ರಿಪ್ಪನ್ಪೇಟೆ: ಕತ್ತಲೆಯನ್ನು ಸರಿಸಿ ಬೆಳಕಿನ ಹಾದಿ ತೋರುವ ಒಂದು ಪುಟ್ಟ ಹಣತೆಯ ಬೆಳಕಿನ ಹಿಂದೆ ಅಡಗಿರುವುದು ಕೇವಲ ಜ್ಯೋತಿಯಲ್ಲ, ಅದು ಬದುಕಿಗೆ ದಾರಿದೀಪವಾಗುವ ಜ್ಞಾನ, ವಿವೇಕ ಮತ್ತು ಮಾನವೀಯತೆಯ ಮಹಾಸಂದೇಶ. ದೇವಾಲಯದ ಗರ್ಭಗುಡಿಯಲ್ಲಿ ಬೆಳಗುವ ದೀಪ ಭಕ್ತಿಯ ಸಂಕೇತವಾದರೆ, ಮನುಷ್ಯನ ಅಂತರಂಗದಲ್ಲಿ ಬೆಳಗುವ ಜ್ಞಾನದ ದೀಪ ಬದುಕಿನ ಪರಿವರ್ತನೆಯ ಸಂಕೇತ. ಸಾವಿರಾರು ಹಣತೆಗಳ ಬೆಳಕಿಗಿಂತಲೂ ಮನುಷ್ಯನ ಮನಸ್ಸಿನಲ್ಲಿರುವ ಅಜ್ಞಾನ, ದ್ವೇಷ, ಅಸೂಯೆ ಮತ್ತು ಅಹಂಕಾರದ ಕತ್ತಲೆಯನ್ನು ಹೋಗಲಾಡಿಸಿ ಪ್ರೀತಿ, ವಿಶ್ವಾಸ, ಸತ್ಯ, ಧರ್ಮ ಹಾಗೂ ಮಾನವೀಯತೆಯ ಬೆಳಕನ್ನು ತುಂಬುವುದೇ ಕಾರ್ತಿಕ ದೀಪೋತ್ಸವದ ನಿಜವಾದ ಉದ್ದೇಶವಾಗಿದೆ. ಇಂತಹ ಉದಾತ್ತ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಧಾರ್ಮಿಕ ಆಚರಣೆಗಳು ಸಾರ್ಥಕವಾಗುತ್ತವೆ. ಭಕ್ತಿ ಕೇವಲ ಕೈಯಲ್ಲಿ ದೀಪ ಹಿಡಿಯುವುದಕ್ಕೆ ಸೀಮಿತವಾಗದೆ, ಹೃದಯದಲ್ಲಿ ಜ್ಞಾನದ ಬೆಳಕಾಗಿ, ನಡವಳಿಕೆಯಲ್ಲಿ ಸಂಸ್ಕಾರವಾಗಿ, ಸಮಾಜದಲ್ಲಿ ಸೇವೆಯ ರೂಪವಾಗಿ ಅರಳಬೇಕು ಎಂಬ ಸಂದೇಶವನ್ನು ಕಾರ್ತಿಕ ದೀಪೋತ್ಸವ ಸಾರುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶಯ ವ್ಯಕ್ತಪಡಿಸಿದರು.

