ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿ: ಸಿಎಂ ಡಿ.ಕೆ. ಶಿವಕುಮಾರ್

On: November 4, 2026 3:25 PM
Follow Us:

1 ಸಾವಿರ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಗುರಿ; 2 ಸಾವಿರ ಶಾಲೆಗಳ ಅಭಿವೃದ್ಧಿಗೆ ದೀರ್ಘಕಾಲೀನ ಯೋಜನೆ

ಸರ್ಕಾರಿ ಶಾಲೆಗಳಿಗೆ ಮೊದಲ ಆದ್ಯತೆ ನೀಡಿ – ಕೆಪಿಎಸ್ ಶಾಲೆಗಳಿಗೆ ದಾನಿಗಳ ಹೆಸರಿಡಲು ಅವಕಾಶ – ಶಿಕ್ಷಕರು ಸಮಾಜದ ಪ್ರಮುಖ ಸ್ತಂಭಗಳು

ಬೆಂಗಳೂರು, ನ. 04: ರಾಜ್ಯದ ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳಿಗೆ ಗುಣಮಟ್ಟದ ಶಿಕ್ಷಣ, ಆಧುನಿಕ ಸೌಲಭ್ಯ ಹಾಗೂ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ಖಾಸಗಿ ಶಾಲೆಗಳಲ್ಲಿರುವ ಶೈಕ್ಷಣಿಕ ಸಂಪನ್ಮೂಲ, ಪರಿಣತ ಶಿಕ್ಷಕರು, ತಂತ್ರಜ್ಞಾನ ಹಾಗೂ ಮೂಲಸೌಕರ್ಯಗಳ ಪ್ರಯೋಜನ ಗ್ರಾಮೀಣ ಮಕ್ಕಳಿಗೂ ದೊರೆಯುವಂತಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (CSR) ನೀತಿಯಡಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಮುಂದೆ ಬರಬೇಕು. ಶಿಕ್ಷಣದ ಗುಣಮಟ್ಟದಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಗ್ರಾಮೀಣ ಮಕ್ಕಳಿಗೂ ಉತ್ತಮ ಭವಿಷ್ಯ ರೂಪಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬುಧವಾರ ನಡೆದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (CSR) ಪ್ರತಿನಿಧಿಗಳ ಸಭೆಯಲ್ಲಿ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿರುವ ಗುಣಮಟ್ಟದ ಶಿಕ್ಷಣ ಮತ್ತು ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಮಹತ್ವದ ಯೋಜನೆ ರೂಪಿಸಿದೆ. ರಾಜ್ಯದ ಒಟ್ಟು 2 ಸಾವಿರ ಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಜೋಡಿಸುವ ಚಿಂತನೆ ಇದೆ. ರಾಜ್ಯದ ಸುಮಾರು 6 ಸಾವಿರ ಗ್ರಾಮ ಪಂಚಾಯಿತಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿ, ಹಂತ ಹಂತವಾಗಿ ಈ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 1 ಸಾವಿರ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಿಸಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಇದು ಕೇವಲ ಆರಂಭವಷ್ಟೇ. ಮುಂದಿನ 4ರಿಂದ 5 ವರ್ಷಗಳಲ್ಲಿ ಈ ಪ್ರಯತ್ನದ ಉತ್ತಮ ಫಲಿತಾಂಶ ಕಾಣಲು ಸಾಧ್ಯವಾಗಲಿದೆ. ಗ್ರಾಮೀಣ ಭಾಗದ ಮಕ್ಕಳನ್ನು ನಿಮ್ಮ ಶಾಲೆಯ ಮಕ್ಕಳೊಂದಿಗೆ ಬೆರೆಸಿ, ಅವರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಅವರ ಪ್ರತಿಭೆಯನ್ನು ಗುರುತಿಸಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಬೇಕು. ನಗರ ಪ್ರದೇಶದ ಮಕ್ಕಳಿಗೆ ದೊರೆಯುವ ಶೈಕ್ಷಣಿಕ ಅವಕಾಶಗಳು ಗ್ರಾಮೀಣ ಮಕ್ಕಳಿಗೂ ಸಿಗುವಂತಾಗಬೇಕು ಎಂದರು.

ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ವಿಚಾರದಲ್ಲಿ ಸರ್ಕಾರ ಯಾವುದೇ ನಿರ್ದಿಷ್ಟ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ಹಂಚಿಕೆ ಮಾಡುವುದಿಲ್ಲ. ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ತಮ್ಮ ಅನುಕೂಲ, ಆಸಕ್ತಿ ಮತ್ತು ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕಟ್ಟಡ ನಿರ್ಮಿಸಿಕೊಡುವ ಸಾಮರ್ಥ್ಯ ಇಲ್ಲದಿದ್ದರೂ ತಮ್ಮಿಂದ ಸಾಧ್ಯವಾಗುವ ರೀತಿಯಲ್ಲಿ ನೆರವು ನೀಡಬಹುದು ಎಂದು ಹೇಳಿದರು.

ನಿಮ್ಮ ಶಾಲೆಗಳಲ್ಲಿ ಪರಿಣತಿ ಹೊಂದಿರುವ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ನಿಯೋಜಿಸಿ. ಉದಾಹರಣೆಗೆ, ನಿಮ್ಮ ಸಂಸ್ಥೆಯಿಂದ 10 ಶಿಕ್ಷಕರನ್ನು ಕಳುಹಿಸಿ, ಅವರ ವೇತನವನ್ನು ನೀವೇ ಭರಿಸಬಹುದು. ನಿಮ್ಮ ಶಾಲೆಗಳಲ್ಲಿ ಬಳಕೆಯಲ್ಲಿಲ್ಲದ ಅಥವಾ ಹೆಚ್ಚುವರಿಯಾಗಿರುವ ಬಸ್‌ಗಳನ್ನು ಸರ್ಕಾರಿ ಶಾಲೆಗಳ ಮಕ್ಕಳ ಅನುಕೂಲಕ್ಕೆ ನೀಡಬಹುದು. ಪ್ರಯೋಗಾಲಯದ ಉಪಕರಣಗಳು, ಕಂಪ್ಯೂಟರ್‌ಗಳು ಹಾಗೂ ಇತರ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸಬಹುದು. ಇದು ಕೇವಲ ಆರ್ಥಿಕ ನೆರವಲ್ಲ; ಜ್ಞಾನ, ಅನುಭವ ಮತ್ತು ಸಂಪನ್ಮೂಲಗಳ ವಿನಿಮಯವೂ ಆಗಲಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ವಾರ್ಷಿಕವಾಗಿ ಸುಮಾರು ₹8,800 ಕೋಟಿ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿ ಲಭ್ಯವಿದೆ. ಈ ನಿಧಿಯನ್ನು ಗ್ರಾಮೀಣ ಪ್ರದೇಶಗಳ ಸರ್ಕಾರಿ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಮಾಣದಲ್ಲಿ ಬಳಸುವಂತೆ ಕಂಪನಿಗಳ ಆಡಳಿತ ಮಂಡಳಿಗಳೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ CSR ನಿಧಿ ಮೊದಲ ಆದ್ಯತೆಯಾಗಬೇಕು ಎಂದು ಮನವಿ ಮಾಡಲಾಗಿದೆ. ಹಲವು ಕಂಪನಿಗಳು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಇದೀಗ ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

