ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಭೇದಗಳ ಗೋಡೆ ಕೆಡವಿ, ಮಾನವೀಯತೆಯ ಸೇತುವೆ ನಿರ್ಮಿಸುವುದೇ ಬಸವಣ್ಣನವರ ಸಮನ್ವಯ ದೃಷ್ಟಿ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

On: November 24, 2026 3:46 PM
Follow Us:

ಶಿವಮೊಗ್ಗ: ಸಮಾಜವನ್ನು ಒಡೆಯಲು ಜಾತಿ, ಧರ್ಮ, ಅಂತಸ್ತು, ಲಿಂಗ, ವೃತ್ತಿ ಹೀಗೆ ನೂರಾರು ಕಾರಣಗಳು ಸಿಗುತ್ತವೆ. ಆದರೆ ಮನುಷ್ಯರನ್ನು ಒಂದಾಗಿಸಲು ಇರುವ ಏಕೈಕ ಬಲವಾದ ಕಾರಣವೆಂದರೆ ನಾವೆಲ್ಲರೂ ಮನುಷ್ಯರು ಎಂಬ ಅರಿವು. ಮನುಷ್ಯನನ್ನು ಮನುಷ್ಯನಾಗಿ ಕಾಣುವ ದೃಷ್ಟಿ ಬೆಳೆದಾಗಲೇ ಸಮಾಜದಲ್ಲಿ ನಿಜವಾದ ಸಮಾನತೆ, ಸೌಹಾರ್ದತೆ ಮತ್ತು ಸಮನ್ವಯ ಸಾಧ್ಯ. ಕಾಯಕ ಮಾಡುವ ಪ್ರತಿಯೊಬ್ಬರಿಗೂ ಗೌರವ ಸಿಗಬೇಕು, ಹೆಣ್ಣು–ಗಂಡು ಎಂಬ ಭೇದಭಾವ ಅಳಿಯಬೇಕು, ರೈತನೆಂಬ ಹೆಮ್ಮೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಇಂತಹ ವಿಶಾಲ ಮಾನವೀಯ ಚಿಂತನೆಯ ಮೂಲಕ ಜಗತ್ತಿಗೆ ಸಮನ್ವಯದ ಸಂದೇಶ ಸಾರಿದವರು ವಿಶ್ವಗುರು ಬಸವಣ್ಣನವರು ಎಂದು ಬಸವಕೇಂದ್ರದ ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಶಿವಮೊಗ್ಗದ ತರಳಬಾಳು ಬಡಾವಣೆಯ ಶುಭಶ್ರೀ ಕಲ್ಯಾಣ ಮಂದಿರದ ಆವರಣದಲ್ಲಿ ತರಳಬಾಳು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ.), ಬಸವಕೇಂದ್ರ, ಶಿವಮೊಗ್ಗ ಹಾಗೂ ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು ಆಶ್ರಯದಲ್ಲಿ ಆಯೋಜಿಸಿದ್ದ 20ನೇ ವರ್ಷದ ಚಿಂತನ ಕಾರ್ತಿಕದ ಹತ್ತನೇ ದಿನದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಆಹ್ವಾನ ಪತ್ರಿಕೆ ಗಮನಿಸಿದಾಗ ತರಳಬಾಳು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ತರಳಬಾಳು ಮಹಿಳಾ ವೇದಿಕೆಯ ಉದ್ಘಾಟನೆಯೂ ಇದೇ ವೇದಿಕೆಯಲ್ಲಿ ನಡೆಯುತ್ತಿರುವುದು ಸಂತಸ ತಂದಿತು. ನಮ್ಮ ತಂದೆಯವರು ಆಗಾಗ ಹೇಳುತ್ತಿದ್ದ ‘ಸ್ವಾಮಿಕಾರ್ಯ ಸ್ವಕಾರ್ಯ’ ಎಂಬ ಮಾತು ಈ ಸಂದರ್ಭದಲ್ಲಿ ನೆನಪಾಯಿತು. ಚಿಂತನ ಕಾರ್ತಿಕ ಸ್ವಾಮಿಕಾರ್ಯವಾದರೆ, ಬಡಾವಣೆ ನಿವಾಸಿಗಳ ಸಂಘ ಮತ್ತು ಮಹಿಳಾ ವೇದಿಕೆಯ ಉದ್ಘಾಟನೆ ಸ್ವಕಾರ್ಯವಾಗಿತ್ತು. ಆದರೆ ಇಲ್ಲಿನ ಜನರ ಒಗ್ಗಟ್ಟು, ಪರಸ್ಪರ ಸಹಕಾರ ಮತ್ತು ಉತ್ಸಾಹವನ್ನು ನೋಡಿದಾಗ ಎರಡೂ ಕಾರ್ಯಗಳು ಒಂದೇ ಉದ್ದೇಶದ ಭಾಗವಾಗಿ ಕಂಡವು. ಹೀಗಾಗಿ ಇದು ಪ್ರತ್ಯೇಕ ಕಾರ್ಯಗಳಲ್ಲ, ಎರಡೂ ಸ್ವಾಮಿಕಾರ್ಯವೇ ಆಗಿವೆ ಎಂಬ ಭಾವನೆ ಮೂಡಿತು ಎಂದು ಹರ್ಷ ವ್ಯಕ್ತಪಡಿಸಿದರು.

ಹೊಸದಾಗಿ ಜವಾಬ್ದಾರಿ ವಹಿಸಿಕೊಂಡಿರುವ ಎರಡೂ ಸಂಘಗಳ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ನಿರೂಪಕರಾದ ರಂಗರಾಜು ಅವರು ಅಧಿಕಾರ ಸ್ವೀಕರಿಸಿದ ಪದಾಧಿಕಾರಿಗಳಿಗೆ ನೀಡಿದ ಸಂದೇಶವನ್ನು ವಿಶೇಷವಾಗಿ ಮೆಚ್ಚಿದರು.

‘ನಿಮ್ಮ ಹೆಗಲಿಗೆ ಹಾಕಿರುವ ಶಾಲು ಅಧಿಕಾರದ ಸಂಕೇತವಲ್ಲ, ಅದು ಜವಾಬ್ದಾರಿಯ ಸಂಕೇತ‘ ಎಂಬ ಮಾತು ಸಂಘಟನೆಯ ಮೂಲ ಆಶಯವನ್ನೇ ಪ್ರತಿಬಿಂಬಿಸುತ್ತದೆ. ಇಂದಿನ ದಿನಗಳಲ್ಲಿ ಅನೇಕರು ಸೇವೆಗಿಂತ ಅಧಿಕಾರಕ್ಕೆ ಹೆಚ್ಚು ಮಹತ್ವ ನೀಡುವ ಸಂದರ್ಭಗಳಿವೆ. ಆದರೆ ಸಂಘದ ಮೊದಲ ಹೆಜ್ಜೆಯಲ್ಲಿಯೇ ಅಧಿಕಾರವೆಂದರೆ ಆಳುವ ಅವಕಾಶವಲ್ಲ, ಸಮಾಜಕ್ಕಾಗಿ ದುಡಿಯುವ ಹೊಣೆಗಾರಿಕೆ ಎಂಬ ಅರಿವು ಮೂಡಿಸಿರುವುದು ಶ್ಲಾಘನೀಯ. ಈ ಜವಾಬ್ದಾರಿಯನ್ನು ಎಲ್ಲ ಪದಾಧಿಕಾರಿಗಳು ಸಮರ್ಥವಾಗಿ ನಿರ್ವಹಿಸಲಿ ಎಂದು ಬಸವಕೇಂದ್ರ ಶ್ರೀಗಳು ಆಶಿಸಿದರು.

