ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

2032ರ ವೇಳೆಗೆ ಕರ್ನಾಟಕವನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಗುರಿ; ಬದುಕಿನಲ್ಲಿ ರಾಜಯೋಗದ ಜೊತೆಗೆ ಕೌಶಲ್ಯವೂ ಇರಬೇಕು: ಸಿಎಂ ಡಿ.ಕೆ. ಶಿವಕುಮಾರ್

On: November 4, 2026 7:21 PM
Follow Us:

ಬೆಂಗಳೂರು, ನ.04: ಬದುಕಿನಲ್ಲಿ ರಾಜಯೋಗವೊಂದಿದ್ದರೆ ಸಾಲದು, ಅದರೊಂದಿಗೆ ಅಗತ್ಯವಾದ ಕೌಶಲ್ಯವೂ ಇರಬೇಕು. ಕೇವಲ ಪದವಿ ಪಡೆದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಶಿಕ್ಷಣದ ಜತೆಗೆ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಮುಖ್ಯವಾಗಿದೆ. ಕೌಶಲ್ಯವು ಯುವಜನರಿಗೆ ಉದ್ಯೋಗ, ಆದಾಯ ಹಾಗೂ ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ನಗರದಲ್ಲಿ ಬುಧವಾರ ನಡೆದ ಬೆಂಗಳೂರು ಕೌಶಲ್ಯ ಶೃಂಗಸಭೆ-2026ರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದ ಯುವಜನರಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಉದ್ಯಮಗಳ ಅಗತ್ಯಕ್ಕೆ ತಕ್ಕಂತಹ ಕೌಶಲ್ಯವನ್ನು ಜೋಡಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ ರಾಜ್ಯದ ಯುವಜನರು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಹೊಂದುವಂತೆ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.

ಕೌಶಲ್ಯವೇ ಒಂದು ಧರ್ಮವಿದ್ದಂತೆ. ಪದವಿ ಜ್ಞಾನದ ಬಾಗಿಲು ತೆರೆದರೆ, ಕೌಶಲ್ಯ ಯಶಸ್ಸಿನ ಹಾದಿಯನ್ನು ತೋರಿಸುತ್ತದೆ. ಓದಿನಿಂದ ಪ್ರತಿಭೆ ಹೊರಹೊಮ್ಮಬಹುದು. ಆದರೆ ನಿರಂತರ ಪರಿಶ್ರಮ, ಅಭ್ಯಾಸ ಮತ್ತು ಅನುಭವದಿಂದ ಕೌಶಲ್ಯ ಬೆಳೆಯುತ್ತದೆ. ಇಂದಿನ ಯುವಜನರ ಕೈಗಳಿಗೆ ಸೂಕ್ತ ಕೌಶಲ್ಯ ನೀಡಿದರೆ ನಾಳಿನ ಕರ್ನಾಟಕದ ಭವಿಷ್ಯ ಅವರ ಕೈಯಲ್ಲಿರಲಿದೆ. ಭವಿಷ್ಯದಲ್ಲಿ ಎದುರಾಗುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಇಂದಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಶಿಕ್ಷಣವು ಜ್ಞಾನವನ್ನು ನೀಡುತ್ತದೆ. ಆದರೆ ಆ ಜ್ಞಾನವನ್ನು ಉದ್ಯೋಗ, ಆದಾಯ, ಉದ್ಯಮಶೀಲತೆ ಮತ್ತು ಗೌರವಯುತ ಬದುಕಿಗೆ ಪರಿವರ್ತಿಸುವ ಶಕ್ತಿ ಕೌಶಲ್ಯಕ್ಕಿದೆ. ನಾಳಿನ ಅವಕಾಶಗಳಿಗಾಗಿ ಯುವಜನರನ್ನು ಇಂದೇ ಸಿದ್ಧಗೊಳಿಸುವ ಸಂಕಲ್ಪವನ್ನು ಸರ್ಕಾರ ಮಾಡಿದೆ. ಯುವಜನರ ಸಾಮರ್ಥ್ಯವನ್ನು ಗುರುತಿಸಿ, ಅವರಿಗೆ ಸೂಕ್ತ ತರಬೇತಿ ನೀಡುವ ಮೂಲಕ ಉದ್ಯೋಗ ಮಾರುಕಟ್ಟೆಯ ಬೇಡಿಕೆಗಳಿಗೆ ಅನುಗುಣವಾಗಿ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸಲಾಗುವುದು ಎಂದರು.

