ಸಾಣೇಹಳ್ಳಿ: ರಾಜ್ಯದಲ್ಲಿರುವ ಮಠಗಳ ಕಾರ್ಯಚಟುವಟಿಕೆಗಳು, ಸಾಮಾಜಿಕ ಕೊಡುಗೆ ಹಾಗೂ ಜನಪರ ಸೇವೆಗಳ ಆಧಾರದ ಮೇಲೆ ಅವುಗಳ ಮೌಲ್ಯಮಾಪನ ನಡೆಯಬೇಕಿದೆ. ಅನೇಕ ಮಠಗಳಿಗೆ ನಿರ್ದಿಷ್ಟ ಮಾನದಂಡಗಳಿಲ್ಲ. ಆದರೆ ಶಿಕ್ಷಣ, ರಂಗಭೂಮಿ, ಕೃಷಿ, ಕಾಯಕ, ದಾಸೋಹ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಕ್ರಿಯಾಶೀಲವಾಗಿರುವ ಸಾಣೇಹಳ್ಳಿ ಮಠ ಇತರರಿಗೆ ಮಾದರಿಯಾಗಿದೆ ಎಂದು ಚಿತ್ರದುರ್ಗ ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಪ್ರಶಂಸಿಸಿದರು.
ಸಾಣೇಹಳ್ಳಿಯಲ್ಲಿ ನಾಟಕೋತ್ಸವದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಹೈನುಗಾರಿಕೆ ಕುರಿತ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಕಾಯಕ ಮತ್ತು ದಾಸೋಹದ ಮೌಲ್ಯಗಳನ್ನು ದೂರ ಮಾಡುವಂತಹ ಪ್ರಕ್ರಿಯೆಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಬದುಕಿನ ಮೌಲ್ಯಗಳನ್ನು ನಾವೇ ಸರಿಯಾಗಿ ಅರ್ಥಮಾಡಿಕೊಳ್ಳದಿರುವುದು. ಕಾಯಕ ಸಂಸ್ಕೃತಿ ಮತ್ತು ದಾಸೋಹದ ಮಹತ್ವವನ್ನು ಅರಿತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಸಾಣೇಹಳ್ಳಿಯಂತಹ ಪುಟ್ಟ ಗ್ರಾಮದಲ್ಲಿ ನೆಲೆಸಿ ಶಿಕ್ಷಣ, ರಂಗಭೂಮಿ, ಕೃಷಿ ಹಾಗೂ ಮದ್ಯಮುಕ್ತ ಸಮಾಜ ನಿರ್ಮಾಣದಂತಹ ಹಲವು ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಸಮಾಜದ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವ ಅವರ ಪ್ರಯತ್ನ ಶ್ಲಾಘನೀಯ ಎಂದರು.
ಗೋವುಗಳಿಗೆ ಗುಣಮಟ್ಟದ ಆಹಾರ ದೊರೆಯಬೇಕು, ಅವು ಅನಾರೋಗ್ಯಕ್ಕೆ ತುತ್ತಾಗದಂತೆ ಸೂಕ್ತ ಆರೈಕೆ ಮಾಡಬೇಕು ಹಾಗೂ ಪಶುಸಂಪತ್ತಿನ ಸಂತತಿ ವೃದ್ಧಿಯಾಗಬೇಕು ಎಂಬ ಕಾಳಜಿಯಿಂದ ನಾಟಕೋತ್ಸವದ ಅಂಗವಾಗಿ ಹೈನುಗಾರಿಕೆ ಕುರಿತು ವಿಚಾರ ಸಂಕಿರಣ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ಇಂತಹ ಕಾರ್ಯಕ್ರಮಗಳು ರೈತರಿಗೆ ವೈಜ್ಞಾನಿಕ ಮಾಹಿತಿ ನೀಡುವುದರ ಜತೆಗೆ ಹೈನುಗಾರಿಕೆಯನ್ನು ಮತ್ತಷ್ಟು ಲಾಭದಾಯಕವಾಗಿಸಲು ನೆರವಾಗಲಿವೆ ಎಂದು ಹೇಳಿದರು.

