿಭಾವಂತ ವಿದ್ಯಾರ್ಥಿಗಳತ್ತ ಮಾತ್ರ ಗಮನಹರಿಸದೆ, ನಿಧಾನಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೂ ವಿಶೇಷ ಕಾಳಜಿ ನೀಡುತ್ತಿರುವುದು.
ಮೊದಲ ಆಂತರಿಕ ಪರೀಕ್ಷೆಯ ನಂತರ ವಿದ್ಯಾರ್ಥಿಗಳ ಪ್ರಗತಿಯನ್ನು ಪರಿಶೀಲಿಸಿ ಅವರನ್ನು ವಿವಿಧ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ನಿಧಾನವಾಗಿ ಕಲಿಯುವ ವಿದ್ಯಾರ್ಥಿಗಳನ್ನು ‘ವೀಕ್’ ಎಂದು ಗುರುತಿಸದೆ ‘ಸ್ಲೋ ಲರ್ನರ್ಸ್’ ಎಂದು ಪರಿಗಣಿಸಿ, ಅವರ ಕಲಿಕಾ ಸಾಮರ್ಥ್ಯಕ್ಕೆ ತಕ್ಕಂತೆ ಬೋಧನಾ ವಿಧಾನ ರೂಪಿಸಲಾಗುತ್ತದೆ.
ಎಲ್ಲಾ ಘಟಕಗಳನ್ನು ಒಂದೇ ರೀತಿಯಲ್ಲಿ ಒತ್ತಾಯಿಸುವ ಬದಲು, ಮೊದಲು ವಿದ್ಯಾರ್ಥಿಗಳು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾದ ಪ್ರಮುಖ ವಿಷಯಗಳನ್ನು ಸಂಪೂರ್ಣವಾಗಿ ಕಲಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಆತ್ಮವಿಶ್ವಾಸ ಬೆಳೆಸಲಾಗುತ್ತದೆ. ಇದರ ಪರಿಣಾಮವಾಗಿ ಜೆಎನ್ಎನ್ಸಿಇಯ ವಿಶ್ವವಿದ್ಯಾಲಯ ಫಲಿತಾಂಶ 85ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
40 ವಿದ್ಯಾರ್ಥಿಗಳಿಗೆ ಬಿ.ಇ. ಆನರ್ಸ್
ಸಾಮಾನ್ಯ ಬಿ.ಇ. ಪದವಿಯ 160 ಕ್ರೆಡಿಟ್ಗಳ ಜೊತೆಗೆ ಹೆಚ್ಚುವರಿ 18 ಕ್ರೆಡಿಟ್ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಬಿ.ಇ. ಆನರ್ಸ್ ಪದವಿ ಪಡೆಯುವ ಅವಕಾಶವಿದೆ. ಈ ಅವಕಾಶವನ್ನು ಬಳಸಿಕೊಂಡು ಜೆಎನ್ಎನ್ಸಿಇಯ 40 ವಿದ್ಯಾರ್ಥಿಗಳು ಬಿ.ಇ. ಆನರ್ಸ್ ಪದವಿ ಪಡೆದಿದ್ದಾರೆ.
ಹೆಚ್ಚುವರಿ ಅಧ್ಯಯನದ ಮೂಲಕ ತಮ್ಮ ಜ್ಞಾನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಈ ವಿದ್ಯಾರ್ಥಿಗಳಿಗೆ ಮುಂದಿನ ಉನ್ನತ ಶಿಕ್ಷಣ ಹಾಗೂ ಉದ್ಯೋಗದ ಅವಕಾಶಗಳಲ್ಲಿ ಇದು ನೆರವಾಗಲಿದೆ ಎಂಬ ಆಶಯ ಸಂಸ್ಥೆಯದು.
