ವೀರಶೈವ–ಲಿಂಗಾಯತ ಪರಂಪರೆಯ ಐತಿಹಾಸಿಕ ದಾಖಲೆ, ಶಾಸ್ತ್ರಗ್ರಂಥ ಮತ್ತು ಸೈದ್ಧಾಂತಿಕ ಆಧಾರಗಳ ಸಮಗ್ರ ಅಧ್ಯಯನವೇ ‘ಬಸವ ಮಂಟಪ’ ಕೃತಿ | ಭಿನ್ನಾಭಿಪ್ರಾಯಗಳ ಹೆಸರಿನಲ್ಲಿ ದ್ವೇಷ ಬಿತ್ತದೆ ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಸಮಾಜ ಕಟ್ಟೋಣ | ಅಸ್ಪೃಶ್ಯತೆ, ಅಜ್ಞಾನ, ಅನಕ್ಷರತೆ, ಬಡತನ ಮತ್ತು ನಿರುದ್ಯೋಗದ ವಿರುದ್ಧ ಮಠಾಧೀಶರು ಹಾಗೂ ಸಮಾಜ ಒಗ್ಗಟ್ಟಿನಿಂದ ಹೋರಾಡಬೇಕು: ಶಂಕರ್ ಬಿದರಿ
ಬೆಂಗಳೂರು: ಧರ್ಮದ ಹೆಸರಿನಲ್ಲಿ ಭಿನ್ನಾಭಿಪ್ರಾಯಗಳ ಗೋಡೆಗಳನ್ನು ನಿರ್ಮಿಸಿ, ಶತಮಾನಗಳ ಪರಂಪರೆ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಪ್ರಶ್ನಿಸುವ ಪ್ರಯತ್ನಗಳು ಸಮಾಜದ ಒಗ್ಗಟ್ಟಿಗೆ ಧಕ್ಕೆ ತರುತ್ತಿರುವ ಸಂದರ್ಭದಲ್ಲಿ, ಇತಿಹಾಸದ ದಾಖಲೆಗಳು, ಶಾಸ್ತ್ರಗ್ರಂಥಗಳು ಹಾಗೂ ತರ್ಕಬದ್ಧವಾದ ವಿಚಾರಗಳ ಮೂಲಕ ಸತ್ಯವನ್ನು ಸಮಾಜದ ಮುಂದಿಡುವ ಪ್ರಯತ್ನ ಮಹತ್ವದ್ದಾಗಿದೆ. ವೀರಶೈವ–ಲಿಂಗಾಯತ ಪರಂಪರೆ ಬೇರೆ ಬೇರೆ ಎಂಬ ಚರ್ಚೆಗಳಿಗೆ ಪಾಂಡಿತ್ಯಪೂರ್ಣ ಅಧ್ಯಯನದ ಮೂಲಕ ಉತ್ತರ ನೀಡುವ ಉದ್ದೇಶದಿಂದ ರವಿ ಹಂಜ್ ಅವರು ರಚಿಸಿರುವ ‘ಬಸವ ಮಂಟಪ : ವೀರಶೈವ ಲಿಂಗಾಯತ ಸತ್ಯದರ್ಶನ’ ಕೃತಿ ಇದೀಗ ಓದುಗರ ಕೈ ಸೇರಿದೆ.
ಸಮಾಜವನ್ನು ಒಡೆಯುವ ಚರ್ಚೆಗಳಿಗಿಂತ ಒಗ್ಗೂಡಿಸುವ ವಿಚಾರಗಳಿಗೆ ಆದ್ಯತೆ ನೀಡಬೇಕು. ಧರ್ಮ ಎನ್ನುವುದು ಮನುಷ್ಯರನ್ನು ಪ್ರೀತಿ, ವಿಶ್ವಾಸ, ಸಹಬಾಳ್ವೆ ಮತ್ತು ಸೌಹಾರ್ದತೆಯಿಂದ ಬೆಸೆಯುವ ಶಕ್ತಿಯಾಗಬೇಕೇ ಹೊರತು ಪರಸ್ಪರ ದ್ವೇಷಿಸುವ ಸಾಧನವಾಗಬಾರದು. ವೀರಶೈವ ಮತ್ತು ಲಿಂಗಾಯತರು ಒಂದೇ ಪರಂಪರೆಯವರು, ಸಮಾಜದ ಏಕತೆ ಮತ್ತು ಸಮನ್ವಯವೇ ಇಂದಿನ ಅಗತ್ಯ ಎಂದು ವಿಶ್ರಾಂತ ಪೊಲೀಸ್ ಮಹಾನಿರ್ದೇಶಕರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷರಾದ ಶಂಕರ್ ಮಹಾದೇವ ಬಿದರಿ ಹೇಳಿದರು.
‘ವಿಶ್ವವಾಣಿ ಪುಸ್ತಕ’ ಪ್ರಕಾಶನದಿಂದ ಪ್ರಕಟಗೊಂಡಿರುವ ರವಿ ಹಂಜ್ ಅವರ ‘ಬಸವ ಮಂಟಪ : ವೀರಶೈವ ಲಿಂಗಾಯತ ಸತ್ಯದರ್ಶನ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ವೀರಶೈವ–ಲಿಂಗಾಯತ ಸಮಾಜದ ಐಕ್ಯತೆ, ಧಾರ್ಮಿಕ ಪರಂಪರೆ, ಮಠಗಳ ಜವಾಬ್ದಾರಿ, ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕ ಸಮಾನತೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಸುದೀರ್ಘವಾಗಿ ಹಂಚಿಕೊಂಡರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ವಿಭೂತಿಪುರ ವೀರಸಿಂಹಾಸನದ ಸ್ವಾಮೀಜಿ ಹಾಗೂ ಸರ್ಪಭೂಷಣ ಮಠದ ಸ್ವಾಮೀಜಿಯವರಿಗೆ ಭಕ್ತಿಪೂರ್ವಕ ಪ್ರಣಾಮ ಸಲ್ಲಿಸಿದ ಬಿದರಿ ಅವರು, ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್, ಕೃತಿಯ ಕರ್ತೃ ರವಿ ಹಂಜ್ ಹಾಗೂ ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಅಭಿನಂದಿಸಿದರು.

