ಮುಂಬಯಿಯಲ್ಲಿ ಭೂಗತ ಪಾತಕಿಗಳನ್ನು ಮಟ್ಟ ಹಾಕಿದ ಕೀರ್ತಿ.
ಕಾರ್ಕಳ ತಾಲೂಕಿನ ಎಣ್ಣೆ ಹೊಳೆ ಎಂಬ ಗ್ರಾಮದಲ್ಲಿ 60 ವರ್ಷಗಳ ಹಿಂದೆ ಜನಿಸಿದ ದಯಾ ನಾಯಕ್ ಮುಂದೆ ಮುಂಬೈ ಪೊಲೀಸ್ ಅಧಿಕಾರಿಯಾಗಿ ಎಸಿಪಿ ಹುದ್ದೆಗೆ ಏರಿದ್ದು, ಓರ್ವ ಕಡಕ್ ಪೊಲೀಸ್ ಅಧಿಕಾರಿಯಾಗಿ ಭೂಗತ ಜಗತ್ತಿನ ಗ್ಯಾಂಗಸ್ಟರಗಳನ್ನು ಹುಟ್ಟಡಗಿಸಲು ಶ್ರಮಿಸಿದ್ದು, 85ಕ್ಕೂ ಅಧಿಕ ಸಂಖ್ಯೆಯ ಅಂಡರ್ ವರ್ಲ್ಡ್ ಪಾತಕಿಗಳನ್ನು ಎನ್ಕೌಂಟರ್ ಮಾಡಿ ‘ಎನ್ಕೌಂಟರ್ ದಯಾ ನಾಯಕ್ ‘ ಎಂದು ತನ್ನ ಅಪಾರ ಸಂಖ್ಯೆಯ ಅಭಿಮಾನಿಗಳಿಂದ ಕರೆಸಿಕೊಂಡದ್ದು…ಇವೆಲ್ಲವೂ ಮುಂಬೈ ಪೊಲೀಸ್ ಜಗತ್ತಿನ ರೋಚಕವಾದ ಅಧ್ಯಾಯಗಳೇ.
ಇವೆಲ್ಲದರ ಹಿನ್ನೆಲೆ ಇರುವ ಕಡಕ್ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರು ಇಂದು (ಜುಲೈ 31ರಂದು) ಪೊಲೀಸ್ ಇಲಾಖೆಯಿಂದ ನಿವೃತ್ತಿಯಾಗುತ್ತಿದ್ದಾರೆ.
ಪ್ರೇರಣೆ ಕೊಟ್ಟ ಬಾಲ್ಯದ ಘಟನೆ.
ಕಾರ್ಕಳ ತಾಲೂಕಿನ ಎಣ್ಣೆಹೊಳೆಯ ಕನ್ನಡ ಮಾಧ್ಯಮದ ಸರಕಾರಿ ಶಾಲೆಯಲ್ಲಿ ಅವರು ಏಳನೇ ತರಗತಿಯವರೆಗೆ ಕಲಿತವರು. ಅದು ಅವರ ಅಜ್ಜ ಸ್ಥಾಪನೆ ಮಾಡಿದ ಶಾಲೆ. ಅವರು ಏಳನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ವಿದ್ಯಾರ್ಥಿ ನಾಯಕ ಆಗಿದ್ದರು. ಶಾಲೆಯ ಸಮೀಪ ಮನೆ ಇದ್ದ ಕಾರಣ ಸಂಜೆ ಶಾಲೆಗೆ ಬೀಗ ಹಾಕಿ ಅವರು ಬೀಗದ ಕೈ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು.