CSR ನಿಧಿಯ ಬಳಕೆಗೆ ಸಂಬಂಧಿಸಿದ ಕೆಲವು ಅಕ್ರಮ ಮತ್ತು ಅಸಮರ್ಪಕ ಪದ್ಧತಿಗಳ ಬಗ್ಗೆಯೂ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ. ಈ ವಿಚಾರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕೆಲವು ಕಂಪನಿಗಳು ಮುಂಬೈ ಸೇರಿದಂತೆ ಬೇರೆ ನಗರಗಳಲ್ಲಿ ಕಚೇರಿಗಳನ್ನು ಹೊಂದಿದ್ದರೂ, ಕರ್ನಾಟಕದಲ್ಲಿ ಕಂಪನಿಗಳನ್ನು ನೋಂದಾಯಿಸಿ ಇಲ್ಲಿನ ಚಟುವಟಿಕೆಗಳಿಂದ ಆದಾಯ ಗಳಿಸುತ್ತಿವೆ. ಆದರೆ CSR ನಿಧಿಯನ್ನು ಬೇರೆಡೆ ವಿನಿಯೋಗಿಸುವ ಪ್ರವೃತ್ತಿಯೂ ಇದೆ. ಕೆಲವು ಸಂದರ್ಭಗಳಲ್ಲಿ ಬಿಡುಗಡೆಯಾದ ಹಣದ ಶೇ.50ರಷ್ಟು ಮೊತ್ತವನ್ನು ಮರಳಿ ಪಡೆಯುವ ವ್ಯವಸ್ಥೆಗಳೂ ನಡೆಯುತ್ತಿವೆ. ಇಂತಹ ಪದ್ಧತಿಗಳಿಗೆ ಕಡಿವಾಣ ಹಾಕಿ, ರಾಜ್ಯದಲ್ಲಿ ಗಳಿಸುವ ಸಂಪನ್ಮೂಲದ ಒಂದು ಭಾಗ ಇಲ್ಲಿನ ಶಿಕ್ಷಣ ಮತ್ತು ಸಾಮಾಜಿಕ ಅಭಿವೃದ್ಧಿಗೆ ಬಳಕೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳು ನೀಡುವ ಕೊಡುಗೆಯನ್ನು ಗುರುತಿಸುವ ಉದ್ದೇಶದಿಂದ ಶಾಲೆಗಳ ಹೆಸರಿನೊಂದಿಗೆ ನೆರವು ನೀಡಿದ ಸಂಸ್ಥೆಗಳ ಹೆಸರನ್ನೂ ಸೇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಈಗಾಗಲೇ 30 ಸರ್ಕಾರಿ ಶಾಲೆಗಳಲ್ಲಿ ಕಂಪನಿಗಳ CSR ನಿಧಿಯ ನೆರವಿನಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ಶೇ.10ರಷ್ಟು ಶಾಲೆಗಳ ಕಾಮಗಾರಿಗಳು ಪೂರ್ಣಗೊಂಡಿದ್ದು, 8 ಶಾಲೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ 12 ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದ ಒಪ್ಪಂದ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.