ತರಳಬಾಳು ಬಡಾವಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮತ್ತು ಗುಣಮಟ್ಟದಿಂದ ನಿರ್ಮಿಸಿರುವ ಡಾ. ಎಚ್.ಎಸ್. ಷಣ್ಮುಖಪ್ಪ ಹಾಗೂ ಅವರ ತಂಡದ ಕಾರ್ಯವನ್ನು ಬಸವಕೇಂದ್ರ ಶ್ರೀಗಳು ಪ್ರಶಂಸಿಸಿದರು.

ಈ ಬಡಾವಣೆಯಲ್ಲಿ ಒಂದು ನಿವೇಶನ ಕೊಡಿಸಬಹುದೇ ಎಂದು ಕೆಲವರು ತಮ್ಮ ಬಳಿ ಕೇಳಿದ್ದ ಪ್ರಸಂಗವನ್ನು ಹಾಸ್ಯಭರಿತವಾಗಿ ಸ್ಮರಿಸಿದ ಅವರು, ಸ್ವಾಮಿಗಳು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಇಳಿದರೆಂಬ ಅನುಮಾನ ಮೂಡಬಾರದು ಎಂಬ ಕಾರಣಕ್ಕೆ ತಾವು ಯಾರಿಗೂ ಶಿಫಾರಸು ಮಾಡಲು ಹೋಗಲಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ನಿವೇಶನ ಕೊಡಿಸುವ ವಿಚಾರದಲ್ಲಿ ಕಮಿಷನ್ ಎಷ್ಟು ಸಿಗುತ್ತದೆ ಎಂದು ಯಾರಾದರೂ ಕೇಳಿದರೆ ಏನು ಉತ್ತರಿಸುವುದು ಎಂಬ ತಮಾಷೆಯ ಮಾತಿನ ಮೂಲಕ ಸಭೆಯಲ್ಲಿ ನಗೆ ಮೂಡಿಸಿದರು.

ಆದರೆ ಇಂತಹ ಉತ್ತಮ ಬಡಾವಣೆ ನಿರ್ಮಾಣವಾಗಲು ಶ್ರಮಿಸಿದ ತಂಡದ ಜೊತೆಗೆ, ತಮ್ಮ ಫಲವತ್ತಾದ ಜಮೀನುಗಳನ್ನು ಬಡಾವಣೆ ನಿರ್ಮಾಣಕ್ಕಾಗಿ ನೀಡಿದ ಮೂಲ ಭೂಮಾಲೀಕರನ್ನೂ ಮರೆಯಬಾರದು. ತುಂಗಾ ನದಿಯ ನೀರಿನ ಸೌಲಭ್ಯ ಹೊಂದಿರುವ ಜಮೀನುಗಳಲ್ಲಿ ಅಡಿಕೆ, ಬಾಳೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ವರ್ಷವಿಡೀ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಅವಕಾಶವಿದ್ದರೂ, ಸಮಾಜದ ಅಭಿವೃದ್ಧಿಯ ದೃಷ್ಟಿಯಿಂದ ಜಮೀನುಗಳನ್ನು ನೀಡಿರುವ ಗ್ರಾಮಸ್ಥರ ಕೊಡುಗೆ ದೊಡ್ಡದು. ಬಡಾವಣೆಯ ನಿವಾಸಿಗಳು ತಮ್ಮ ಜಮೀನಿನ ಮೂಲ ಮಾಲೀಕರಿಗೆ ಸದಾ ಕೃತಜ್ಞರಾಗಿರಬೇಕು ಎಂದರು.

ಇಂದು ಗ್ರಾಮೀಣ ಪ್ರದೇಶಗಳಲ್ಲಿ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಈ ಸಮಸ್ಯೆ ಗ್ರಾಮೀಣ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ನಗರ ಪ್ರದೇಶಗಳಲ್ಲಿಯೂ ಉತ್ತಮ ಶಿಕ್ಷಣ ಪಡೆದ, ಉದ್ಯೋಗದಲ್ಲಿರುವ, ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಅನೇಕ ಯುವಕರಿಗೆ ವಿವಾಹವಾಗಲು ಹೆಣ್ಣು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಗಳ ವ್ಯಾಪ್ತಿ ದೊಡ್ಡದಿರುವುದರಿಂದ ಈ ಸಮಸ್ಯೆ ಅಷ್ಟಾಗಿ ಗೊತ್ತಾಗುವುದಿಲ್ಲ ಅಷ್ಟೇ ಎಂದು ಹೇಳಿದರು.

ಸುಮಾರು ಎರಡು ದಶಕಗಳ ಹಿಂದೆ ಹೆಣ್ಣು ಮಗು ಎಂಬ ಕಾರಣಕ್ಕೆ ಗರ್ಭದಲ್ಲಿಯೇ ಭ್ರೂಣ ಹತ್ಯೆ ಮಾಡಿಸಿದ ಪರಿಣಾಮವನ್ನು ಇಂದು ಸಮಾಜ ಅನುಭವಿಸುತ್ತಿದೆ. ಹೆಣ್ಣು ಮಗು ಹುಟ್ಟುತ್ತದೆ ಎಂಬ ಕಾರಣಕ್ಕೆ ಗರ್ಭಪಾತ ಮಾಡಿಸಿದ ಸಮಾಜವೇ ಇಂದು ಹೆಣ್ಣು ಮಕ್ಕಳ ಕೊರತೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ. ಅಂದು ಮಾಡಿದ ತಪ್ಪಿನ ಪರಿಣಾಮವನ್ನು ಇಂದು ಯಾವುದೇ ತಪ್ಪು ಮಾಡದ ಯುವಕರು ಅನುಭವಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹೆಣ್ಣು ಮಗು ಹುಟ್ಟಿದರೆ ಏನಾಯಿತು? ಗಂಡು ಮಗು ಹುಟ್ಟಿದರೆ ಏನಾಯಿತು? ಮಗುವಿನ ಜನನವೇ ಸಂಭ್ರಮದ ಸಂಗತಿ. ದೇವರು ನೀಡಿದ ಮಗುವನ್ನು ಪ್ರಸಾದವೆಂದು ಸ್ವೀಕರಿಸಿ, ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಿ ಬೆಳೆಸಬೇಕು. ಹೆಣ್ಣು–ಗಂಡು ಎಂಬ ಭೇದದ ಮನಸ್ಥಿತಿಯಿಂದ ಸಮಾಜ ಹೊರಬರಬೇಕು ಎಂದು ಬಸವಕೇಂದ್ರ ಶ್ರೀಗಳು ಕರೆ ನೀಡಿದರು.