ಮೇವು ಉತ್ಪಾದನೆಗೆ ಜಮೀನಿನ ಶೇ.10ರಷ್ಟು ಮೀಸಲಿಡಿ: ಡಾ. ಟಿ.ವಿ. ಗಿರೀಶ್
ಹೈನುಗಾರಿಕೆ ಮತ್ತು ಸ್ವಯಂ ಉದ್ಯೋಗದ ಕುರಿತು ಹಾರನಹಳ್ಳಿಯ ಪಶುವೈದ್ಯಾಧಿಕಾರಿ ಡಾ. ಟಿ.ವಿ. ಗಿರೀಶ್ ಮಾತನಾಡಿ, ರಾಜ್ಯದಲ್ಲಿ ಪ್ರತಿದಿನ ಕೆಎಂಎಫ್ಗೆ ಸುಮಾರು ಒಂದು ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹೈನುಗಾರಿಕೆ ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳಿಗೆ ಜೀವನಾಧಾರವಾಗಿದ್ದು, ರೈತರಿಗೆ ನಿರಂತರ ಆದಾಯ ತಂದುಕೊಡುವ ಪ್ರಮುಖ ಉಪಕಸುಬಾಗಿದೆ ಎಂದರು.
ಆದರೆ ಇತ್ತೀಚಿನ ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು, ಇಳುವರಿ ಕುಸಿಯುತ್ತಿದೆ. ಮತ್ತೊಂದೆಡೆ ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವೂ ಕಡಿಮೆಯಾಗುತ್ತಿರುವುದು ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೈನುಗಾರಿಕೆಯನ್ನು ಲಾಭದಾಯಕವಾಗಿ ನಡೆಸಲು ಪಶುಗಳಿಗೆ ಸಮರ್ಪಕ ಪ್ರಮಾಣದಲ್ಲಿ ಪೌಷ್ಟಿಕ ಮೇವು ಒದಗಿಸುವುದು ಅತ್ಯಂತ ಅಗತ್ಯ. ರೈತರು ತಮ್ಮ ಜಮೀನಿನ ಕನಿಷ್ಠ ಶೇ.10ರಷ್ಟು ಭಾಗವನ್ನು ಮೇವು ಬೆಳೆಯಲು ಮೀಸಲಿಡಬೇಕು. ಜಮೀನಿನ ಬೇಲಿಯ ಸುತ್ತ ನುಗ್ಗೆ ಸೇರಿದಂತೆ ಉಪಯುಕ್ತ ಗಿಡಗಳನ್ನು ಬೆಳೆಸುವುದರಿಂದಲೂ ಪಶುಗಳಿಗೆ ಪೌಷ್ಟಿಕ ಆಹಾರ ಒದಗಿಸಬಹುದು. ಪ್ರತಿಯೊಬ್ಬ ಹೈನುಗಾರರೂ ಮಾರುಕಟ್ಟೆಯ ಮೇವನ್ನು ಸಂಪೂರ್ಣವಾಗಿ ಅವಲಂಬಿಸದೆ, ತಮ್ಮ ಜಮೀನಿನಲ್ಲಿಯೇ ಪಶುಗಳಿಗೆ ಅಗತ್ಯವಾದ ಮೇವನ್ನು ಉತ್ಪಾದಿಸಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೈನುಗಾರಿಕೆಯಲ್ಲಿ ಸ್ವಯಂ ಉದ್ಯೋಗದ ಅವಕಾಶಗಳು ಸಾಕಷ್ಟಿದ್ದು, ವೈಜ್ಞಾನಿಕ ಪದ್ಧತಿಗಳನ್ನು ಅನುಸರಿಸಿದರೆ ರೈತರು ಉತ್ತಮ ಆದಾಯ ಗಳಿಸಬಹುದು. ಪಶುಗಳ ಆರೋಗ್ಯ, ಆಹಾರ, ಸಂತಾನೋತ್ಪತ್ತಿ ಹಾಗೂ ನಿರ್ವಹಣೆಗೆ ಆದ್ಯತೆ ನೀಡುವ ಮೂಲಕ ಹೈನುಗಾರಿಕೆಯನ್ನು ಸುಸ್ಥಿರ ಉದ್ಯಮವನ್ನಾಗಿ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.

ಪಶುಗಳ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ಡಾ. ಬಿ.ಎಂ. ಮಹಾದೇವ ಶರ್ಮಾ
ಕೆಚ್ಚಲುಬಾವು ರೋಗ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಕುರಿತು ಪುರದಾಳು ಮುಖ್ಯ ಪಶುವೈದ್ಯಾಧಿಕಾರಿ ಡಾ. ಬಿ.ಎಂ. ಮಹದೇವ ಶರ್ಮಾ ಮಾಹಿತಿ ನೀಡಿದರು. ಹೈನುಗಾರಿಕೆಯಲ್ಲಿ ಪಶುಗಳ ಆರೋಗ್ಯ ಕಾಪಾಡುವುದು ಅತ್ಯಂತ ಮುಖ್ಯವಾಗಿದ್ದು, ರೋಗದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಪಶುವೈದ್ಯರಿಂದ ತಪಾಸಣೆ ಮಾಡಿಸಬೇಕು. ಕೊಟ್ಟಿಗೆಯ ಸ್ವಚ್ಛತೆ, ಹಾಲು ಕರೆಯುವ ಸಂದರ್ಭದಲ್ಲಿ ಅನುಸರಿಸಬೇಕಾದ ನೈರ್ಮಲ್ಯ ಕ್ರಮಗಳು ಹಾಗೂ ನಿಯಮಿತ ಆರೋಗ್ಯ ತಪಾಸಣೆಯಿಂದ ಕೆಚ್ಚಲುಬಾವು ಸೇರಿದಂತೆ ವಿವಿಧ ರೋಗಗಳನ್ನು ನಿಯಂತ್ರಿಸಬಹುದು ಎಂಬುದರ ಕುರಿತು ವಿವರಿಸಿದರು.