ಆದರೆ ಒಂದು ದಿನ ಬೇರೆಯೇ ಆಯಿತು. ಅಂದು ರಾತ್ರಿ ಅವರ ಅಜ್ಜನ ಮನೆಯಲ್ಲಿ ದೈವದ ಕೋಲ ಇದ್ದ ಕಾರಣ ಅಲ್ಲಿಗೆ ಹೋಗಿ ಇಡೀ ರಾತ್ರಿ ನಿದ್ದೆಯನ್ನು ಬಿಟ್ಟು ಕೋಲ ನೋಡಿದರು. ಬೆಳಿಗ್ಗೆ ಅಲ್ಲಿಯೇ ಮಲಗಿದರು. ಶಾಲೆಯ ಬೀಗದ ಕೈ ಕಿಸೆಯಲ್ಲಿಯೇ ಇತ್ತು. ಆಮೇಲೆ ಎಚ್ಚರಾಗಿ ಅವರು ಕಣ್ಣು ಉಜ್ಜಿಕೊಂಡು ಶಾಲೆಗೆ ಬರುವಾಗ ತುಂಬ ಲೇಟ್ ಆಗಿತ್ತು. ಎಲ್ಲ ಅಧ್ಯಾಪಕರೂ, ವಿದ್ಯಾರ್ಥಿಗಳೂ ಹೊರಗೆ ಬಿಸಿಲಿಗೆ ನಿಂತು ಕಾಯುತ್ತಿದ್ದರು. ಅಂದು ಹೆಡ್ ಮಾಸ್ಟರ್ ಬೆತ್ತ ಹಿಡಿದು ಹುಡುಗನಿಗೆ ಎರಡು ಪೆಟ್ಟು ಕೊಟ್ಟು ಬುದ್ಧಿ ಹೇಳಿದರು. ಆ ಘಟನೆ ತನಗೆ ಜವಾಬ್ದಾರಿ ಕಲಿಸಿತು ಎಂದು ದಯಾ ನಾಯಕ್ ಅವರು ಒಂದು ಕಡೆ ಹೇಳಿದ್ದಾರೆ.
ಹೊಟ್ಟೆಪಾಡು ಹುಡುಕಿ ಮುಂಬೈಗೆ.
ಬಾಲ್ಯದ ಹಸಿವು, ಅಪಮಾನಗಳನ್ನು ತಡೆಯಲು ಆಗದೆ ದಯಾ ನಾಯಕರು 1978ರಲ್ಲಿ ಮುಂಬೈಗೆ ಹೋದರು. ಅಲ್ಲಿ ಪರಿಚಯದವರು ಯಾರೂ ಇರಲಿಲ್ಲ. ಮುಂದೆ ಹೋಟೆಲ್ ಕೆಲಸ ಮಾಡುತ್ತಾ ಬಹಳ ಕಷ್ಟ ಪಟ್ಟು ಡಿ ಎನ್ ನಗರದ CES ಕಾಲೇಜಿನಲ್ಲಿ ಪದವಿ ಪಡೆದರು. ಪ್ಲಂಬಿಂಗ್ ಇತ್ಯಾದಿ ಕೆಲಸಗಳನ್ನು ಮಾಡಿದರು. ತಿಂಗಳಿಗೆ 3,000 ರೂ. ಮಾತ್ರ ಸಂಪಾದನೆ ಇದ್ದರೂ ಪ್ರತೀ ತಿಂಗಳೂ ಅಮ್ಮನಿಗೆ ದುಡ್ಡು ನೆನಪಲ್ಲಿ ಕಳುಹಿಸಿಕೊಡುತ್ತಿದ್ದರು.
1995 – ಪೊಲೀಸ್ ಅಧಿಕಾರಿಯಾಗಿ ಪ್ರವೇಶ.

ತುಂಬಾ ಶ್ರಮದಿಂದ ಪೊಲೀಸ್ ಪರೀಕ್ಷೆ ಮತ್ತು ಫಿಟ್ನೆಸ್ ಪರೀಕ್ಷೆ ಎದುರಿಸಿ ದಯಾ ನಾಯಕ್ ಅವರು 1995ರಲ್ಲಿ ಪೊಲೀಸ್ ಟ್ರೈನೀ ಆಗಿ ಆಯ್ಕೆ ಆದರು. ಮುಂದಿನ ವರ್ಷ ಜುಹೂ ಪೊಲೀಸ್ ಸ್ಟೇಷನ್ನಿನಲ್ಲಿ ಸಬ್ ಇನ್ಸಪೆಕ್ಟರ್ ಆಫ್ ಪೊಲೀಸ್ ಆಗಿ ನೇಮಕ ಆದರು. ಅವರ ಧೈರ್ಯ ಮತ್ತು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯಗಳನ್ನು ಪರಿಗಣಿಸಿ ಅವರನ್ನು ಇಲಾಖೆಯು ವಿಶೇಷ ಟಾಸ್ಕ್ ಪಡೆಗೆ ನೇಮಕ ಮಾಡಿತು.