ಇಂದು ಗಂಡು ಮಕ್ಕಳು ಉದ್ಯೋಗ, ಶಿಕ್ಷಣಕ್ಕಾಗಿ ಬೆಂಗಳೂರು, ಮುಂಬೈ, ಅಮೆರಿಕ ಸೇರಿದಂತೆ ವಿವಿಧೆಡೆ ನೆಲೆಸುತ್ತಿದ್ದಾರೆ. ವಯಸ್ಸಾದ ತಂದೆ-ತಾಯಿಯರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅನೇಕ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳು ವಹಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಹೆಣ್ಣು ಮಗು ಮತ್ತು ಗಂಡು ಮಗುವಿನ ನಡುವೆ ವ್ಯತ್ಯಾಸ ಮಾಡುವುದಕ್ಕೆ ಯಾವುದೇ ಅರ್ಥವಿಲ್ಲ. ಮಕ್ಕಳ ಸಂಖ್ಯೆಗಿಂತ ಅವರು ಬೆಳೆಸಿಕೊಳ್ಳುವ ಸಂಸ್ಕಾರ, ಪ್ರೀತಿ ಮತ್ತು ಜವಾಬ್ದಾರಿಯೇ ಮುಖ್ಯ ಎಂದು ಹೇಳಿದರು.

ರೈತರಿಗೆ ಹೆಣ್ಣು ಕೊಡುವುದಿಲ್ಲ ಎಂಬ ಮನೋಭಾವದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಸವಕೇಂದ್ರ ಶ್ರೀಗಳು, ಕೃಷಿ ಕಾಯಕದ ಬಗ್ಗೆ ಸಮಾಜದಲ್ಲಿ ಕೀಳರಿಮೆ ಬೆಳೆಸಿಕೊಂಡಿರುವುದಕ್ಕೆ ರೈತರೂ ಒಂದು ರೀತಿಯಲ್ಲಿ ಕಾರಣರಾಗಿದ್ದಾರೆ ಎಂದು ಹೇಳಿದರು.

ನಾಲ್ಕು ಗಂಡು ಮಕ್ಕಳಿರುವ ಕುಟುಂಬದಲ್ಲಿ ಒಬ್ಬ ಇಂಜಿನಿಯರ್, ಮತ್ತೊಬ್ಬ ಶಿಕ್ಷಕ, ಇನ್ನೊಬ್ಬ ವೈದ್ಯ ಎಂದು ಹೆಮ್ಮೆಯಿಂದ ಪರಿಚಯಿಸುವ ಪೋಷಕರು, ಕೃಷಿ ಮಾಡುವ ಮಗನ ವಿಚಾರ ಬಂದಾಗ ಮಾತ್ರ ‘ಅವನು ಮನೆಯ ಹತ್ತಿರ ಇರುತ್ತಾನೆ‘ ಎಂದು ಹೇಳುತ್ತಾರೆ. ಕೃಷಿ ಮಾಡುವುದನ್ನು ವೃತ್ತಿಯಾಗಿ ಹೆಮ್ಮೆಯಿಂದ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಇದು ಯಾವ ಮನಸ್ಥಿತಿ? ಮನೆಯಲ್ಲಿದ್ದು ಕೃಷಿ ಮಾಡುವ ಮಗನಿಗೆ ಈ ಮಾತುಗಳಿಂದ ಯಾವ ಸಂದೇಶ ಹೋಗುತ್ತದೆ ಎಂದು ಪ್ರಶ್ನಿಸಿದರು.

ನನ್ನ ಮಗ ಶಿಕ್ಷಕ, ನನ್ನ ಮಗ ಇಂಜಿನಿಯರ್, ನನ್ನ ಮಗ ವೈದ್ಯ ಎಂದು ಹೇಳುವಂತೆಯೇ, ಮತ್ತೊಬ್ಬ ಮಗ ಸಮಾಜಕ್ಕೆ ಅನ್ನ ನೀಡುವ ದವಸಧಾನ್ಯಗಳನ್ನು ಬೆಳೆಯುವ ರೈತ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ನಿಮ್ಮ ಕಾಯಕದ ಬಗ್ಗೆ ಮೊದಲು ನೀವೇ ಗೌರವ ಬೆಳೆಸಿಕೊಳ್ಳಿ. ರೈತನಾಗಿರುವುದು ಕೀಳಲ್ಲ, ಅದು ಸಮಾಜದ ಬದುಕಿಗೆ ಆಧಾರವಾಗಿರುವ ಅತ್ಯಂತ ಮಹತ್ವದ ವೃತ್ತಿ ಎಂಬ ಅರಿವು ಮೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಒಬ್ಬ ಇಂಜಿನಿಯರ್ ಇಲ್ಲದಿದ್ದರೂ ಜಗತ್ತು ನಡೆಯಬಹುದು, ವೈದ್ಯರಿಲ್ಲದಿದ್ದರೂ ಪರ್ಯಾಯ ವ್ಯವಸ್ಥೆ ಕಲ್ಪಿಸಬಹುದು. ಆದರೆ ರೈತನೇ ಇಲ್ಲದಿದ್ದರೆ ಜಗತ್ತಿನ ಬದುಕು ಸಾಧ್ಯವೇ ಇಲ್ಲ. ಎಲ್ಲ ವೃತ್ತಿಗಳಲ್ಲಿ ದುಡಿಯುವವರು ತಮ್ಮ ದುಡಿಮೆಯ ಹಣದಿಂದ ಖರೀದಿಸುವುದು ರೈತ ಬೆಳೆದ ಅನ್ನವನ್ನೇ. ಹೀಗಿರುವಾಗ ಅನ್ನ ನೀಡುವ ರೈತನ ವೃತ್ತಿಯನ್ನು ಕೀಳಾಗಿ ನೋಡುವುದು ಎಷ್ಟು ದೊಡ್ಡ ತಪ್ಪು ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು ಎಂದರು.

ಹಿಂದೆ ಸರ್ಕಾರಿ ನೌಕರಿ ಮಾಡುವವರು ತಮ್ಮ ಬಳಿ ಜಮೀನು ಹೊಂದಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಕೃಷಿ ಕುಟುಂಬದ ಸಂಬಂಧಕ್ಕೆ ವಿಶೇಷ ಗೌರವವಿತ್ತು. ಕಾಲಕ್ರಮೇಣ ಆ ಗೌರವ ಕಡಿಮೆಯಾಗಿ ರೈತ ಯುವಕರನ್ನು ವಿವಾಹದ ಸಂದರ್ಭದಲ್ಲಿ ಕಡೆಗಣಿಸುವ ಮನಸ್ಥಿತಿ ಬೆಳೆದಿದೆ. ಇದನ್ನು ಬದಲಾಯಿಸಬೇಕಾದರೆ ರೈತರು ಮೊದಲು ತಮ್ಮ ಕಾಯಕವನ್ನು ಗೌರವದಿಂದ ಪರಿಚಯಿಸಿಕೊಳ್ಳಬೇಕು. ಕೃಷಿ, ಪಶುಸಂಗೋಪನೆ ಸೇರಿದಂತೆ ಯಾವುದೇ ಶ್ರಮದಾಯಕ ವೃತ್ತಿಯೂ ಕೀಳಲ್ಲ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶ್ರೀಗಳು ಕರೆ ನೀಡಿದರು.

ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ಹರ್ಷ ಕಾಮತ್ ಅವರ ವ್ಯಕ್ತಿತ್ವವನ್ನು ಬಸವಕೇಂದ್ರ ಶ್ರೀಗಳು ಮುಕ್ತವಾಗಿ ಪ್ರಶಂಸಿಸಿದರು. ಶಿವಮೊಗ್ಗದ ಸಾಂಸ್ಕೃತಿಕ ಮತ್ತು ಸಾಮಾಜಿಕ ವಲಯದಲ್ಲಿ ಕಾಮತ್ ಕುಟುಂಬಕ್ಕೆ ವಿಶಿಷ್ಟ ಸ್ಥಾನವಿದೆ. ಉದ್ಯಮದಲ್ಲಿ ಯಶಸ್ಸು, ಆರ್ಥಿಕ ಸಮೃದ್ಧಿ ಮತ್ತು ಸಾಧನೆಗಳಿದ್ದರೂ ಅಹಂಕಾರವಿಲ್ಲದೆ ಎಲ್ಲರೊಂದಿಗೆ ಬೆರೆತು, ಸಾಮಾಜಿಕ ಸಂಘಟನೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಹರ್ಷ ಕಾಮತ್ ಅವರ ಸರಳತೆ ಮೆಚ್ಚುವಂತಹದ್ದು ಎಂದರು.

ಬಸವಣ್ಣನವರ ಕುರಿತು ಅವರು ನೀಡಿದ ‘ಅಸಂಗತ ವಿಷಯಗಳ ಅಸ್ತಂಗತಗೊಳಿಸಿದ ಬಸವಣ್ಣ‘ ಎಂಬ ಶೀರ್ಷಿಕೆಯನ್ನು ವಿಶೇಷವಾಗಿ ಉಲ್ಲೇಖಿಸಿದರು. ಅಸಂಗತವೆಂದರೆ ಅರ್ಥಹೀನವಾದ, ಮನುಷ್ಯರ ನಡುವೆ ಅಸಮಾನತೆ ಮತ್ತು ಅಗೌರವವನ್ನು ಸೃಷ್ಟಿಸುವ ವಿಚಾರಗಳು. ಜಾತಿ, ವರ್ಗ, ಧಾರ್ಮಿಕ ಭೇದಭಾವಗಳನ್ನು ಮೀರಿ ಎಲ್ಲರಿಗೂ ಸಮಾನ ಅವಕಾಶ ಮತ್ತು ಗೌರವ ಸಿಗಬೇಕು ಎಂದು ಹೋರಾಡಿದ ಬಸವಣ್ಣನವರ ಚಿಂತನೆಗೆ ಈ ಶೀರ್ಷಿಕೆ ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.

ಖ್ಯಾತ ವಾಗ್ಮಿ ಜಿ.ಎಸ್. ನಟೇಶ್ ಅವರು ‘ಬಸವಣ್ಣನವರ ಸಮನ್ವಯ ದೃಷ್ಟಿ’ ಕುರಿತು ನೀಡಿದ ಉಪನ್ಯಾಸವನ್ನು ಬಸವಕೇಂದ್ರ ಶ್ರೀಗಳು ಪ್ರಶಂಸಿಸಿದರು.

ಸಮನ್ವಯವೆಂದರೆ ಭಿನ್ನತೆಗಳನ್ನು ಮೀರಿ ಒಂದಾಗುವ ಮನೋಭಾವ. ಭಿನ್ನತೆಗಳು ಮನುಷ್ಯರನ್ನು ದೂರ ಮಾಡುತ್ತವೆ; ಸಮನ್ವಯ ಅವರನ್ನು ಹತ್ತಿರ ತರುತ್ತದೆ. ಈ ವಿಚಾರವನ್ನು ಬಸವಣ್ಣನವರ ವಚನ ಅತ್ಯಂತ ಪರಿಣಾಮಕಾರಿಯಾಗಿ ಸಾರುತ್ತದೆ ಎಂದು ವಿವರಿಸಿದರು.

‘ನೆಲನೊಂದೆ ಹೊಲಗೇರಿ-ಶಿವಾಲಯಕ್ಕೆ;
ಜಲವೊಂದೆ ಶೌಚಾಚಮನಕ್ಕೆ;
ಕುಲವೊಂದೆ ತನ್ನ ತಾನರಿದವಂಗೆ;
ಫಲವೊಂದೆ ಷಡುದರುಶನ ಮುಕ್ತಿಗೆ;
ನಿಲವೊಂದೆ, ಕೂಡಲಸಂಗಮದೇವಾ, ನಿಮ್ಮನರಿದವಂಗೆ.’

ಎಂಬ ವಚನವನ್ನು ಉಲ್ಲೇಖಿಸಿ, ಭೂಮಿ ಎಲ್ಲರಿಗೂ ಒಂದೇ. ಅದೇ ಭೂಮಿಯ ಮೇಲೆ ದೇವಸ್ಥಾನ ನಿರ್ಮಿಸಿದರೆ ಶಿವಾಲಯವಾಗುತ್ತದೆ, ಬೇರೆ ಉದ್ದೇಶಕ್ಕೆ ಬಳಸಿದರೆ ಬೇರೆ ರೂಪ ಪಡೆಯುತ್ತದೆ. ಆದರೆ ಭೂಮಿಯ ಸ್ವರೂಪ ಬದಲಾಗುವುದಿಲ್ಲ. ಅದೇ ರೀತಿ ನೀರು ಎಲ್ಲ ಬಳಕೆಗಳಲ್ಲಿಯೂ ಒಂದೇ. ಅದರ ಮೂಲಭೂತ ಸ್ವರೂಪದಲ್ಲಿ ಯಾವುದೇ ಭೇದವಿಲ್ಲ. ಮನುಷ್ಯರು ಮಾತ್ರ ತಮ್ಮ ಕಲ್ಪನೆಗಳಿಂದ ಭೇದಗಳನ್ನು ಸೃಷ್ಟಿಸಿಕೊಳ್ಳುತ್ತಾರೆ ಎಂದರು.

‘ಕುಲವೊಂದೇ ತನ್ನ ತಾನರಿದವಂಗೆ’ ಎಂಬ ತತ್ವವನ್ನು ವಿವರಿಸಿದ ಅವರು, ಮನುಷ್ಯ ತನ್ನ ನಿಜವಾದ ಅಸ್ತಿತ್ವವನ್ನು ಅರಿತುಕೊಂಡಾಗ ಜಾತಿ, ಗೋತ್ರ, ಅಂತಸ್ತು, ಅಧಿಕಾರ ಮತ್ತು ಸ್ಥಾನಮಾನಗಳ ಅಗತ್ಯ ಉಳಿಯುವುದಿಲ್ಲ. ನಮ್ಮ ಕೈ, ಮೈ, ಮನಸ್ಸು, ಅಧಿಕಾರ, ಜಾತಿ ಎಲ್ಲವೂ ನಮ್ಮವು ಎಂದು ಹೇಳುತ್ತೇವೆಯೇ ಹೊರತು ಅವುಗಳೇ ನಾವು ಎಂದು ಹೇಳುವುದಿಲ್ಲ. ಇವೆಲ್ಲವನ್ನೂ ಮೀರಿ ತನ್ನ ಅಂತರಂಗದ ಸತ್ಯವನ್ನು ಅರಿಯುವುದೇ ನಿಜವಾದ ಆತ್ಮಜ್ಞಾನ ಎಂದು ತಿಳಿಸಿದರು.