ಸಮೀಪದ ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಮಳಲಿ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಕಾರ್ತಿಕ ಧರ್ಮ ದೀಪೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವೀರಶೈವ ಧರ್ಮದ ಶಿವತತ್ವದಲ್ಲಿ ಜ್ಯೋತಿಯು ಪರಮ ಚೈತನ್ಯದ ಸಂಕೇತವಾಗಿದೆ. ಹೊರಗೆ ಬೆಳಗುವ ದೀಪ ನಮ್ಮ ಅಂತರಂಗದಲ್ಲಿಯೂ ಜ್ಞಾನ, ವಿವೇಕ, ಸತ್ಯನಿಷ್ಠೆ ಮತ್ತು ಮಾನವೀಯತೆಯ ಬೆಳಕನ್ನು ಮೂಡಿಸಬೇಕು. ಇದೇ ಕಾರ್ತಿಕ ದೀಪೋತ್ಸವದ ನಿಜವಾದ ಆಶಯ. ಶ್ರೀ ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿದ ಶಿವತತ್ವ ಪರಂಪರೆ, ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲ ಸಿದ್ಧಾಂತಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಈ ತತ್ವಗಳನ್ನು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತಗೊಳಿಸದೆ, ನಮ್ಮ ದೈನಂದಿನ ಜೀವನದ ನಡೆ-ನುಡಿಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಮಠಗಳು ಧರ್ಮದ ಸಂರಕ್ಷಣೆಯ ಜೊತೆಗೆ ಸಮಾಜದಲ್ಲಿ ಶಿಕ್ಷಣ, ಸಂಸ್ಕಾರ, ಸಮಾನತೆ, ಸಹಬಾಳ್ವೆ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಪವಿತ್ರ ಕೇಂದ್ರಗಳಾಗಿವೆ. ಕಾರ್ತಿಕ ದೀಪೋತ್ಸವದಂತಹ ಆಚರಣೆಗಳು ಬೆಳೆಯುತ್ತಿರುವ ಯುವಪೀಳಿಗೆಯಲ್ಲಿ ಆಧ್ಯಾತ್ಮಿಕ ಪ್ರಜ್ಞೆ ಮತ್ತು ಸಾಂಸ್ಕೃತಿಕ ಅಭಿಮಾನವನ್ನು ಜಾಗೃತಗೊಳಿಸುವ ಕಾರ್ಯ ಮಾಡಬೇಕು ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು.
ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿಗಳು ಪ್ರತಿವರ್ಷವೂ ಕಾರ್ತಿಕ ದೀಪೋತ್ಸವ ಸಮಾರಂಭವನ್ನು ಭಕ್ತ ಸಮುದಾಯದ ಸಹಭಾಗಿತ್ವದಲ್ಲಿ ಅತ್ಯಂತ ವೈಭವದಿಂದ ಆಚರಿಸುತ್ತಿರುವುದು ತಮಗೆ ಅಪಾರ ಸಂತೋಷ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿ, ಸ್ಮರಣಿಕೆಯ ಫಲಪುಷ್ಪ ನೀಡಿ ಗೌರವಿಸಿದರು.

ಸಾವಿರಾರು ದೀಪಗಳಿಗಿಂತ ಮನದೊಳಗಿನ ಜ್ಞಾನದ ಬೆಳಕು ಮುಖ್ಯ: ಯಡಿಯೂರು ಶ್ರೀಗಳು
ಸಮಾರಂಭವನ್ನು ಉದ್ಘಾಟಿಸಿದ ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಇಂದಿನ ಸಮಾಜಕ್ಕೆ ಬೇಕಾಗಿರುವುದು ಕೇವಲ ಸಾವಿರಾರು ದೀಪಗಳ ಬೆಳಕಲ್ಲ. ಮನುಷ್ಯನ ಮನಸ್ಸಿನಲ್ಲಿರುವ ದ್ವೇಷ, ಅಸೂಯೆ, ಅಹಂಕಾರ ಮತ್ತು ಅಜ್ಞಾನವನ್ನು ನಿವಾರಿಸುವ ಜ್ಞಾನದ ಬೆಳಕಾಗಿದೆ. ಮಲೆನಾಡಿನ ಪ್ರಾಂತ್ಯದಲ್ಲಿ ಮನೆ ಮಾತಾಗಿರುವ ಮಳಲಿ ಸಂಸ್ಥಾನ ಮಠದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮದಿಂದ ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಡಾ. ನಾಗಭೂಷಣ ಶ್ರೀಗಳ ಕ್ರಿಯಾಶೀಲ ನಾಯಕತ್ವದಿಂದ ಶ್ರೀಕ್ಷೇತ್ರದ ಅಭಿವೃದ್ಧಿ ಹಾಗೂ ಭಕ್ತರಿಗೆ ಅಮೂಲ್ಯ ಮಾರ್ಗದರ್ಶನ ದೊರೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಧರ್ಮ ಮನುಷ್ಯರನ್ನು ಒಗ್ಗೂಡಿಸುವ ಶಕ್ತಿ: ಶಾಸಕ ಆರಗ ಜ್ಞಾನೇಂದ್ರ