ಭೂಗತ ಪಾತಕಿಗಳದ್ದೇ ಸಾಮ್ರಾಜ್ಯ ಆಗಿತ್ತು ಮುಂಬೈ!
ಆ ಹೊತ್ತಿನಲ್ಲಿ ಮುಂಬೈ ನಗರವು ಭೂಗತ ಪಾತಕಿಗಳ ಕಪಿಮುಷ್ಠಿಯಲ್ಲಿ ಇತ್ತು. ದಾವುದ್ ಇಬ್ರಾಹಿಂ, ಛೋಟಾ ಶಕೀಲ್, ಛೋಟಾ ರಾಜನ್, ಅಬು ಸಲೇಂ, ಅರುಣ್ ಗಾವ್ಲಿ, ರವಿ ಪೂಜಾರಿ ಮೊದಲಾದವರು ಕೊಲೆ, ಸುಲಿಗೆ, ಭೂಗತ ಚಟುವಟಿಕೆ, ಹವಾಲಾ, ಹಪ್ತಾ ವಸೂಲಿಗಳ ಮೂಲಕ ಮುಂಬೈಯನ್ನು ವಸ್ತುಶಃ ನಡುಗಿಸುತ್ತಿದ್ದರು. ರಕ್ತಪಾತ, ಕೊಲೆ ಇವುಗಳೆಲ್ಲವೂ ಅಲ್ಲಿ ದಿನ ನಿತ್ಯದ ಭಾಗವಾಗಿತ್ತು.
ಇದನ್ನೆಲ್ಲ ಮಟ್ಟ ಹಾಕಲು ದಯಾ ನಾಯಕ್ ಆಯುಧವನ್ನು ಹಿಡಿಯಲೇ ಬೇಕಾಯಿತು. ಒಂದು ವರ್ಷದ ಡಿಸೆಂಬರ್ 31ರ ಪಾತಕಿಗಳ ಗುಂಡು ಪಾರ್ಟಿಯ ಖಚಿತ ಮಾಹಿತಿ ಪಡೆದು ದಯಾ ನಾಯಕ್ ಅಲ್ಲಿ ಬಂದು ಧಾಳಿ ಮಾಡಿದರು. ಆಗ ಆ ಪಾತಕಿಗಳು ಪೊಲೀಸರ ಮೇಲೆ ಗುಂಡಿನ ಧಾಳಿ ನಡೆಸಿದಾಗ ಇವರು ಪ್ರತಿಯಾಗಿ ಗುಂಡನ್ನು ಹಾರಿಸಲೇ ಬೇಕಾಯಿತು. ಈ ಎನ್ಕೌಂಟರ್ ಹಲವು ಪಾತಕಿಗಳ ಮಾರಣ ಹೋಮಕ್ಕೆ ಕಾರಣವಾಯಿತು ಮತ್ತು ಒಮ್ಮೆ ಭೂಗತ ಜಗತ್ತನ್ನು ನಡುಗಿಸಿಬಿಟ್ಟಿತ್ತು.