ಕರ್ನಾಟಕವನ್ನು 2032ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಸರ್ಕಾರ ಹೊಂದಿದೆ. ಈ ಗುರಿ ಸಾಧನೆಗೆ ಕೇವಲ ಬಂಡವಾಳ ಹೂಡಿಕೆ, ಕೈಗಾರಿಕೆಗಳ ಸ್ಥಾಪನೆ ಅಥವಾ ಮೂಲಸೌಕರ್ಯ ಅಭಿವೃದ್ಧಿ ಮಾತ್ರ ಸಾಕಾಗುವುದಿಲ್ಲ. ಆರ್ಥಿಕ ಬೆಳವಣಿಗೆಗೆ ಪೂರಕವಾದ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಅತ್ಯಗತ್ಯ. ಉದ್ಯಮಗಳಿಗೆ ಬೇಕಾದ ಅರ್ಹತೆ ಮತ್ತು ಸಾಮರ್ಥ್ಯ ಹೊಂದಿರುವ ಯುವಜನರನ್ನು ರೂಪಿಸಿದಾಗ ಮಾತ್ರ ರಾಜ್ಯದ ಆರ್ಥಿಕ ಪ್ರಗತಿಗೆ ವೇಗ ದೊರೆಯಲಿದೆ ಎಂದು ಹೇಳಿದರು.

ಇಂದು ಇಡೀ ಜಗತ್ತು ಬೆಂಗಳೂರಿನತ್ತ ಗಮನ ಹರಿಸುತ್ತಿದೆ. ಕರ್ನಾಟಕವು ಪ್ರತಿಭಾವಂತರ ನಾಡು ಎಂಬ ಹೆಗ್ಗಳಿಕೆ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ರಾಜ್ಯದ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿದ್ದಾರೆ. ಸಿಲಿಕಾನ್ ವ್ಯಾಲಿಯಲ್ಲಿ 13 ಲಕ್ಷಕ್ಕೂ ಹೆಚ್ಚು ಐಟಿ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನಲ್ಲಿ ಸುಮಾರು 26 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಇದು ಕರ್ನಾಟಕದ ಆರ್ಥಿಕ ಮತ್ತು ತಾಂತ್ರಿಕ ಶಕ್ತಿಯನ್ನು ತೋರಿಸುತ್ತದೆ. ಜಾಗತಿಕ ಉದ್ಯಮಗಳ ಪ್ರಮುಖ ನಾಯಕರು ಮೊದಲು ಬೆಂಗಳೂರಿಗೆ ಭೇಟಿ ನೀಡುತ್ತಾರೆ. ನಂತರ ದೇಶದ ಇತರ ಭಾಗಗಳಿಗೆ ತೆರಳುತ್ತಾರೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರು ಹೊಂದಿರುವ ಸ್ಥಾನಮಾನ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ವೈದ್ಯಕೀಯ ಕ್ಷೇತ್ರದಲ್ಲಿಯೂ ಕರ್ನಾಟಕ ಮಹತ್ವದ ಸಾಧನೆ ಮಾಡುತ್ತಿದೆ. ಪ್ರತಿ ವರ್ಷ ರಾಜ್ಯದಲ್ಲಿ 13,940 ವೈದ್ಯರನ್ನು ಸಿದ್ಧಪಡಿಸುವ ಸಾಮರ್ಥ್ಯವಿದೆ. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಕರ್ನಾಟಕ ಸಾಕಷ್ಟು ಮುನ್ನಡೆ ಸಾಧಿಸಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.65ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಈ ಯುವಜನಸಂಖ್ಯೆ ರಾಜ್ಯಕ್ಕೆ ದೊಡ್ಡ ಆಸ್ತಿಯಾಗಿದೆ. ಅದೇ ಸಮಯದಲ್ಲಿ ಅವರಿಗೆ ಗುಣಮಟ್ಟದ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ಒದಗಿಸುವುದು ಸರ್ಕಾರದ ಜವಾಬ್ದಾರಿಯೂ ಆಗಿದೆ ಎಂದು ಹೇಳಿದರು.