ಷಡ್ದರ್ಶನಗಳ ಮಾರ್ಗಗಳು ವಿಭಿನ್ನವಾಗಿರಬಹುದು. ಆದರೆ ಅವುಗಳ ಅಂತಿಮ ಗುರಿ ಮುಕ್ತಿಯೇ ಆಗಿದೆ. ಬೆಳಕಿನ ಅರಮನೆಗೆ ನೂರಾರು ದಾರಿಗಳಿರಬಹುದು ಎಂಬ ಜಿ.ಎಸ್. ಶಿವರುದ್ರಪ್ಪನವರ ಆಶಯವನ್ನು ಸ್ಮರಿಸಿದ ಅವರು, ದಾರಿಗಳು ಬೇರೆ ಬೇರೆಯಾಗಿದ್ದರೂ ತಲುಪುವ ಗುರಿ ಒಂದೇ ಆಗಿರುವಾಗ ದರ್ಶನಗಳ ಹೆಸರಿನಲ್ಲಿ ಘರ್ಷಣೆ ಮಾಡಿಕೊಳ್ಳುವುದು ಸರಿಯಲ್ಲ ಎಂದರು.

ಉಪನಿಷತ್ತುಗಳ ‘ಪೂರ್ಣಮದಃ ಪೂರ್ಣಮಿದಂ’ ಮತ್ತು ‘ಈಶಾವಾಸ್ಯಂ ಇದಂ ಸರ್ವಂ’ ಎಂಬ ತತ್ವಗಳಲ್ಲಿ ವ್ಯಕ್ತವಾಗಿರುವ ಪರಿಪೂರ್ಣ ಸತ್ಯವನ್ನೇ ಶರಣರು ‘ಬಯಲು’ ಎಂಬ ಪರಿಕಲ್ಪನೆಯ ಮೂಲಕ ವಿವರಿಸಿದ್ದಾರೆ. ಅಲ್ಲಮಪ್ರಭುದೇವರ ಬಯಲಿನ ಅನುಭಾವವು ಎಲ್ಲದರ ಮೂಲದಲ್ಲಿರುವ ಏಕತ್ವವನ್ನು ಸಾರುತ್ತದೆ. ಹೀಗಾಗಿ ಸತ್ಯದ ಅರಿವಿಗೆ ದಾರಿ ಬೇರೆ ಇರಬಹುದು, ಆದರೆ ಅಂತಿಮ ಸತ್ಯ ಒಂದೇ ಎಂಬುದನ್ನು ಬಸವಣ್ಣನವರ ಸಮನ್ವಯ ದೃಷ್ಟಿ ನಮಗೆ ಕಲಿಸುತ್ತದೆ ಎಂದು ಹೇಳಿದರು.

ಸಮಾಜದಲ್ಲಿ ಭಿನ್ನತೆಗಳನ್ನು ಸೃಷ್ಟಿಸುವುದು ಬಹಳ ಸುಲಭ. ಹೆಣ್ಣು-ಗಂಡು, ಜಾತಿ-ಧರ್ಮ, ಬಡವ-ಶ್ರೀಮಂತ, ವಿದ್ಯಾವಂತ-ಅವಿದ್ಯಾವಂತ, ಗೃಹಸ್ಥ-ಸನ್ಯಾಸಿ ಹೀಗೆ ಒಂದೊಂದು ವ್ಯತ್ಯಾಸವನ್ನು ಮುಂದಿಟ್ಟರೆ ಮನುಷ್ಯರನ್ನು ಬೇರ್ಪಡಿಸಬಹುದು. ಆದರೆ ಒಂದಾಗಲು ಬೇಕಾಗಿರುವುದು ಒಂದೇ ಭಾವನೆ. ನಾವೆಲ್ಲರೂ ಮನುಷ್ಯರು, ಒಂದೇ ಪರಮತತ್ವದ ಅಂಶಗಳು ಎಂಬ ಅರಿವು ಎಂದು ಬಸವಕೇಂದ್ರ ಶ್ರೀಗಳು ವಿವರಿಸಿದರು.

ಬಸವಣ್ಣನವರು ದೇವರ ಪೂಜೆಗೆ ಯಾವುದೇ ಜಾತಿಯ ನಿರ್ಬಂಧವಿರಬಾರದು, ದುಡಿಮೆಗೆ ಯಾವುದೇ ಜಾತಿಯ ಮಿತಿ ಇರಬಾರದು ಮತ್ತು ಊಟಕ್ಕೂ ಯಾವುದೇ ಭೇದವಿರಬಾರದು ಎಂಬ ಸಮಾನತೆಯ ತತ್ವವನ್ನು ಸಾರಿದರು. ದುಡಿಯುವುದು, ದೇವರನ್ನು ಸ್ಮರಿಸುವುದು ಮತ್ತು ಆಹಾರ ಸೇವಿಸುವುದು ಎಲ್ಲ ಮನುಷ್ಯರ ಬದುಕಿನ ಸಹಜ ಅಗತ್ಯಗಳು. ಇವುಗಳಲ್ಲಿಯೇ ಭೇದ ಸೃಷ್ಟಿಸುವುದು ಮಾನವೀಯತೆಗೆ ವಿರುದ್ಧವಾದದ್ದು ಎಂದು ಹೇಳಿದರು.

ಬಸವಣ್ಣನವರ ಸಮನ್ವಯ ದೃಷ್ಟಿ ಕೇವಲ ಧರ್ಮಗಳ ನಡುವಿನ ಸೌಹಾರ್ದಕ್ಕೆ ಸೀಮಿತವಾಗಿರಲಿಲ್ಲ. ವಿಭಿನ್ನ ವೃತ್ತಿಗಳನ್ನು ಅನುಸರಿಸುವ ಜನರ ನಡುವೆ ಗೌರವ ಮತ್ತು ಸಮಾನತೆಯನ್ನು ಸ್ಥಾಪಿಸುವುದೂ ಅವರ ಆಶಯವಾಗಿತ್ತು. ಚಪ್ಪಲಿ ಹೊಲಿಯುವವನು, ಹೊಲದಲ್ಲಿ ಬಿತ್ತನೆ ಮಾಡುವವನು, ಪಾಠ ಹೇಳುವವನು, ದೇವಸ್ಥಾನ ಸ್ವಚ್ಛಗೊಳಿಸುವವನು ಹೀಗೆ ಪ್ರತಿಯೊಬ್ಬರ ಕಾಯಕವೂ ಸಮಾಜಕ್ಕೆ ಅಗತ್ಯ. ಒಂದು ಕಾಯಕವನ್ನು ಶ್ರೇಷ್ಠ, ಮತ್ತೊಂದನ್ನು ಕನಿಷ್ಠ ಎಂದು ಪರಿಗಣಿಸುವುದು ತಪ್ಪು. ಪ್ರತಿಯೊಂದು ಪ್ರಾಮಾಣಿಕ ದುಡಿಮೆಯೂ ಗೌರವಕ್ಕೆ ಅರ್ಹ ಎಂದು ಹೇಳಿದರು.

ಚಪ್ಪಲಿ ಹೊಲಿಯುವವರನ್ನು ಕೀಳಾಗಿ ಕಂಡರೆ ಅವರು ಆ ಕೆಲಸವನ್ನೇ ನಿಲ್ಲಿಸಿದರೆ ಸಮಾಜದ ಪರಿಸ್ಥಿತಿ ಏನಾಗುತ್ತದೆ? ಪ್ರತಿಯೊಂದು ವೃತ್ತಿಯೂ ಸಮಾಜದ ಸುಗಮ ಬದುಕಿಗೆ ಅಗತ್ಯ. ಹೀಗಾಗಿ ಕಾಯಕದ ಆಧಾರದ ಮೇಲೆ ಮನುಷ್ಯನನ್ನು ಅಳೆಯಬಾರದು. ಕಾಯಕಕ್ಕೆ ಗೌರವ ನೀಡುವುದೇ ಬಸವಣ್ಣನವರ ಚಿಂತನೆಯ ಜೀವಾಳ ಎಂದರು.