ದಯಾ ನಾಯಕರು ‘ಈ ಎನ್ಕೌಂಟರ್ ನನಗೆ ಇಷ್ಟ ಇರಲಿಲ್ಲ. ಆದರೆ ಪರಿಸ್ಥಿತಿಯು ಕೈ ಮೀರಿ ಹೋದಾಗ ನಾನು ಗುಂಡು ಹಾರಿಸಲೇ ಬೇಕಾಯಿತು. ಆಗ ನನ್ನ ಹಿರಿಯ ಪೊಲೀಸ್ ಅಧಿಕಾರಿಗಳು ನನಗೆ ನೈತಿಕ ಬೆಂಬಲ ಕೊಟ್ಟರು. ಪ್ರಶಂಸೆ ಮಾಡಿದರು. ಅದರ ಜೊತೆಗೆ ಸಾರ್ವಜನಿಕರು ನನ್ನ ನೆರವಿಗೆ ಬಂದರು. ಮುಂದೆ ಮುಂಬೈ ನಗರದಲ್ಲಿ ಸಾರ್ವಜನಿಕರ ರಕ್ತಪಾತವನ್ನು ನಿಯಂತ್ರಿಸಲು ನಾನು ಸರಣಿ ಎನ್ಕೌಂಟರ್ ಮಾಡಲೇ ಬೇಕಾಯಿತು’ ಎಂದಿದ್ದಾರೆ.
ಎನ್ಕೌಂಟರ್ ದಯಾ ನಾಯಕ್ ಆದರು.
ಮುಂದಿನ 30 ವರ್ಷಗಳಲ್ಲಿ ಅವರು ಎನ್ಕೌಂಟರ್ ಮಾಡಿ ಉಡಾಯಿಸಿದ ಭೂಗತ ಪಾತಕಿಗಳ ಸಂಖ್ಯೆ ಬರೋಬ್ಬರಿ 85 ಅಂದರೆ ನಮಗೆ, ನಿಮಗೆ ನಂಬಲು ಕಷ್ಟವಾಗಬಹುದು! ಹಲವು ಬಾರಿ ದಯಾ ನಾಯಕ್ ಅವರ ಮೇಲೆ ಧಾಳಿಗಳು ನಡೆದಿವೆ. ಒಮ್ಮೆಯಂತೂ ಗುಂಡು ತಾಗಿ ಆಸ್ಪತ್ರೆಗೆ ಸೇರಿದ ಘಟನೆಯೂ ನಡೆದಿದೆ.
300+ ಪಾತಕಿಗಳನ್ನು ಅವರು ಅರೆಸ್ಟ್ ಮಾಡಿ ಕಾನೂನಿಗೆ ಒಪ್ಪಿಸಿದ್ದೂ ಇದೆ. ತನ್ನ ಜೀವದ ಹಂಗು ತೊರೆದು ಅವರು ಈ ಸಾಹಸದ ಕೆಲಸಗಳನ್ನು ಮಾಡಿದ್ದು ಭಾರತೀಯ ಪೊಲೀಸ್ ಇತಿಹಾಸದಲ್ಲಿಯೇ ಒಂದು ರೋಚಕವಾದ ಅಧ್ಯಾಯ ಆಗಿದೆ. ಅದರಿಂದ ಅವರಿಗೆ ಮುಂದೆ ಭಾರೀ ದೊಡ್ಡ ಕೀರ್ತಿಗಳು ದೊರೆತವು.
ಹುಟ್ಟೂರಿನಲ್ಲಿ ಕನ್ನಡ ಶಾಲೆಯ ಸ್ಥಾಪನೆ.
ದಯಾ ನಾಯಕ್ ಅವರು ತನ್ನ ಹುಟ್ಟೂರಿನ ಋಣವನ್ನು ತೀರಿಸಲು ಕಾರ್ಕಳ ತಾಲೂಕಿನ ಎಣ್ಣೆಹೊಳೆಯಲ್ಲಿ ತನ್ನ ತಾಯಿಯ ಹೆಸರಿನಲ್ಲಿ ರಾಧಾ ನಾಯಕ್ ಶೈಕ್ಷಣಿಕ ಟ್ರಸ್ಟ್ ಸ್ಥಾಪನೆಯನ್ನು ಮಾಡಿದರು. ಅದರ ನೆರವಿನಿಂದ ಒಂದು ಅತ್ಯುತ್ತಮ ಕನ್ನಡ ಮಾಧ್ಯಮ ಪ್ರೌಢಶಾಲೆಯನ್ನು ಅವರು ಕಟ್ಟಿದರು.