ಟೊಯೋಟಾ ಕಂಪನಿ ರಾಮನಗರ ಜಿಲ್ಲೆಯಲ್ಲಿ 23 ಶಾಲೆಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ ನೆರವು ನೀಡುತ್ತಿದೆ. ಪ್ರತಿ ಶಾಲೆಗೆ ಸುಮಾರು ₹10 ಕೋಟಿಯಿಂದ ₹15 ಕೋಟಿ ಹೂಡಿಕೆ ಮಾಡುತ್ತಿದೆ. ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯವಾದ ಯೋಜನಾ ವಿನ್ಯಾಸವನ್ನು ಸರ್ಕಾರವೇ ಒದಗಿಸಿದೆ. ಆದರೆ CSR ನಿಧಿಯ ಹಣವನ್ನು ಸರ್ಕಾರ ನೇರವಾಗಿ ಸ್ವೀಕರಿಸುವುದಿಲ್ಲ. ಸಂಸ್ಥೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಶಾಲೆಗಳ ಅಭಿವೃದ್ಧಿಗೆ ನೇರವಾಗಿ ನೆರವು ನೀಡಲಿವೆ ಎಂದು ಸ್ಪಷ್ಟಪಡಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದರೆ, ಸರ್ಕಾರಿ ಶಾಲೆಯ ಮೂಲ ಹೆಸರಿನೊಂದಿಗೆ ತಮ್ಮ ಸಂಸ್ಥೆಯ ಹೆಸರನ್ನು ಸೇರಿಸಿಕೊಳ್ಳಬಹುದು. ತಮಿಳುನಾಡು ಗಡಿಯಲ್ಲಿರುವ ಹೆಗ್ಗನೂರು ಸರ್ಕಾರಿ ಶಾಲೆಗೆ ಹೆಗ್ಗನೂರು ಸರ್ಕಾರಿ ಟೊಯೋಟಾ ಶಾಲೆ’ ಎಂದು ಹೆಸರಿಡಲು ಅವಕಾಶ ನೀಡಲಾಗಿದೆ. ಶಾಲೆಗಳ ಅಭಿವೃದ್ಧಿಗೆ ನೆರವಾಗುವ ಸಂಸ್ಥೆಗಳಿಗೆ ಇದರಿಂದ ಪ್ರೋತ್ಸಾಹ ದೊರೆಯಲಿದೆ ಎಂದು ಹೇಳಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಒಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಅದನ್ನು ಸಮರ್ಥವಾಗಿ ನಿರ್ವಹಿಸುವುದು ಸುಲಭದ ಕೆಲಸವಲ್ಲ. ಕಟ್ಟಡ ನಿರ್ಮಾಣ, ಶಿಕ್ಷಕರ ನೇಮಕಾತಿ, ಮೂಲಸೌಕರ್ಯ, ನಿರ್ವಹಣೆ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪರಿಶ್ರಮ ಮತ್ತು ಆರ್ಥಿಕ ಹೂಡಿಕೆಯನ್ನು ಸರ್ಕಾರ ಗೌರವಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

ಖಾಸಗಿ ಶಾಲೆಗಳಿಗೆ ಸರ್ಕಾರ ಮೃದು ಧೋರಣೆ ಹೊಂದಿದೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಎಷ್ಟು ಕಷ್ಟ ಎಂಬುದು ನನಗೆ ಗೊತ್ತಿದೆ. ಕೆಲವು ಖಾಸಗಿ ಶಾಲೆಗಳು ವಾರ್ಷಿಕವಾಗಿ ₹50 ಸಾವಿರದಿಂದ ₹2 ಲಕ್ಷದವರೆಗೆ ಶುಲ್ಕ ಪಡೆಯುತ್ತಿವೆ. ಇಂತಹ ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಿದ್ದು, ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿವೆ. ನಿಮ್ಮ ಸಂಸ್ಥೆಗಳ ಬೆಳವಣಿಗೆಯ ಜೊತೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಯನ್ನೂ ನಿಮ್ಮ ಜವಾಬ್ದಾರಿಯೆಂದು ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಖಾಸಗಿ ಶಾಲೆಗಳು ರಾಜ್ಯಕ್ಕೆ ಉತ್ತಮ ಶೈಕ್ಷಣಿಕ ಕೊಡುಗೆ ನೀಡಿವೆ. ಅವುಗಳಲ್ಲಿರುವ ಗುಣಮಟ್ಟದ ಬೋಧನೆ, ಆಧುನಿಕ ಕಲಿಕಾ ವಿಧಾನ ಮತ್ತು ಶೈಕ್ಷಣಿಕ ಸಾಮರ್ಥ್ಯವನ್ನು ಸರ್ಕಾರಿ ಶಾಲೆಗಳಿಗೂ ವಿಸ್ತರಿಸಿದರೆ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಬರುವ ಅಗತ್ಯ ಕಡಿಮೆಯಾಗಲಿದೆ. ಪ್ರತಿಯೊಬ್ಬರೂ ತಮ್ಮ ಶಿಕ್ಷಣ ಪಡೆದ ಊರು ಮತ್ತು ಗ್ರಾಮದ ಶಾಲೆಗಳ ಅಭಿವೃದ್ಧಿಗೆ ಸಾಧ್ಯವಾದಷ್ಟು ಕೊಡುಗೆ ನೀಡಬೇಕು. ಏಕೆಂದರೆ, ಬಹುತೇಕರು ಗ್ರಾಮೀಣ ಹಿನ್ನೆಲೆಯಿಂದಲೇ ಬಂದವರಾಗಿದ್ದು, ತಮ್ಮ ಊರಿನ ಶಾಲೆಗಳಿಗೆ ನೆರವಾಗುವುದು ಸಾಮಾಜಿಕ ಕರ್ತವ್ಯವಾಗಿದೆ ಎಂದು ಹೇಳಿದರು.