ಸರ್ಕಾರದ ಉದ್ದೇಶ ಕೇವಲ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಯುವಜನರನ್ನು ಸೃಷ್ಟಿಸುವುದಲ್ಲ. ಬದಲಾಗಿ ಸ್ವಂತ ಉದ್ಯಮಗಳನ್ನು ಆರಂಭಿಸುವವರು, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವವರು, ಭವಿಷ್ಯದ ತಂತ್ರಜ್ಞಾನವನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ತಮ್ಮನ್ನು ರೂಪಿಸಿಕೊಳ್ಳುವವರು ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಯುವಜನರನ್ನು ಸಿದ್ಧಪಡಿಸುವುದಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಕರ್ನಾಟಕದಲ್ಲಿ ಈಗಾಗಲೇ ಸುಮಾರು 550 ಜಾಗತಿಕ ಸಾಮರ್ಥ್ಯ ಕೇಂದ್ರಗಳು (Global Capability Centres-GCC) ಕಾರ್ಯನಿರ್ವಹಿಸುತ್ತಿವೆ. 2029ರ ವೇಳೆಗೆ ಇನ್ನೂ ಸುಮಾರು 500 ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಸ್ಥಾಪಿಸುವುದರ ಜತೆಗೆ 3.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಈ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಮೊದಲೇ ಅದಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಯುವಜನರನ್ನು ಇಂದಿನ ಉದ್ಯೋಗಗಳಿಗೆ ಮಾತ್ರವಲ್ಲದೆ, ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಗೆ ಸಜ್ಜುಗೊಳಿಸಲಾಗುತ್ತಿದೆ ಎಂದರು.

ರಾಜ್ಯ ಸರ್ಕಾರ ಕರ್ನಾಟಕ ಕೌಶಲ್ಯಾಭಿವೃದ್ಧಿ ನೀತಿ 2025-32ರ ಮೂಲಕ ಕೌಶಲ್ಯಾಭಿವೃದ್ಧಿಗೆ ಸಮಗ್ರ ಅಡಿಪಾಯ ಹಾಕಿದೆ. ರಾಜ್ಯದಲ್ಲಿ ವಿವಿಧ ಇಲಾಖೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ತರಬೇತಿ ಕೇಂದ್ರಗಳ ಮೂಲಕ ನಡೆಯುತ್ತಿರುವ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಒಂದೇ ವ್ಯವಸ್ಥೆಯಡಿ ತಂದು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಈ ನೀತಿಯ ಉದ್ದೇಶವಾಗಿದೆ.

ಮುಂದಿನ ಏಳು ವರ್ಷಗಳಲ್ಲಿ ಸುಮಾರು 30 ಲಕ್ಷ ಫಲಾನುಭವಿಗಳನ್ನು ತಲುಪುವ ಗುರಿ ಹೊಂದಲಾಗಿದೆ. ಈ ಉದ್ದೇಶಕ್ಕಾಗಿ ಅಂದಾಜು ₹5,000 ಕೋಟಿ ಹೂಡಿಕೆ ಮಾಡಲು ಸರ್ಕಾರ ಉದ್ದೇಶಿಸಿದೆ. ಬಲಿಷ್ಠ ತರಬೇತಿ ಸಂಸ್ಥೆಗಳ ನಿರ್ಮಾಣ, ವೃತ್ತಿಪರ ಶಿಕ್ಷಣಕ್ಕೆ ಉತ್ತೇಜನ, ಸಾಂಪ್ರದಾಯಿಕ ಕೌಶಲ್ಯಗಳ ಸಂರಕ್ಷಣೆ, ನಿರಂತರ ಕಲಿಕೆ, ಭವಿಷ್ಯದ ತಂತ್ರಜ್ಞಾನಾಧಾರಿತ ಕೌಶಲ್ಯಗಳು, ಗುಣಮಟ್ಟದ ತರಬೇತಿ ಮತ್ತು ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ಕಲ್ಪಿಸುವುದು ಈ ನೀತಿಯ ಪ್ರಮುಖ ಆದ್ಯತೆಗಳಾಗಿವೆ ಎಂದು ವಿವರಿಸಿದರು.

