ಶಿವಮೊಗ್ಗ: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ)ದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಸಾರ್ವಜನಿಕ ಸಂಪನ್ಮೂಲಗಳ ದುರುಪಯೋಗ ನಡೆದಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿ ಬುಧವಾರ ಜೆಡಿಎಸ್ ನಗರ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, 20-05-2023 ರಂದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕದಿಂದ ಇಂದಿನವರೆಗೆ ಸೂಡಾ ಕೈಗೊಂಡಿರುವ ಎಲ್ಲಾ ಕಾಮಗಾರಿಗಳಲ್ಲಿ ಅವ್ಯವಹಾರಗಳ ಸುಳಿವುಗಳು ಕಂಡುಬರುತ್ತಿವೆ ಎಂದು ಆರೋಪಿಸಿದರು. ಅವಳಿ ನಗರಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಬೇಕಾದ ಪ್ರಾಧಿಕಾರವು ಕಳಪೆ ಕಾಮಗಾರಿ, ಸುಳ್ಳು ಬಿಲ್ಲು, ಅವೈಜ್ಞಾನಿಕ ಯೋಜನೆಗಳ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಕಿಡಿಕಾರಿದರು.
‘12 ಕಾಮಗಾರಿಗಳು ಸುಂದರೇಶ್ ಅವಧಿಯಲ್ಲೇ’
ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ “ಈ ಕಾಮಗಾರಿಗಳು ನನ್ನ ಅವಧಿಯಲ್ಲಿ ನಡೆದಿಲ್ಲ, ತನಿಖೆಗೆ ನನಗೆ ಅಭ್ಯಂತರವಿಲ್ಲ” ಎಂದು ಹೇಳಿದ್ದರು. ಆದರೆ ಈಗ ಬೆಳಕಿಗೆ ಬಂದ 13 ಕಾಮಗಾರಿಗಳಲ್ಲಿ 12 ಕಾಮಗಾರಿಗಳು ಅವರ ಅಧ್ಯಕ್ಷತೆಯ ಅವಧಿಯಲ್ಲೇ ನಡೆದಿವೆ ಎಂಬ ದಾಖಲೆಗಳು ಲಭ್ಯವಿವೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಸೂಡಾ ಅಧ್ಯಕ್ಷರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದೊಂದಿಗೆ ಲೋಕಾಯುಕ್ತರಿಗೆ ದಾಖಲೆ ಸಮೇತ ದೂರು ನೀಡಲಾಗಿದೆ. ಆದ್ದರಿಂದ ಜಿಲ್ಲಾಧಿಕಾರಿ ಹಾಗೂ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಗುತ್ತಿಗೆದಾರರಿಂದ ಲೋಕಾಯುಕ್ತರಿಗೆ ದೂರು
ಗುತ್ತಿಗೆದಾರರಾದ ಶ್ರೀ ಗುರುಸಾಯಿ ಮತ್ತು ಶ್ರೀ ಬಸವರಾಜ್ ಅವರು ಸೂಡಾ ಕೈಗೊಂಡ 13 ಕಾಮಗಾರಿಗಳನ್ನು ಗುರುತಿಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಿರುವುದಾಗಿ ಜೆಡಿಎಸ್ ಮುಖಂಡರು ತಿಳಿಸಿದರು. ದೂರಿನಲ್ಲಿ ಭಾರೀ ಮಟ್ಟದ ಅಕ್ರಮ, ಟೆಂಡರ್ ಪ್ರಕ್ರಿಯೆಯಲ್ಲಿನ ಮೋಸ ಹಾಗೂ ಕಾಮಗಾರಿ ನಿರ್ವಹಣೆಯಲ್ಲಿನ ಅಸಂಗತತೆಗಳ ಬಗ್ಗೆ ವಿವರವಾಗಿ ಉಲ್ಲೇಖಿಸಿರುವುದಾಗಿ ಹೇಳಿದರು. ಸಲ್ಲಿಸಲಾದ ದಾಖಲೆಗಳು ಆರೋಪಗಳಿಗೆ ಮೇಲ್ನೋಟಕ್ಕೆ ಆಧಾರ ಒದಗಿಸುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ವಾಜಪೇಯಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ವೇಳೆ ಅಕ್ರಮಗಳು ನಡೆದಿದ್ದವು. ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ತನಿಖೆ ಹಾಗೂ ನಿವೃತ್ತ ನ್ಯಾಯಮೂರ್ತಿ ರವೀಂದ್ರನಾಥ್ ಅವರ ವರದಿ ಬಳಿಕ ಹಲವು ಅಂಶಗಳು ಬಹಿರಂಗವಾಗಿದ್ದವು. ಲೋಕಾಯುಕ್ತ ತನಿಖೆಯೂ ನಡೆದಿದ್ದು, ಅರ್ಹ ನಿವೇಶನದಾರರಿಗೆ ಉಂಟಾಗಿದ್ದ ತೊಂದರೆಗಳು ಕೆಲವು ಮಟ್ಟಿಗೆ ನಿವಾರಣೆಯಾಗಿದ್ದವು ಎಂದು ಅವರು ನೆನಪಿಸಿದರು.

