ಮೈಸೂರು, ಆಗಸ್ಟ್ 31:“ಶೂದ್ರ ಶ್ರಮಿಕ ವರ್ಗಗಳಿಗೆ ಆರ್ಥಿಕ ಚೈತನ್ಯ ನೀಡಲು ಅಂದು ಭಾಗ್ಯ ಯೋಜನೆಗಳು ವರದಾನವಾಗಿದ್ದರೆ, ಇಂದು ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳು ವರದಾನವಾಗಿವೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ನಡೆದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ “ಉಪ್ಪಾರ ಸಮುದಾಯ ಭವನದ” ಶಂಕುಸ್ಥಾಪನೆ ನೆರವೇರಿಸಿದ ನಂತರ ಅವರು ಮಾತನಾಡಿದರು.
“ಜಾತಿ ನೋಡುವ ಸರ್ಕಾರವಲ್ಲ”
“ನಮ್ಮ ಸರ್ಕಾರ ಜಾತಿ ನೋಡಲ್ಲ. ಎಲ್ಲಾ ಜಾತಿಯವರ ಅಭಿವೃದ್ಧಿಯೇ ನಮ್ಮ ಗುರಿ. ಈ ನೆಲದ ದಾರ್ಶನಿಕರು, ಮಹಾನುಭಾವರು ಮನುಕುಲಕ್ಕೆ ನೀಡಿದ ಕೊಡುಗೆಯನ್ನು ಗೌರವಿಸುವ ನಿಟ್ಟಿನಲ್ಲಿ ಅವರ ಜಯಂತಿಗಳನ್ನು ಸರ್ಕಾರವೇ ಆಚರಿಸುತ್ತಿದೆ. ಜೊತೆಗೆ ಜಾತ್ಯತೀತ ಮನೋಭಾವದ ಮೌಲ್ಯಗಳ ಆಧಾರದಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸುತ್ತದೆ” ಎಂದು ಹೇಳಿದರು.
ಶೂದ್ರರ ಹೋರಾಟ – ಅಂಬೇಡ್ಕರ್ ಮಂತ್ರ
“ಚತುರ್ವರ್ಣ ವ್ಯವಸ್ಥೆಯಲ್ಲಿ ಶೂದ್ರರಿಗೆ ಶಿಕ್ಷಣದ ಅವಕಾಶವೇ ಇರಲಿಲ್ಲ. ದುಡಿಯುವ ಅವಕಾಶ ಕೂಡಾ ಸಿಗಲಿಲ್ಲ. ಶೂದ್ರರಲ್ಲಿ ಉಪ್ಪಾರ ಸಮುದಾಯ ಅತೀ ಹಿಂದುಳಿದ ಸಮುದಾಯ. ಅಂಬೇಡ್ಕರ್ ನೀಡಿದ ‘ಶಿಕ್ಷಣ–ಸಂಘಟನೆ–ಹೋರಾಟ’ ಎನ್ನುವ ಮಂತ್ರ ಪಾಲಿಸಿದಾಗ ಮಾತ್ರ ಉಪ್ಪಾರ ಸಮುದಾಯ ಆರ್ಥಿಕವಾಗಿ ಬಲಿಷ್ಠವಾಗಲಿದೆ. ಈ ಉದ್ದೇಶದಿಂದಲೇ ನಾನು ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪಿಸಿದೆ” ಎಂದು ಸಿಎಂ ಹೇಳಿದರು.
ಭಾಗ್ಯದಿಂದ ಗ್ಯಾರಂಟಿವರೆಗೆ
“ಮೊದಲ ಬಾರಿಗೆ ಸಿಎಂ ಆದಾಗ ಹಲವು ಭಾಗ್ಯ ಯೋಜನೆಗಳನ್ನು ಕಲ್ಪಿಸಿದ್ದೆ. ಎರಡನೇ ಬಾರಿ ಸಿಎಂ ಆದ ಬಳಿಕ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇನೆ. ಇದರ ಪರಿಣಾಮವಾಗಿ ಪ್ರತೀ ಕುಟುಂಬಕ್ಕೆ ತಿಂಗಳಿಗೆ 5ರಿಂದ 6 ಸಾವಿರ ರೂಪಾಯಿಯ ನೆರವು ದೊರೆಯುತ್ತಿದೆ” ಎಂದು ವಿವರಿಸಿದರು.
ಆರ್ಥಿಕ ಅಸಮಾನತೆಗೆ ಪರಿಹಾರ
“ಆರ್ಥಿಕ ಅಸಮಾನತೆ ಕೇವಲ ಭಾಷಣ ಮಾಡಿದರೆ ಹೋಗಲ್ಲ. ಅದಕ್ಕಾಗಿ ಕಾರ್ಯಕ್ರಮ ರೂಪಿಸಿ ಜಾರಿಗೆ ತರುವುದು ಮುಖ್ಯ. ನಮ್ಮ ಸರ್ಕಾರ ಅದಕ್ಕಾಗಿ ಶ್ರಮಿಸುತ್ತಿದೆ” ಎಂದರು.
ಉಪ್ಪಾರ ಸಮುದಾಯಕ್ಕೆ ಭರವಸೆ
“ಉಪ್ಪಾರ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಉಪ್ಪಾರ ಭವನಗಳಿಗೆ ಹಣ ಒದಗಿಸಲಾಗುವುದು. ಆದರೆ, ನೀವು ಕೂಡ ನಿಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಿಕ್ಷಿತರನ್ನಾಗಿ ಮಾಡುತ್ತೇವೆ ಎಂಬ ಶಪಥ ಮಾಡಬೇಕು. ನಾವು ನಿಮ್ಮ ಜೊತೆ ಗಟ್ಟಿಯಾಗಿ ನಿಂತಿದ್ದೇವೆ, ನೀವು ನಮ್ಮ ಜೊತೆ ಭದ್ರವಾಗಿ ನಿಲ್ಲಿ. ಬದಲಾವಣೆ ಖಂಡಿತ ಬರುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.