ರಾಜ್ಯದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ವಿಶ್ವಬ್ಯಾಂಕ್‌ನಿಂದ ₹2 ಸಾವಿರ ಕೋಟಿ ಸಾಲ ಪಡೆದು ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ₹70 ಸಾವಿರದಿಂದ ₹1.5 ಲಕ್ಷದವರೆಗೆ ವೇತನ ನೀಡಲಾಗುತ್ತಿದ್ದರೂ, ಶಿಕ್ಷಣದ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸುವ ಅಗತ್ಯವಿದೆ. ಶಿಕ್ಷಕರ ನೇಮಕಾತಿ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಲು ಶಿಕ್ಷಕರ ಸಾಮರ್ಥ್ಯ ಮತ್ತು ಬೋಧನಾ ಕೌಶಲ್ಯ ಪ್ರಮುಖವಾಗಿವೆ ಎಂದು ಹೇಳಿದರು.

ಶಿಕ್ಷಣ ಸಂಸ್ಥೆಗಳಲ್ಲಿ ನಾವೆಲ್ಲರೂ ಕೇವಲ ಟ್ರಸ್ಟಿಗಳಷ್ಟೇ. ಇಂದು ನಾವು ಇರುತ್ತೇವೆ, ನಾಳೆ ಬೇರೆಯವರು ಬರುತ್ತಾರೆ. ಆದರೆ, ನಾವು ಮಾಡುವ ಒಳ್ಳೆಯ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ಹೀಗಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸರ್ಕಾರಿ ಶಾಲೆಗಳೊಂದಿಗೆ ಪಾಲುದಾರರಾಗಿ ಕೆಲಸ ಮಾಡಬೇಕು. ಒಂದು ಖಾಸಗಿ ಶಾಲೆಯು ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಅವಕಾಶವೂ ಇದೆ ಎಂದರು.

