ಬೆಂಗಳೂರು, ನ.14: ಕ್ಯಾನ್ಸರ್ನಂತಹ ಮಾರಕ ಕಾಯಿಲೆಯ ವಿರುದ್ಧ ಹೋರಾಡುತ್ತಿರುವ ಪುಟ್ಟ ಮಕ್ಕಳ ಪಾಲಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭೇಟಿ ಕ್ಷಣಕಾಲದ ಸಂತಸ, ಹೊಸ ಭರವಸೆ ಹಾಗೂ ಆತ್ಮವಿಶ್ವಾಸಕ್ಕೆ ಕಾರಣವಾಯಿತು. ಆಸ್ಪತ್ರೆಯ ಹಾಸಿಗೆಗಳಲ್ಲೇ ದಿನ ಕಳೆಯುತ್ತಿರುವ ಮಕ್ಕಳ ಬಳಿ ತೆರಳಿದ ಮುಖ್ಯಮಂತ್ರಿ, ಅವರೊಂದಿಗೆ ಮಗುವಿನಂತೆ ಬೆರೆತು ಮಾತನಾಡಿ, ಆರೋಗ್ಯ ವಿಚಾರಿಸಿ, ಧೈರ್ಯದ ಮಾತುಗಳ ಮೂಲಕ ಮಕ್ಕಳ ಮೊಗದಲ್ಲಿ ನಗು ಅರಳಿಸಿದರು. ಮಕ್ಕಳ ದಿನಾಚರಣೆಯಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಭೇಟಿ ನೀಡಿದ ಅವರು, ಮಕ್ಕಳ ಚಿಕಿತ್ಸೆ ಮತ್ತು ಪೋಷಕರ ಸಂಕಷ್ಟಗಳಿಗೆ ಸ್ಪಂದಿಸುವುದರ ಜತೆಗೆ ಆಸ್ಪತ್ರೆಯ ಅಭಿವೃದ್ಧಿಗೆ ಹಲವು ಮಹತ್ವದ ಭರವಸೆಗಳನ್ನು ನೀಡಿದರು.
ಕಿದ್ವಾಯಿ ಆಸ್ಪತ್ರೆಯ ಕಪೂರ್ ಕಟ್ಟಡದ ಮೊದಲ ವಾರ್ಡ್ಗೆ ಮುಖ್ಯಮಂತ್ರಿ ಕಾಲಿಡುತ್ತಿದ್ದಂತೆ ಕ್ಯಾನ್ಸರ್ ಚಿಕಿತ್ಸೆಗೆ ದಾಖಲಾಗಿದ್ದ ಬಾಲಕ ಧನುಷ್ ಗುಲಾಬಿ ಹೂ ನೀಡಿ ಸ್ವಾಗತಿಸಿದ. ಇದಕ್ಕೆ ಸಂತಸ ವ್ಯಕ್ತಪಡಿಸಿದ ಸಿಎಂ, ‘ಯಾವೂರು?’ ಎಂದು ಪ್ರಶ್ನಿಸಿದರು. ಅದಕ್ಕೆ ಬಾಲಕ, ‘ನಂದು ಮಾಗಡಿ ಸಾರ್’ ಎಂದು ಉತ್ತರಿಸಿದಾಗ ಸುತ್ತಲಿದ್ದವರ ಮುಖದಲ್ಲಿ ನಗು ಮೂಡಿತು.
‘ಮಾಗಡಿಯಾ, ಅದು ಕೆಂಪೇಗೌಡರ ಊರು. ಧನುಷ್ ಅಂದರೆ ಬಾಣ ಎಂದರ್ಥ. ನೀನು ಬಾಣದಂತೆ ಧೈರ್ಯವಾಗಿರಬೇಕು. ಬಾಣ ಹೊಡೆಯುತ್ತೀಯಾ?’ ಎಂದು ಮಗುವಿನೊಂದಿಗೆ ಆತ್ಮೀಯವಾಗಿ ಮಾತನಾಡಿದ ಸಿಎಂ, ‘ಧನುಷ್, ನಿನಗೆ ಏನೂ ಆಗುವುದಿಲ್ಲ. ಧೈರ್ಯವಾಗಿರು’ ಎಂದು ಹಾರೈಸಿದರು. ಮುಖ್ಯಮಂತ್ರಿಗಳ ಈ ಮಾತುಗಳು ಅಲ್ಲಿದ್ದ ಪೋಷಕರ ಮನಸ್ಸಿಗೂ ಸಾಂತ್ವನ ನೀಡಿದವು.