16 ವಿದ್ಯಾರ್ಥಿಗಳಿಗೆ ಮೈನರ್ ಪದವಿ
ತಮ್ಮ ಮೂಲ ಎಂಜಿನಿಯರಿಂಗ್ ವಿಭಾಗದ ಜೊತೆಗೆ ಮತ್ತೊಂದು ಕ್ಷೇತ್ರದಲ್ಲಿ ಹೆಚ್ಚುವರಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸುವ ಬಿ.ಇ. ಮೈನರ್ ಪದವಿಯನ್ನೂ ವಿದ್ಯಾರ್ಥಿಗಳು ಬಳಸಿಕೊಂಡಿದ್ದಾರೆ. 16 ವಿದ್ಯಾರ್ಥಿಗಳು ಮೈನರ್ ಪದವಿ ಪೂರ್ಣಗೊಳಿಸಿದ್ದಾರೆ.
ಉದಾಹರಣೆಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಕಂಪ್ಯೂಟರ್ ಸೈನ್ಸ್ನಲ್ಲಿ ಅಥವಾ ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿ ರೋಬೋಟಿಕ್ಸ್ನಲ್ಲಿ ಹೆಚ್ಚುವರಿ ಅಧ್ಯಯನ ನಡೆಸುವ ಮೂಲಕ ಬಹುಶಿಸ್ತೀಯ ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.
1,315 ವಿದ್ಯಾರ್ಥಿಗಳಿಗೆ ಎನ್ಪಿಟಿಇಎಲ್ ಪ್ರಮಾಣಪತ್ರ
ಐಐಟಿ ಮದ್ರಾಸ್ ಸೇರಿದಂತೆ ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ಎನ್ಪಿಟಿಇಎಲ್ ಆನ್ಲೈನ್ ಕೋರ್ಸ್ಗಳಲ್ಲಿಯೂ ಜೆಎನ್ಎನ್ಸಿಇ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಒಟ್ಟು 1,315 ವಿದ್ಯಾರ್ಥಿಗಳು ಎನ್ಪಿಟಿಇಎಲ್ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ತರಗತಿಯ ಪಠ್ಯಕ್ರಮದಾಚೆಗೂ ಜ್ಞಾನ ಸಂಪಾದಿಸಲು ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ಸಂಸ್ಥೆ ನಿರಂತರವಾಗಿ ಪ್ರೋತ್ಸಾಹಿಸುತ್ತಿದೆ.
ಕ್ರೀಡೆ, ಸಂಸ್ಕೃತಿ, ನಾವೀನ್ಯತೆಗೂ ಸಮಾನ ಆದ್ಯತೆ
ಜೆಎನ್ಎನ್ಸಿಇಯ ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ನಾವೀನ್ಯತೆಗೂ ಒತ್ತು ನೀಡಲಾಗುತ್ತಿದೆ.
ಮುಂದಿನ ಡಿಸೆಂಬರ್ನಲ್ಲಿ ಜೆಎನ್ಎನ್ಸಿಇ ಆವರಣದಲ್ಲಿ ದಕ್ಷಿಣ ಭಾರತ ವಿಶ್ವವಿದ್ಯಾಲಯಗಳ ಮಟ್ಟದ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲು ಸಿದ್ಧತೆ ನಡೆಯುತ್ತಿದ್ದು, ಸುಮಾರು 65 ವಿಶ್ವವಿದ್ಯಾಲಯಗಳ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ.
ಇದರ ಜೊತೆಗೆ ಐಡಿಯಾ ಲ್ಯಾಬ್, ಐಡಿಯಾಥಾನ್ ಸೇರಿದಂತೆ ವಿವಿಧ ನಾವೀನ್ಯತಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆ, ಸಮಸ್ಯೆ ಪರಿಹಾರ ಸಾಮರ್ಥ್ಯ ಮತ್ತು ಉದ್ಯಮಶೀಲತೆಯನ್ನು ಬೆಳೆಸುವ ಪ್ರಯತ್ನ ನಡೆಯುತ್ತಿದೆ.
