ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ದೇಶದಾದ್ಯಂತ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಮಾತ್ರವಲ್ಲ, ಟಾಲಿವುಡ್, ಬಾಲಿವುಡ್ ಸೇರಿ ಅನೇಕ ಚಿತ್ರರಂಗಗಳ ಪ್ರಮುಖರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಕೂಡ ಸಿನಿಮಾ ವೀಕ್ಷಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಚಿತ್ರದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಯಶ್, “ಕಾಂತಾರ: ಚಾಪ್ಟರ್ 1 ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು. ರಿಷಬ್ ಶೆಟ್ಟಿಯವರ ದೃಢಸಂಕಲ್ಪ, ಸಾಮರ್ಥ್ಯ ಹಾಗೂ ಸಮರ್ಪಣೆ ಸಿನಿಮಾದ ಪ್ರತಿಯೊಂದು ಚೌಕಟ್ಟಿನಲ್ಲೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬರಹಗಾರ, ನಿರ್ದೇಶಕ ಮತ್ತು ನಟನಾಗಿ ಅವರ ದೃಷ್ಟಿಕೋನವು ಪ್ರೇಕ್ಷಕರಿಗೆ ತಲ್ಲೀನಗೊಳಿಸುವ ಅನುಭವವನ್ನು ನೀಡಿದೆ” ಎಂದು ಶ್ಲಾಘಿಸಿದ್ದಾರೆ.
ಅದೇ ರೀತಿ ನಿರ್ಮಾಪಕ ವಿಜಯ್ ಕಿರಗಂದೂರಿನವರಿಗೂ ಯಶ್ ಶುಭಾಶಯಗಳನ್ನು ತಿಳಿಸಿ, “ನಿಮ್ಮ ದೂರದೃಷ್ಟಿ ಹಾಗೂ ರಿಷಬ್ ಅವರ ದೃಷ್ಟಿಯನ್ನು ಬೆಂಬಲಿಸಿದ ಬಗೆಯು ಕನ್ನಡ ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ” ಎಂದು ಪ್ರಶಂಸಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ‘ಕಾಂತಾರ: ಚಾಪ್ಟರ್ 1’ ಬಗ್ಗೆ ಯಶ್ ನೀಡಿರುವ ಪ್ರತಿಕ್ರಿಯೆ ಅಭಿಮಾನಿಗಳಲ್ಲಿ ಹೆಚ್ಚುವರಿ ಉತ್ಸಾಹವನ್ನು ಮೂಡಿಸಿದೆ.