ಬೆಂಗಳೂರು (ಅ.08): ಕನ್ನಡ ಚಿತ್ರರಂಗದ ನಟ ದರ್ಶನ್ ಅವರ ಬಂಧನ, ಜಾಮೀನು ರದ್ದು ಹಾಗೂ ಕುಟುಂಬಕ್ಕೆ ನೀಡಲಾಗುತ್ತಿರುವ ತೊಂದರೆಗಳ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂಬ ಆರೋಪ ಕೇಳಿಬಂದಿದೆ. ಅಖಿಲ ಕರ್ನಾಟಕ ಡಿ ಬಾಸ್ ಅಭಿಮಾನಿ ಸಂಘದ ಆಶ್ರಯದಲ್ಲಿ ರಾಜ್ಯದಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಲು ಅಭಿಮಾನಿ ಸಂಘಟನೆಗಳು ಸಜ್ಜಾಗಿವೆ. ಅಭಿಮಾನಿ ಸಂಘವು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನೇ ಈ ಘಟನೆಯ ಸೂತ್ರಧಾರ ಎಂದು ನೇರ ಆರೋಪ ಮಾಡಿದೆ.

ದರ್ಶನ್ ಬಂಧನಕ್ಕೆ ರಾಜಕೀಯ ಕಾರಣವೇ?
ದರ್ಶನ್ ಅವರನ್ನು ಬಂಧಿಸಿ, ನಂತರ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದುಪಡಿಸಲು ಮುಂದಾದದ್ದು “ಕಳ್ಳ ಕಾಂಗ್ರೆಸ್ ಪಕ್ಷದ ರಾಜಕೀಯ ಆಟ” ಎಂದು ಅಭಿಮಾನಿ ಸಂಘಟನೆಗಳು ಆರೋಪಿಸಿವೆ. ಅಭಿಮಾನಿಗಳ ಪ್ರಕಾರ, ದರ್ಶನ್ ನಾಯ್ಡು ಸಮುದಾಯದವರಾಗಿರುವುದು ಹಾಗೂ ಮುನಿರತ್ನ ಅವರ ಹತ್ತಿರದವರಾಗಿರುವುದು ಕಾಂಗ್ರೆಸ್ ನಾಯಕರ ಅಸಹನೆಯ ಮೂಲವಾಗಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ದರ್ಶನ್ ಅವರು ಕಾಂಗ್ರೆಸ್ ಪರ ನಿಂತಿರಲಿಲ್ಲ ಎಂಬ ಕಾರಣದಿಂದ ರಾಜರಾಜೇಶ್ವರಿ ನಗರದಲ್ಲಿ ಕುಸುಮಾ ಸೋಲಿಗೆ ಅವರನ್ನೇ ಕಾರಣವೆಂದು ಕಾಂಗ್ರೆಸ್ ರಾಜಕೀಯ ವಲಯಗಳು ಆರೋಪಿಸಿವೆ. ಅಭಿಮಾನಿ ಸಂಘಟನೆಯ ಮಾತಿನ ಪ್ರಕಾರ, “ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ರಾಜಕೀಯ ಹಸ್ತಕ್ಷೇಪದ ಸಾಧನವಾಗಿ ಬಳಸಿಕೊಂಡು, ದರ್ಶನ್ ಅವರನ್ನು ಗುರಿಯಾಗಿಸುವ ಪ್ರಯತ್ನ ಕಾಂಗ್ರೆಸ್ ನಾಯಕರಿಂದ ನಡೆಯುತ್ತಿದೆ” ಎಂದು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಿಷ್ಣುವರ್ಧನ್ ಸಮಾಧಿ ವಿವಾದ ಮತ್ತು ‘ಕರ್ನಾಟಕ ರತ್ನ’ ನಾಟಕ
ಕಾಂಗ್ರೆಸ್ ಸರ್ಕಾರದ ವಿರುದ್ಧದ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸುತ್ತಾ, ಅಭಿಮಾನಿಗಳು “ಡಾ. ವಿಷ್ಣುವರ್ಧನ್ ಅವರಿಗೆ ಅವಮಾನ ಮಾಡಿ, ಅವರ ಸಮಾಧಿಯನ್ನು ಕೆಡವಿ ಹಾಕಿದ್ದು ಇದೇ ಕಾಂಗ್ರೆಸ್ ಸರ್ಕಾರ” ಎಂದು ಆರೋಪಿಸಿದ್ದಾರೆ. ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದರೂ, ಸರ್ಕಾರ ಯಾವುದೇ ಪರಿಹಾರ ಕ್ರಮ ಕೈಗೊಳ್ಳದೆ ಈಗ “ಕರ್ನಾಟಕ ರತ್ನ” ಪ್ರಶಸ್ತಿ ನೀಡಿ ನಾಟಕವಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.“ಜನತೆಗೆ ಈ ನಾಟಕ ಚೆನ್ನಾಗಿ ಗೊತ್ತಿದೆ,” ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.
“ಕಾಂಗ್ರೆಸ್‌ಗೆ ನಮ್ಮ ಮತ ಬೇಡ” — ಅಭಿಮಾನಿಗಳ ಘೋಷಣೆ
ಅಭಿಮಾನಿ ಸಂಘಟನೆಗಳು ಮುಂಬರುವ ಚುನಾವಣೆಗೆ ತೀವ್ರ ನಿರ್ಣಯ ತೆಗೆದುಕೊಂಡಿವೆ. “ದರ್ಶನ್ ಅಭಿಮಾನಿಗಳ ಒಂದೇ ಒಂದು ಮತವೂ ಕಾಂಗ್ರೆಸ್‌ಗೆ ಬೀಳಬಾರದು. ಡಿ.ಕೆ. ಶಿವಕುಮಾರ್ ಅವರನ್ನು ಸೋಲಿಸುವುದು ನಮ್ಮ ಗುರಿ,” ಎಂದು ಪ್ರಕಟಣೆ ನೀಡಲಾಗಿದೆ. ಅದೇ ವೇಳೆ, ಮುಂದಿನ ದಿನಗಳಲ್ಲಿ ದರ್ಶನ್ ಅವರು ಸ್ವತಂತ್ರವಾಗಿ ರಾಜಕೀಯಕ್ಕೆ ಕಾಲಿಟ್ಟರೆ ಜನಬೆಂಬಲದಿಂದ ಗೆಲ್ಲುವ ವಿಶ್ವಾಸವಿದೆ ಎಂಬ ಆಶಯವನ್ನು ಅಭಿಮಾನಿ ಸಂಘವು ವ್ಯಕ್ತಪಡಿಸಿದೆ.