2000ದಲ್ಲಿ ಆ ಶಾಲೆಯನ್ನು ಕಲಾವಿದ ಎಂ ಎಫ್ ಹುಸೇನ್, ಅಮಿತಾಬ್ ಬಚ್ಚನ್ ಮೊದಲಾದವರು ಬಂದು ಉದ್ಘಾಟನೆ ಮಾಡಿದರು. ಮುಂದೆ ಆ ಶಾಲೆಯನ್ನು ರಾಜ್ಯ ಸರಕಾರಕ್ಕೆ ಒಪ್ಪಿಸಿದ ದಯಾ ನಾಯಕ್ ಅವರು ಇಂದಿಗೂ ಆ ಶಾಲೆಯ ನೆರವಿಗೆ ನಿಂತಿದ್ದಾರೆ. ಎಣ್ಣೆಹೊಳೆಯ ರಾಧಾ ನಾಯಕ್ ಸರಕಾರಿ ಪ್ರೌಢಶಾಲೆಯು ಇಂದು ನಾಡಿಗೆ ಮಾದರಿ ಶಾಲೆಯಾಗಿ ತಲೆಯೆತ್ತಿ ನಿಂತಿದೆ.
ಕಿರುಕುಳಗಳನ್ನು ಮೆಟ್ಟಿ ನಿಂತರು ದಯಾ ನಾಯಕ್.
ಒಬ್ಬ ವ್ಯಕ್ತಿಯು ಜನಪ್ರಿಯತೆಯ ಶಿಖರವನ್ನು ತಲುಪಿದಾಗ ಸಹಿಸಲು ಸಾಧ್ಯವಾಗದ ಕೆಲವರು ಎಲ್ಲ ಕಡೆ ಇರುತ್ತಾರೆ. ದಯಾ ನಾಯಕ್ ಅವರಿಗೂ ಹಾಗೆಯೇ ಆಯಿತು. ಕೆಲವು ಪತ್ರಕರ್ತರು, ಅವರದೇ ಇಲಾಖೆಯ ಕೆಲವು ಮಂದಿ ಅವರ ವಿರುದ್ಧ ಅಪಪ್ರಚಾರಕ್ಕೆ ನಿಂತರು.* *27 ಬಾರಿ ಅವರು ತಮ್ಮ ಇಲಾಖೆಯ ವಿಚಾರಣೆಗಳನ್ನು ಎದುರಿಸಬೇಕಾಯಿತು. ಒಮ್ಮೆ ನಾಗಪುರಕ್ಕೆ ವರ್ಗಾವಣೆ ಇತ್ಯಾದಿ ಕಿರುಕುಳಗಳನ್ನು ಸಹ ಅನುಭವಿಸಿದರು. ಆದರೆ ತನ್ನ ಬಲಿಷ್ಟವಾದ ಇಚ್ಛಾ ಶಕ್ತಿ ಮತ್ತು ಪ್ರಬಲ ಆತ್ಮವಿಶ್ವಾಸಗಳಿಂದ ದಯಾ ನಾಯಕ್ ಎಲ್ಲವನ್ನೂ ಗೆದ್ದುಬಂದರು. ಪುಟವಿಟ್ಟ ಚಿನ್ನದಂತೆ ಮತ್ತೆ ಎದ್ದುಬಂದರು.
ಅವರ ಬದುಕು, ಹೋರಾಟ ಬಾಲಿವುಡ್ ಸಿನೆಮಾಗಳಿಗೆ ಸ್ಫೂರ್ತಿ ನೀಡಿತು.