ವೀರಶೈವ–ಲಿಂಗಾಯತ ಒಂದೇ ಎಂಬುದಕ್ಕೆ ದಾಖಲೆಗಳೇ ಸಾಕ್ಷಿ
ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಎಂಬ ಚರ್ಚೆಗಳು 2017–18ರ ಅವಧಿಯಲ್ಲಿ ತೀವ್ರವಾಗಿ ಮುನ್ನೆಲೆಗೆ ಬಂದವು. ಅದಕ್ಕೂ ಮೊದಲು ನಮ್ಮ ಸಮಾಜದಲ್ಲಿ ಇಂತಹ ಪ್ರತ್ಯೇಕತೆಯ ಭಾವನೆ ಇರಲಿಲ್ಲ. ನಮ್ಮ ಕಡೆ ಲಿಂಗಾಯತ ಎಂದು ಕರೆಯುತ್ತಿದ್ದರೆ, ಬೇರೆ ಕಡೆ ವೀರಶೈವ ಎಂದು ಕರೆಯುತ್ತಿದ್ದರು. ಆದರೆ ಇವೆರಡೂ ಬೇರೆ ಬೇರೆ ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಎಂದಿಗೂ ಮೂಡಿರಲಿಲ್ಲ. ನಮ್ಮ ಮನೆಗಳಿಗೆ ಶ್ರೀಶೈಲದ ವಾಗೀಶ ಪಂಡಿತಾರಾಧ್ಯರು ಆಗಮಿಸಿ ವಾರ್ಷಿಕ ಪೂಜೆ ನೆರವೇರಿಸುತ್ತಿದ್ದರು. ಧಾರವಾಡದ ಮೃತ್ಯುಂಜಯ ಮಠದ ಸ್ವಾಮೀಜಿಯವರೂ ಬಂದು ಪೂಜೆ ಮಾಡಿಕೊಂಡು ಹೋಗುತ್ತಿದ್ದರು. ಎಲ್ಲರೂ ಒಂದೇ ಪರಂಪರೆಯವರು ಎಂಬ ಭಾವನೆಯೇ ನಮ್ಮಲ್ಲಿತ್ತು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
2017–18ರ ನಂತರ ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಎಂಬ ಚರ್ಚೆಗಳು ಆರಂಭವಾದಾಗ ಸಮಾಜದ ಮನಸ್ಸಿಗೆ ನೋವಾಯಿತು. ಈ ಹಿನ್ನೆಲೆಯಲ್ಲಿ ರವಿ ಹಂಜ್ ಅವರು ಐತಿಹಾಸಿಕ ದಾಖಲೆಗಳು, ಗ್ರಂಥಗಳು, ಶಾಸ್ತ್ರಗಳು ಹಾಗೂ ಆಧಾರಗ್ರಂಥಗಳನ್ನು ಆಳವಾಗಿ ಪರಿಶೀಲಿಸಿ, ವೀರಶೈವ–ಲಿಂಗಾಯತ ಪರಂಪರೆಯ ಏಕತೆಯನ್ನು ತರ್ಕಬದ್ಧವಾಗಿ ವಿವರಿಸುವ ಲೇಖನಗಳನ್ನು ರಚಿಸಿದ್ದಾರೆ. ಅವುಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿರುವುದು ಶ್ಲಾಘನೀಯ ಕಾರ್ಯ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯೂ ವೀರಶೈವ ಮತ್ತು ಲಿಂಗಾಯತ ಒಂದೇ ಎಂಬ ನಿಲುವನ್ನು ಸ್ಪಷ್ಟವಾಗಿ ಹೊಂದಿದೆ. ಎರಡೂ ಬೇರೆ ಬೇರೆ ಎಂಬ ಪ್ರಶ್ನೆಗೆ ಅವಕಾಶವಿಲ್ಲ ಎಂಬ ದೃಢ ನಿರ್ಧಾರವನ್ನು ಮಹಾಸಭೆ ತೆಗೆದುಕೊಂಡಿದೆ. ರವಿ ಹಂಜ್ ಅವರ ಈ ಕೃತಿ ಮಹಾಸಭೆಯ ನಿಲುವಿಗೆ ಪೂರಕವಾದ ಸಾಕ್ಷ್ಯಾಧಾರಗಳನ್ನು ಒದಗಿಸಿದೆ. ಈ ಮಹತ್ವದ ಕಾರ್ಯಕ್ಕಾಗಿ ಅವರು ಸಲ್ಲಿಸಿರುವ ಸೇವೆಯನ್ನು ಸಮಾಜ ಸದಾಕಾಲ ಸ್ಮರಿಸಲಿದೆ ಎಂದು ಹೇಳಿದರು.

ವಿಶ್ವೇಶ್ವರ ಭಟ್ ಅವರ ಧೈರ್ಯ ಮತ್ತು ಬದ್ಧತೆ ಮೆಚ್ಚುವಂತಹದ್ದು
ಕನ್ನಡ ಸಾರಸ್ವತ ಲೋಕದಲ್ಲಿ ವಿಶಾಲ ಮನೋಭಾವ ಹೊಂದಿರುವ, ಹೊಸ ವಿಚಾರಗಳಿಗೆ ಪ್ರೋತ್ಸಾಹ ನೀಡುವ ಮತ್ತು ತಮಗೆ ಸರಿ ಎನಿಸಿದ ನಿಲುವಿನ ಪರವಾಗಿ ದೃಢವಾಗಿ ನಿಲ್ಲುವ ಪತ್ರಕರ್ತರಲ್ಲಿ ವಿಶ್ವೇಶ್ವರ ಭಟ್ ಪ್ರಮುಖರು. ಅವರಲ್ಲಿ ಅಪಾರ ಧೈರ್ಯವಿದೆ. ಎಂತಹ ಸವಾಲುಗಳು ಎದುರಾದರೂ ತಮ್ಮ ನಿಲುವನ್ನು ಬದಲಿಸದೆ, ಸರಿ ಎನಿಸಿದ ವಿಚಾರವನ್ನು ಪ್ರಕಟಿಸುವ ಮನೋಭಾವ ಅವರಲ್ಲಿದೆ.