ಬಸವಣ್ಣನವರ ‘ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ ! ಕರ್ಣದಲ್ಲಿ ಜನಿಸಿದವರುಂಟೇ ಜಗದೊಳಗೆ !?
ಇದು ಕಾರಣ ಕೂಡಲಸಂಗಮದೇವ,
ಲಿಂಗಸ್ಥಲವನರಿದವನೇ ಕುಲಜನು !
ಎಂಬ ವಚನವನ್ನು ಉಲ್ಲೇಖಿಸಿ, ಮನುಷ್ಯನ ವೃತ್ತಿ ಮತ್ತು ಕಾಯಕದ ಆಧಾರದ ಮೇಲೆ ಅವನನ್ನು ಗುರುತಿಸುವ ಸಮಾಜದ ಮನಸ್ಥಿತಿಯನ್ನು ಬಸವಣ್ಣ ಪ್ರಶ್ನಿಸಿದ್ದಾರೆ ಎಂದು ವಿವರಿಸಿದರು.

ಕಬ್ಬಿಣವನ್ನು ಕಾಯಿಸಿ ಕೆಲಸ ಮಾಡುವವನು ಕಮ್ಮಾರ, ಬಟ್ಟೆಯನ್ನು ತೊಳೆದು ಸ್ವಚ್ಛಗೊಳಿಸುವವನು ಮಡಿವಾಳ, ನೂಲು ಹಾಸಿ ನೇಯುವವನು ಸಾಲಿಗ, ವೇದಗಳನ್ನು ಅಧ್ಯಯನ ಮಾಡುವವನು ಬ್ರಾಹ್ಮಣನೆಂದು ಗುರುತಿಸಿಕೊಳ್ಳುತ್ತಾನೆ. ಯಾರೂ ಬೇರೆ ರೀತಿಯಲ್ಲಿ ಹುಟ್ಟಿ ಬರುವುದಿಲ್ಲ. ಎಲ್ಲರೂ ಪ್ರಕೃತಿಯ ಸಹಜ ನಿಯಮದಂತೆ ಜನಿಸುತ್ತಾರೆ. ಹೀಗಿರುವಾಗ ಹುಟ್ಟಿನ ಆಧಾರದ ಮೇಲೆ ಶ್ರೇಷ್ಠ-ಕನಿಷ್ಠ ಎಂಬ ಭಾವನೆ ಏಕೆ ಎಂದು ಪ್ರಶ್ನಿಸಿದರು.

ಮನುಷ್ಯನ ದೈನಂದಿನ ಬದುಕನ್ನೇ ಗಮನಿಸಿದರೆ ಬೆಳಿಗ್ಗೆ ಮನೆಯನ್ನು ಸ್ವಚ್ಛಗೊಳಿಸುವಾಗ ಒಂದು ರೀತಿಯ ಕಾಯಕ, ಪೂಜೆ ಮಾಡುವಾಗ ಮತ್ತೊಂದು ಕಾಯಕ, ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಾಗ ಇನ್ನೊಂದು ಕಾಯಕ, ತನ್ನ ಹಕ್ಕುಗಳಿಗಾಗಿ ಹೋರಾಡುವಾಗ ಮತ್ತೊಂದು ಪಾತ್ರ ನಿರ್ವಹಿಸುತ್ತಾನೆ. ಹಾಗಾದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವರ್ಗೀಕರಣಗಳನ್ನು ಶಾಶ್ವತವಾದ ಜಾತಿಯೆಂದು ಹೇಗೆ ಪರಿಗಣಿಸಲು ಸಾಧ್ಯ? ಮನುಷ್ಯನ ಬದುಕಿನಲ್ಲಿ ಹಲವು ಕಾಯಕಗಳು ಸಹಜವಾಗಿ ಬೆರೆತಿವೆ. ಆದ್ದರಿಂದ ಜಾತಿಯ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವುದು ಅರ್ಥಹೀನ ಎಂದು ತಿಳಿಸಿದರು.

ಇಂದು ಎಲ್ಲ ಸಮುದಾಯಗಳಲ್ಲಿಯೂ ವೈದ್ಯರು, ಎಂಜಿನಿಯರ್‌ಗಳು, ಸಾಫ್ಟ್‌ವೇರ್ ಉದ್ಯೋಗಿಗಳು, ವ್ಯಾಪಾರಿಗಳು, ಪುರೋಹಿತರು ಮತ್ತು ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವವರು ಕಾಣಸಿಗುತ್ತಾರೆ. ಹಿಂದಿನಂತೆ ಕುಲಕಸುಬುಗಳ ಆಧಾರದ ಮೇಲೆ ವ್ಯಕ್ತಿಯ ಜಾತಿಯನ್ನು ನಿರ್ಧರಿಸುವ ಪರಿಸ್ಥಿತಿ ಬದಲಾಗುತ್ತಿದೆ. ಯಾವುದೇ ವ್ಯಕ್ತಿ ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವ ಅವಕಾಶ ಹೆಚ್ಚಾಗಿದೆ. ಇದು ಸಮಾಜದಲ್ಲಿ ಸಮಾನತೆಯ ಭಾವನೆ ಬೆಳೆಯುತ್ತಿರುವುದಕ್ಕೆ ಸಾಕ್ಷಿ ಎಂದು ಹೇಳಿದರು.

ಮಹಿಳೆಯರ ಸ್ಥಾನಮಾನ ಮತ್ತು ಸಮಾನತೆಯ ಕುರಿತು ಮಾತನಾಡಿದ ಶ್ರೀಗಳು, ಹೆಣ್ಣಿನ ಗುಣವನ್ನು ಗಂಡು ಪ್ರಶ್ನಿಸಬಹುದು, ಆದರೆ ಗಂಡಿನ ಗುಣವನ್ನು ಹೆಣ್ಣು ಪ್ರಶ್ನಿಸಬಾರದು ಎಂಬ ಮನಸ್ಥಿತಿ ಇಂದಿಗೂ ಕೆಲವರಲ್ಲಿ ಉಳಿದಿದೆ. ಇದು ಬದಲಾಗಬೇಕು ಎಂದರು.

‘ಸತಿಯ ಗುಣವ ಪತಿ ನೋಡಬೇಕಲ್ಲದೆ, ಪತಿಯ ಗುಣವ ಸತಿ ನೋಡಬಹುದೆ ಎಂಬರು.
ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ? ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ?
ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆ ಭಂಗವಾರಿಗೆಂಬುದ ತಿಳಿದಲ್ಲಿಯೆ
ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು
.’ ಎಂಬ ಶರಣರ ವಚನವನ್ನು ಉಲ್ಲೇಖಿಸಿ, ಗಂಡನ ತಪ್ಪುಗಳನ್ನು ಹೆಂಡತಿ ಪ್ರಶ್ನಿಸಬಾರದು ಎಂಬ ಧೋರಣೆಯನ್ನು ಪ್ರಶ್ನಿಸಿದರು.