ಮಕ್ಕಳೊಂದಿಗೆ ಕೆಲಕಾಲ ಕಳೆದ ಮುಖ್ಯಮಂತ್ರಿ, ಪ್ರತಿಯೊಬ್ಬರ ಹೆಸರು, ಊರು ಹಾಗೂ ಆರೋಗ್ಯದ ಬಗ್ಗೆ ವಿಚಾರಿಸುತ್ತಾ ಅವರ ಮನಸ್ಸಿನಲ್ಲಿ ಆತ್ಮವಿಶ್ವಾಸ ತುಂಬಿದರು.

ಪುಟಾಣಿಗಳ ಕನಸುಗಳಿಗೆ ಸಿಎಂ ಪ್ರೋತ್ಸಾಹ
ಹಾಸಿಗೆಯಲ್ಲಿ ಮಲಗಿದ್ದ ಬಾಲಕನ ಬಳಿ ತೆರಳಿದ ಸಿಎಂ, ‘ಏನಪ್ಪಾ, ಯಾವೂರು?’ ಎಂದು ಕೇಳಿದರು. ಬಾಲಕ ಹೊಸೂರು ಎಂದು ಉತ್ತರಿಸಿದಾಗ, ‘ನಿನ್ನ ಹೆಸರೇನು?’ ಎಂದು ಪ್ರಶ್ನಿಸಿದರು. ‘ಪಾರ್ಥಸಾರಥಿ’ ಎಂದ ಬಾಲಕನಿಗೆ, ‘ಪಾರ್ಥ ಎಂದರೆ ಅರ್ಜುನ. ನೀನು ಅರ್ಜುನನಂತೆ ಧೈರ್ಯವಾಗಿರಬೇಕು. ನಿನಗೆ ಏನೂ ಆಗುವುದಿಲ್ಲ. ಶಾಲೆಗೆ ಹೋಗಿ ಚೆನ್ನಾಗಿ ಓದು. ತಲೆ ಕೆಡಿಸಿಕೊಳ್ಳಬೇಡ’ ಎಂದು ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಬಾಲಕನಿಗೆ ಧೈರ್ಯ ತುಂಬಿದರು.
ಹುಮನಾಬಾದ್ನ ಬಾಲಕಿ ಪೂಜಾಳ ಬಳಿ ತೆರಳಿದ ಸಿಎಂ, ‘ನಾನು ಯಾರು ಗೊತ್ತಾ?’ ಎಂದು ಕೇಳಿದರು. ‘ನನಗೆ ಗೊತ್ತು, ನೀವು ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ’ ಎಂದು ಬಾಲಕಿ ಉತ್ತರಿಸಿದಳು. ‘ಮುಂದೆ ನೀನು ಏನಾಗಬೇಕು ಎಂದುಕೊಂಡಿದ್ದೀಯಾ?’ ಎಂಬ ಪ್ರಶ್ನೆಗೆ, ‘ನಾನು ಟೀಚರ್ ಆಗಬೇಕು ಸಾರ್’ ಎಂದಳು. ಇದಕ್ಕೆ ಸಂತಸ ವ್ಯಕ್ತಪಡಿಸಿದ ಸಿಎಂ, ‘ಟೀಚರ್ ಆಗಿ ದೇಶಕ್ಕೆ ಸೇವೆ ಮಾಡು’ ಎಂದು ಮಗುವಿನ ಕನಸಿಗೆ ಪ್ರೋತ್ಸಾಹ ನೀಡಿದರು.

ವಾರ್ಡ್ನ ಮತ್ತೊಂದು ಮೂಲೆಯಲ್ಲಿದ್ದ ಬಾಲಕಿಯ ಬಳಿ ತೆರಳಿ ಹೆಸರು ಕೇಳಿದಾಗ, ‘ಗಂಗೋತ್ರಿ’ ಎಂದು ಉತ್ತರಿಸಿದಳು. ‘ಗಂಗೋತ್ರಿ ಪವಿತ್ರವಾದ ನದಿ. ನಮ್ಮ ಮನೆಗೂ ಇದೇ ಹೆಸರಿಡಬೇಕು ಎಂದುಕೊಂಡಿದ್ದೇನೆ’ ಎಂದು ಸಿಎಂ ತಮ್ಮ ಅಭಿಪ್ರಾಯ ಹಂಚಿಕೊಂಡರು. ಬಳಿಕ ಮಕ್ಕಳಿಗೆ ಚಾಕೊಲೇಟ್ ಹಾಗೂ ಡ್ರಾಯಿಂಗ್ ಪುಸ್ತಕಗಳನ್ನು ವಿತರಿಸಿದರು.