ನನ್ನ ಆತ್ಮಕಥೆಯ ವಿಚಾರವಾಗಿ ಒಮ್ಮೆ ದೂರವಾಣಿ ಮೂಲಕ ಮಾತನಾಡಿದಾಗ, ಬೇಕಾದರೆ ನಿಮ್ಮ ಪತ್ರಿಕೆಯಲ್ಲಿ ಸರಣಿಯಾಗಿ ಪ್ರಕಟಿಸಿ ಎಂದು ಹೇಳಿದ್ದೆ. ಮರುದಿನವೇ ಅದನ್ನು ಆರಂಭಿಸಿದವರು ವಿಶ್ವೇಶ್ವರ ಭಟ್. ಅವರ ಕಾರ್ಯಶೈಲಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ನನಗೆ ಮೆಚ್ಚುಗೆಯಾಗಿದೆ.
‘ಬಸವ ಮಂಟಪ’ಕ್ಕೆ ಸಂಬಂಧಿಸಿದ ಲೇಖನಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾದರೂ, ಯಾವುದೇ ಮುಲಾಜಿಲ್ಲದೆ ಲೇಖನಗಳನ್ನು ಪ್ರಕಟಿಸಿ ಸಮಾಜದ ಮುಂದಿಟ್ಟಿದ್ದಾರೆ. ಭಿನ್ನಾಭಿಪ್ರಾಯಗಳ ನಡುವೆಯೂ ಸತ್ಯವೆಂದು ನಂಬಿದ ವಿಚಾರವನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ವೀರಶೈವ–ಲಿಂಗಾಯತ ಸಮಾಜಕ್ಕೆ ವಿಶ್ವೇಶ್ವರ ಭಟ್ ಸಲ್ಲಿಸಿರುವ ಈ ಸೇವೆ ಅಮೂಲ್ಯವಾದದ್ದು. ಸಮಾಜ ಅವರ ಕೊಡುಗೆಯನ್ನು ಕೃತಜ್ಞತೆಯಿಂದ ಸ್ಮರಿಸಲಿದೆ ಎಂದು ಶ್ಲಾಘಿಸಿದರು.

ಇಷ್ಟಲಿಂಗ, ಪಂಚಾಚಾರ, ಷಟ್ಸ್ಥಲ, ಅಷ್ಟಾವರಣವೇ ಪ್ರಮುಖ ತಾತ್ವಿಕ ಗುರುತುಗಳು
ನಾನು ರವಿ ಹಂಜ್ ಅವರಂತೆ ಆಳವಾದ ಅಧ್ಯಯನ ನಡೆಸಿದ ವಿದ್ವಾಂಸನಲ್ಲ. ವಿಶ್ವೇಶ್ವರ ಭಟ್ ಅವರಂತೆ ವಿಚಾರಗಳನ್ನು ವಿಶ್ಲೇಷಿಸುವ ಪಾಂಡಿತ್ಯವೂ ನನಗಿಲ್ಲ. ಆದರೆ ಸಾಮಾನ್ಯ ವ್ಯಕ್ತಿಯಾಗಿ ನಾನು ಕಂಡುಕೊಂಡಿರುವ ಕೆಲವು ವಿಚಾರಗಳಿವೆ. ಇಷ್ಟಲಿಂಗ ಪೂಜೆ, ಪಂಚಾಚಾರ, ಷಟ್ಸ್ಥಲ, ಅಷ್ಟಾವರಣ ಹಾಗೂ ಲಿಂಗೈಕ್ಯರಾದ ನಂತರದ ದಫನ ಸಂಸ್ಕಾರ ಇವು ವೀರಶೈವ–ಲಿಂಗಾಯತ ಪರಂಪರೆಯ ಪ್ರಮುಖ ಗುರುತುಗಳಾಗಿವೆ. ಸಿದ್ಧಾಂತ ಶಿಖಾಮಣಿ ಮತ್ತು ಬಸವಣ್ಣನವರ ಬೋಧನೆಗಳಲ್ಲಿಯೂ ಈ ತಾತ್ವಿಕ ಅಂಶಗಳಿಗೆ ಮಹತ್ವವಿದೆ.
ಯಾರು ಇಷ್ಟಲಿಂಗ ಪೂಜೆ ಮಾಡುತ್ತಾರೋ, ಪಂಚಾಚಾರ, ಷಟ್ಸ್ಥಲ ಮತ್ತು ಅಷ್ಟಾವರಣ ತತ್ವಗಳನ್ನು ಒಪ್ಪಿಕೊಂಡು ಆಚರಿಸುತ್ತಾರೋ, ಲಿಂಗೈಕ್ಯರಾದ ನಂತರ ದಫನ ಸಂಸ್ಕಾರವನ್ನು ಅನುಸರಿಸುತ್ತಾರೋ ಅವರೆಲ್ಲರೂ ನಮ್ಮ ಪರಂಪರೆಯವರೇ ಎಂಬುದು ನನ್ನ ದೃಢವಾದ ನಿಲುವು.
ವೀರಶೈವ ಪರಂಪರೆಯನ್ನು ಅನುಸರಿಸುವವರು ಬಸವಣ್ಣನವರನ್ನು ಮಹಾನ್ ಸಮಾಜ ಸುಧಾರಕರೆಂದು ಪರಿಗಣಿಸಿದರೆ, ಬಸವಣ್ಣನವರನ್ನೇ ಕೇಂದ್ರವಾಗಿಟ್ಟುಕೊಂಡು ಧಾರ್ಮಿಕ ಚಿಂತನೆ ನಡೆಸುವ ಕೆಲವರು ಅವರನ್ನು ಧರ್ಮ ಸಂಸ್ಥಾಪಕರೆಂದು ಕಾಣುತ್ತಾರೆ. ಈ ದೃಷ್ಟಿಕೋನದ ವ್ಯತ್ಯಾಸವನ್ನು ಹೊರತುಪಡಿಸಿ, ಸಮಾಜವನ್ನು ಒಡೆಯುವಂತಹ ದೊಡ್ಡ ಭಿನ್ನತೆಯನ್ನು ಸೃಷ್ಟಿಸುವ ಅಗತ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದರು.

ಹಿಂದಿನ ತಲೆಮಾರಿನ ಹಿರಿಯರಲ್ಲಿ ಇರದ ಭಿನ್ನತೆ ಈಗೇಕೆ?