ರ್ಯಾಂಕ್ಗಳ ಹಿಂದೆ ನಿಂತ ಮತ್ತೊಂದು ಶಕ್ತಿ…
ಈ ಯಶೋಗಾಥೆಯ ಹಿಂದೆ ವಿದ್ಯಾರ್ಥಿಗಳ ಪರಿಶ್ರಮ ಮಾತ್ರವಲ್ಲ; ಪೋಷಕರ ತ್ಯಾಗ, ಅಧ್ಯಾಪಕರ ಮಾರ್ಗದರ್ಶನ ಹಾಗೂ ಸಂಸ್ಥೆಯ ಶೈಕ್ಷಣಿಕ ವ್ಯವಸ್ಥೆಯೂ ಇದೆ.
ವಿಶ್ವವಿದ್ಯಾಲಯ ರ್ಯಾಂಕ್ ಪಡೆಯುವ ಸಾಧ್ಯತೆ ಇರುವ ವಿದ್ಯಾರ್ಥಿಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಅವರಿಗೆ ವಿಶೇಷ ಮಾರ್ಗದರ್ಶನ ನೀಡಲಾಗಿದೆ. ಅಗತ್ಯವಿದ್ದಲ್ಲಿ ಮರುಮೌಲ್ಯಮಾಪನಕ್ಕೂ ವಿದ್ಯಾರ್ಥಿಗಳಿಗೆ ಸಹಕಾರ ನೀಡಲಾಗಿದೆ. ಪರಿಣಾಮವಾಗಿ ಕೆಲವು ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಮತ್ತಷ್ಟು ಸುಧಾರಿಸಿಕೊಂಡು ರ್ಯಾಂಕ್ ಪಟ್ಟಿಗೆ ಪ್ರವೇಶಿಸಿದ್ದಾರೆ.
ಹೀಗಾಗಿ ಈ ಬಾರಿಯ 8 ರ್ಯಾಂಕ್ಗಳು ಒಂದು ದಿನದಲ್ಲಿ ನಿರ್ಮಾಣವಾದ ಫಲಿತಾಂಶವಲ್ಲ. ಮೂರು-ನಾಲ್ಕು ವರ್ಷಗಳ ನಿರಂತರ ಪರಿಶ್ರಮ, ಸರಿಯಾದ ಮಾರ್ಗದರ್ಶನ ಮತ್ತು ವಿದ್ಯಾರ್ಥಿಯೊಳಗಿನ ಸಾಧನೆಯ ಹಸಿವಿನ ಒಟ್ಟಾರೆ ಫಲ.
“ಹಳ್ಳಿಯ ಮಗು ಕೂಡ ರಾಜ್ಯದ ಮೊದಲಿಗನಾಗಬಹುದು…”
ಜೆಎನ್ಎನ್ಸಿಇಯ ಈ ಸಾಧನೆ ಸಾರುವ ಸಂದೇಶ ಸರಳ.
ಬೆಂಗಳೂರಿನ ದೊಡ್ಡ ಕಾಲೇಜುಗಳೇ ಯಶಸ್ಸಿನ ಏಕೈಕ ದಾರಿ ಅಲ್ಲ. ದೊಡ್ಡ ನಗರದ ಹೆಸರಿಗಿಂತ ದೊಡ್ಡದು ವಿದ್ಯಾರ್ಥಿಯ ಕನಸು. ದುಬಾರಿ ಶಿಕ್ಷಣಕ್ಕಿಂತ ಮೌಲ್ಯಯುತವಾದುದು ಸರಿಯಾದ ಮಾರ್ಗದರ್ಶನ. ಗ್ರಾಮೀಣ ಹಿನ್ನೆಲೆ ಎನ್ನುವುದು ಮಿತಿಯಲ್ಲ; ಅವಕಾಶ ಸಿಕ್ಕಾಗ ಅದೇ ಪ್ರತಿಭೆಯ ಶಕ್ತಿಯಾಗುತ್ತದೆ.