ಎರಡು ವರ್ಷದ ಜಯಲಕ್ಷ್ಮೀ ಎಂಬ ಮಗುವಿನ ಆರೋಗ್ಯದ ಬಗ್ಗೆ ತಾಯಿ ಅನಿತಾ ಅವರನ್ನು ವಿಚಾರಿಸಿದರು. ಮಗುವಿಗೆ ರಕ್ತದ ಕ್ಯಾನ್ಸರ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕುಟುಂಬ ಎದುರಿಸಿದ ಸಂಕಷ್ಟವನ್ನು ತಾಯಿ ವಿವರಿಸಿದರು. ಗುಲ್ಬರ್ಗಾದಿಂದ ಬೆಂಗಳೂರಿಗೆ ಬಂದು ತಿಂಗಳುಗಟ್ಟಲೆ ಆಸ್ಪತ್ರೆಯಲ್ಲೇ ಉಳಿದು ಮಗಳ ಚಿಕಿತ್ಸೆ ಕೊಡಿಸುತ್ತಿರುವ ಅನಿತಾ, ‘ಈಗ ಮಗು ಸುಧಾರಿಸುತ್ತಿದೆ ಸಾರ್’ ಎಂದು ತಿಳಿಸಿದರು. ತಾಯಿಯ ಹೋರಾಟ ಹಾಗೂ ಮಗುವಿನ ಚೇತರಿಕೆಯ ಬಗ್ಗೆ ಸಿಎಂ ವಿಚಾರಿಸಿದರು.
ರಾಯಚೂರಿನ ಲೇಖನ ಎಂಬ ಪುಟಾಣಿ, ‘ನನ್ನ ಹೆಸರು ಲೇಖನ. ಡಿಸೆಂಬರ್ ಬಂದರೆ ನನಗೆ 10 ವರ್ಷ’ ಎಂದು ಮುಗ್ಧವಾಗಿ ಮಾತನಾಡಿದಳು. ಬೆಳಗ್ಗೆಯಿಂದಲೇ ಆಸ್ಪತ್ರೆಗೆ ದೊಡ್ಡ ವೈದ್ಯರು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಗುಲಾಬಿ ಹೂ ಹಿಡಿದು ಕಾಯುತ್ತಿದ್ದ ಮಗುವಿನೊಂದಿಗೆ ಸಿಎಂ ಆತ್ಮೀಯವಾಗಿ ಮಾತನಾಡಿ ಶುಭ ಹಾರೈಸಿದರು.

‘ಸರಿಯಾಗಿ ನೋಡಿಕೊಳ್ಳುತ್ತಿದ್ದಾರಾ? ಊಟ ಕೊಡುತ್ತಿದ್ದಾರಾ?’
ಕಪೂರ್ ವಿಭಾಗದ ವಾರ್ಡ್ಗಳ ಬಳಿಕ ಆಸ್ಪತ್ರೆಯ ಜನರಲ್ ವಾರ್ಡ್ಗೆ ತೆರಳಿದ ಮುಖ್ಯಮಂತ್ರಿ, ವಿಜಯಪುರ, ಶಹಾಪುರ, ಹುಮನಾಬಾದ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದು ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳ ಆರೋಗ್ಯ ವಿಚಾರಿಸಿದರು.
‘ನಿಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದಾರಾ? ಊಟ ಕೊಡುತ್ತಿದ್ದಾರಾ?’ ಎಂದು ಮಕ್ಕಳನ್ನು ಹಾಗೂ ಪೋಷಕರನ್ನು ಪ್ರಶ್ನಿಸಿದರು. ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಶಹಾಪುರದ ಭವ್ಯಳ ತಲೆಯನ್ನು ಸವರಿ, ‘ಎಲ್ಲವೂ ಸರಿಯಾಗುತ್ತದೆ, ಭಯಪಡಬೇಡ’ ಎಂದು ಸಾಂತ್ವನ ಹೇಳಿದರು. ಆಕೆಯ ತಾಯಿ ಸಂಗೀತಾ ಅವರ ಬಳಿ ಸರ್ಕಾರದ ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಸೌಲಭ್ಯ ದೊರೆಯುತ್ತಿದೆಯೇ ಎಂದು ವಿಚಾರಿಸಿದರು.