ಶಿರಸಂಗಿ ಲಿಂಗರಾಜರು, ಪಾವು ಹೊಳಕಟ್ಟಿಯವರು, ಅರಟಾಳ ರುದ್ರಗೌಡರು, ಡಿ.ಸಿ. ಪೌಟೆ ಅವರು, ಪರಮಪೂಜ್ಯ ಶಿವಕುಮಾರ ಶಿವಯೋಗಿಗಳು ಹಾಗೂ ಗುಲ್ಬರ್ಗದ ಶರಣಬಸಪ್ಪ ಅಪ್ಪನವರಂತಹ ಮಹನೀಯರು ಸಮಾಜದಲ್ಲಿದ್ದಾಗ ವೀರಶೈವ–ಲಿಂಗಾಯತ ಎಂಬ ಪ್ರತ್ಯೇಕತೆಯ ವಿವಾದಗಳು ಇರಲಿಲ್ಲ. ಸಮಾಜದ ಏಳಿಗೆ ಮತ್ತು ಒಗ್ಗಟ್ಟಿಗೆ ಅವರು ಶ್ರಮಿಸಿದ್ದರು.
1940ರಲ್ಲಿ ನಡೆದ ಕುಂಭಕೋಣಂ ಸಭೆಯ ನಡಾವಳಿಗಳನ್ನು ಗಮನಿಸಿದಾಗ ಫಾಲ್ಘಾಟ್ ಅಯ್ಯರ್ ಅವರೂ ವೀರಶೈವ ಮಹಾಸಭೆಯಲ್ಲಿ ಭಾಗವಹಿಸಿರುವುದು ಕಂಡುಬರುತ್ತದೆ. ಶಿವನ ಆರಾಧನೆ ಮತ್ತು ಶೈವ ತತ್ವದಲ್ಲಿ ನಂಬಿಕೆಯುಳ್ಳವರನ್ನು ವಿಶಾಲ ಮನೋಭಾವದಿಂದ ಒಳಗೊಳ್ಳುವ ಪರಂಪರೆ ನಮ್ಮಲ್ಲಿತ್ತು. ಸಮಾಜವನ್ನು ದೊಡ್ಡದಾಗಿ ಬೆಳೆಸುವ ಪ್ರಯತ್ನ ಮಾಡಬೇಕೇ ಹೊರತು ಸಣ್ಣ ಸಣ್ಣ ವಿಚಾರಗಳ ಆಧಾರದಲ್ಲಿ ವಿಭಜಿಸುವ ಕೆಲಸ ಮಾಡಬಾರದು ಎಂದು ಹೇಳಿದರು.

ಭಿನ್ನಾಭಿಪ್ರಾಯವಿರಲಿ, ದ್ವೇಷ ಮಾತ್ರ ಬೇಡ
ರವಿ ಹಂಜ್ ಅವರು ತಮ್ಮ ಅಧ್ಯಯನ ಮತ್ತು ಪಾಂಡಿತ್ಯದ ಮೂಲಕ ಸಮಾಜದ ತತ್ವ, ನೀತಿ ಮತ್ತು ಪರಂಪರೆಯ ಬಗ್ಗೆ ಆಧಾರಸಹಿತವಾಗಿ ವಿಚಾರ ಮಂಡಿಸಿದ್ದಾರೆ. ಅದೇ ರೀತಿ ಬಸವಣ್ಣನವರ ವಿಚಾರಗಳನ್ನು ಪ್ರತಿಪಾದಿಸುವವರೂ ಇರಬಹುದು. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಧ್ಯಯನ, ನಿಲುವು ಮತ್ತು ಅಭಿಪ್ರಾಯಗಳಿರಬಹುದು. ಆದರೆ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಪರಸ್ಪರ ದ್ವೇಷಿಸುವುದು, ಅವಹೇಳನ ಮಾಡುವುದು ಮತ್ತು ಮೂದಲಿಸುವುದು ಸರಿಯಲ್ಲ.
ಸಮಾಜದಲ್ಲಿ ಪ್ರೀತಿ, ಪ್ರೇಮ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಧರ್ಮ ಎನ್ನುವುದು ಎಲ್ಲರನ್ನು ಒಗ್ಗೂಡಿಸಿ ನೆಮ್ಮದಿ, ಸಂತೋಷ, ಸಮೃದ್ಧಿ ನೀಡುವ ಮಾಧ್ಯಮವಾಗಬೇಕು. ದ್ವೇಷದ ಬೀಜ ಬಿತ್ತುವ ಯಾವುದೇ ವಿಚಾರ ಧರ್ಮದ ಆಶಯವಾಗಲು ಸಾಧ್ಯವಿಲ್ಲ.
ಆದ್ದರಿಂದ ಆರೋಗ್ಯಕರ ಚರ್ಚೆ ನಡೆಯಲಿ. ಪರಸ್ಪರ ಗೌರವದಿಂದ, ಸೌಜನ್ಯದಿಂದ ವಿಚಾರ ವಿನಿಮಯ ಮಾಡಿಕೊಳ್ಳೋಣ. ಒಬ್ಬರನ್ನೊಬ್ಬರು ಅವಹೇಳನ ಮಾಡುವುದರಿಂದ ಯಾರಿಗೂ ಪ್ರಯೋಜನವಿಲ್ಲ. ಬಸವಣ್ಣನವರು ‘ಎನಗಿಂತ ಕಿರಿಯರಿಲ್ಲ, ಶಿವಶರಣರಿಗಿಂತ ಹಿರಿಯರಿಲ್ಲ’ ಎಂಬ ವಿನಯದ ಸಂದೇಶ ನೀಡಿದ್ದಾರೆ. ಅಂತಹ ಮಹಾನ್ ಶರಣರ ಹೆಸರಿನಲ್ಲಿ ಪರಸ್ಪರರನ್ನು ಹೀಯಾಳಿಸುವುದು ಅವರ ಆಶಯಕ್ಕೆ ವಿರುದ್ಧವಾದದ್ದು ಎಂದು ಎಚ್ಚರಿಸಿದರು.

ಮಠಾಧೀಶರು ಒಂದಾದರೆ ಸಮಾಜವೂ ಒಂದಾಗುತ್ತದೆ
ಸಿದ್ಧಲಿಂಗ ಸ್ವಾಮಿಗಳ ಕುರಿತು ಮಾತನಾಡಿದ ಬಿದರಿ ಅವರು, ಅವರು ಗದಗದ ಬೀಜೂರು ಮಠದ ಪೀಠಾಧಿಪತಿಯಾಗುವ ಮೊದಲು ಸಿಂದಗಿಯಲ್ಲಿ ಉಜ್ಜಿನಿ ಮಠದ ಶಾಖಾ ಪೀಠವಾಗಿದ್ದ ಶಿವಾಚಾರ್ಯ ಪರಂಪರೆಯ ಮಠದೊಂದಿಗೆ ಸಂಬಂಧ ಹೊಂದಿದ್ದರು ಎಂಬ ವಿಚಾರವನ್ನು ಪ್ರಸ್ತಾಪಿಸಿದರು.
