ಮೈಸೂರು, ಅಕ್ಟೋಬರ್ 02: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂತಿಮ ದಿನದ ಜಂಬೂಸವಾರಿಗೆ ಮುಖ್ಯಮಂತ್ರಿ ಅವರು ಅರಮನೆ ಆವರಣದಲ್ಲಿ ಭವ್ಯ ಪುಷ್ಪಾರ್ಚನೆ ನೆರವೇರಿಸಿ ಚಾಲನೆ ನೀಡಿದರು. ಅರಮನೆ ಸಮಾರಂಭ ಮೈದಾನದಲ್ಲಿ ನಡೆದ ಈ ಸಂಭ್ರಮಕ್ಕೆ ಜನಸಾಗರ ಸಾಕ್ಷಿಯಾಯಿತು.
ಈ ಬಾರಿ ಆರನೇ ಬಾರಿಗೆ ಕ್ಯಾಪ್ಟನ್ ಅಭಿಮನ್ಯು ಆನೆ ಚಿನ್ನದ ಅಂಬಾರಿಯನ್ನು ಹೊತ್ತು ಮೆರವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಮಾವುತ ವಸಂತ ಅಭಿಮನ್ಯುವಿನ ಮುನ್ನಡೆಸಿಕೆಯಲ್ಲಿ ಅವಿಭಾಜ್ಯ ಪಾತ್ರ ನಿರ್ವಹಿಸಿದರು. ಕುಮ್ಕಿ ಆನೆಗಳಾದ ಕಾವೇರಿ ಮತ್ತು ರೂಪಾ ಬೆಂಬಲವಾಗಿ ಜೊತೆಯಾದವು.

ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜವಂಶಸ್ಥ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಶಾಸಕ ತನ್ವೀರ್ ಸೇಠ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮತ್ತು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈವರೆಗೂ ಏಳು–ಎಂಟು ಬಾರಿ ಜಂಬೂಸವಾರಿಗೆ ಚಾಲನೆ ನೀಡಿರುವುದನ್ನು ನೆನಪಿಸಿಕೊಂಡು, ಇದು ಆಲ್ ಟೈಮ್ ರೆಕಾರ್ಡ್ ಆಗಿರಬಹುದು, ಆದರೆ ನಾನು ದಾಖಲೆ ಸಂಗ್ರಹಿಸುವ ಮನಸ್ಥಿತಿಯಲ್ಲಿಲ್ಲ ಎಂದು ತಿಳಿಸಿದ್ದಾರೆ. ಜನರ ಆಶೀರ್ವಾದದಿಂದಲೇ ದಸರಾ ಮಹೋತ್ಸವದಲ್ಲಿ ಹಲವು ಬಾರಿ ಭಾಗವಹಿಸುವ ಅವಕಾಶ ದೊರೆತಿದೆ ಎಂಬ ಸಂತಸವನ್ನೂ ಅವರು ವ್ಯಕ್ತಪಡಿಸಿದರು.
ಇದು ನಾಡಹಬ್ಬ, ಜನರ ಹಬ್ಬ. ಜನತೆ ಸಂತೋಷವಾಗಿದ್ದರೆ ಸರ್ಕಾರಕ್ಕೂ ಸಂತೋಷ. ಜನರ ಭಾಗವಹಿಸುವಿಕೆಯಿಂದ ದಸರಾ ಸಂಭ್ರಮ ಮತ್ತಷ್ಟು ಶ್ರೀಮಂತವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ನಂದಿ ಪೂಜೆಯೊಂದಿಗೆ ಜಂಬೂಸವಾರಿ ಮೆರವಣಿಗೆಗೆ ಚಾಲನೆ ದೊರೆತಿದ್ದು, ಚಾಮುಂಡೇಶ್ವರಿ ತಾಯಿಯ ಪ್ರತಿಮೆಯ ಅಂಬಾರಿಗೆ ಪುಷ್ಪಾರ್ಚನೆ ನೆರವೇರಿಸುವುದರ ಮೂಲಕ ಸಂಪ್ರದಾಯವನ್ನು ಕಾಪಾಡಲಾಯಿತು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸಿದ್ದು, ದಸರಾ ಉತ್ಸವಕ್ಕೆ ಹೊಸ ಚೈತನ್ಯ ತುಂಬಿದೆ.