‘ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕೆ ಭಂಗ ವಾರಿಗೆ ಎಂಬುದ ಅರಿಯಬೇಕು’ ಎಂಬ ಡಕ್ಕೆ ಬೊಮ್ಮಣ್ಣನವರ ವಚನವನ್ನು ವಿವರಿಸಿದ ಅವರು, ದೇಹದ ಎರಡು ಕಣ್ಣುಗಳಲ್ಲಿ ಒಂದು ಕಣ್ಣಿಗೆ ತೊಂದರೆಯಾದರೆ ಇಡೀ ದೇಹವೇ ಅದರ ಪರಿಣಾಮ ಅನುಭವಿಸುತ್ತದೆ. ಅದೇ ರೀತಿ ಗೃಹಸ್ಥಾಶ್ರಮದಲ್ಲಿ ಗಂಡ ಮತ್ತು ಹೆಂಡತಿ ಎರಡು ಕಣ್ಣುಗಳಿದ್ದಂತೆ. ಒಬ್ಬರ ತಪ್ಪನ್ನು ಮತ್ತೊಬ್ಬರು ತಿದ್ದಿಕೊಂಡು, ಪರಸ್ಪರ ಗೌರವದಿಂದ ಬದುಕಿದಾಗ ಮಾತ್ರ ಕುಟುಂಬ ವ್ಯವಸ್ಥೆ ಆರೋಗ್ಯಕರವಾಗಿರುತ್ತದೆ ಎಂದು ಹೇಳಿದರು.

ಗಂಡು ತಪ್ಪು ಮಾಡಿದಾಗ ಹೆಣ್ಣು ಪ್ರಶ್ನಿಸಬಾರದು ಎಂಬ ಕಾಲ ಈಗ ಬದಲಾಗುತ್ತಿದೆ. ಕುಟುಂಬದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಮಹಿಳೆಯರಲ್ಲಿದೆ. ಗಂಡನಿಂದ ಸಾಧ್ಯವಾಗದ ಕೆಲಸಗಳನ್ನು ಹೆಣ್ಣು ಮಕ್ಕಳು ನಿರ್ವಹಿಸಿ ಕುಟುಂಬವನ್ನು ಮುನ್ನಡೆಸಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ ಎಂದರು.

ಇದಕ್ಕೆ ಐತಿಹಾಸಿಕ ಉದಾಹರಣೆಯಾಗಿ ಕೆಳದಿ ಚೆನ್ನಮ್ಮನವರ ಸಾಧನೆಯನ್ನು ಸ್ಮರಿಸಿದರು. ಪತಿಯ ಮರಣದ ನಂತರ ಸತಿಸಹಗಮನ ಪದ್ಧತಿಗೆ ಒಳಗಾಗದೆ, ಪತಿಯ ಆಶಯದಂತೆ ರಾಜ್ಯದ ಆಡಳಿತದ ಜವಾಬ್ದಾರಿ ವಹಿಸಿಕೊಂಡು ಸುಮಾರು 27 ವರ್ಷಗಳ ಕಾಲ ಸಮರ್ಥವಾಗಿ ಆಡಳಿತ ನಡೆಸಿದ ಕೆಳದಿ ಚೆನ್ನಮ್ಮನವರ ಧೈರ್ಯ ಮತ್ತು ಆಡಳಿತ ಸಾಮರ್ಥ್ಯ ಮಹಿಳಾ ಶಕ್ತಿಗೆ ಸಾಕ್ಷಿಯಾಗಿದೆ. ಇಂತಹ ಅನೇಕ ಸಾಧಕಿಯರ ಬದುಕು ಮಹಿಳೆಯರ ಸಾಮರ್ಥ್ಯವನ್ನು ಸಾರುತ್ತದೆ. ಹೆಣ್ಣು ಅಬಲೆಯಲ್ಲ, ಅವಕಾಶ ಮತ್ತು ಗೌರವ ನೀಡಿದರೆ ಯಾವುದೇ ಕ್ಷೇತ್ರದಲ್ಲಿಯೂ ಸಾಧಿಸಬಲ್ಲಳು ಎಂದು ಹೇಳಿದರು.

ಬಸವಾದಿ ಶರಣರು ಹೆಣ್ಣನ್ನು ಕೀಳಾಗಿ ಕಾಣದೆ, ಆಕೆಯಲ್ಲಿರುವ ಸೃಜನಶೀಲತೆ, ಜ್ಞಾನ ಮತ್ತು ಸಾಮರ್ಥ್ಯಕ್ಕೆ ಗೌರವ ನೀಡಿದರು. ಹೆಣ್ಣು-ಗಂಡು ಎಂಬ ಭೇದವನ್ನು ಮೀರಿ ಸಮಾನತೆಯ ಸಮಾಜ ನಿರ್ಮಿಸಲು ಶ್ರಮಿಸಿದರು. ಈ ವಿಚಾರಗಳನ್ನು ಇಂದಿನ ಕುಟುಂಬ ಮತ್ತು ಸಾಮಾಜಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಖ್ಯಾತ ವಾಗ್ಮಿ ಜಿ.ಎಸ್. ನಟೇಶ್ ಅವರ ಉಪನ್ಯಾಸವನ್ನು ಪ್ರಶಂಸಿಸಿದ ಬಸ, ಅವರನ್ನು ನಿರೂಪಕರು ‘ಡಾ. ಜಿ.ಎಸ್. ನಟೇಶ್’ ಎಂದು ಪರಿಚಯಿಸಿದಾಗ ಅವರು ಹಾಸ್ಯವಾಗಿ ‘ನನ್ನನ್ನು ಡಾಕ್ಟರ್ ಮಾಡಿಬಿಟ್ಟರು’ ಎಂದಿದ್ದನ್ನು ಸ್ಮರಿಸಿದರು.

ಜನರು ವ್ಯಕ್ತಿಯ ವಿದ್ವತ್ತು, ಜ್ಞಾನ ಮತ್ತು ಮಾತಿನ ಆಳವನ್ನು ಗಮನಿಸಿ ಅವರಿಗೆ ನೀಡುವ ಗೌರವವೇ ನಿಜವಾದ ಪ್ರಶಸ್ತಿ. ಯಾವುದೇ ಅಧಿಕೃತ ಪದವಿ ಇಲ್ಲದಿದ್ದರೂ ಅವರ ಜ್ಞಾನವನ್ನು ಕಂಡು ಜನರು ಡಾಕ್ಟರ್, ಪ್ರೊಫೆಸರ್ ಎಂದು ಗೌರವಿಸುವುದು ಅವರ ಸಾಧನೆಗೆ ಸಿಗುವ ನಿಜವಾದ ಮನ್ನಣೆ. ಜಿ.ಎಸ್. ನಟೇಶ್ ಅವರು ಸಾಹಿತ್ಯ ಮತ್ತು ಶರಣರ ವಚನಗಳ ಆಳವಾದ ಪರಿಚಯ ಹೊಂದಿರುವ ಅಪರೂಪದ ವಿದ್ವಾಂಸರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಖಜಾಂಚಿ ಮಲ್ಲಿಕಾರ್ಜುನ ಅವರು ವಿಷಯವನ್ನು ಸಿದ್ಧಪಡಿಸಿಕೊಂಡು ಅಚ್ಚುಕಟ್ಟಾಗಿ ಮಾತನಾಡಿದ್ದನ್ನು ಹಾಗೂ ಅಧ್ಯಕ್ಷತೆ ವಹಿಸಿದ್ದ ಉಮೇಶ್ ಅವರು ಕಾರ್ಯಕ್ರಮಕ್ಕೆ ಅಗತ್ಯವಾದ ಸಿದ್ಧತೆ ಮಾಡಿಕೊಂಡು ವಿಷಯಾಧಾರಿತವಾಗಿ ಮಾತನಾಡಿದ್ದನ್ನು ಬಸವಕೇಂದ್ರ ಶ್ರೀಗಳು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಸಿದ್ಧತೆಯೊಂದಿಗೆ ಬಂದಿರುವುದು ಸಂಘಟನೆಯ ಬದ್ಧತೆಯನ್ನು ತೋರಿಸುತ್ತದೆ ಎಂದರು.