ನಮ್ಮ ಬಹುತೇಕ ಮಠಾಧೀಶರು ಶಿವಯೋಗ ಮಂದಿರದಲ್ಲಿ ತರಬೇತಿ ಮತ್ತು ಸಂಸ್ಕಾರ ಪಡೆದು ಬಂದವರೇ ಆಗಿದ್ದಾರೆ. ಅಲ್ಲಿಂದ ಕೆಲವರು ವಿರಕ್ತ ಮಠಗಳ ಪರಂಪರೆಯನ್ನು ಅನುಸರಿಸಿದರೆ, ಇನ್ನು ಕೆಲವರು ಶಿವಾಚಾರ್ಯ ಮಠಗಳ ಪರಂಪರೆಯಲ್ಲಿ ಮುಂದುವರಿದಿದ್ದಾರೆ. ಮೂಲ ತರಬೇತಿ ಮತ್ತು ಧಾರ್ಮಿಕ ಸಂಸ್ಕಾರ ಒಂದೇ ಆಗಿರುವಾಗ, ಸಮಾಜವನ್ನು ವಿಭಜಿಸುವ ಅಗತ್ಯವೇನಿದೆ?
ನಮ್ಮ ಸ್ವಾಮೀಜಿಗಳು ಮೊದಲು ಪರಸ್ಪರ ಒಂದಾಗಬೇಕು. ಅವರಲ್ಲಿ ಒಗ್ಗಟ್ಟು ಮೂಡಿದರೆ ಸಮಾಜವೂ ಸಹಜವಾಗಿಯೇ ಒಗ್ಗಟ್ಟಿನ ಹಾದಿಯಲ್ಲಿ ಸಾಗುತ್ತದೆ. ಮಠಾಧೀಶರು ಸಮಾಜಕ್ಕೆ ಮಾರ್ಗದರ್ಶನ ನೀಡುವವರು. ಅವರ ನಡುವಿನ ಸಮನ್ವಯ ಸಮಾಜದ ಭವಿಷ್ಯಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಜಗದ್ಗುರುಗಳ ಸ್ಥಾನಕ್ಕೆ ಸಂಸ್ಕಾರ, ಶಿಕ್ಷಣ, ಪಾಂಡಿತ್ಯ ಅಗತ್ಯ
ಇಂದು ಸಣ್ಣಪುಟ್ಟ ಮಠಗಳಲ್ಲಿಯೂ ಮೂರು–ನಾಲ್ಕು ದಿನಗಳ ದಸರಾ ಕಾರ್ಯಕ್ರಮಗಳು, ಸಮಾರಂಭಗಳು, ಆಹ್ವಾನ ಪತ್ರಿಕೆಗಳ ಮುದ್ರಣ ಸೇರಿದಂತೆ ಹಲವು ಚಟುವಟಿಕೆಗಳು ನಡೆಯುತ್ತಿವೆ. ಆದರೆ ಧಾರ್ಮಿಕ ವ್ಯವಸ್ಥೆಯ ಘನತೆ ಮತ್ತು ಜವಾಬ್ದಾರಿಯ ಕುರಿತು ಸಮಾಜ ಗಂಭೀರವಾಗಿ ಚಿಂತಿಸಬೇಕಾಗಿದೆ.
ಜಗದ್ಗುರುಗಳಂತಹ ಅತ್ಯಂತ ಪವಿತ್ರ ಮತ್ತು ಜವಾಬ್ದಾರಿಯುತ ಸ್ಥಾನಕ್ಕೆ ಬರಲು ಕೆಲವು ಅರ್ಹತೆಗಳು, ಸಂಸ್ಕಾರ, ಪಾಂಡಿತ್ಯ, ಶಿಕ್ಷಣ ಮತ್ತು ಸೂಕ್ತ ತರಬೇತಿ ಇರಬೇಕಲ್ಲವೇ? ವ್ಯಕ್ತಿಯ ಚಾರಿತ್ರ್ಯ, ಸಾಧನೆ, ತ್ಯಾಗ, ಸೇವೆ ಮತ್ತು ಧಾರ್ಮಿಕ ಜ್ಞಾನವನ್ನು ಪರಿಗಣಿಸಬೇಕು. ಯಾರೋ ಒಬ್ಬರು ಕಾರು ನೀಡಿದರು, ಜಮೀನು ಕೊಟ್ಟರು, ಕಟ್ಟಡ ನಿರ್ಮಿಸಿಕೊಟ್ಟರು ಎಂಬ ಕಾರಣಕ್ಕೆ ಅವರನ್ನು ಜಗದ್ಗುರುಗಳೆಂದು ಘೋಷಿಸುವುದು ಸರಿಯಾದ ಕ್ರಮವಲ್ಲ.
ಜಗದ್ಗುರುಗಳ ಸ್ಥಾನವು ಹಣ, ಆಸ್ತಿ ಅಥವಾ ಕಟ್ಟಡದಿಂದ ದೊರೆಯುವ ಸ್ಥಾನವಲ್ಲ. ಅದು ತಪಸ್ಸು, ಅನುಷ್ಠಾನ, ಜ್ಞಾನ, ಸಂಸ್ಕಾರ ಮತ್ತು ಸಮಾಜಸೇವೆಯಿಂದ ಗೌರವ ಗಳಿಸಬೇಕಾದ ಅತ್ಯಂತ ಪವಿತ್ರ ಸ್ಥಾನವಾಗಿದೆ. ವ್ಯಕ್ತಿಯ ಸ್ವಂತ ಸಾಧನೆ ಮತ್ತು ಸೇವೆಯ ಆಧಾರದ ಮೇಲೆ ಅವರು ಆ ಸ್ಥಾನಕ್ಕೆ ಬಂದರೆ ಅವರನ್ನು ಸಮಾಜ ತಲೆ ಮೇಲೆ ಹೊತ್ತು ಗೌರವಿಸುತ್ತದೆ. ಈ ನಿಟ್ಟಿನಲ್ಲಿ ಧಾರ್ಮಿಕ ವ್ಯವಸ್ಥೆಯಲ್ಲಿ ಸೂಕ್ತ ಸುಧಾರಣೆ ಆಗಬೇಕಾಗಿದೆ ಎಂದು ಹೇಳಿದರು.