ಕನಕಪುರದ ಋತ್ವಿಕ್ ಅವರ ತಾಯಿಯ ಎಪಿಎಲ್ ಪಡಿತರ ಚೀಟಿ ಅಚಾನಕ್ ಬದಲಾವಣೆಯಾಗಿರುವ ವಿಷಯ ತಿಳಿದ ಸಿಎಂ, ಅದನ್ನು ಬಿಪಿಎಲ್ ಪಡಿತರ ಚೀಟಿಯಾಗಿ ಬದಲಾಯಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದರು.
ಮಕ್ಕಳ ಆರೋಗ್ಯ ವಿಚಾರಿಸುವುದರ ಜತೆಗೆ ಅವರ ಕುಟುಂಬಗಳ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಗಳ ಬಗ್ಗೆಯೂ ಕಾಳಜಿ ತೋರಿದ ಮುಖ್ಯಮಂತ್ರಿ, ಚಿಕಿತ್ಸೆಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ನೆರವು ನೀಡುವ ಭರವಸೆ ನೀಡಿದರು.

ಪೋಷಕರ ಸಂಕಷ್ಟ ಆಲಿಸಿ ನೆರವಿನ ಭರವಸೆ
ರಾಜ್ಯದ ವಿವಿಧ ಜಿಲ್ಲೆಗಳಿಂದ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಬೆಂಗಳೂರಿಗೆ ಆಗಮಿಸಿ ಆಸ್ಪತ್ರೆಯ ಆವರಣದಲ್ಲೇ ದಿನ ಕಳೆಯುತ್ತಿದ್ದ ತಾಯಂದಿರು ಹಾಗೂ ಕುಟುಂಬದ ಸದಸ್ಯರ ಬಳಿಯೂ ಸಿಎಂ ಕುಳಿತು ಮಾತನಾಡಿದರು. ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳು ದೊರೆಯುತ್ತಿವೆಯೇ, ಯಾರಾದರೂ ಹಣ ಕೇಳುತ್ತಿದ್ದಾರೆಯೇ ಎಂದು ವಿಚಾರಿಸಿದರು.
ಕ್ಯಾನ್ಸರ್ ಚಿಕಿತ್ಸೆಗೆಂದು ದೂರದ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವ ಅನಿವಾರ್ಯತೆ ತಪ್ಪಿಸುವ ನಿಟ್ಟಿನಲ್ಲಿ ಆಯಾ ಜಿಲ್ಲೆಗಳಲ್ಲಿಯೇ ಚಿಕಿತ್ಸಾ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.

ಕಿದ್ವಾಯಿ ಆಸ್ಪತ್ರೆಯಲ್ಲಿ 200 ಹೆಚ್ಚುವರಿ ಹಾಸಿಗೆ
ಮಕ್ಕಳ ದಿನಾಚರಣೆ ಅಂಗವಾಗಿ ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉತ್ತಮ ಚಿಕಿತ್ಸೆ ಹಾಗೂ ಅವರ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.
‘ಆಟವಾಡುತ್ತಾ ಬಾಲ್ಯ ಕಳೆಯಬೇಕಾದ ಪುಟ್ಟ ಕಂದಮ್ಮಗಳು ಕ್ಯಾನ್ಸರ್ನಂತಹ ಮಾರಕ ಕಾಯಿಲೆಯೊಂದಿಗೆ ಹೋರಾಡುತ್ತಿರುವುದನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆ. ಮಕ್ಕಳ ನೋವು ಒಂದೆಡೆಯಾದರೆ, ಅವರ ಚಿಕಿತ್ಸೆಗೆ ಹಗಲಿರುಳು ಆಸ್ಪತ್ರೆಯಲ್ಲೇ ಉಳಿದುಕೊಳ್ಳುವ ತಂದೆ-ತಾಯಿಯ ಸಂಕಷ್ಟ ಮತ್ತೊಂದೆಡೆ. ಇಂತಹ ಕುಟುಂಬಗಳಿಗೆ ಚಿಕಿತ್ಸೆ ಜತೆಗೆ ಆಸರೆ ಮತ್ತು ಧೈರ್ಯ ನೀಡುವುದು ಸರ್ಕಾರದ ಕರ್ತವ್ಯ’ ಎಂದರು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಹೆಚ್ಚುವರಿಯಾಗಿ 200 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಮಕ್ಕಳೊಂದಿಗೆ ಬರುವ ತಾಯಂದಿರು ಹಾಗೂ ಕುಟುಂಬದ ಸದಸ್ಯರಿಗೆ ವಸತಿ ಕಲ್ಪಿಸಲು 3 ಎಕರೆ ಜಾಗ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಈ ಬೇಡಿಕೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಕ್ಕಳ ನೋವು ನೋಡಿದರೆ ಮನಸ್ಸಿಗೆ ಸಂಕಟವಾಗುತ್ತದೆ
