ಕರ್ನಾಟಕ ಜನಪ್ರತಿನಿಧಿಗಳಿಗೆ ಪೋಷಕರಿಂದ ಬಹಿರಂಗ ಪತ್ರ,.
“ವೈದ್ಯರನ್ನು ದೇವರ ಇನ್ನೊಂದು ರೂಪ” ಎಂದು ಜನಸಾಮಾನ್ಯರು ನಂಬಿದ್ದ ಕಾಲ ಇದೀಗ ಇತಿಹಾಸವಾಗಿದೆ. ಇಂದಿನ ದಿನಗಳಲ್ಲಿ ವೈದ್ಯಕೀಯ ಶಿಕ್ಷಣ ಪವಿತ್ರತೆಯನ್ನು ಕಳೆದುಕೊಂಡು ವ್ಯಾಪಾರದ ವಸ್ತುವಾಗಿ ಮಾರ್ಪಟ್ಟಿರುವುದನ್ನು ನಾವು ನೇರವಾಗಿ ಕಾಣುತ್ತಿದ್ದೇವೆ ಎಂದು ಪೋಷಕರ ವೃಂದ ತಮ್ಮ ಬಹಿರಂಗ ಪತ್ರದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿ ಉಲ್ಲೇಖಿಸಿರುವಂತೆ:
ಕರ್ನಾಟಕದ ಹಲವಾರು ಖಾಸಗಿ ಹಾಗೂ ಡೀಮ್ಡ್ ವೈದ್ಯಕೀಯ ಕಾಲೇಜುಗಳು (ಶ್ರೀ ಸಿದ್ಧಾರ್ಥ, ಬಿ.ಎಲ್.ಡಿ, ದೇವರಾಜ್ ಅರಸ್, ರಾಜರಾಜೇಶ್ವರಿ, ಕಸ್ತೂರಿಬಾ ಮಣಿಪಾಲ್, ಜೆಎಸ್‌ಎಸ್, ಕೆಎಲ್ಇ, ಎನಪೋಯ ಮುಂತಾದವು) ಪ್ರತಿ ವರ್ಷ ಲಕ್ಷಾಂತರ ರೂಪಾಯಿಗಳ ಶುಲ್ಕಕ್ಕೆ ಸೀಟುಗಳನ್ನು ಮಾರಾಟ ಮಾಡುತ್ತಿವೆ.

ಸರ್ಕಾರಿ ಕಾಲೇಜುಗಳಲ್ಲಿ ವರ್ಷಕ್ಕೆ ಕೇವಲ ₹64,350 ಶುಲ್ಕವಿದ್ದರೆ, ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೂಟದ ಸೀಟುಗಳಿಗೂ ₹1.5 ಲಕ್ಷದಿಂದ ₹1.8 ಲಕ್ಷ ವರೆಗೆ ಶುಲ್ಕ ವಿಧಿಸಲಾಗುತ್ತಿದೆ.
ಹೆಚ್ಚುವರಿ ಶುಲ್ಕ ತೆಗೆದುಕೊಳ್ಳಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವಿದ್ದರೂ, ಹಲವಾರು ಕಾಲೇಜುಗಳು ಪಾರದರ್ಶಕತೆಯನ್ನು ಮೀರಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ವಸೂಲು ಮಾಡುತ್ತಿರುವುದನ್ನು ಪತ್ರದಲ್ಲಿ ಆರೋಪಿಸಲಾಗಿದೆ.
ಪೋಷಕರ ಕಳವಳ:
“ಬೇಲಿಯೇ ಹೊಲ ಮೇಯುತ್ತಿರುವಂತಾಗಿದೆ. ಸಾಮಾಜಿಕ ನ್ಯಾಯವನ್ನು ರಕ್ಷಿಸಬೇಕಾದ ಜನಪ್ರತಿನಿಧಿಗಳೇ, ಶಿಕ್ಷಣ ವ್ಯವಹಾರವನ್ನು ನಡೆಸುತ್ತಿರುವುದು ವಿಷಾದನೀಯ. ಶಿಕ್ಷಣ ಮಾರಾಟ ವಸ್ತುವಾಗಬಾರದು, ಅದು ಸಮಾಜದ ಒಳಿತಿಗಾಗಿ ಇರಬೇಕು,” ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಇನ್ನೂ ಕೆಲವು ಉತ್ತಮ ಅಧಿಕಾರಿಗಳು ಪಾರದರ್ಶಕತೆಗೆ ಶ್ರಮಿಸುತ್ತಿದ್ದರೂ, ಪ್ರಭಾವಿ ಜನಪ್ರತಿನಿಧಿಗಳ ಒತ್ತಡಕ್ಕೆ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.