ನಿಮಗೆ ಇಷ್ಟವಾದ ಧಾರ್ಮಿಕ ಆಚರಣೆ ಅನುಸರಿಸಿ, ಬೇರೆಯವರನ್ನು ದ್ವೇಷಿಸಬೇಡಿ
ಯಾರಿಗಾದರೂ ನಮ್ಮ ಪರಂಪರೆಯ ಕೆಲವು ಆಚರಣೆಗಳು ಇಷ್ಟವಾಗದಿದ್ದರೆ ಅವುಗಳನ್ನು ಅನುಸರಿಸದಿರುವ ಸ್ವಾತಂತ್ರ್ಯವಿದೆ. ದೇವಸ್ಥಾನಕ್ಕೆ ಹೋಗುವುದು ಬೇಡವೆಂದರೆ ಹೋಗಬೇಡಿ. ಮದುವೆಯಲ್ಲಿ ಕೆಲವು ಆಚರಣೆಗಳನ್ನು ಮಾಡುವುದು ಇಷ್ಟವಿಲ್ಲದಿದ್ದರೆ ಮಾಡಬೇಡಿ. ಗಣಪತಿ ಪೂಜೆ, ಕುಂಕುಮ ಧಾರಣೆ ಅಥವಾ ಮನೆಯಲ್ಲಿ ದೇವರ ಮೂರ್ತಿಗಳನ್ನು ಇಟ್ಟುಕೊಳ್ಳುವುದು ಬೇಡವೆಂದರೆ ನಿಮ್ಮ ಇಷ್ಟದಂತೆ ನಡೆದುಕೊಳ್ಳಿ. ಆದರೆ ಅದಕ್ಕಾಗಿ ಬೇರೆಯವರ ಆಚರಣೆಗಳನ್ನು ಅವಹೇಳನ ಮಾಡಬೇಡಿ.
ನಮ್ಮಲ್ಲಿ ಪಾದಪೂಜೆ ಮಾಡುವ ಪದ್ಧತಿಯಿದೆ. ಕೆಲವರು ಭಕ್ತಿಯಿಂದ ಅದನ್ನು ಅನುಸರಿಸುತ್ತಾರೆ. ಅದನ್ನು ಇಷ್ಟಪಡದವರು ಅನುಸರಿಸದಿರಬಹುದು. ಆದರೆ ಆಚರಿಸುವವರನ್ನು ಗುಲಾಮರು ಎಂದು ಹೀಯಾಳಿಸುವುದು ಸರಿಯಲ್ಲ. ನಮ್ಮ ಮನೆಗಳಲ್ಲಿ, ನಮ್ಮ ಪರಂಪರೆಯಲ್ಲಿ ನಡೆದುಕೊಂಡು ಬಂದಿರುವ ಆಚರಣೆಗಳನ್ನು ನಾವು ಮುಂದುವರಿಸುತ್ತೇವೆ. ನಿಮಗೆ ಇಷ್ಟವಾದದ್ದನ್ನು ನೀವು ಅನುಸರಿಸಿ. ಪರಸ್ಪರ ಗೌರವದಿಂದ ಬದುಕುವುದನ್ನು ಕಲಿಯೋಣ ಎಂದು ಮನವಿ ಮಾಡಿದರು.
ಶಂಕರಾಚಾರ್ಯರ ಅದ್ವೈತ ತತ್ವ, ಮಧ್ವಾಚಾರ್ಯರ ದ್ವೈತ ತತ್ವ ಹಾಗೂ ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ ತತ್ವಗಳ ನಡುವೆ ಸೈದ್ಧಾಂತಿಕ ವ್ಯತ್ಯಾಸಗಳಿವೆ. ಆದರೂ ಅವರ ಅನುಯಾಯಿಗಳು ಪರಸ್ಪರ ಗೌರವದಿಂದ ಬದುಕುತ್ತಿದ್ದಾರೆ. ಜೈನ ಧರ್ಮದಲ್ಲಿಯೂ ತೇರಾಪಂಥಿ, ಶ್ವೇತಾಂಬರ, ದಿಗಂಬರ ಎಂಬ ಪಂಥಗಳಿವೆ. ಕ್ರೈಸ್ತ ಧರ್ಮದಲ್ಲಿಯೂ ಪ್ರೊಟೆಸ್ಟಂಟ್ ಮತ್ತು ಕ್ಯಾಥೋಲಿಕ್ ಪಂಥಗಳಿವೆ. ಇಷ್ಟೆಲ್ಲ ವ್ಯತ್ಯಾಸಗಳಿದ್ದರೂ ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ಎಲ್ಲರೂ ಸಹಬಾಳ್ವೆ ನಡೆಸುತ್ತಿದ್ದಾರೆ.
ದೊಡ್ಡ ಧಾರ್ಮಿಕ ಪರಂಪರೆಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಅವುಗಳನ್ನು ದೊಡ್ಡದಾಗಿಸದೆ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಮಾಡಬೇಕು. ಧರ್ಮವು ಮನುಷ್ಯರನ್ನು ಬೆಳೆಸುವ, ಒಗ್ಗೂಡಿಸುವ ಮತ್ತು ನೆಮ್ಮದಿ ನೀಡುವ ಶಕ್ತಿಯಾಗಬೇಕು ಎಂದರು.

ಅಸ್ಪೃಶ್ಯತೆ ನಿರ್ಮೂಲನೆಗೆ ಮಠಾಧೀಶರು ಮುಂಚೂಣಿಯಲ್ಲಿ ನಿಲ್ಲಬೇಕು
ವೀರಶೈವ ಪರಂಪರೆಯು ವರ್ಣಾತೀತವಾದ ಧಾರ್ಮಿಕ ಚಿಂತನೆಗೆ ಮಹತ್ವ ನೀಡಿದೆ. ಬಸವಣ್ಣನವರು ವರ್ಣಭೇದವಿಲ್ಲದ ಸಮಾನತೆಯ ಸಮಾಜದ ಕನಸು ಕಂಡಿದ್ದರು. ಆದರೆ ಇಂದಿಗೂ ಸಮಾಜದಲ್ಲಿ ಅಸ್ಪೃಶ್ಯತೆಯಂತಹ ಅಮಾನವೀಯ ಆಚರಣೆಗಳು ಮುಂದುವರಿದಿರುವುದು ನೋವಿನ ಸಂಗತಿಯಾಗಿದೆ.