‘ನಾನು ಈ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದಾಗಲೇ ಕಿದ್ವಾಯಿ ಆಸ್ಪತ್ರೆಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿದ್ದೆ. ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಇಲ್ಲಿಗೆ ಬಂದು ಮಕ್ಕಳ ಪರಿಸ್ಥಿತಿ ನೋಡಬೇಕು ಎಂಬ ಉದ್ದೇಶದಿಂದ ಭೇಟಿ ನೀಡಿದ್ದೇನೆ. ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್ನಂತಹ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳನ್ನು ನೋಡಿದಾಗ ಅವರ ನೋವು ಅರ್ಥವಾಗುತ್ತದೆ. ಏನು ಹೇಳಬೇಕು ಎಂಬುದೇ ತಿಳಿಯುವುದಿಲ್ಲ. ಆದರೂ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಮಕ್ಕಳ ಭವಿಷ್ಯ ಬಹಳ ಮುಖ್ಯ’ ಎಂದು ಭಾವುಕರಾದರು.

ಒಂದು ಮಗುವಿನ ಜನನದ ಹಿಂದೆ ತಂದೆ-ತಾಯಿ ಅನೇಕ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅಂತಹ ಮಗು ಬಾಲ್ಯದಲ್ಲಿಯೇ ಗಂಭೀರ ಕಾಯಿಲೆಗೆ ತುತ್ತಾದಾಗ ಕುಟುಂಬ ಅನುಭವಿಸುವ ನೋವು ದೊಡ್ಡದು. ಮಕ್ಕಳಿಗೆ ಉತ್ತಮ ಚಿಕಿತ್ಸೆ ದೊರೆಯುವುದರ ಜತೆಗೆ ಪೋಷಕರು ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆಯೂ ಇರಬೇಕು ಎಂದು ಹೇಳಿದರು.

ವರ್ಷಕ್ಕೆ 3.5 ಲಕ್ಷ ರೋಗಿಗಳಿಗೆ ಚಿಕಿತ್ಸೆ
ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಹೊರರಾಜ್ಯಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಕಿದ್ವಾಯಿ ಆಸ್ಪತ್ರೆಗೆ ಬರುತ್ತಿದ್ದಾರೆ. ವರ್ಷಕ್ಕೆ ಸುಮಾರು 3.5 ಲಕ್ಷ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಪ್ರತಿದಿನ ಸರಾಸರಿ 1,000 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವುದು ವಿಶೇಷ. ವೈದ್ಯರು ಹಾಗೂ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತುಮಕೂರು, ಮೈಸೂರು ಸೇರಿದಂತೆ ಜಿಲ್ಲೆಗಳಿಗೆ ಕ್ಯಾನ್ಸರ್ ಚಿಕಿತ್ಸೆ
ಕ್ಯಾನ್ಸರ್ ಚಿಕಿತ್ಸೆಗೆಂದು ರಾಜ್ಯದ ಎಲ್ಲ ಭಾಗಗಳ ಜನರು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಬರುವ ಅನಿವಾರ್ಯತೆ ತಪ್ಪಿಸಬೇಕು. ಈ ಉದ್ದೇಶದಿಂದ ತುಮಕೂರು, ಮೈಸೂರು, ಬಳ್ಳಾರಿ, ಕಲಬುರಗಿ ಹಾಗೂ ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆ ರೂಪಿಸಲಾಗಿದೆ. ಈ ಕಾರ್ಯಕ್ರಮವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದರು.
ರೋಬೋಟಿಕ್ ಯಂತ್ರಗಳ ಖರೀದಿಗೆ ಸಂಪುಟ ಅಸ್ತು
ಕಿದ್ವಾಯಿ ಆಸ್ಪತ್ರೆಯ ವೈದ್ಯಕೀಯ ಸೌಲಭ್ಯಗಳನ್ನು ಮತ್ತಷ್ಟು ಉನ್ನತೀಕರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈಗಾಗಲೇ ಒಂದು ರೋಬೋಟಿಕ್ ಯಂತ್ರ ಕಾರ್ಯನಿರ್ವಹಿಸುತ್ತಿದ್ದು, ಮತ್ತೊಂದು ರೋಬೋಟಿಕ್ ಯಂತ್ರ ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿಗೆ ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ದೇಶದಲ್ಲೇ ಹೆಸರಾಂತ ಆಸ್ಪತ್ರೆಯಾಗಿರುವ ಕಿದ್ವಾಯಿಯಲ್ಲಿ ರೋಗಿಗಳಿಗೆ ಇನ್ನಷ್ಟು ಅತ್ಯಾಧುನಿಕ ಚಿಕಿತ್ಸೆ ದೊರೆಯುವಂತೆ ಮಾಡಲಾಗುವುದು ಎಂದರು.