ವೃತ್ತಿಪರ ಶಿಕ್ಷಣವನ್ನು ಯುವಜನರು ತಮ್ಮ ಮೊದಲ ಆಯ್ಕೆಯಾಗಿ ಪರಿಗಣಿಸಬೇಕು. ಬೇರೆ ಯಾವುದೇ ಅವಕಾಶ ಇಲ್ಲದಿದ್ದಾಗ ಮಾತ್ರ ಆಯ್ಕೆ ಮಾಡಿಕೊಳ್ಳುವ ಪರ್ಯಾಯ ಶಿಕ್ಷಣವಾಗಿ ವೃತ್ತಿಪರ ಶಿಕ್ಷಣ ಉಳಿಯಬಾರದು. ತಾಂತ್ರಿಕ ಶಿಕ್ಷಣದ ಜತೆಗೆ ಉದ್ಯಮಗಳಿಗೆ ಅಗತ್ಯವಿರುವ ಪ್ರಾಯೋಗಿಕ ಜ್ಞಾನ ಮತ್ತು ತರಬೇತಿ ದೊರೆಯುವ ವ್ಯವಸ್ಥೆ ರೂಪಿಸಬೇಕು ಎಂದು ಹೇಳಿದರು.

ಕರ್ನಾಟಕದ ಕೌಶಲ್ಯಾಭಿವೃದ್ಧಿ ಕ್ಷೇತ್ರಕ್ಕೆ ದೀರ್ಘಕಾಲೀನ ಮಾರ್ಗದರ್ಶನ ನೀಡುವ ಉದ್ದೇಶದಿಂದ ಸರ್ಕಾರ ಕೌಶಲ್ಯಾಭಿವೃದ್ಧಿ ವಿಷನ್ ಗ್ರೂಪ್ ರಚಿಸಿದೆ. ಮೈಂಡ್‌ಟ್ರೀ ಸಂಸ್ಥೆಯ ಸಹ-ಸ್ಥಾಪಕರಾದ ಸುಬ್ರತೋ ಬಾಗ್ಚಿ ಅವರು ಈ ಮಹತ್ವದ ಸಮಿತಿಯ ಅಧ್ಯಕ್ಷತೆ ವಹಿಸಲು ಒಪ್ಪಿಕೊಂಡಿರುವುದು ಸಂತಸದ ಸಂಗತಿ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಉದ್ಯಮ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಹಲವು ಗಣ್ಯರು ಈ ಸಮಿತಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸುಬ್ರತೋ ಬಾಗ್ಚಿ ಅವರು ಒಡಿಶಾ ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ನಾಯಕತ್ವ ನೀಡಿ, ಪರಿಣಾಮಕಾರಿ ಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಅಲ್ಲಿನ ಯುವಜನರಿಗೆ ನೆರವಾಗಿದ್ದಾರೆ. ಅವರ ಅನುಭವ ಮತ್ತು ಮಾರ್ಗದರ್ಶನ ಕರ್ನಾಟಕದ ಕೌಶಲ್ಯಾಭಿವೃದ್ಧಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕವು ಇತರ ರಾಜ್ಯಗಳ ಮಾದರಿಯನ್ನು ಕೇವಲ ಅನುಕರಿಸುವ ಉದ್ದೇಶ ಹೊಂದಿಲ್ಲ. ಬದಲಾಗಿ ದೇಶದ ಇತರ ರಾಜ್ಯಗಳು ಮತ್ತು ಜಾಗತಿಕ ಮಟ್ಟದ ಸಂಸ್ಥೆಗಳು ಅಧ್ಯಯನ ಮಾಡಲು ಬಯಸುವಂತಹ ಸ್ವಂತ ಕೌಶಲ್ಯಾಭಿವೃದ್ಧಿ ಮಾದರಿಯನ್ನು ನಿರ್ಮಿಸುವ ಗುರಿ ಹೊಂದಿದೆ. ವಿಷನ್ ಗ್ರೂಪ್ ರಾಜ್ಯದ ಯುವಜನರು ಕರ್ನಾಟಕದಲ್ಲಿ ಮಾತ್ರವಲ್ಲದೆ, ದೇಶದ ವಿವಿಧ ಭಾಗಗಳಲ್ಲಿ ಮತ್ತು ಜಗತ್ತಿನಾದ್ಯಂತ ಲಭ್ಯವಾಗುವ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳುವಂತೆ ದೂರದೃಷ್ಟಿಯ ಮಾರ್ಗದರ್ಶನ ನೀಡಲಿದೆ ಎಂದರು.

