ದೆಹಲಿಯಲ್ಲಿ ಬೀದಿ ನಾಯಿಗಳ ಹಾವಳಿ ತಡೆಗೆ ಸುಪ್ರೀಂಕೋರ್ಟ್ ಆ.11 ರಂದು ಮಹತ್ವದ ಆದೇಶ ಹೊರಡಿಸಿತ್ತು. ದೇಶದ ರಾಜಧಾನಿಯಲ್ಲಿರುವ ಎಲ್ಲಾ ಬೀದಿನಾಯಿಗಳನ್ನು ಸ್ಥಳಾಂತರಿಸಿ, ಅವುಗಳಿಗೆ ನೆಲೆ ಕಲ್ಪಿಸಲು ಅಲ್ಲಿನ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಬಗ್ಗೆ ದೇಶದೆಲ್ಲೆಡೆ ಪರ-ವಿರೋಧ ಚರ್ಚೆಗಳು ಶುರುವಾಗಿದೆ. ಕೆಲವರು ಸುಪ್ರೀಂ ಆದೇಶವನ್ನು ಸ್ವಾಗತಿಸಿದ್ದರೆ, ಮತ್ತೆ ಕೆಲವರು ವಿರೋಧಿಸುತ್ತಿದ್ದಾರೆ. ಇದೀಗ ಈ ಬಗ್ಗೆ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯಿಸಿದ್ದು, ಸುಪ್ರೀಂಕೋರ್ಟ್ ತೀರ್ಪನ್ನು ತಾವು ಪ್ರಶ್ನಿಸುವುದಿಲ್ಲ ಎಂದು ಹೇಳುತ್ತಲೇ, ಮೂಖ ಜೀವಿಗಳಿಗೆ ದನಿಯಾಗಲು ಕರೆ ನೀಡಿದ್ದಾರೆ.
ಈ ಬಗ್ಗೆ ನಟ ಸುದೀಪ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ‘ನವದೆಹಲಿಯಲ್ಲಿನ ಬೀದಿ ನಾಯಿಗಳನ್ನು ಸ್ಥಳಾಂತರಗೊಳಿಸುವ ಬಗೆಗಿನ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನಾನು ಏನೂ ಪ್ರಶ್ನೆ ಮಾಡುವುದಿಲ್ಲ. ಅದಕ್ಕೆ ಅದರದ್ದೇ ಆದ ಕಾರಣಗಳು ಇರಬಹುದು. ಆದರೆ ಆ ಆದೇಶವು, ಶ್ವಾನಗಳ ಆರೋಗ್ಯ, ಅವುಗಳ ಜೀವನ ಚಕ್ರದ ಮೇಲಾಗುವ ಬದಲಾವಣೆಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟು ಮಾಡುತ್ತವೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.
ಶ್ವಾನಗಳನ್ನು ಆಶ್ರಯ ತಾಣಗಳಲ್ಲಿ ಇಡುವುದು ಅವುಗಳ ಸ್ವಾತಂತ್ರ್ಯ ಹರಣ ಮಾಡಿದ ಹಾಗಾಗುತ್ತದೆ ಎಂದು ಸೂಚ್ಯವಾಗಿ ಹೇಳಿರುವ ಅವರು, ಬೀದಿ ನಾಯಿಗಳು ಸಾಧಾರಣವಾಗಿದ್ದ ಸಮಾಜದಲ್ಲಿ ನಾನು ಬೆಳೆದಿದ್ದು, ಅಲ್ಲದೆ ನಮ್ಮ ಕುಟುಂಬದವರು ಕೆಲವಾರು ಬೀದಿ ನಾಯಿಗಳನ್ನು ದತ್ತು ಪಡೆದು ಸಾಕುತ್ತಿದ್ದೇವೆ. ಶ್ವಾನಗಳು ನಮಗೆ ನೀಡುವ ಪ್ರೀತಿ ಮತ್ತು ನಿಷ್ಠೆ ಅಪಾರವಾದುದು. ಅವುಗಳು ಬೀದಿಯಲ್ಲಿ ಬೆಳೆಯುವುದನ್ನು ಬಯಸಿದ್ದಲ್ಲ, ಆದರೆ ನಾವುಗಳು ಮನಸ್ಸು ಮಾಡಿದರೆ ಅವುಗಳಿಗೆ ಮನೆ ನೀಡಬಹುದು. ಧ್ವನಿ ಇಲ್ಲದ ಜೀವಿಗಳಿಗೆ ನಾವು ಧ್ವನಿ ಆಗೋಣ, ಬೀದಿ ನಾಯಿಗಳನ್ನು ದತ್ತು ಪಡೆಯೋಣ ಎಂದು ಮನವಿ ಮಾಡಿದ್ದಾರೆ.