ಇತ್ತೀಚೆಗೆ ಶೋರಾಪುರ ತಾಲೂಕಿನ ಒಂದು ಗ್ರಾಮದಲ್ಲಿ ಲಿಂಗಾಯತ ಸಮುದಾಯದವರು ದಲಿತರಿಗೆ ಹೋಟೆಲ್ ಪ್ರವೇಶ ನಿರಾಕರಿಸಿದ್ದಾರೆ ಎಂಬ ದೂರು ಬಂದಿತ್ತು. ಇಂತಹ ಘಟನೆಗಳು ನಡೆಯಬಾರದು. ಪ್ರತಿಯೊಬ್ಬ ಮನುಷ್ಯನಿಗೂ ಸಮಾನ ಗೌರವ ಮತ್ತು ಹಕ್ಕು ದೊರೆಯಬೇಕು. ದಲಿತರು, ಹಿಂದುಳಿದವರು ಸೇರಿದಂತೆ ಸಮಾಜದ ಎಲ್ಲ ವರ್ಗದವರನ್ನು ಗೌರವದಿಂದ ನಡೆಸಿಕೊಳ್ಳಬೇಕು.
ಶಿವಾಚಾರ್ಯರು ಮತ್ತು ವಿರಕ್ತ ಮಠಗಳ ಸ್ವಾಮೀಜಿಗಳು ತಮ್ಮ ಧಾರ್ಮಿಕ ಪ್ರವಚನಗಳಲ್ಲಿ ಸಮಾನತೆ, ಮಾನವೀಯತೆ ಮತ್ತು ಕಾಯಕದ ಮಹತ್ವವನ್ನು ನಿರಂತರವಾಗಿ ಬೋಧಿಸಬೇಕು. ಯಾರನ್ನೂ ದೇವಸ್ಥಾನ, ಹೋಟೆಲ್, ಬಾವಿ ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ದೂರವಿಡಬಾರದು ಎಂಬ ಸಂದೇಶವನ್ನು ಜನರಿಗೆ ತಲುಪಿಸಬೇಕು.
ಇಂದಿನಿಂದ ಯಾವುದೇ ವೀರಶೈವ ಅಥವಾ ಲಿಂಗಾಯತರ ವಿರುದ್ಧ ದಲಿತರಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿಬರದಂತೆ ಸಮಾಜವನ್ನು ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಎಲ್ಲ ಮಠಾಧೀಶರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ನಾವು ಬಸವಣ್ಣನವರ ಮತ್ತು ಪಂಚಾಚಾರ್ಯರ ನಿಜವಾದ ಅನುಯಾಯಿಗಳು ಎಂಬುದನ್ನು ಸಾಬೀತುಪಡಿಸಲು ಸಾಧ್ಯ ಎಂದು ಹೇಳಿದರು.

ಅಸ್ಪೃಶ್ಯತೆ ಆರು ತಿಂಗಳಲ್ಲಿ ನಿರ್ಮೂಲನೆ ಮಾಡುವ ಶಕ್ತಿ ಮಠಗಳಿಗಿದೆ
ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಸಂದರ್ಭದಲ್ಲಿ ಸುಮಾರು 800 ವರ್ಷಗಳ ಹಿಂದೆ ಬಸವಣ್ಣನವರ ಪ್ರಭಾವಕ್ಕೆ ಒಳಗಾದ ಸಮಗಾರ ಸಮುದಾಯದ ಸುಮಾರು 15 ಸಾವಿರ ಜನರು ತಮ್ಮನ್ನು ‘ಲಿಂಗಾಯತ ಮಚ್ಚಿಗಾರರು’ ಎಂದು ಗುರುತಿಸಿಕೊಂಡಿರುವುದನ್ನು ಉಲ್ಲೇಖಿಸಿದ ಅವರು, ಧರ್ಮ ಎನ್ನುವುದು ನಂಬಿಕೆ ಮತ್ತು ಆಚರಣೆಗೆ ಸಂಬಂಧಿಸಿದ ವಿಷಯ. ಅದರಲ್ಲಿ ಯಾರ ಮೇಲೂ ಒತ್ತಾಯ ಹೇರುವುದಕ್ಕೆ ಸಾಧ್ಯವಿಲ್ಲ ಎಂದರು.
ನಮ್ಮ ಮಠಗಳು ನಿಜವಾದ ಸಾಮಾಜಿಕ ಬದಲಾವಣೆಯ ಸಂಕಲ್ಪದೊಂದಿಗೆ ಕಾರ್ಯಪ್ರವೃತ್ತವಾದರೆ ಕರ್ನಾಟಕದಲ್ಲಿ ಕೇವಲ ಆರು ತಿಂಗಳಲ್ಲಿಯೇ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡುವಷ್ಟು ಶಕ್ತಿ ಅವುಗಳಿಗಿದೆ. ಅದಕ್ಕೆ ಬೇಕಾಗಿರುವುದು ದೃಢ ಸಂಕಲ್ಪ ಮತ್ತು ನಿರಂತರ ಪ್ರಯತ್ನ.
ಮಠದ ಶ್ರೇಷ್ಠತೆ ದೊಡ್ಡ ಕಟ್ಟಡ, ಶಿಕ್ಷಣ ಸಂಸ್ಥೆ, ಹಣಕಾಸಿನ ಸಂಪತ್ತು ಅಥವಾ ಇನ್ನೋವಾ, ಬೆಂಜ್ ಕಾರುಗಳಿಂದ ನಿರ್ಧಾರವಾಗುವುದಿಲ್ಲ. ಸ್ವಾಮೀಜಿಗಳ ತಪಃಶಕ್ತಿ, ಪೂಜೆ, ಅನುಷ್ಠಾನ, ಸರಳತೆ ಮತ್ತು ಭಕ್ತರ ಮೇಲಿನ ಕಾಳಜಿಯಿಂದ ಮಠದ ಗೌರವ ಹೆಚ್ಚುತ್ತದೆ.
