ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕಬ್ಬು ಬೆಲೆಗಾಗಿ ರೈತರ ಅಹೋರಾತ್ರಿ ಹೋರಾಟ ತೀವ್ರ: ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ

On: November 4, 2025 7:57 PM
Follow Us:

ಬೆಳಗಾವಿ: ಪ್ರತಿ ಟನ್‌ ಕಬ್ಬಿಗೆ ₹3,500 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ರೈತರು ಕಳೆದ ಐದು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಬಿರುಸಿನ ಗಾಳಿಯಲ್ಲೂ, ಚಳಿಯಲ್ಲೂ ಹೋರಾಟ ಮುಂದುವರಿಸುತ್ತಿರುವ ರೈತರು, ಸ್ಥಳದಲ್ಲೇ ಅಡುಗೆ, ಊಟ, ನಿದ್ದೆ ಮಾಡುತ್ತಾ ಹೋರಾಟವನ್ನು ತೀವ್ರಗೊಳಿಸಿದ್ದಾರೆ.

ಹಸಿರು ಸೇನೆ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ, ರೈತರು ಪ್ರತಿ ಟನ್‌ಗೆ ₹3,200 ರೂ. ನೀಡಲು ಸಕ್ಕರೆ ಕಾರ್ಖಾನೆಗಳು ಮುಂದಾದರೂ, ಅದನ್ನು ತಿರಸ್ಕರಿಸಿದ್ದಾರೆ. “ನ್ಯಾಯಸಮ್ಮತ ಬೆಲೆ ಸಿಗುವವರೆಗೂ ಹೋರಾಟ ಹಿಂತೆಗೆದುಕೊಳ್ಳುವುದಿಲ್ಲ” ಎಂಬ ನಿಲುವು ರೈತರಿಂದ ವ್ಯಕ್ತವಾಗಿದೆ.

ಗೋಕಾಕ್ ಪಟ್ಟಣದಲ್ಲಿ ವಿದ್ಯಾರ್ಥಿಗಳು ರೈತರ ಬೆಂಬಲಕ್ಕೆ ಧಾವಿಸಿ ರಸ್ತೆ ತಡೆ ನಡೆಸಿದ್ದು, ಇದರಿಂದ ಬೆಳಗಾವಿ–ಸವದತ್ತಿ–ಮೂಡಲಗಿ–ಯರಗಟ್ಟಿ ಸಂಪರ್ಕ ಮಾರ್ಗಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಹಸಿರು ಬಾವುಟಗಳನ್ನು ಹಿಡಿದ ರೈತರು “ಸರ್ಕಾರ ರೈತರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದೆ” ಎಂದು ಘೋಷಣೆ ಕೂಗುತ್ತಿದ್ದಾರೆ.

ಪ್ರತಿಭಟನಾಕಾರರು ಸ್ಥಳದಲ್ಲಿಯೇ ತಾತ್ಕಾಲಿಕ ಅಡುಗೆಮನೆ ಸ್ಥಾಪಿಸಿ ಹೋರಾಟಗಾರರಿಗೆ ಆಹಾರ ವಿತರಣೆ ವ್ಯವಸ್ಥೆ ಮಾಡಿದ್ದಾರೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಭಾಗಗಳ ಸಾವಿರಾರು ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ವಕೀಲರು, ಮಾಜಿ ಸೈನಿಕರು ಮತ್ತು ಮಠಾಧೀಶರೂ ಸಹ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.

ರಾಜಕೀಯ ಬೆಂಬಲ

ಪ್ರತಿಭಟನಾ ಸ್ಥಳಕ್ಕೆ ಸೋಮವಾರ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭೇಟಿ ನೀಡಿ, “ರೈತರ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು” ಎಂದು ಒತ್ತಾಯಿಸಿದರು. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ತಮ್ಮ ಪಕ್ಷದ ಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು. “ರೈತರ ನ್ಯಾಯೋಚಿತ ಬೇಡಿಕೆಗಳು ಈಡೇರದವರೆಗೆ ಹೋರಾಟ ಮುಂದುವರೆಯಲಿದೆ” ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರು ದುರ್ಯೋಧನ ಐಹೊಳೆ, ರಾಜ್ಯ ಕಾರ್ಯದರ್ಶಿಗಳು ಪಿ.ರಾಜೀವ್ ಮತ್ತು ಶರಣು ತಳ್ಳಿಕೇರಿ, ಜಿಲ್ಲಾ ಅಧ್ಯಕ್ಷರು ಗೀತಾ ಸುತಾರ ಮತ್ತು ಸುಭಾಷ್ ಪಾಟೀಲ್ ಸೇರಿದಂತೆ ಹಲವು ನಾಯಕರು, ರೈತ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ರೈತರ ಆಕ್ರೋಶ

ರೈತ ಮುಖಂಡರು, “ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ಗೆ ₹3,600 ರೂ. ಪಾವತಿಸುತ್ತಿವೆ. ಆದರೆ ಕರ್ನಾಟಕ ಸರ್ಕಾರ ₹3,050 ರೂ. ಮಾತ್ರ ಒಪ್ಪಿದೆ. ನಮ್ಮ ಬೇಡಿಕೆ ₹3,500 ರೂ. ಕಬ್ಬು ಬೆಲೆ. ನ್ಯಾಯ ದೊರೆಯುವವರೆಗೂ ಹೋರಾಟ ಹಿಂತೆಗೆದುಕೊಳ್ಳುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರೂ, ಮಾತುಕತೆ ಫಲಕಾರಿಯಾಗಿಲ್ಲ.

ರೈತರು ಹೇಳುವಂತೆ, “ಜಿಲ್ಲಾಡಳಿತ ಕಾರ್ಖಾನೆ ಮಾಲೀಕರೊಂದಿಗೆ ತೃಪ್ತಿದಾಯಕ ನಿರ್ಣಯ ಕೈಗೊಂಡಿದ್ದರೆ ನಾವು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುತ್ತಿದ್ದೆವು. ಆದರೆ ಸರ್ಕಾರದ ನಿಲುವು ನಿರ್ಲಕ್ಷ್ಯಮಯವಾಗಿದೆ. ಹಗಲು–ರಾತ್ರಿ ಹೋರಾಟ ಮುಂದುವರಿಯಲಿದೆ.”

ರೈತರ ಕಣ್ಣೀರಿಗೆ ನ್ಯಾಯ ದೊರಕಲಿ

ಕಬ್ಬು ಬೆಳೆದು ಬದುಕು ಕಟ್ಟಿಕೊಂಡಿರುವ ರೈತರು ನ್ಯಾಯೋಚಿತ ಬೆಂಬಲ ಬೆಲೆಗೆ ಹೋರಾಡುತ್ತಿದ್ದಾರೆ. ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯ.
ರೈತರಿಗೆ ನ್ಯಾಯ ದೊರೆತು, ಅವರ ಕಣ್ಣೀರು ಒಣಗಲಿ ಇದೇ ಹೋರಾಟಗಾರರ ಧ್ಯೇಯ.

K.M.Sathish Gowda

Join WhatsApp

Join Now

Facebook

Join Now

Leave a Comment