20ನೇ ವರ್ಷದ ಚಿಂತನ ಕಾರ್ತಿಕದ ಹತ್ತನೇ ದಿನದ ಕಾರ್ಯಕ್ರಮದ ಮೂಲಕ ತರಳಬಾಳು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ತರಳಬಾಳು ಮಹಿಳಾ ವೇದಿಕೆ ಉದ್ಘಾಟನೆಗೊಂಡಿರುವುದು ಕೇವಲ ಸಂಘಟನೆಗಳ ಆರಂಭವಲ್ಲ, ಸಾಮಾಜಿಕ ಜವಾಬ್ದಾರಿಯನ್ನು ಒಟ್ಟಾಗಿ ನಿರ್ವಹಿಸುವ ಹೊಸ ಸಂಕಲ್ಪದ ಆರಂಭವಾಗಿದೆ ಎಂದು ಬಸವಕೇಂದ್ರ ಶ್ರೀಗಳು ಬಣ್ಣಿಸಿದರು.

ಅಧಿಕಾರಕ್ಕಾಗಿ ಅಲ್ಲ, ಸೇವೆಗಾಗಿ ಸಂಘಟನೆಗಳು ಕಾರ್ಯನಿರ್ವಹಿಸಬೇಕು. ಬಡಾವಣೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಮಹಿಳೆಯರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಿ, ಪರಸ್ಪರ ಸಹಕಾರದ ಮೂಲಕ ಮಾದರಿ ಸಮಾಜ ನಿರ್ಮಿಸಬೇಕು. ತರಳಬಾಳು ಬಡಾವಣೆಯ ಸಂಘಟನೆಗಳ ಕಾರ್ಯಚಟುವಟಿಕೆಗಳು ಇತರ ಬಡಾವಣೆಗಳಿಗೂ ಮಾದರಿಯಾಗಲಿ. ಎಲ್ಲ ಪದಾಧಿಕಾರಿಗಳು ಮತ್ತು ನಿವಾಸಿಗಳು ಒಗ್ಗಟ್ಟಿನಿಂದ ಮುನ್ನಡೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತರಳಬಾಳು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ (ರಿ.) ಅಧ್ಯಕ್ಷರಾದ ಉಮೇಶ್ ಡಿ.ಇ. ವಹಿಸಿದ್ದರು. ಉಪನ್ಯಾಸಕ ಜಿ. ನಟೇಶ್, ಶಿವಮೊಗ್ಗ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಎ. ಷಣ್ಮುಖಪ್ಪ. ಓಂ ಗಣೇಶ್ ಮಾಲೀಕರಾದ ಹರ್ಷ ಕಾಮತ್ ಪ್ರಸನ್ನಕುಮಾರ್ ಜೆ.ಆರ್., ಮಲ್ಲಿಕಾರ್ಜುನ ನಿಂಬೆಗೊಂದಿ, ರಂಗರಾಜು, ಹಾಲೇಶ್, ದಿವಾಕರ್ ಪಟೇಲ್, ರಾಜು ಪಟೇಲ್, ಸಂತೋಷ್, ಸತೀಶ್, ಪ್ರಶಾಂತ್, ಸುನೀಲ್, ಗೋಪಿನಾಥ್, ವಾಗೀಶ್ ಉಪಸ್ಥಿತರಿದ್ದರು.

ಮಹಿಳಾ ವೇದಿಕೆಯ ಅಧ್ಯಕ್ಷರಾದ ಅನುರಾಧ ಉಮೇಶ್, ಡಾ. ಲತಾ ಮಲ್ಲಪ್ಪ, ಶಾಲಿನಿ ಕಾಂತೇಶ್ ಸೇರಿದಂತೆ ತರಳಬಾಳು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ (ರಿ.) ಕಾರ್ಯಕಾರಿ ಮಂಡಳಿಯ ಸದಸ್ಯರು ಹಾಗೂ ಬಡಾವಣೆಯ ನಿವಾಸಿಗಳು ಭಾಗವಹಿಸಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಅಂತರಂಗದ ಅಜ್ಞಾನದ ಕತ್ತಲೆ ಕಳೆದು ಜ್ಞಾನದ ಜ್ಯೋತಿ ಬೆಳಗಿಸುವುದೇ ಕಾರ್ತಿಕ ದೀಪೋತ್ಸವದ ನಿಜವಾದ ಆಶಯ: ಶ್ರೀ ರಂಭಾಪುರಿ ಜಗದ್ಗುರುಗಳು

ಲಾಂಛನ ಧರಿಸುವುದಷ್ಟೇ ಧರ್ಮವಲ್ಲ; ವಿಭೂತಿ, ರುದ್ರಾಕ್ಷಿ ಧರಿಸಿದರೆ ಸಾಲದು, ಅವುಗಳ ತತ್ವದಂತೆ ಬದುಕುವುದೇ ನಿಜವಾದ ಬಸವತತ್ವದ ಆಚರಣೆ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

ಸ್ಥಾವರದ ವೈಭವ ಕ್ಷಣಿಕ, ಜಂಗಮದ ಜ್ಞಾನ ಶಾಶ್ವತ; ಮನುಷ್ಯನ ಅಂತರಂಗದಲ್ಲೇ ದೇವರನ್ನು ಕಂಡುಕೊಳ್ಳುವ ಮಾರ್ಗ ತೋರಿದವರು ಬಸವಣ್ಣ: ಡಾ. ಜಿ.ಎ. ಮಂಜುನಾಥ

ಮನುಷ್ಯನ ಕಣ್ಣೀರು ಒರೆಸದ ಧರ್ಮಕ್ಕೆ ಅರ್ಥವಿಲ್ಲ; ಬಸವಣ್ಣನವರ ತತ್ವ ಬದುಕಿನಲ್ಲಿ ಸಾಕಾರವಾಗಲಿ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

ನ.23ರಂದು ಮಳಲಿ ಮಠದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಧರ್ಮ ಸಮಾರಂಭ; ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ

ಬಸವಣ್ಣನವರ ಮೌಲ್ಯಗಳು ಸೂರ್ಯ–ಚಂದ್ರರಿರುವವರೆಗೂ ಪ್ರಸ್ತುತ; ಬಸವತತ್ವದ ವಿರುದ್ಧದ ಅಪಪ್ರಚಾರಕ್ಕೆ ಮಣಿಯಬೇಡಿ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

Leave a Comment