ರಸಮೇವು ಉತ್ಪಾದನೆ ಮತ್ತು ಅದರ ಬಳಕೆಯ ಮಹತ್ವದ ಕುರಿತು ಕಾಟಿನಗೆರೆಯ ಎಂ.ಎಂ. ಸೈಲೋ ಅಗ್ರೊ ಇಂಡಸ್ಟ್ರೀಸ್ನ ಕೆ.ಎಸ್. ಮಧುಕೇಶ್ವರ ಮಾತನಾಡಿದರು. ವರ್ಷವಿಡೀ ಪಶುಗಳಿಗೆ ಗುಣಮಟ್ಟದ ಮೇವು ದೊರೆಯುವಂತೆ ಸಂಗ್ರಹಿಸುವ ವಿಧಾನ, ರಸಮೇವು ತಯಾರಿಕೆಯ ಪ್ರಕ್ರಿಯೆ ಹಾಗೂ ಅದರ ಪೌಷ್ಟಿಕಾಂಶದ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಮೇವಿನ ಕೊರತೆಯ ಅವಧಿಯಲ್ಲಿಯೂ ಹೈನುಗಾರಿಕೆ ನಿರಂತರವಾಗಿ ನಡೆಯಲು ರಸಮೇವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ವಿಚಾರ ಸಂಕಿರಣಕ್ಕೂ ಮುನ್ನ ನಾಟಕ ಪ್ರದರ್ಶನ
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ರಚಿಸಿ, ಆರ್. ಚಂದ್ರಮ್ಮ ನಿರ್ದೇಶಿಸಿದ ‘ಮುಖವಾಡ’ ನಾಟಕವನ್ನು ಗುರುಪಾದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಅಭಿನಯದ ಮೂಲಕ ಸಮಾಜದ ವಾಸ್ತವಿಕತೆ ಹಾಗೂ ಮಾನವೀಯ ಮೌಲ್ಯಗಳ ಕುರಿತು ಚಿಂತನೆಗೆ ಹಚ್ಚುವ ಪ್ರಯತ್ನ ನಡೆಯಿತು.
ಬರಡು ರಾಸುಗಳ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಕ್ಕೆ ಚಾಲನೆ
ಇದಕ್ಕೂ ಮೊದಲು ಸಾಣೇಹಳ್ಳಿಯ ಎಸ್.ಡಿ. ಸಿದ್ಧರಾಮಯ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಬರಡು ರಾಸುಗಳ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಕ್ಕೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಚಾಲನೆ ನೀಡಿದರು.
ಹೈನುಗಾರಿಕೆಯಲ್ಲಿ ಎದುರಾಗುವ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಹಾಗೂ ಪಶುಸಂಪತ್ತಿನ ಆರೋಗ್ಯ ಸುಧಾರಿಸಲು ಇಂತಹ ಶಿಬಿರಗಳು ಸಹಕಾರಿಯಾಗಲಿವೆ. ಪಶುಗಳ ಸಂತಾನೋತ್ಪತ್ತಿ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ರೈತರ ಆರ್ಥಿಕ ನಷ್ಟವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂಬ ಆಶಯ ಈ ಶಿಬಿರದ ಆಯೋಜನೆಯ ಉದ್ದೇಶವಾಗಿದೆ.
ನಾಟಕೋತ್ಸವದ ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ಕೃಷಿ, ಪಶುಸಂಗೋಪನೆ ಮತ್ತು ಹೈನುಗಾರಿಕೆಯಂತಹ ರೈತರ ಬದುಕಿಗೆ ನೇರವಾಗಿ ಸಂಬಂಧಿಸಿದ ವಿಷಯಗಳ ಕುರಿತು ವಿಚಾರ ಸಂಕಿರಣ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಿರುವುದು ಸಾಣೇಹಳ್ಳಿ ಮಠದ ಸಮಾಜಮುಖಿ ಕಾಳಜಿಗೆ ಸಾಕ್ಷಿಯಾಯಿತು.










