ಬೆಂಗಳೂರು, ಸೆಪ್ಟೆಂಬರ್ 11: ಕನ್ನಡ ಚಿತ್ರರಂಗದ ದಿಗ್ಗಜ ಕಲಾವಿದರಾದ ಡಾ. ವಿಷ್ಣುವರ್ಧನ್ ಮತ್ತು ಖ್ಯಾತ ನಟಿ ಬಿ. ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ಘೋಷಿಸಿದೆ.
200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿದ್ದ ವಿಷ್ಣುವರ್ಧನ್ ಅವರು ಕನ್ನಡದ ಪರದೆಯಲ್ಲಷ್ಟೇ ಅಲ್ಲ, ಜನರ ಹೃದಯದಲ್ಲಿಯೂ ಸದಾ ಬದುಕಿರುವ ಕಲಾವಿದ. ತಮ್ಮ ವಿಶಿಷ್ಟ ಅಭಿನಯ ಶೈಲಿ, ಸಮರ್ಪಣೆ ಮತ್ತು ವಿಭಿನ್ನ ಪಾತ್ರಗಳ ಮೂಲಕ ಅವರು ಕನ್ನಡ ಚಿತ್ರರಂಗದಲ್ಲಿ ಅಜರಾಮರ ಸ್ಥಾನ ಪಡೆದಿದ್ದಾರೆ.
ಅದೇ ರೀತಿ, ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿಯೂ ಮಿಂಚಿದ ಬಿ. ಸರೋಜಾದೇವಿ ಅವರು ಕನ್ನಡ ಸಿನೆಮಾದ ‘ಅಭಿನಯ ಶಾರದೆ ’ಎಂದು ಕರೆಯಲ್ಪಟ್ಟಿದ್ದರು. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ, ದಶಕಗಳ ಕಾಲ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದ ಅವರು ದಕ್ಷಿಣ ಭಾರತೀಯ ಚಿತ್ರರಂಗದ ಚಿರಸ್ಮರಣೀಯ ತಾರೆಗಳ ಪೈಕಿ ಒಬ್ಬರು.
ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಹಲವು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದ “ಇಬ್ಬರಿಗೂ ಕರ್ನಾಟಕ ರತ್ನ ನೀಡಬೇಕು” ಎಂಬ ಮನವಿಯನ್ನು ಈ ಬಾರಿ ಸರ್ಕಾರ ಅಂಗೀಕರಿಸಿದೆ.
ಇದರಿಂದ ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಇಬ್ಬರು ದಿಗ್ಗಜರು ನೀಡಿದ ಕೊಡುಗೆ ಮತ್ತೊಮ್ಮೆ ಸ್ಮರಿಸಲ್ಪಟ್ಟಿದ್ದು, ಅಭಿಮಾನಿಗಳ ಹರ್ಷಕ್ಕೆ ಕಾರಣವಾಗಿದೆ.