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಧರ್ಮವು ಮನುಷ್ಯರನ್ನು ವಿಭಜಿಸುವ ಸಾಧನವಾಗಬಾರದು. ಎಲ್ಲರನ್ನೂ ಉನ್ನತಿಯತ್ತ ಕೈಹಿಡಿದು ಮುನ್ನಡೆಸುವ ಮಹಾನ್ ಶಕ್ತಿಯೇ ಧರ್ಮ. ಮನುಷ್ಯನಲ್ಲಿ ಉತ್ತಮ ಗುಣಗಳನ್ನು ಬೆಳೆಸಿ, ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವವನ್ನು ಗಟ್ಟಿಗೊಳಿಸುವ ಶಕ್ತಿ ಧಾರ್ಮಿಕ ಚಿಂತನೆಗಳಲ್ಲಿದೆ. ಕಾರ್ತಿಕ ದೀಪೋತ್ಸವವು ಅಂತರಂಗದ ಅಜ್ಞಾನವನ್ನು ಕಳೆದು ಜ್ಞಾನದ ಬೆಳಕನ್ನು ಬೆಳಗಿಸುವ ಮಹತ್ಕಾರ್ಯವಾಗಿದೆ. ಮಳಲಿ ಮಠದ ಶ್ರೀಗಳು ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವುದು ಸಂತಸದ ಸಂಗತಿ ಎಂದರು.

ಧರ್ಮ, ಸಂಸ್ಕಾರ ಮತ್ತು ಮಾನವೀಯತೆಯ ಸಂಗಮವೇ ವೀರಶೈವ ಪರಂಪರೆ: ಮಳಲಿ ಶ್ರೀಗಳು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ವೀರಶೈವ ಧರ್ಮ ಮತ್ತು ಸಂಸ್ಕೃತಿಯು ಮನುಷ್ಯನ ಅಂತರಂಗವನ್ನು ಪರಿಶುದ್ಧಗೊಳಿಸಿ ಸನ್ಮಾರ್ಗದತ್ತ ಕರೆದೊಯ್ಯುವ ಉನ್ನತ ಜೀವನದರ್ಶನವಾಗಿದೆ. ವೀರಶೈವ ಧರ್ಮದ ಪರಮ ಪಂಚಾಚಾರ್ಯರು ಭಕ್ತರ ಬದುಕಿನಲ್ಲಿ ಸಂಸ್ಕಾರ, ಶಿಸ್ತು, ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಬೆಳೆಸುವ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ.

ಪ್ರತಿಯೊಬ್ಬರ ಮನೆಯಲ್ಲೂ ಶಾಂತಿ ನೆಲೆಸಬೇಕು, ಹೃದಯದಲ್ಲಿ ಶಿವಭಕ್ತಿ ಬೆಳೆಯಬೇಕು, ಬದುಕಿನಲ್ಲಿ ಸೇವಾ ಮನೋಭಾವ ಮೂಡಬೇಕು ಹಾಗೂ ಸಮಾಜದಲ್ಲಿ ಸಹೋದರತ್ವದ ಜ್ಯೋತಿ ನಿರಂತರವಾಗಿ ಬೆಳಗಬೇಕು. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ಶ್ರೀಮಠದ ಅಭಿವೃದ್ಧಿ ಹಾಗೂ ಭಕ್ತರ ಕಲ್ಯಾಣ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುವುದು ತಮಗೆ ತೃಪ್ತಿ ತಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿಗಳು, ತೊಗರ್ಸಿಯ ಚೆನ್ನವೀರ ಶಿವಾಚಾರ್ಯ ಸ್ವಾಮೀಜಿಗಳು, ಶಾಂತಪುರದ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು, ಬಿಳಿಕಿ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳು, ಕೋಣಂದೂರಿನ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಹರನಹಳ್ಳಿಯ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿಗಳು, ಹನುಮಾಪುರದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗಳು, ತಾವರೆಕೆರೆಯ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಕಡೇನಂದಿಹಳ್ಳಿಯ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಸಿಂದಗಿಯ ವೀರರಾಜೇಂದ್ರ ಸ್ವಾಮೀಜಿಗಳು ಉಪಸ್ಥಿತರಿದ್ದರು.

