ಹೊಸದಿಲ್ಲಿ: ದೇಶದ ಉನ್ನತ ನ್ಯಾಯಾಂಗ ಸಂಸ್ಥೆಯಾದ ಸುಪ್ರೀಂಕೋರ್ಟ್ ಆವರಣದಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಇಂದು ಬೆಳಗ್ಗೆ ನಡೆದಿದ್ದು, ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರತ್ತ ಹಿರಿಯ ವಕೀಲರೊಬ್ಬರು ಶೂ ಎಸೆದಿದ್ದಾರೆ. ಈ ಘಟನೆಯು ನ್ಯಾಯಾಂಗ ವಲಯವನ್ನೇ ಬೆಚ್ಚಿಬೀಳಿಸಿದೆ.
ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಬರೆದಿರುವ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ
“ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಬಿ.ಆರ್. ಗವಾಯಿ ಜಿ ಅವರೊಂದಿಗೆ ಮಾತನಾಡಿದೆ. ಇಂದು ಮುಂಜಾನೆ ಸುಪ್ರೀಂಕೋರ್ಟ್ ಆವರಣದಲ್ಲಿ ಅವರ ಮೇಲೆ ನಡೆದ ದಾಳಿ ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ. ನಮ್ಮ ಪ್ರಜಾಪ್ರಭುತ್ವದ ಸಮಾಜದಲ್ಲಿ ಇಂತಹ ಖಂಡನೀಯ ಕೃತ್ಯಗಳಿಗೆ ಯಾವುದೇ ಸ್ಥಳವಿಲ್ಲ.”
“ನ್ಯಾಯಮೂರ್ತಿ ಗವಾಯಿ ಅವರು ಇಂತಹ ಪರಿಸ್ಥಿತಿಯಲ್ಲೂ ತಾಳ್ಮೆ ಹಾಗೂ ಶಾಂತತೆಯನ್ನು ಪ್ರದರ್ಶಿಸಿದ್ದು ಅತ್ಯಂತ ಶ್ಲಾಘನೀಯ. ಇದು ನ್ಯಾಯದ ಮೌಲ್ಯಗಳಿಗೆ ಹಾಗೂ ನಮ್ಮ ಸಂವಿಧಾನದ ಚೈತನ್ಯವನ್ನು ಬಲಪಡಿಸುವುದಕ್ಕೆ ಅವರ ಬದ್ಧತೆಯ ಸಾಕ್ಷಿಯಾಗಿದೆ.”
ಘಟನೆಯ ನಂತರ ಸಿಜೆಐ ಬಿಆರ್. ಗವಾಯಿ ಯಾವುದೇ ವಿಚಲನೆ ತೋರಿಸದೆ ವಿಚಾರಣೆಯನ್ನು ಮುಂದುವರೆಸಿದರು. “ಇದೆಲ್ಲದರಿಂದ ವಿಚಲಿತರಾಗಬೇಡಿ, ಇದು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ,” ಎಂದು ನ್ಯಾಯಾಲಯದಲ್ಲಿ ಹಾಜರಿದ್ದವರಿಗೆ ಹೇಳಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸುದ್ದಿ ಪ್ರಕಾರ, ವಕೀಲರ ಗುರುತುಪತ್ರ ಹೊಂದಿದ್ದ ರಾಕೇಶ್ ಕಿಶೋರ್ ಎಂಬ ವ್ಯಕ್ತಿಯೇ ಶೂ ಎಸೆದಿದ್ದು, “ಸನಾತನ ಕಾ ಅಪಮಾನ ನಹಿ ಸಹೇಂಗೆ” ಎಂದು ಕೂಗುತ್ತಿದ್ದಾನೆ. ಘಟನೆಯ ತಕ್ಷಣವೇ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿ ನ್ಯಾಯಾಲಯದ ಹೊರಗೆ ಕರೆದುಕೊಂಡು ಹೋಗಿದರು.
ನ್ಯಾಯಮೂರ್ತಿ ಗವಾಯಿ ಅವರೇ ಆರೋಪಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡುವಂತೆ ಸೂಚಿಸಿದರೆ, ದೆಹಲಿ ಪೊಲೀಸರು ಔಪಚಾರಿಕ ದೂರು ದಾಖಲಿಸಿದ ನಂತರ ರಾಕೇಶ್ ಕಿಶೋರ್ ಅವರನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ತುರ್ತಾಗಿ ಕ್ರಮ ಕೈಗೊಂಡು, ರಾಕೇಶ್ ಶರ್ಮಾ ಎಂಬ ವಕೀಲನನ್ನು ತಕ್ಷಣದಿಂದಲೇ ಅಮಾನತುಗೊಳಿಸಿರುವುದಾಗಿ ಪ್ರಕಟಿಸಿದೆ.
ಇತ್ತೀಚೆಗೆ ಭಗವಾನ್ ವಿಷ್ಣುವಿನ ವಿಗ್ರಹ ಪುನರ್‌ಸ್ಥಾಪನೆ ಕುರಿತ ಅರ್ಜಿ ವಿಚಾರಣೆ ವೇಳೆ, ಸಿಜೆಐ ಗವಾಯಿ ನೀಡಿದ ಹೇಳಿಕೆಯು ವಿವಾದಕ್ಕೀಡಾಗಿದ್ದ ಹಿನ್ನೆಲೆ ಈ ಘಟನೆ ನಡೆದಿರಬಹುದು ಎಂಬ ಊಹೆಗಳು ವ್ಯಕ್ತವಾಗಿವೆ.
ಈ ಘಟನೆಯು ದೇಶಾದ್ಯಂತ ಭಾರಿ ಆಕ್ರೋಶ ಮೂಡಿಸಿದ್ದು, ಕಾನೂನು ವಲಯ, ರಾಜಕೀಯ ವಲಯ ಹಾಗೂ ಸಾಮಾನ್ಯ ನಾಗರಿಕರು ದಾಳಿಕೋರನ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.ಇಡೀ ದೇಶದ ಕಣ್ಣೆಲ್ಲ ಇದೀಗ ಸುಪ್ರೀಂಕೋರ್ಟ್ ಹಾಗೂ ಸರ್ಕಾರದ ಮುಂದಿನ ಕ್ರಮದತ್ತ ನೆಟ್ಟಿದೆ.






