ಧರ್ಮಸ್ಥಳ: ಧರ್ಮಸ್ಥಳ ಸುತ್ತಮುತ್ತ ಶವಗಳನ್ನು ಹೂಳಲಾಗಿದೆ ಎಂಬ ಗಂಭೀರ ಆರೋಪದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ವರದಿಯಾಗಿದೆ. ವಿಶೇಷ ತನಿಖಾ ದಳ ಪತ್ತೆಹಚ್ಚಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಮೂರು ಬುರುಡೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ದೊರೆತ ಎಫ್ಎಸ್ಎಲ್ ವರದಿ ಆ ಬುರುಡೆಗಳು ಮಹಿಳೆಯರದ್ದಲ್ಲ, ಪುರುಷರದ್ದೇ ಎಂಬುದನ್ನು ದೃಢಪಡಿಸಿದೆ. ಮೂವರು ವ್ಯಕ್ತಿಗಳ ವಯಸ್ಸು 25ರಿಂದ 39 ವರ್ಷದೊಳಗೆ ಇರಬಹುದೆಂದು ತಜ್ಞರ ಅಂದಾಜು. ಜೊತೆಗೆ ಬುರುಡೆಗಳ ಮೇಲೆ ಯಾವುದೇ ರೀತಿಯ ಹಲ್ಲೆ, ಗಾಯ ಅಥವಾ ಹತ್ಯೆಗೆ ಸಂಬಂಧಿಸಿದ ಗುರುತುಗಳು ಕಂಡುಬಂದಿಲ್ಲ ಎಂದು ವರದಿ ಹೇಳಿದೆ.
ಈ ಬುರುಡೆಗಳು ಸ್ಪಾಟ್ ನಂ. 6, ಅದೇ ಆವರಣದ ಮತ್ತೊಂದು ಭಾಗ ಮತ್ತು ಸ್ಪಾಟ್ ನಂ. 15ರ ಬಳಿ ಪತ್ತೆಯಾಗಿದ್ದವು. ಪ್ರಾರಂಭಿಕ ಹಂತದಲ್ಲಿ ಮಹಿಳೆಯರು ಮತ್ತು ಯುವತಿಯರ ಶವಗಳನ್ನು ರಹಸ್ಯವಾಗಿ ಹೂತುಹಾಕಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದರೂ, ಮೊದಲ ಎಫ್ಎಸ್ಎಲ್ ವರದಿ ಆ ವಾದಕ್ಕೆ ಬೆಂಬಲ ನೀಡದಿರುವುದು ಗಮನಾರ್ಹವಾಗಿದೆ. ಇದೇ ವೇಳೆ ನಂತರ ಪತ್ತೆಯಾದ ಮತ್ತೇ ಏಳು ಬುರುಡೆಗಳನ್ನು ಇನ್ನೂ ಎಫ್ಎಸ್ಎಲ್‌ಗೆ ಕಳುಹಿಸದಿರುವುದು ಸ್ಥಳೀಯ ವಲಯಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ತನಿಖೆಯ ಗತಿಯ ಬಗ್ಗೆ ಹಾಗೂ ಪಾರದರ್ಶಕತೆಯ ಕೊರತೆ ಕುರಿತು ಆಕ್ಷೇಪಗಳು ಕೇಳಿಬರುತ್ತಿವೆ.
ಪೊಲೀಸರು ಈ ಆರೋಪವನ್ನು ಧರ್ಮಸ್ಥಳದ ವಿರುದ್ಧ ರೂಪಿತ ಷಡ್ಯಂತ್ರದ ಅಂಗವನ್ನಾಗಿ ಕೆಲವರು ಬಳಸುತ್ತಿರುವ ಸಾಧ್ಯತೆಗೂ ಪರಿಶೀಲನೆ ನಡೆಸುತ್ತಿದ್ದಾರೆ. ಉಳಿದ ಮೂಳೆಗಳ ಪರೀಕ್ಷೆ, ಡಿಎನ್‌ಎ ಸರಿಹೊಂದಿಕೆ ಮತ್ತು ಗುರುತು ಪತ್ತೆ ಕ್ರಮಗಳು ಆರಂಭವಾದ ಬಳಿಕ ತನಿಖೆಗೆ ಹೊಸ ದಿಕ್ಕು ದೊರಕುವ ನಿರೀಕ್ಷೆ ವ್ಯಕ್ತವಾಗಿದೆ. ಜನರಲ್ಲಿ ಕುತೂಹಲ, ಅನುಮಾನ ಮತ್ತು ಚರ್ಚೆಗಳು ಮುಂದುವರಿದಿದ್ದು, ಮುಂದಿನ ವರದಿಗಳತ್ತ ಎಲ್ಲರ ಗಮನ ನೆಟ್ಟಿದೆ.