“ಜನಪ್ರತಿನಿಧಿಗಳು ತಮ್ಮ ನಿಲುವು ಬದಲಿಸಿ ಸಮಾಜಕ್ಕೆ ಮಾದರಿಯಾಗಲಿ, ಶಿಕ್ಷಣ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಲಿ. ಮುಂದಿನ ಪೀಳಿಗೆಗೆ ಸದೃಢ ಬುನಾದಿ ನಿರ್ಮಿಸಲು ಸರ್ಕಾರ ಕ್ರಮ ಕೈಗೊಳ್ಳಲಿ” ಎಂಬ ಮನವಿ ಸಲ್ಲಿಸಲಾಗಿದೆ. ಜನಪ್ರತಿನಿಧಿಗಳೇ ಹೊಣೆಗಾರರು – ಈ ಕಾಲೇಜುಗಳನ್ನು ಮುನ್ನಡೆಸುತ್ತಿರುವವರು ರಾಜಕೀಯ ನಾಯಕರು ಮತ್ತು ಸಚಿವರು. “ಬೇಲಿಯೇ ಹೊಲ ಮೇದಂತೆ” – ಸಾಮಾಜಿಕ ನ್ಯಾಯವನ್ನು ಮಾಡಬೇಕಾದವರು ಅದನ್ನು ಪಾಲಿಸುತ್ತಿಲ್ಲ.

ವಿದ್ಯೆ ಮಾರಾಟ ವಸ್ತುವಾಗಬಾರದು – ಸಮಾಜಕ್ಕೆ ಜವಾಬ್ದಾರಿ ಸಂದೇಶ:
ವಿದ್ಯೆ ಎಂದರೆ ಸಮಾಜದ ಬೆಳಕನ್ನು ಹಚ್ಚುವ ದೀಪ. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣವನ್ನು ಮಾರಾಟ ವಸ್ತುವಿನಂತೆ ಕಾಣುವ ದುಸ್ಥಿತಿ ಎದುರಾಗಿದೆ. “ವಿದ್ಯೆ ಮಾರಾಟ ವಸ್ತುವಾಗಬಾರದು“ ಎಂಬ ಜನಮನದ ಕೂಗು ಈಗ ಎಲ್ಲೆಡೆ ಕೇಳಿಸುತ್ತಿದೆ.
ಸಮಾಜದ ಹಿತಕ್ಕಾಗಿ ಮತ್ತು ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ವ್ಯವಸ್ಥೆ ಪಾರದರ್ಶಕವಾಗಬೇಕೆಂಬುದು ಕಾಲದ ಅವಶ್ಯಕತೆ. ಉತ್ತಮ ಅಧಿಕಾರಿಗಳು ತಮ್ಮ ಶ್ರಮದ ಮೂಲಕ ಶೈಕ್ಷಣಿಕ ಕ್ಷೇತ್ರವನ್ನು ಶುದ್ಧಗೊಳಿಸಲು ಪ್ರಯತ್ನಿಸುತ್ತಿದ್ದರೂ, ಪ್ರಭಾವಿ ರಾಜಕಾರಣಿಗಳ ಅಡ್ಡಿ ಇದಕ್ಕೆ ಅಡ್ಡಿಯಾಗುತ್ತಿದೆ.

ಜನಪ್ರತಿನಿಧಿಗಳು ತಮ್ಮ ನಿಲುವು ಬದಲಿಸಿ, ಶಿಕ್ಷಣವನ್ನು ಧರ್ಮದಂತೆಯೇ ಪವಿತ್ರವೆಂದು ಭಾವಿಸಿ ಸಮಾಜಕ್ಕೆ ಮಾದರಿಯಾಗಬೇಕೆಂಬ ಮನವಿ ಸಾಮಾಜಿಕ ವಲಯದಿಂದ ಕೇಳಿಬರುತ್ತಿದೆ. ಇದು ಕೇವಲ ಒಂದೇ ಪೀಳಿಗೆಗೆ ಸೀಮಿತವಲ್ಲ, ಇಡೀ ಸಮಾಜದ ಭವಿಷ್ಯವನ್ನು ಕಟ್ಟುವ ಮೂಲ. ಆದ್ದರಿಂದ, ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಕರ್ನಾಟಕ ಜನಪ್ರತಿನಿಧಿಗಳಿಗೆ ಪೋಷಕರಿಂದ ಬಹಿರಂಗ ಪತ್ರ,.