ಸರ್ಕಾರದ ಪ್ರಮುಖ ಯೋಜನೆಯಾದ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ 2.0 ಅಡಿಯಲ್ಲಿ ತರಬೇತಿ, ಹಿಂದಿನ ಕಲಿಕೆಯ ಮಾನ್ಯತೆ (Recognition of Prior Learning-RPL), ವಿಶೇಷ ಕೌಶಲ್ಯ ತರಬೇತಿ ಕಾರ್ಯಕ್ರಮಗಳು, ಉದ್ಯೋಗ ನಿಯೋಜನೆಗೆ ನೆರವು ಹಾಗೂ ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ಒಂದೇ ಚೌಕಟ್ಟಿನಡಿ ತರಲಾಗಿದೆ.

ಈ ಯೋಜನೆಯಡಿ ಮುಂದಿನ ಏಳು ವರ್ಷಗಳಲ್ಲಿ 7 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಪ್ರತಿ ವರ್ಷ ಸುಮಾರು 75 ಸಾವಿರ ಅಭ್ಯರ್ಥಿಗಳಿಗೆ ಅಲ್ಪಾವಧಿಯ ಕೌಶಲ್ಯ ತರಬೇತಿ ಒದಗಿಸುವ ಉದ್ದೇಶವಿದೆ. ಈಗಾಗಲೇ ಕೆಲಸ ಮಾಡುತ್ತಿರುವವರು, ಸಾಂಪ್ರದಾಯಿಕ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವವರು ಹಾಗೂ ಹೊಸ ಉದ್ಯೋಗ ಕ್ಷೇತ್ರಗಳಿಗೆ ಪ್ರವೇಶಿಸಲು ಬಯಸುವವರಿಗೆ ಅಗತ್ಯ ತರಬೇತಿ ನೀಡಲಾಗುವುದು. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿಯೂ ಉದ್ಯಮಗಳೊಂದಿಗೆ ಸಮನ್ವಯ ಸಾಧಿಸಲಾಗುವುದು ಎಂದು ತಿಳಿಸಿದರು.

ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಉದ್ಯಮಿಗಳು, ಶಿಕ್ಷಣ ತಜ್ಞರು, ತರಬೇತಿ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಪರಿಣತರು ಸರ್ಕಾರದೊಂದಿಗೆ ಕೈಜೋಡಿಸಬೇಕು. ತಮ್ಮ ಆಲೋಚನೆಗಳು, ಅನುಭವಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಬೇಕು. ಇದು ನಿಮ್ಮ ಕರ್ನಾಟಕ, ನಿಮ್ಮ ಸರ್ಕಾರ ಸದಾ ನಿಮ್ಮೊಂದಿಗೆ ಇರಲಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ರಾಜ್ಯದ ಯುವಶಕ್ತಿಯನ್ನು ಬೆಳೆಸೋಣ ಎಂದು ಕರೆ ನೀಡಿದರು.

ಉದ್ಯೋಗಾವಕಾಶಗಳು ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು. ರಾಜ್ಯದ ಇತರ ನಗರಗಳು, ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಕೈಗಾರಿಕೆಗಳು ಹಾಗೂ ಉದ್ಯಮಗಳು ಬೆಳೆಯಬೇಕು. ಬೆಂಗಳೂರಿನ ಹೊರಭಾಗದಲ್ಲಿ ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಪ್ರತಿ ಉದ್ಯೋಗದ ಆಧಾರದಲ್ಲಿ ತಿಂಗಳಿಗೆ ₹2,500 ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