ಕವಲೇದುರ್ಗ ಭುವನಗಿರಿ ಸಂಸ್ಥಾನ ಮಠದ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿಗಳು ವೀರಶೈವ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಉಪದೇಶಾಮೃತ ನೀಡಿದರು.
ಸಂಕಷ್ಟದಲ್ಲಿರುವವರ ಬದುಕಿನಲ್ಲಿ ಬೆಳಗುವ ದೀಪವೇ ಶ್ರೇಷ್ಠ: ಪತ್ರಕರ್ತ ಆರ್.ಎಸ್. ಪ್ರಶಾಂತ್
ಪತ್ರಕರ್ತ ರಿಪ್ಪನ್ಪೇಟೆಯ ಆರ್.ಎಸ್. ಪ್ರಶಾಂತ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇವರ ಮುಂದೆ ಬೆಳಗುವ ದೀಪದಷ್ಟೇ ಮಹತ್ವ ಸಂಕಷ್ಟದಲ್ಲಿರುವವರ ಬದುಕಿನಲ್ಲಿ ಬೆಳಕು ಮೂಡಿಸುವುದಕ್ಕೂ ಇದೆ. ದೇವಾಲಯವನ್ನು ಬೆಳಗಿಸುವ ಜ್ಯೋತಿ ಮಾತ್ರವಲ್ಲದೆ, ಸಮಾಜದಲ್ಲಿನ ಅಜ್ಞಾನ, ಅಂಧಕಾರ ಮತ್ತು ಅಸಮಾನತೆಗಳನ್ನು ದೂರಮಾಡುವ ಜ್ಞಾನದ ಜ್ಯೋತಿಯಾಗಬೇಕು. ಒಂದು ದೀಪದಿಂದ ಮತ್ತೊಂದು ದೀಪವನ್ನು ಬೆಳಗಿಸಿದಂತೆ, ಜ್ಞಾನದಿಂದ ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಸಮಾಜವನ್ನು ಬೆಳಕಿನ ಹಾದಿಯಲ್ಲಿ ಮುನ್ನಡೆಸಬೇಕು. ಮಳಲಿ ಮಠದ ಪಟ್ಟಾಧ್ಯಕ್ಷರು ಕಾರ್ತಿಕ ವಿಶೇಷ ಸಮಾರಂಭವನ್ನು ಆಯೋಜಿಸಿ ಭಕ್ತರಿಗೆ ಆಧ್ಯಾತ್ಮಿಕ ಬೆಳಕು ನೀಡುತ್ತಿರುವುದು ಭಕ್ತ ಸಮುದಾಯಕ್ಕೆ ಸಂತೋಷ ತಂದಿದೆ ಎಂದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗೌರವ
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಗುರುತಿಸಿಕೊಂಡಿರುವ ಸಿ.ಎಚ್. ಬಾಳನಗೌಡ್ರು, ಡಿ.ಆರ್. ವಿಜಯಕುಮಾರ್ ದುಮ್ಮ, ಎಚ್.ಎನ್. ವ್ಯೋಮಕೇಶಗೌಡ್ರು, ಹಾಲುಗುಡ್ಡೆ ಈಶ್ವರಪ್ಪಗೌಡ್ರು, ವಸವೆ ಪರಮೇಶ್ವರಗೌಡರು, ಕಮದೂರು ಡಾ. ಶಶಿಕಾಂತ್, ಹುಗಡಿ ಡಾ. ಸುಧೀನ್ ಪಾಟೀಲ್ ಹಾಗೂ ಕಗ್ಗಲಿ ಗಣ್ಯರನ್ನು ಶ್ರೀ ರಂಭಾಪುರಿ ಜಗದ್ಗುರುಗಳು ವಿಶೇಷವಾಗಿ ಗೌರವಿಸಿ, ಶುಭ ಹಾರೈಸಿದರು.