“ಹೊಸ ಬಡಾವಣೆಗಳಲ್ಲೂ ಗಂಭೀರ ಅಕ್ರಮ: 91ಕ್ಕೂ ಹೆಚ್ಚು ಕಾಮಗಾರಿಗಳ ತನಿಖೆ ಅಗತ್ಯ” – ದೀಪಕ್ ಸಿಂಗ್
ಶಿವಮೊಗ್ಗ ನಗರದ ವಾಜಪೇಯಿ ಬಡಾವಣೆ, ಊರುಗಡೂರು ಬಡಾವಣೆ ಸೇರಿದಂತೆ ನಿರ್ಮಾಣ ಹಂತದಲ್ಲಿರುವ ಹೊಸ ಬಡಾವಣೆಗಳ ಕಾಮಗಾರಿಗಳಲ್ಲಿಯೂ ಗಂಭೀರ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್ ಆರೋಪಿಸಿದರು.

ಈ ಕುರಿತು ಮಾತನಾಡಿದ ಅವರು, ರಸ್ತೆ ನಿರ್ಮಾಣಕ್ಕಾಗಿ ನಿವೇಶನಗಳ ಜಾಗದಿಂದಲೇ ಮಣ್ಣು ತೆಗೆದು ಬಳಸಲಾಗುತ್ತಿದೆ. ಬಳಿಕ ಆ ಗುಂಡಿಗಳನ್ನು ನಗರದ ಕಸ ತಂದು ತುಂಬಲಾಗುತ್ತಿದೆ ಎಂಬುದು ದೂರಿನಲ್ಲಿ ಉಲ್ಲೇಖಗೊಂಡಿರುವ ಅಘಾತಕಾರಿ ವಿಷಯವಾಗಿದೆ. ಇದು ಭವಿಷ್ಯದಲ್ಲಿ ಅಲ್ಲಿನ ನಿವಾಸಿಗಳಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಹಾಗೂ ಮೂಲಸೌಕರ್ಯ ಸಂಬಂಧಿತ ತೊಂದರೆಗಳನ್ನುಂಟು ಮಾಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೂಲಭೂತ ಸೌಕರ್ಯಗಳಾದ ರಸ್ತೆ, ಬಾಕ್ಸ್ ಚರಂಡಿ, ಮೋರಿಗಳು, ಉದ್ಯಾನವನಗಳ ನಿರ್ಮಾಣಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಮಟ್ಟದ ಮೋಸ ನಡೆದಿದೆ. ಕಾಮಗಾರಿ ನಿರ್ವಹಣೆಯಲ್ಲಿಯೂ ಗುಣಮಟ್ಟದ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅವಳಿ ನಗರಗಳ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಾದ ಪ್ರಾಧಿಕಾರವು ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ತಂದಿದೆ ಎಂದು ಅವರು ಕಿಡಿಕಾರಿದರು.

ಇದರಿಂದಾಗಿ 20-05-2023ರಿಂದ ಇಂದಿನವರೆಗೆ ಸೂಡಾ ಕೈಗೊಂಡಿರುವ ಸುಮಾರು 91ಕ್ಕೂ ಹೆಚ್ಚು ಕಾಮಗಾರಿಗಳ ಕುರಿತಂತೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ದೀಪಕ್ ಸಿಂಗ್ ಒತ್ತಾಯಿಸಿದರು. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ದುರುಪಯೋಗವಾದ ಹಣವನ್ನು ಮರುಪಾವತಿಸಬೇಕು. ಸಾರ್ವಜನಿಕ ಹಣದ ಲೂಟಿ ಸಹಿಸಲಾಗುವುದಿಲ್ಲ ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎನ್. ರಾಮಕೃಷ್ಣ, ನಗರಾಧ್ಯಕ್ಷ ದೀಪಕ್ ಸಿಂಗ್ ಸೇರಿದಂತೆ ನರಸಿಂಹ ಗಂಧದಮನೆ, ಗೀತಾ ಸತೀಶ್, ಸಂಜಯ್ ಕಶ್ಯಪ್, ರಘು ಬಾಲರಾಜ್, ಭವಾನಿ ನರಸಿಂಹ, ಶಾರದಮ್ಮ, ರವಿ ಕೋಳಿಗದ್ದೆ ಹಾಗೂ ಇತರರು ಭಾಗವಹಿಸಿದ್ದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಸೂಡಾದ ಎಲ್ಲಾ ಕಾಮಗಾರಿಗಳ ಸಮಗ್ರ ಪರಿಶೀಲನೆ ನಡೆಸಿ ಪಾರದರ್ಶಕ ಆಡಳಿತವನ್ನು ಖಚಿತಪಡಿಸಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿದೆ.