ಪ್ರತಿಯೊಂದು ಹಳ್ಳಿಯಲ್ಲಿಯೂ ಪ್ರತಿಭಾವಂತ ಯುವಜನರಿದ್ದಾರೆ. ಆದರೆ ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಅವಕಾಶಗಳು ದೊರೆಯಬೇಕಿದೆ. ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ, ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ತರಬೇತಿ ನೀಡುವ ಮೂಲಕ ಸ್ಥಳೀಯವಾಗಿಯೇ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಈ ನಿಟ್ಟಿನಲ್ಲಿ ‘ನನ್ನ ವೃತ್ತಿ, ನನ್ನ ಆಯ್ಕೆ’ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿಗಳ ಪರಿಚಯ ಮಾಡಿಕೊಡಲಾಗುತ್ತಿದೆ. ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಭವಿಷ್ಯದ ಅವಕಾಶಗಳನ್ನು ಪರಿಗಣಿಸಿ ಸೂಕ್ತ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಈ ಯೋಜನೆ ನೆರವಾಗಲಿದೆ ಎಂದರು.

ರಾಜ್ಯದಲ್ಲಿ ಈ ವರ್ಷ ಸುಮಾರು 30 ಸಾವಿರ ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿದಿವೆ. ವೈದ್ಯಕೀಯ ಶಿಕ್ಷಣದಲ್ಲಿಯೂ ಕೆಲವು ಸೀಟುಗಳು ಭರ್ತಿಯಾಗದೆ ಉಳಿದಿರುವುದು ಗಮನಿಸಬೇಕಾದ ಸಂಗತಿ. ಕರ್ನಾಟಕದಲ್ಲಿ 250ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿದ್ದು, ಐಟಿಐ ಮತ್ತು ಜಿಟಿಟಿಸಿ ಸೇರಿದಂತೆ ಹಲವು ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ. ಇಷ್ಟೊಂದು ಶಿಕ್ಷಣ ಸಂಸ್ಥೆಗಳು ಮತ್ತು ಅವಕಾಶಗಳಿದ್ದರೂ ಶಿಕ್ಷಣ ಪಡೆದ ಯುವಜನರಿಗೆ ಉದ್ಯೋಗ ದೊರೆಯದಿರುವುದು ಕೌಶಲ್ಯಾಭಿವೃದ್ಧಿಯ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.

ರಾಜ್ಯದಿಂದ ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಹೊರಬರುತ್ತಿದ್ದಾರೆ. ಎಂಜಿನಿಯರಿಂಗ್ ಪದವೀಧರರೂ ಉದ್ಯೋಗಾವಕಾಶಗಳಿಗಾಗಿ ತಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಪ್ರತಿಷ್ಠಿತ ಇನ್ಫೋಸಿಸ್‌ನಂತಹ ಸಂಸ್ಥೆಗಳಲ್ಲಿಯೂ ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ದೊರೆಯುತ್ತಿಲ್ಲ. ಇದಕ್ಕೆ ಕಾರಣ ಕೇವಲ ಪದವಿ ಹೊಂದಿರುವುದರಿಂದ ಸಾಲದು; ಉದ್ಯಮಗಳು ನಿರೀಕ್ಷಿಸುವ ಪ್ರಾಯೋಗಿಕ ಜ್ಞಾನ, ತಾಂತ್ರಿಕ ಪರಿಣತಿ ಮತ್ತು ಕೌಶಲ್ಯಗಳನ್ನು ಯುವಜನರು ಹೊಂದಿರಬೇಕು. ಈ ಅಂತರವನ್ನು ನಿವಾರಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸಲಿವೆ ಎಂದರು.

