ಚಿಕ್ಕೋಡಿ, ಅಕ್ಟೋಬರ್ 03: ರಾಜ್ಯದಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದರೂ ಸರ್ಕಾರ ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದ್ದು, ನಾಲ್ಕು ತಿಂಗಳಿಗೊಮ್ಮೆ ಬರುವ ಎನ್‌ಡಿಆರ್‌ಎಫ್ (NDRF) ಹಣವನ್ನೂ ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಇದಕ್ಕಿಂತ ದೊಡ್ಡ ನಾಚಿಕೆ ಬೇರೆ ಇರಲಾರದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಅತಿವೃಷ್ಟಿಯಿಂದ ರೈತರು ನಲುಗಿ ಹೋಗಿದ್ದಾರೆ. ಆದರೆ ರಾಜ್ಯ ಸರ್ಕಾರ ಇನ್ನೂ ಕೇಂದ್ರಕ್ಕೆ ಪರಿಹಾರಕ್ಕಾಗಿ ಪತ್ರ ಬರೆದಿಲ್ಲ. ಸಿಎಂ ಮತ್ತು ಡಿಸಿಎಂ ಜನರ ದುಃಖವನ್ನು ಮರೆತು ಮಜಾ ಮಾಡಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು.
ಅಶೋಕ್ ಅವರು ರಾಜಕೀಯ ಬೆಳವಣಿಗೆಗಳ ಕುರಿತೂ ತೀವ್ರ ಟೀಕೆ ಮಾಡಿದರು. “ರಾಜಣ್ಣರಿಗೆ ಈಗಾಗಲೇ ಗೇಟ್ ಪಾಸ್ ನೀಡಿದ್ದಾರೆ. ಸಿದ್ದರಾಮಯ್ಯ ಈ ದಸರಾನಂತರ ಮುಖ್ಯಮಂತ್ರಿಯ ಸ್ಥಾನ ಕಳೆದುಕೊಳ್ಳಲಿದ್ದಾರೆ. ಡಿಕೆಶಿ, ಡಾ. ಪರಮೇಶ್ವರ್ ಅಥವಾ ಸತೀಶ್ ಜಾರಕಿಹೊಳಿ ಯಾರೇ ಮುಖ್ಯಮಂತ್ರಿ ಆದರೂ ನಮಗೇನು ಅಸಹ್ಯವಿಲ್ಲ. ಆದರೆ ಸಿದ್ದರಾಮಯ್ಯ ಹೊರಟೇ ಹೊರಡುತ್ತಾರೆ” ಎಂದರು.
ಸಿದ್ದರಾಮಯ್ಯನವರ “2 ವರ್ಷ ನಾನು ಸಿಎಂ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, “ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಶನಿ ಹೆಗಲೇರಿದೆ. ಡಿಸಿಎಂ ಡಿಕೆಶಿ ದೇವಸ್ಥಾನಗಳಲ್ಲಿ ಹೋಮ-ಹವನ, ಮಾಟ-ಮಂತ್ರಗಳಲ್ಲಿ ತೊಡಗಿದ್ದಾರೆ. ನವೆಂಬರ್‌ನಲ್ಲಿ ಎಲ್ಲವೂ ಬಹಿರಂಗವಾಗಲಿದೆ” ಎಂದು ಭವಿಷ್ಯ ನುಡಿದರು.
ಅಲ್ಲದೆ, ಮೈಸೂರು ದಸರಾ ಉದ್ಘಾಟನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅಶೋಕ್, “ಬಾನು ಮುಷ್ತಾಕ್ ಅವರನ್ನು ಉದ್ಘಾಟನೆಗೆ ಆಹ್ವಾನಿಸಿದ್ದು ಸರಿಯಲ್ಲ. ಜನತೆಯೇ ಅದನ್ನು ಒಪ್ಪಿಲ್ಲ” ಎಂದು ಟೀಕಿಸಿದರು.