ಶಿವಮೊಗ್ಗ, ಅ.11: ಅರಣ್ಯ ಪ್ರದೇಶದಲ್ಲಿ ಅನಾದಿಕಾಲದಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ತೊಂದರೆ ನೀಡಿ ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಾರ್ವಜನಿಕ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶನಿವಾರ ಜಿಲ್ಲಾಡಳಿತ ಕಚೇರಿಯಲ್ಲಿ ನಡೆದ ಅರಣ್ಯ, ಲೋಕೋಪಯೋಗಿ, ನೀರಾವರಿ ಮತ್ತು ಇತರೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. “ರೈತರ ಪರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ವಯ ಕ್ರಮ ಕೈಗೊಳ್ಳಬೇಕು. ಹೊಸ ಒತ್ತುವರಿಗೆ ಅವಕಾಶ ಮಾಡಬಾರದು. 27-04-1978ರ ಪೂರ್ವದ ಅರಣ್ಯ ಒತ್ತುವರಿಗಳನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಬೇಕು,” ಎಂದು ಸಚಿವರು ಹೇಳಿದರು.
ಅವರು ಮುಂದುವರೆದು, ಸರ್ಕಾರದ ನಿಯಮಗಳನ್ವಯ ಮಂಜೂರು ಮಾಡಲಾದ ರೈತರ ಭೂಮಿಯನ್ನು ಅರಣ್ಯ ಇಂಡೀಕರಣ ಪ್ರಸ್ತಾವನೆಯಿಂದ ಹೊರಗಿಡುವ ಕ್ರಮಗಳ ಬಗ್ಗೆ ವರದಿ ನೀಡಬೇಕು, ಎಂದರು.

ಶಾಸಕರಾದ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಲೆನಾಡಿನ ರೈತರಿಗೆ ನೋಟಿಸ್ ನೀಡಿ ಒತ್ತುವರಿ ತೆರವು ಮಾಡಲಾಗುತ್ತಿದೆ, ಇದು ಸರಿಯಲ್ಲ, ಎಂದು ಅಭಿಪ್ರಾಯಪಟ್ಟರು. ಸಿಸಿಎಫ್ ಹನುಮಂತಪ್ಪ ಪ್ರತಿಕ್ರಿಯೆ ನೀಡುತ್ತಾ, ಪಿಎಫ್ ಮತ್ತು ಎಂಎಫ್ ವ್ಯಾಪ್ತಿಯ 375 ಅಧಿಸೂಚನೆಗಳು ಇದ್ದು, ಇವುಗಳನ್ನು ಸೆಟ್ಲ್ ಮಾಡಬಹುದು, ಎಂದರು.
ರಸ್ತೆ ಕಾಮಗಾರಿ ತ್ವರಿತಗೊಳಿಸಿ
ಸಚಿವರು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ನವೆಂಬರ್ ಅಂತ್ಯದೊಳಗೆ ರಾಜ್ಯ ಹೆದ್ದಾರಿಗಳು ಹಾಗೂ ಡಿಸೆಂಬರ್ ಒಳಗೆ ಉಳಿದ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಮಳೆ ನಂತರ ರಸ್ತೆ ಗುಂಡಿಗಳನ್ನು ಗುಣಮಟ್ಟದಿಂದ ಮುಚ್ಚಿ, ಮಾರ್ಕಿಂಗ್ ಮಾಡಬೇಕು. ಗುಂಡಿಗಳಿಂದ ಅಪಘಾತಗಳು ಹೆಚ್ಚುತ್ತಿವೆ, ಎಂದು ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸುವಂತೆ ಹೇಳಿದರು.
ನೀರಾವರಿ ಯೋಜನೆಗಳು
ಸೊರಬ ತಾಲ್ಲೂಕಿನ ಗುಡುವಿ, ಯಡಗೊಪ್ಪ, ದಂಡಾವತಿ ಹಾಗೂ ವರದಾ ನದಿಗಳಲ್ಲಿ ಬ್ರಿಡ್ಜ್‌ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು (160 ಕೋಟಿ) ತಕ್ಷಣ ಪ್ರಾರಂಭಿಸುವಂತೆ ಸೂಚಿಸಿದರು.
ಮಾವಿನಹೊಳೆ, ಕೆರೆಹಳ್ಳಿ, ಜಂಗಿನಕೊಪ್ಪ ಗ್ರಾಮಗಳ ಬ್ರಿಡ್ಜ್ ಕಾಮಗಾರಿಗಳ ವರದಿಯನ್ನು ಪರಿಶೀಲಿಸಿದರು.
ಕೊಳಚೆ ಪ್ರದೇಶ ಮನೆಗಳಿಗೆ ಹಕ್ಕುಪತ್ರ
ಶಿವಮೊಗ್ಗ ಮತ್ತು ತಾಲೂಕುಗಳ ಕೊಳಚೆ ಪ್ರದೇಶಗಳ ಮನೆಗಳಿಗೆ ಹಕ್ಕುಪತ್ರ ವಿತರಣೆಯ ಪ್ರಗತಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಾಗರದ ಕೊಳಚೆ ಪ್ರದೇಶದ 150 ಮನೆಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಶಾಸಕರು ಬೇಡಿಕೆ ಸಲ್ಲಿಸಿದರು. ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು, 40 ವರ್ಷಗಳಿಂದ ವಾಸಿಸುತ್ತಿರುವ 9,000 ಬಡ ಕುಟುಂಬಗಳ ಮನೆಗಳ ಸಕ್ರಮಗೊಳಿಸುವ ಅರ್ಜಿಗಳು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 62 ಪ್ರವಾಸಿ ತಾಣಗಳಿದ್ದು, ಅವುಗಳ ಪ್ರಚಾರಕ್ಕಾಗಿ ಹೋರ್ಡಿಂಗ್ ಹಾಗೂ ಮಾಹಿತಿ ಫಲಕಗಳನ್ನು ಅಳವಡಿಸಲು ಸಚಿವರು ಸೂಚಿಸಿದರು.
ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿ 6ನೇ ಸ್ಥಾನದಲ್ಲಿದೆ. ಶೇ.96 ಸಮೀಕ್ಷೆ ಪೂರ್ಣಗೊಂಡಿದ್ದು, ಉಳಿದ ಮನೆಗಳ ಸಮೀಕ್ಷೆ ಬಳಿಕ ಶರಾವತಿ ಸಂತ್ರಸ್ತರ ವಿಚಾರ ಪರಿಗಣನೆಗೊಳ್ಳಲಿದೆ ಎಂದರು.
ಈ ಸಂಧರ್ಭದಲ್ಲಿ ಚೇತನ್. ಕೆ (ಜವಳಿ ನಿಗಮ ಅಧ್ಯಕ್ಷ), ಚಂದ್ರಭೂಪಾಲ್ (ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ), ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ. ಸಿಇಓ ಹೇಮಂತ್ ಎನ್, ಎಸ್‌ಪಿ ಜಿ.ಕೆ. ಮಿಥುನ್ ಕುಮಾರ್ ಸೇರಿದಂತೆ ಹಲವು ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.