ಸಿರಿಗೆರೆಯಿಂದ ಬಸ್ ಏರಿ ಬಂದ ಧನ್ಯಶ್ರೀ ಇಂದು ರಾಜ್ಯದ ಮೊದಲ ರ್ಯಾಂಕ್ನಲ್ಲಿ ನಿಂತಿದ್ದಾರೆ. ಸಾಗರ, ತೀರ್ಥಹಳ್ಳಿ, ನ್ಯಾಮತಿ, ಶೃಂಗೇರಿ, ಎನ್.ಆರ್.ಪುರ, ತರೀಕೆರೆ ಸೇರಿದಂತೆ ಮಲೆನಾಡಿನ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳು ರಾಜ್ಯದ ರ್ಯಾಂಕ್ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.
ನಿನ್ನೆ ಹಳ್ಳಿಯ ದಾರಿಯಲ್ಲಿ ಬಸ್ಗಾಗಿ ಕಾಯುತ್ತಿದ್ದ ಮಕ್ಕಳು, ಇಂದು ವಿಟಿಯು ರ್ಯಾಂಕ್ ವೇದಿಕೆಯಲ್ಲಿ ನಿಂತಿದ್ದಾರೆ.
ಇದು ಜೆಎನ್ಎನ್ಸಿಇಯ ಫಲಿತಾಂಶದ ಕಥೆಯಷ್ಟೇ ಅಲ್ಲ. ಮಲೆನಾಡಿನ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡಿದರೆ ಅವರು ರಾಜ್ಯದ ಶೈಕ್ಷಣಿಕ ನಕ್ಷೆಯಲ್ಲಿ ತಮ್ಮದೇ ಗುರುತು ಮೂಡಿಸಬಲ್ಲರು ಎಂಬುದನ್ನು ಸಾರುವ ಯಶೋಗಾಥೆ.

ಜೆಎನ್ಎನ್ಸಿಇಯ ಈ ಗಮನಾರ್ಹ ಸಾಧನೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಡಳಿತ ಮಂಡಳಿ, ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಅಧ್ಯಾಪಕರು ಹಾಗೂ ಸಿಬ್ಬಂದಿ ರ್ಯಾಂಕ್ ವಿಜೇತರು, ಚಿನ್ನದ ಪದಕ ವಿಜೇತರು, ಆನರ್ಸ್ ಮತ್ತು ಮೈನರ್ ಪದವಿ ಪಡೆದವರು ಹಾಗೂ ಎನ್ಪಿಟಿಇಎಲ್ ಪ್ರಮಾಣಪತ್ರ ಗಳಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯ ಹಿಂದೆ ನಿಂತ ಪೋಷಕರಿಗೆ, ಮಾರ್ಗದರ್ಶನ ನೀಡಿದ ಅಧ್ಯಾಪಕರಿಗೆ ಹಾಗೂ ಅವಕಾಶ ಕಲ್ಪಿಸಿದ ಜೆಎನ್ಎನ್ಸಿಇ ಆಡಳಿತ ಮಂಡಳಿಗೂ ಈ ಯಶಸ್ಸು ಸಲ್ಲುತ್ತದೆ.
ಈ ಸಂಧರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್ ಮಾತನಾಡಿದರು. ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಪಿ. ಮೈಲಾರಪ್ಪ, ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಎಚ್.ಸಿ. ಶಿವಕುಮಾರ್, ಎಂ.ಎಸ್. ಅನಂತದತ್ತ, ಜಿ.ಎನ್. ಸುಧೀರ್, ಕುಲಸಚಿವರಾದ ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಸಂಜೀವ್ ಕುಂಟೆ, ಡಾ. ಚೇತನ್ ಕೆ.ಆರ್., ಡಾ. ಸುರೇಂದ್ರ, ಡಾ. ಎಚ್.ಬಿ. ಸುರೇಶ್, ಎನ್ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