ಸರ್ಕಾರಿ ಮತ್ತು ಖಾಸಗಿ ಶಾಲೆಗಳೆರಡೂ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿ ರಾಜ್ಯದ ಭವಿಷ್ಯದ ಆಸ್ತಿಯನ್ನಾಗಿ ಮಾಡುತ್ತಿವೆ. ಖಾಸಗಿ ಶಾಲೆಗಳಲ್ಲಿ ಇರುವ ಶೈಕ್ಷಣಿಕ ಗುಣಮಟ್ಟವನ್ನು ಸರ್ಕಾರಿ ಶಾಲೆಗಳಿಗೂ ತಲುಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಜಾಗತಿಕ ಹೂಡಿಕೆಯನ್ನು ಆಕರ್ಷಿಸಲು ಸರ್ಕಾರ ಪ್ರತ್ಯೇಕ ಇಲಾಖೆ ಆರಂಭಿಸಿದ್ದು, ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕೂಡ ತಮ್ಮ ಊರುಗಳಲ್ಲಿನ ಶಾಲೆಗಳ ಅಭಿವೃದ್ಧಿಗೆ ನೆರವಾಗಲು ಮುಂದೆ ಬರುತ್ತಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆ ಮತ್ತು ಮೂಲಸೌಕರ್ಯದ ಮೇಲಿನ ಒತ್ತಡಕ್ಕೆ ಉದ್ಯೋಗದ ಜೊತೆಗೆ ಶಿಕ್ಷಣವೂ ಪ್ರಮುಖ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ರಸ್ತೆ ವಿಸ್ತರಣೆಯ ಪ್ರಮಾಣ ಶೇ.8ರಷ್ಟಿದ್ದರೆ, ಮೈಸೂರಿನಲ್ಲಿ ಶೇ.18ರಿಂದ ಶೇ.20ರಷ್ಟಿದೆ. ಬೆಂಗಳೂರಿನ ಜನಸಂಖ್ಯೆ ಸುಮಾರು 1.40 ಕೋಟಿಯಷ್ಟಿದ್ದು, ವಾಹನಗಳ ಸಂಖ್ಯೆ 1.20 ಕೋಟಿಯಷ್ಟಿದೆ. ಮಕ್ಕಳನ್ನು ಶಾಲೆಗೆ ತಲುಪಿಸಲು ಪೋಷಕರು ಕೆಲವೊಮ್ಮೆ ಒಂದು ಗಂಟೆಗೂ ಹೆಚ್ಚು ಸಮಯ ಕಳೆಯಬೇಕಾಗಿದೆ. ಉದ್ಯೋಗ ಮತ್ತು ಶಿಕ್ಷಣದ ಕಾರಣದಿಂದ ಜನರು ಬೆಂಗಳೂರಿನತ್ತ ಬರುತ್ತಿದ್ದಾರೆ. ಪ್ರತಿಯೊಬ್ಬ ತಂದೆ-ತಾಯಿಯೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಯಾವುದೇ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಅದೇ ಗುಣಮಟ್ಟದ ಶಿಕ್ಷಣ ಗ್ರಾಮೀಣ ಪ್ರದೇಶಗಳಲ್ಲೇ ದೊರೆತರೆ ಬೆಂಗಳೂರಿನ ಮೇಲಿನ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಉತ್ತಮ ಶಾಲೆಗಳು, ಪರಿಣತ ಶಿಕ್ಷಕರು ಮತ್ತು ಆಧುನಿಕ ಕಲಿಕಾ ಸೌಲಭ್ಯಗಳನ್ನು ಒದಗಿಸಿದರೆ ಅಲ್ಲಿನ ಮಕ್ಕಳು ತಮ್ಮ ಊರಿನಲ್ಲೇ ಗುಣಮಟ್ಟದ ಶಿಕ್ಷಣ ಪಡೆಯಬಹುದು. ಇದರಿಂದ ನಗರ ಪ್ರದೇಶಗಳತ್ತ ಶಿಕ್ಷಣಕ್ಕಾಗಿ ನಡೆಯುವ ವಲಸೆ ಕಡಿಮೆಯಾಗುವುದರ ಜೊತೆಗೆ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾಲ್ಕು ಪ್ರಮುಖ ಸ್ತಂಭಗಳಿರುವಂತೆ ಸಮಾಜದ ಬೆಳವಣಿಗೆಯಲ್ಲಿಯೂ ಕೃಷಿಕ, ಕಾರ್ಮಿಕ, ಸೈನಿಕ ಮತ್ತು ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಮುಖ್ಯಮಂತ್ರಿ ಹೇಳಿದರು.

ಶಿಕ್ಷಕರು ಕೇವಲ ಪಾಠ ಹೇಳಿಕೊಡುವವರಲ್ಲ. ಮುಂದಿನ ಪೀಳಿಗೆಯನ್ನು ರೂಪಿಸುವ ಜವಾಬ್ದಾರಿ ಅವರ ಮೇಲಿದೆ. ಕೃಷಿಕ ದೇಶಕ್ಕೆ ಆಹಾರ ನೀಡುತ್ತಾನೆ, ಕಾರ್ಮಿಕ ಅಭಿವೃದ್ಧಿಗೆ ಶ್ರಮಿಸುತ್ತಾನೆ, ಸೈನಿಕ ದೇಶವನ್ನು ರಕ್ಷಿಸುತ್ತಾನೆ, ಶಿಕ್ಷಕ ಉತ್ತಮ ನಾಗರಿಕರನ್ನು ರೂಪಿಸುತ್ತಾನೆ. ಹೀಗಾಗಿ ಶಿಕ್ಷಕರು ಸಮಾಜದ ಪ್ರಮುಖ ಸ್ತಂಭಗಳು. ನೀವು ರಾಜ್ಯ ಮತ್ತು ದೇಶದ ಸೇವೆ ಮಾಡುತ್ತಿದ್ದೀರಿ ಎಂಬ ಹೆಮ್ಮೆ ಇರಬೇಕು ಎಂದರು.