ಒಬ್ಬ ಕಡಕ್ ಪೋಲಿಸ್ ಅಧಿಕಾರಿಯ ಬದುಕು ಇಷ್ಟೊಂದು ಸಿನೆಮಾಗಳಿಗೆ ವಸ್ತುವಾದ ಬೇರೆ ಉದಾಹರಣೆಗಳು ನಮಗೆ ಎಲ್ಲಿಯೂ ದೊರೆಯುವುದಿಲ್ಲ. ಅಬ್ ತಕ್ ಚಪ್ಪನ್, ಅಬ್ ತಕ್ ಚಪ್ಪನ್ 2, ಕಗಾರ್, ರಿಸ್ಕ್ ಮೊದಲಾದ ಹಿಂದೀ ಸಿನೆಮಾಗಳು ಅವರ ಹೋರಾಟದಿಂದ ಸ್ಫೂರ್ತಿ ಪಡೆದವು. ಕನ್ನಡದಲ್ಲಿಯೂ ಎನ್ಕೌಂಟರ್ ದಯಾ ನಾಯಕ್ ಎಂಬ ಸಿನಿಮಾವು ಜನಪ್ರಿಯ ಆಯಿತು. ತೆಲುಗಿನಲ್ಲಿ ಸಿದ್ದಂ, ಗೋಲಿಮಾರ್, ಡಿಪಾರ್ಟ್ ಮೆಂಟ್, ಟೆಂಪರ್ ಮೊದಲಾದ ಸಿನಿಮಾಗಳೂ ಬಂದವು. ಒಬ್ಬ ಪೋಲಿಸ್ ಅಧಿಕಾರಿಯ ಬದುಕಿನ ಸಾಹಸಗಳ ಮೇಲೆ ಇಷ್ಟೊಂದು ಸಿನೆಮಾಗಳು ತೆರೆಗೆ ಬಂದ ಬೇರೆ ಉದಾಹರಣೆ ನಮಗೆ ಬೇರೆಲ್ಲಿಯೂ ಸಿಗುವುದಿಲ್ಲ.
ಮುಂಬೈಯಲ್ಲಿ ಈಗ ಗ್ಯಾಂಗಸ್ಟರ್ ರಾಜ್ ನಿಯಂತ್ರಣಕ್ಕೆ ಬಂದಿದೆ.
ಎಸಿಪಿ ದಯಾ ನಾಯಕ್ ಅವರ ಮತ್ತು ಇನ್ನಿತರ ಕೆಲವು ಪೊಲೀಸ್ ಅಧಿಕಾರಿಗಳ ಹೋರಾಟದ ಕಾರಣದಿಂದಾಗಿ ಮುಂಬಯಿಯಲ್ಲಿ ಈಗ ಗೂಂಡಾ ರಾಜ್ ನಿಯಂತ್ರಣಕ್ಕೆ ಬಂದಿದೆ. ಭೂಗತ ಪಾತಕಿಗಳು ಈಗ ಬಿಲಗಳನ್ನು ಸೇರಿದ್ದಾರೆ. ಪೊಲೀಸ್ ಇಲಾಖೆಗೆ ಬಹಳ ದೊಡ್ಡ ನೈತಿಕ ಪವರ್ ದೊರೆತಿದೆ.
ದಯಾ ನಾಯಕ್ – ಇಂದು ನಿವೃತ್ತಿ.
ಎಸಿಪಿ ದಯಾ ನಾಯಕ್ ತನ್ನ 30 ವರ್ಷಗಳ ಸುದೀರ್ಘ ಪೊಲೀಸ್ ಸೇವೆಯಿಂದ ಇಂದು ನಿವೃತ್ತಿ ಹೊಂದುತ್ತಿದ್ದಾರೆ. ಭುಜದ ಮೇಲೆ ಹೊಳೆಯುವ ನಕ್ಷತ್ರಗಳು ಇವೆ. ನಿವೃತ್ತಿಯ ನಂತರ ಹುಟ್ಟೂರು ಎಣ್ಣೆಹೊಳೆಗೆ ಬಂದು ಕೃಷಿ ಇತ್ಯಾದಿ ಮಾಡಬೇಕು ಎನ್ನುವ ಕನಸು ಅವರ ಹತ್ತಿರ ಇವೆ.
ಒಳ್ಳೆದಾಗಲಿ ಎಸಿಪಿ ದಯಾ ನಾಯಕ್ ಸರ್.
-ಅಭಿಮತ