ಉದ್ಯಮಿಗಳು ಮತ್ತು ಕೈಗಾರಿಕೆಗಳು ಸಬಲಗೊಂಡಷ್ಟು ಕರ್ನಾಟಕದ ಆರ್ಥಿಕ ಶಕ್ತಿಯೂ ಹೆಚ್ಚಲಿದೆ. ಯುವಜನರು ತಮ್ಮ ಶಿಕ್ಷಣದ ಜತೆಗೆ ಉದ್ಯಮಗಳಿಗೆ ಅಗತ್ಯವಿರುವ ಕೌಶಲ್ಯಗಳನ್ನು ಪಡೆದುಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಲಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳ ನಡುವಿನ ಅಂತರವನ್ನು ಕಡಿಮೆ ಮಾಡಿ, ತರಬೇತಿ ಪಡೆದ ತಕ್ಷಣ ಉದ್ಯೋಗಕ್ಕೆ ಸೇರುವಂತಹ ವ್ಯವಸ್ಥೆ ರೂಪಿಸುವುದು ಅಗತ್ಯವಾಗಿದೆ.

ಕೌಶಲ್ಯ ಹೊಂದಿದ ಯುವಜನಾಂಗವೇ ಬಲಿಷ್ಠ ಕರ್ನಾಟಕದ ನಿರ್ಮಾಣಕ್ಕೆ ಅಡಿಪಾಯ. ಜಾಗತಿಕ ಮಟ್ಟದಲ್ಲಿ ಲಭ್ಯವಾಗುವ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ರಾಜ್ಯದ ಯುವಜನರು ಸಮರ್ಥವಾಗಿ ಬಳಸಿಕೊಳ್ಳುವಂತಾಗಬೇಕು. ಯುವಶಕ್ತಿಗೆ ಸರಿಯಾದ ದಿಕ್ಕು, ಗುಣಮಟ್ಟದ ಶಿಕ್ಷಣ ಮತ್ತು ಅಗತ್ಯ ಕೌಶಲ್ಯ ಒದಗಿಸುವ ಮೂಲಕ ಕರ್ನಾಟಕವನ್ನು ಜಾಗತಿಕ ಆರ್ಥಿಕ ಶಕ್ತಿಯನ್ನಾಗಿ ರೂಪಿಸುವುದು ಸರ್ಕಾರದ ಸಂಕಲ್ಪವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

K.M.Sathish Gowda

Join WhatsApp

Join Now

Facebook

Join Now

Read more

ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿ: ಸಿಎಂ ಡಿ.ಕೆ. ಶಿವಕುಮಾರ್

ಬರ ಮುಕ್ತ ಹಿರಿಯೂರು; ದಿವಂಗತ ಸುಧಾಕರ್ ಅವರ ಕನಸನ್ನು ನನಸು ಮಾಡೋಣ: ಸಿಎಂ ಡಿ.ಕೆ. ಶಿವಕುಮಾರ್

ಹಿರಿಯೂರು ಕ್ಷೇತ್ರಕ್ಕೆ ಅಭಿವೃದ್ಧಿಯ ಲಕ್ಷ್ಮಿಯನ್ನು ಕರೆತಂದಿದ್ದೇವೆ: ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮೂಲಕ ₹2,200 ಕೋಟಿ ಮೊತ್ತದ ಯೋಜನೆಗಳಿಗೆ ಮಂಜೂರಾತಿ: ಸಿಎಂ ಡಿ.ಕೆ. ಶಿವಕುಮಾರ್

ಅಕ್ಷರಗಳ ಮೂಲಕ ಅರಳಿದ ಪ್ರತಿಭೆಗೆ ರಾಜ್ಯೋತ್ಸವದ ಗೌರವ! ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯದ ಕೃಷಿ; 14 ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ ಸಂತೋಷ್ ಬಿದರಗಡ್ಡೆ ಅವರಿಗೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ 71ನೇ ಕನ್ನಡ ರಾಜ್ಯೋತ್ಸವ ಆಚರಣೆ; ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚಿ ಸಂಭ್ರಮ

ಗುರುತತ್ತ್ವದ ಎತ್ತರ ಅರಿಯದೆ ಗುರುಸೇವೆಯನ್ನು ಅಳೆಯಲು ಸಾಧ್ಯವೇ? ನ್ಯಾಯದಾಸೋಹದಿಂದ ಜಲಸಂರಕ್ಷಣೆಯವರೆಗೆ… ಟೀಕೆಗಳಾಚೆ ನಿಂತಿರುವ ಶ್ರೀ ತರಳಬಾಳು ಜಗದ್ಗುರುಗಳ ಬಹುಮುಖ ಸಾಧನೆಗಳು!

Leave a Comment