ಭಕ್ತಿಗೀತೆ, ಭರತನಾಟ್ಯದಿಂದ ಕಂಗೊಳಿಸಿದ ದೀಪೋತ್ಸವ
ಕಾರ್ಯಕ್ರಮದ ಆರಂಭದಲ್ಲಿ ಬಿ.ಎಂ. ಸುರೇಶ್ ಗವಾಯಿಗಳು ಹಾಗೂ ಶಿವಮೊಗ್ಗದ ಶ್ರೀಮತಿ ನಾಗರತ್ನ ಚಂದ್ರಶೇಖರಯ್ಯ ಅವರು ಭಕ್ತಿಗೀತೆ ಮತ್ತು ಪ್ರಾರ್ಥನೆ ಸಲ್ಲಿಸಿದರು. ರಾಜಕೀಯ ಯುವ ಮುಖಂಡ ವೀರೇಶ್ ಆಳವಳ್ಳಿ ಸರ್ವರನ್ನು ಸ್ವಾಗತಿಸಿದರು. ಗಿಣಿವಾರದ ಕೊಡಚಾದ್ರಿ ಆಂಗ್ಲ ಮಾಧ್ಯಮ ವಸತಿ ಶಾಲೆಯ ವಿದ್ಯಾರ್ಥಿನಿಯರಿಂದ ಆಕರ್ಷಕ ಭರತನಾಟ್ಯ ಪ್ರದರ್ಶನ ನಡೆಯಿತು. ಶಿವಮೊಗ್ಗದ ಶ್ರೀಮತಿ ಶಾಂತಾ ಆನಂದ್ ಕಾರ್ಯಕ್ರಮ ನಿರೂಪಿಸಿದರು. ಕಗ್ಗಲಿಯ ಶಿವಪ್ರಕಾಶ್ ಪಾಟೀಲ್ ವಂದನಾರ್ಪಣೆ ಸಲ್ಲಿಸಿದರು.

ವಿಶೇಷ ಪೂಜೆ, ಹೋಮ-ಹವನ; ಸಾವಿರಾರು ಹಣತೆಗಳ ಬೆಳಕಿನಲ್ಲಿ ಮಠದ ಪರಿಸರ
ಕಾರ್ತಿಕ ದೀಪೋತ್ಸವದ ಅಂಗವಾಗಿ ಪ್ರಾತಃಕಾಲದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಲಮೂರ್ತಿ ಹಾಗೂ ಕರ್ತೃ ಶ್ರೀ ನಾಗಾರ್ಜುನಸ್ವಾಮಿ ಗದ್ದುಗೆಗೆ ವಿಶೇಷ ಪೂಜೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಸಂಜೆ ನಡೆದ ಸಮಾರಂಭದ ಬಳಿಕ ಮಠದ ಆವರಣದಲ್ಲಿ ಭಕ್ತ ಸಮುದಾಯದವರು ಸಾಮೂಹಿಕವಾಗಿ ದೀಪಗಳನ್ನು ಬೆಳಗಿಸಿ ಕಾರ್ತಿಕ ದೀಪೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ಸಾವಿರಾರು ಹಣತೆಗಳ ಬೆಳಕಿನಿಂದ ಮಳಲಿ ಮಠದ ಪರಿಸರ ಕಂಗೊಳಿಸಿತು. ಭಕ್ತಿ, ಧಾರ್ಮಿಕ ಶ್ರದ್ಧೆ, ಆಧ್ಯಾತ್ಮಿಕ ಚಿಂತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನದೊಂದಿಗೆ ನಡೆದ ಕಾರ್ತಿಕ ಧರ್ಮ ದೀಪೋತ್ಸವವು ಭಕ್ತರ ಮನದಲ್ಲಿ ಜ್ಞಾನದ ಜ್ಯೋತಿ ಬೆಳಗಿಸುವ ಸಂದೇಶದೊಂದಿಗೆ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಸಂಸದ ಬಿ..ವೈ. ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಚನ್ನಬಸಪ್ಪ, ಮಾಜಿ ಶಾಸಕ ಹಾಲಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥಗೌಡ, ಎಚ್.ಎಸ್. ಜಗದೀಶ್, ಕೆ.ಆರ್. ಪ್ರಕಾಶ್, ಚೆನ್ನಬಸಪ್ಪಗೌಡರು, ಬಿ. ಯುವರಾಜ್, ಉಮೇಶ್ ಮಸೂರು, ಎಚ್.ವಿ. ಈಶ್ವರಪ್ಪಗೌಡ್ರು, ಎನ್.ಎನ್. ವರ್ತೇಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.