ಇದೇ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹಿಂದೆ ನೀಡಿದ್ದ ಭಾಷಣವನ್ನು ಸ್ಮರಿಸಿದ ಮುಖ್ಯಮಂತ್ರಿ, ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಮಹತ್ವ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದರು.

ಹಿಂದೆ ವಿಶ್ವದ ವಿವಿಧ ದೇಶಗಳ ನಾಯಕರು ದೆಹಲಿಗೆ ಬಂದು, ಅಲ್ಲಿಂದ ದೇಶದ ಇತರ ಭಾಗಗಳಿಗೆ ಭೇಟಿ ನೀಡುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೆಹಲಿಗೆ ತೆರಳುವ ಕಾಲ ಆರಂಭವಾಗಿದೆ ಎಂದು ವಾಜಪೇಯಿ ಅವರು ಇದೇ ಸ್ಥಳದಲ್ಲಿ ಹೇಳಿದ್ದ ಮಾತು ನೆನಪಾಗುತ್ತದೆ. ದೇಶದಲ್ಲಿರುವ 140 ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆಗಳ ಪೈಕಿ 38 ಶಾಲೆಗಳು ಕರ್ನಾಟಕದಲ್ಲಿವೆ ಎಂದು ಹೇಳಿದರು.

ಇತ್ತೀಚೆಗೆ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮಕ್ಕಳು ನೀಡಿದ ಸಾಂಸ್ಕೃತಿಕ ಪ್ರದರ್ಶನವನ್ನು ಕಂಡು ತಮಗೆ ಅಪಾರ ಸಂತೋಷವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಸರ್ಕಾರಿ ಶಾಲೆಗಳ ಮಕ್ಕಳು ಯಾರಿಗಿಂತಲೂ ಕಡಿಮೆ ಇಲ್ಲ ಎಂಬುದನ್ನು ತಮ್ಮ ಪ್ರತಿಭೆ, ಶಿಸ್ತು ಮತ್ತು ಪ್ರದರ್ಶನದ ಮೂಲಕ ಸಾಬೀತುಪಡಿಸಿದ್ದಾರೆ. ಮಕ್ಕಳ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ಕಂಡು ನನಗೆ ಬಹಳ ಸಂತೋಷವಾಯಿತು. ಈ ಮಕ್ಕಳನ್ನು ಕೇವಲ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ದಸರಾ ಸೇರಿದಂತೆ ಇತರ ಪ್ರಮುಖ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುವಂತೆ ಮಾಡಬೇಕು ಎಂದು ಸೂಚಿಸಿದ್ದೇನೆ. ಇಂದಿನ ಮಕ್ಕಳ ಬುದ್ಧಿಮತ್ತೆ, ಪ್ರತಿಭೆ ಮತ್ತು ಕಲಿಕಾ ಸಾಮರ್ಥ್ಯ ಅದ್ಭುತವಾಗಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಗ್ರಾಮೀಣ ಭಾಗದ ಮಕ್ಕಳಲ್ಲಿರುವ ಪ್ರತಿಭೆಗೆ ಸೂಕ್ತ ವೇದಿಕೆ, ಗುಣಮಟ್ಟದ ಶಿಕ್ಷಣ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಿದರೆ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬಲ್ಲರು. ಈ ನಿಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಸರ್ಕಾರದೊಂದಿಗೆ ಕೈಜೋಡಿಸಿ ಗ್ರಾಮೀಣ ಶಿಕ್ಷಣದ ಸುಧಾರಣೆಗೆ ಪಾಲುದಾರರಾಗಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.

ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಸರ್ಕಾರದ ಒಂದೇ ಇಲಾಖೆಯ ಜವಾಬ್ದಾರಿಯಲ್ಲ. ಸರ್ಕಾರ, ಖಾಸಗಿ ಶಿಕ್ಷಣ ಸಂಸ್ಥೆಗಳು, ಕಂಪನಿಗಳು, ಶಿಕ್ಷಕರು, ಪೋಷಕರು ಹಾಗೂ ಸಮಾಜದ ವಿವಿಧ ವರ್ಗಗಳು ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಗುಣಮಟ್ಟದ ಶಿಕ್ಷಣ ಎಲ್ಲ ಮಕ್ಕಳಿಗೂ ತಲುಪಲು ಸಾಧ್ಯ. ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಅಭಿಯಾನವನ್ನು ಈ ಸಾಮಾಜಿಕ ಸಹಭಾಗಿತ್ವದ ಮಹತ್ವದ ಹೆಜ್ಜೆಯನ್ನಾಗಿ ರೂಪಿಸಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಧಾನಸಭೆಯ ಉಪಸಭಾಧ್ಯಕ್ಷ ಮಂಕಾಳ್ ವೈದ್ಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಜಿ.ಸಿ. ಚಂದ್ರಶೇಖರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಶಾಲಾ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಕೆ. ವಿದ್ಯಾಕುಮಾರಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

2032ರ ವೇಳೆಗೆ ಕರ್ನಾಟಕವನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಗುರಿ; ಬದುಕಿನಲ್ಲಿ ರಾಜಯೋಗದ ಜೊತೆಗೆ ಕೌಶಲ್ಯವೂ ಇರಬೇಕು: ಸಿಎಂ ಡಿ.ಕೆ. ಶಿವಕುಮಾರ್

ಬರ ಮುಕ್ತ ಹಿರಿಯೂರು; ದಿವಂಗತ ಸುಧಾಕರ್ ಅವರ ಕನಸನ್ನು ನನಸು ಮಾಡೋಣ: ಸಿಎಂ ಡಿ.ಕೆ. ಶಿವಕುಮಾರ್

ಹಿರಿಯೂರು ಕ್ಷೇತ್ರಕ್ಕೆ ಅಭಿವೃದ್ಧಿಯ ಲಕ್ಷ್ಮಿಯನ್ನು ಕರೆತಂದಿದ್ದೇವೆ: ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮೂಲಕ ₹2,200 ಕೋಟಿ ಮೊತ್ತದ ಯೋಜನೆಗಳಿಗೆ ಮಂಜೂರಾತಿ: ಸಿಎಂ ಡಿ.ಕೆ. ಶಿವಕುಮಾರ್

ಅಕ್ಷರಗಳ ಮೂಲಕ ಅರಳಿದ ಪ್ರತಿಭೆಗೆ ರಾಜ್ಯೋತ್ಸವದ ಗೌರವ! ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯದ ಕೃಷಿ; 14 ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ ಸಂತೋಷ್ ಬಿದರಗಡ್ಡೆ ಅವರಿಗೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ 71ನೇ ಕನ್ನಡ ರಾಜ್ಯೋತ್ಸವ ಆಚರಣೆ; ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚಿ ಸಂಭ್ರಮ

ಗುರುತತ್ತ್ವದ ಎತ್ತರ ಅರಿಯದೆ ಗುರುಸೇವೆಯನ್ನು ಅಳೆಯಲು ಸಾಧ್ಯವೇ? ನ್ಯಾಯದಾಸೋಹದಿಂದ ಜಲಸಂರಕ್ಷಣೆಯವರೆಗೆ… ಟೀಕೆಗಳಾಚೆ ನಿಂತಿರುವ ಶ್ರೀ ತರಳಬಾಳು ಜಗದ್ಗುರುಗಳ ಬಹುಮುಖ ಸಾಧನೆಗಳು!

Leave a Comment