ಆಸ್ಪತ್ರೆಯ ಅಭಿವೃದ್ಧಿಗೆ ದಾನಿಗಳ ಕೊಡುಗೆ ಶ್ಲಾಘನೀಯ
ಕಿದ್ವಾಯಿ ಆಸ್ಪತ್ರೆಯ ಅಭಿವೃದ್ಧಿಗೆ ಜಿಂದಾಲ್, ಇನ್ಫೋಸಿಸ್ ಸೇರಿದಂತೆ ಹಲವು ಸಂಸ್ಥೆಗಳು ಹಾಗೂ ದಾನಿಗಳು ನೆರವು ನೀಡಿದ್ದಾರೆ. ವಿವಿಧ ಕಟ್ಟಡಗಳು ಮತ್ತು ಚಿಕಿತ್ಸಾ ಘಟಕಗಳ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಸಂಕಷ್ಟದಲ್ಲಿರುವ ರೋಗಿಗಳ ನೆರವಿಗೆ ನಿಂತಿರುವ ದಾನಿಗಳ ಸೇವೆ ಅಭಿನಂದನಾರ್ಹ. ಇಂತಹ ಸಹಕಾರದಿಂದ ಆಸ್ಪತ್ರೆಯ ಅಭಿವೃದ್ಧಿಗೆ ಮತ್ತಷ್ಟು ಬಲ ದೊರೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪುಟಾಣಿಗಳಲ್ಲೂ ಕ್ಯಾನ್ಸರ್ ಹೆಚ್ಚಳ ಕಳವಳಕಾರಿ
ಯುವಜನರಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಯುವಜನರಷ್ಟೇ ಅಲ್ಲದೆ ಒಂದು, ಎರಡು, ಐದು ಹಾಗೂ ಹತ್ತು ವರ್ಷದೊಳಗಿನ ಪುಟ್ಟ ಮಕ್ಕಳಲ್ಲಿಯೂ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ. ಇಂತಹ ಮಕ್ಕಳಿಗೆ ಅಗತ್ಯವಿರುವ ಎಲ್ಲ ಚಿಕಿತ್ಸಾ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲು ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಗಮನ ಹರಿಸಲಾಗುವುದು ಎಂದು ಹೇಳಿದರು.
ಮಾದಕ ವಸ್ತು ಮುಕ್ತ ರಾಜ್ಯ ನಿರ್ಮಾಣ ಗುರಿ
ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಿಗರೇಟ್ ಹಾಗೂ ತಂಬಾಕು ಬಳಕೆ ನಿಯಂತ್ರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಕ್ಕಳನ್ನು ಇಂತಹ ದುಶ್ಚಟಗಳಿಂದ ದೂರವಿಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಾದಕ ವಸ್ತು ಮುಕ್ತ ರಾಜ್ಯ ನಿರ್ಮಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ಜಾಗರೂಕತೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಮಕ್ಕಳ ದಿನಾಚರಣೆಯಂದು ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ, ಮಕ್ಕಳಿಗೆ ಕೇವಲ ಶುಭಾಶಯ ಹೇಳಿ ಹಿಂದಿರುಗದೆ ಅವರ ನೋವು, ಪೋಷಕರ ಸಂಕಷ್ಟ ಹಾಗೂ ಆಸ್ಪತ್ರೆಯ ಅಗತ್ಯಗಳನ್ನು ಆಲಿಸುವ ಮೂಲಕ ಮಾನವೀಯ ಕಾಳಜಿ ಮೆರೆದರು. ಅವರ ಮಾತುಗಳಲ್ಲಿ ಮಕ್ಕಳಿಗೆ ಧೈರ್ಯವಿತ್ತು, ಭರವಸೆಗಳಲ್ಲಿ ಪೋಷಕರಿಗೆ ಆಸರೆಯಿತ್ತು.








