ಮೈಸೂರು: “ಅನ್ನ, ಜ್ಞಾನ ಮತ್ತು ಭಕ್ತಿ — ಈ ತ್ರಿವಿಧ ದಾಸೋಹದ ಮಡಿಲಲ್ಲಿ ಕೋಟ್ಯಂತರ ಜನರನ್ನು ಬೆಳೆಸಿದ ಕೀರ್ತಿ ನಮ್ಮ ಮಠಮಾನ್ಯಗಳಿಗೆ ಸಲ್ಲುತ್ತದೆ. ಸಮಾಜದ ಮೂಲಬಲವಾಗಿ, ಶಿಕ್ಷಣದ ಬೆಳಕಾಗಿ, ಸೇವೆಯ ಸಂಕೇತವಾಗಿ ಮಠಗಳು ಇಂದು ರಾಷ್ಟ್ರದ ಶ್ರೇಷ್ಠ ಆಸ್ತಿಯಂತಿವೆ,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಮೈಸೂರಿನ ಹುಲ್ಲಿನ ಬೀದಿಯಲ್ಲಿ ನಡೆದ ಶ್ರೀ ಗುರು ಮಲ್ಲೇಶ್ವರ ದಾಸೋಹ ಮಠ ಹಾಗೂ ವಿದ್ಯಾರ್ಥಿನಿಲಯದ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನೂರು ಶಾಖಾ ಮಠಗಳನ್ನು ಹೊಂದಿರುವ ಶ್ರೀಮಠ ಎಂದಿಗೂ ಲೌಕಿಕ ಪ್ರಭಾವಗಳನ್ನು ಹತ್ತಿರಕ್ಕೆ ಸುಳಿಯಲು ಬಿಡಲಿಲ್ಲ. ‘ಅನ್ನದಾಸೋಹ ಪರಮ ಶ್ರೇಷ್ಠ, ಜ್ಞಾನ ದಾಸೋಹ ನಮ್ಮ ಸಂಕಲ್ಪ’ಎಂಬ ಬಾವುಟವನ್ನು ಎತ್ತಿ ಹಿಡಿದು ಇಂದಿಗೂ ಸೇವೆ ಸಲ್ಲಿಸುತ್ತಿದೆ. ಇದರ ಪರಿಣಾಮವಾಗಿ ಈ ಭಾಗದಲ್ಲಿ ಲಕ್ಷಾಂತರ ಜನ ವಿದ್ಯೆ ಪಡೆದು ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ,” ಎಂದು ಪ್ರಶಂಸಿಸಿದರು.

“ಮಠದ ಆಸರೆಯನ್ನು ಬಯಸಿ ಬಂದ ಪ್ರತಿಯೊಬ್ಬರಿಗೂ ಮಾತೃಹೃದಯದ ಪ್ರೀತಿಯಿಂದ ಆಸರೆ ನೀಡಿದ ದೇವನೂರು ಮಠದ ಗುರು ಮಲ್ಲೇಶ್ವರರು ನಿಜವಾದ ತಪಸ್ವಿಗಳು. ಸತ್ಯ, ನಿಷ್ಠೆ, ನ್ಯಾಯ ಮತ್ತು ಧರ್ಮದ ಮೌಲ್ಯಗಳನ್ನು ಮನುಕುಲಕ್ಕೆ ಪರಿಚಯಿಸಿದ ಕೀರ್ತಿ ಅವರ ಸನ್ನಿಧಾನಕ್ಕೆ ಸಲ್ಲುತ್ತದೆ. ಈ ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆ.”
“ಮಠಮಾನ್ಯರ ಮಾರ್ಗದರ್ಶನದಲ್ಲಿ ಶರಣ ತತ್ವದ ಆದರ್ಶ ಅನುಸರಿಸಿ ಸಮಾಜದ ಏಕತೆ ಹಾಗೂ ಪ್ರಗತಿಯ ಕಡೆಗೆ ನಾವು ಮುನ್ನಡೆಯಬೇಕು.” ಎಂದು ಬಿವೈ ವಿಜಯೇಂದ್ರ ಹೇಳಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು, ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಪರಮಪೂಜ್ಯ ಶ್ರೀ ಶಿವಸಿದ್ಧೇಶ್ವರ ಶ್ರೀಗಳು, ದೇವನೂರು ಮಠದ ಪರಮಪೂಜ್ಯ ಶ್ರೀ ಮಹಾಂತ ಶ್ರೀಗಳು, ಹಾಗೂ ವಿವಿಧ ಮಠಗಳ ಶ್ರೀಗಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಶಾಸಕರಾದ ಟಿ.ಎಸ್. ಶ್ರೀವತ್ಸ, ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎಲ್. ನಾಗೇಂದ್ರ, ಸ್ಥಳೀಯ ಮುಖಂಡರು, ಭಕ್ತಾದಿಗಳು ಮತ್ತು ಮಠದ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಈ ಭವ್ಯ ಸಮಾರಂಭದಲ್ಲಿ ಗುರುಮಲ್ಲೇಶ್ವರ ದಾಸೋಹ ಮಠದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲಾಯಿತು. ಮಠದ ವಿದ್ಯಾರ್ಥಿನಿಲಯ ಹಾಗೂ ದಾಸೋಹ ಸೇವೆಯ ವಿವಿಧ ಘಟಕಗಳ ವಿಸ್ತರಣೆ ಕುರಿತು ಶ್ರೀಮಠದ ಪರಮಪೂಜ್ಯ ಶ್ರೀಗಳು ಆಶೀರ್ವಚನ ನೀಡಿದರು.






