ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಧೈರ್ಯ ಮತ್ತು ಬದ್ಧತೆಯಿಂದ ಲಿಂಗಾಯತ ಧರ್ಮಕ್ಕೆ ರಾಜ್ಯ ಮಟ್ಟದಲ್ಲಿ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕಿದ್ದು, ಇದೀಗ ಕೇಂದ್ರದಿಂದಲೂ ಒಪ್ಪಿಗೆ ದೊರಕುವುದು ಅನಿವಾರ್ಯವೆಂದು ಭಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.
ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಬೃಹತ್ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕೇಂದ್ರ ಸರಕಾರದಿಂದಲೂ ಲಿಂಗಾಯತ ಧರ್ಮಕ್ಕೆ ಒಪ್ಪಿಗೆಯ ಮುದ್ರೆ ಒಂದಿಲ್ಲೊಂದು ದಿನ ಸಿಕ್ಕೇ ಸಿಗುತ್ತದೆ. ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ, ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನ ಎದೆಯಲ್ಲಿ ಬಸವಣ್ಣ
ಹನುಮಂತನ ಎದೆಯಲ್ಲಿ ರಾಮನಿದ್ದಂತೆ ಸಿದ್ದರಾಮಯ್ಯನವರ ಎದೆಯಲ್ಲಿ ಬಸವಣ್ಣ ಇದ್ದಾರೆ. ಅವರು ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಬಸವಪರ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಬಸವಕಲ್ಯಾಣದ ವಚನ ವಿಶ್ವವಿದ್ಯಾಲಯ ಸ್ಥಾಪನೆ ಮಾತ್ರ ಬಾಕಿಯಿದ್ದು, ಅದನ್ನು ಶೀಘ್ರ ಪೂರ್ಣಗೊಳಿಸಬೇಕು, ಎಂದು ಕೋರಿದರು.

ಲಿಂಗಾಯತರು ಸಿಎಂ ಜೊತೆಗೆ ನಿಲ್ಲಬೇಕು — ಎಂ.ಬಿ. ಪಾಟೀಲ್
ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಸಿದ್ದರಾಮಯ್ಯ ಅವರು ಲಿಂಗಾಯತ ಸಮುದಾಯಕ್ಕೆ ಅನೇಕ ಐತಿಹಾಸಿಕ ಆದೇಶಗಳನ್ನು ನೀಡಿದ್ದಾರೆ. ಬಸವಣ್ಣನ ಫೋಟೋ ಸರ್ಕಾರಿ ಕಚೇರಿಗಳಲ್ಲಿ, ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿಯ ಹೆಸರು, ಮತ್ತು ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಉದಾಹರಣೆ. ಈ ಋಣ ತೀರಿಸಲು ಲಿಂಗಾಯತ ಸಮುದಾಯವೂ ಸಿಎಂ ಜೊತೆ ನಿಲ್ಲಬೇಕು, ಎಂದರು.
ಲಿಂಗಾಯತ ಧರ್ಮವು ಜಾತಿಯಲ್ಲ — ಅದು ಚಿಂತನೆ ಹಾಗೂ ಸಂಸ್ಕೃತಿ. ಧರ್ಮದಿಂದ ನಾವು ಲಿಂಗಾಯತರು, ಭೌಗೋಳಿಕವಾಗಿ ಹಿಂದೂಗಳು, ಎಂದು ಹೇಳಿದರು.

ಜನಸಂಖ್ಯೆಯ ಆತಂಕ ಅನಗತ್ಯ — ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ
ಲಿಂಗಾಯತರು ದಲಿತ ಹಾಗೂ ಹಿಂದುಳಿದ ಸಮುದಾಯಗಳನ್ನು ಬಸವಣ್ಣ ಹೇಳಿದಂತೆ ಧರ್ಮದೊಳಗೆ ಸೇರಿಸಿದ್ದರೆ, ಇಂದು ಶೇಕಡಾ 87ರಷ್ಟು ಜನಸಂಖ್ಯೆಯಿರುತ್ತಿತ್ತು. ಲಿಂಗಾಯತ ಎಂದರೆ ಸಂಕೋಚಿತ ಜಾತಿಯಲ್ಲ, ಎಂದು ಅಭಿಪ್ರಾಯಪಟ್ಟರು.
ಮೆಟ್ರೋಗೆ ಬಸವಣ್ಣನ ಹೆಸರು —ಸ್ವಾಮೀಜಿಗಳ ಬೇಡಿಕೆ
ಕೂಡಲಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಹಳೆಯ ಮೈಸೂರು ಭಾಗದಲ್ಲಿ ಬಸವಣ್ಣನ ಪ್ರಚಾರ ಹೆಚ್ಚಿಸಬೇಕು. ಬೆಂಗಳೂರಿನ ಮೆಟ್ರೋಗೆ ಬಸವಣ್ಣನ ಹೆಸರಿಡಬೇಕು. ಕಲಬುರಗಿಯ ಕೇಂದ್ರೀಯ ಮತ್ತು ರಾಜ್ಯ ವಿಶ್ವವಿದ್ಯಾಲಯಗಳಿಗೂ ಅವರೇ ಹೆಸರು ಬರಬೇಕು. ಕೇಂದ್ರವು ಬಸವಣ್ಣನನ್ನು ‘ಕಾಯಕ ತತ್ತ್ವ ಪಿತಾಮಹ’ ಎಂದು ಘೋಷಿಸಬೇಕು, ಎಂದರು.
400ಕ್ಕೂ ಹೆಚ್ಚು ಸ್ವಾಮೀಜಿಗಳು, ಸಚಿವರಾದ ಕೆ.ಎಚ್. ಮುನಿಯಪ್ಪ, ಶರಣಪ್ರಕಾಶ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಮುಖಂಡರಾದ ಬಿ.ಆರ್. ಪಾಟೀಲ್, ನಸೀರ್ ಅಹಮದ್, ಅಶೋಕ್ ಖೇಣಿ, ಸಾಹಿತಿ ಗೊ.ರು. ಚನ್ನಬಸಪ್ಪ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಶಿವಾನಂದ ಜಾಮದಾರ್ ಭಾಗವಹಿಸಿದ್ದರು.