ಸಿದ್ಧೇಶ್ವರ ಸ್ವಾಮೀಜಿ ಮತ್ತು ಶಿವಕುಮಾರ ಸ್ವಾಮೀಜಿಯವರನ್ನು ಇಂದಿಗೂ ಜನರು ಗೌರವದಿಂದ ಸ್ಮರಿಸುತ್ತಾರೆ. ಅದಕ್ಕೆ ಕಾರಣ ಅವರು ಹೊಂದಿದ್ದ ಸೇವಾ ಮನೋಭಾವ, ತ್ಯಾಗ, ಸರಳತೆ ಮತ್ತು ಸಾಮಾಜಿಕ ಕಳಕಳಿ. ಒಬ್ಬ ವ್ಯಕ್ತಿ ದೊಡ್ಡವನಾಗುವುದು ಆಸ್ತಿ ಮತ್ತು ಅಧಿಕಾರದಿಂದಲ್ಲ, ಜನರಿಗಾಗಿ ಮಾಡಿದ ಸೇವೆಯಿಂದ ಎಂದು ತಿಳಿಸಿದರು.

ಸಮಾಜದ ನಿಜವಾದ ಸವಾಲುಗಳ ವಿರುದ್ಧ ಹೋರಾಡೋಣ
ವೀರಶೈವ–ಲಿಂಗಾಯತ ಪರಂಪರೆಯ ತತ್ವಗಳಲ್ಲಿ ಸತ್ಯ ಮತ್ತು ಸತ್ವವಿದೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಸಮಾಜಕ್ಕೆ ಪರಿಚಯಿಸಬೇಕು. ಹಿಂದೂ ಎಂಬುದು ವಿಶಾಲವಾದ ಸಾಂಸ್ಕೃತಿಕ ಪರಂಪರೆಯನ್ನೂ ಒಳಗೊಂಡಿದೆ. 1956ರಲ್ಲಿ ನೆಹರೂ ಅವರ ಕಾಲದಲ್ಲಿ ಜಾರಿಗೆ ಬಂದ ಹಿಂದೂ ವೈಯಕ್ತಿಕ ಕಾನೂನುಗಳ ವ್ಯಾಪ್ತಿಯಲ್ಲಿ ವೀರಶೈವ ಮತ್ತು ಲಿಂಗಾಯತ ಸಮುದಾಯಗಳನ್ನೂ ಒಳಗೊಳ್ಳಲಾಗಿದೆ. ಈ ವಿಚಾರಗಳನ್ನು ಪದೇಪದೇ ವಿವಾದದ ಕೇಂದ್ರವಾಗಿಸುವುದಕ್ಕಿಂತ ಸಮಾಜದ ನೈಜ ಸಮಸ್ಯೆಗಳ ಕಡೆಗೆ ಗಮನ ಹರಿಸಬೇಕು ಎಂದರು.
ನಮ್ಮ ಮುಂದಿರುವ ಪ್ರಮುಖ ಸವಾಲುಗಳು ಅಜ್ಞಾನ, ಅನಕ್ಷರತೆ, ಬಡತನ, ನಿರುದ್ಯೋಗ ಮತ್ತು ಅಸ್ಪೃಶ್ಯತೆ. ಇವುಗಳನ್ನು ನಿವಾರಿಸಲು ಸಮಾಜದ ಎಲ್ಲ ವರ್ಗದವರು ಒಂದಾಗಿ ಕೆಲಸ ಮಾಡಬೇಕು. ಪರಸ್ಪರ ಕೆಸರೆರಚಾಟದಲ್ಲಿ ಅಮೂಲ್ಯ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳಬಾರದು.
ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿನಲ್ಲಿ ಹೇಳಿದಂತೆ, ಸಮಾಜದ ಕೆಲವರನ್ನು ದೂರವಿಟ್ಟ ಪರಿಣಾಮ ನಮ್ಮ ದೇಶ ಪರಕೀಯರ ಆಡಳಿತಕ್ಕೆ ಒಳಗಾಗಬೇಕಾಯಿತು ಎಂಬ ಇತಿಹಾಸದಿಂದ ನಾವು ಪಾಠ ಕಲಿಯಬೇಕು. ಸಮಾಜದಲ್ಲಿ ಯಾರನ್ನೂ ಹೊರಗಿಡದೆ ಎಲ್ಲರನ್ನೂ ಒಳಗೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು.
ವೀರಶೈವ ಪಂಚಾಚಾರ್ಯರು ನೀಡಿದ ‘ಮಾನವ ಧರ್ಮಕ್ಕೆ ಜಯವಾಗಲಿ’ ಎಂಬ ಘೋಷಣೆಯ ಆಶಯವೂ ಮಾನವರೆಲ್ಲರೂ ಸುಖ, ಸಂತೋಷ ಮತ್ತು ನೆಮ್ಮದಿಯಿಂದ ಬದುಕಬೇಕು ಎಂಬುದೇ ಆಗಿದೆ. ಬಸವಣ್ಣನವರು ಸಾರಿದ ಸಮಾನತೆ ಮತ್ತು ಮಾನವೀಯತೆಯ ತತ್ವಗಳೂ ಇದೇ ಸಂದೇಶವನ್ನು ನೀಡುತ್ತವೆ.
ಹೀಗಾಗಿ ವೀರಶೈವ–ಲಿಂಗಾಯತ ಸಮಾಜದ ಎಲ್ಲರೂ ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯಿಂದ ಬದುಕಬೇಕು. ‘ಇವನು ನಮ್ಮವ, ನಮ್ಮವ’ ಎಂಬ ಬಸವಣ್ಣನವರ ವಿಶಾಲ ಮನೋಭಾವದಿಂದ ಎಲ್ಲರನ್ನೂ ಒಳಗೊಳ್ಳಬೇಕು. ಸಮಾಜವನ್ನು ಒಡೆಯುವ ಬದಲು ಒಗ್ಗೂಡಿಸುವ, ದ್ವೇಷ ಬೆಳೆಸುವ ಬದಲು ಪ್ರೀತಿ ಹಂಚುವ, ವಿವಾದ ಮಾಡುವ ಬದಲು ಬಡತನ, ಅನಕ್ಷರತೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕು ಎಂದು ಶಂಕರ್ ಮಹಾದೇವ ಬಿದರಿ ಕರೆ ನೀಡಿದರು.






