ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿರುವ ಪರಿಣಾಮವಾಗಿ, ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕುರಿತು ಚರ್ಚೆಗಳು ಪಕ್ಷದ ಒಳಗಿಂದಲೇ ಮತ್ತೆ ಜೋರಾಗಿವೆ. ಈ ನಡುವೆಯೇ, ರಾಜ್ಯಾಧ್ಯಕ್ಷರ ಹುದ್ದೆಯಲ್ಲಿ ತಾನೇ ಮುಂದುವರಿಯುವ ವಿಶ್ವಾಸವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳ ಕಾಲ ರಾಜ್ಯಾಧ್ಯಕ್ಷ ಹುದ್ದೆ ನಿರ್ವಹಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಅವರ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ ಅವರು, ನನಗೂ ವಿಶ್ವಾಸ ಇದೆ, ಹೈಕಮಾಂಡ್‌ನಿಂದ ಸ್ಪಷ್ಟತೆ ಸಿಗುತ್ತದೆ ಎಂಬ ವಿಶ್ವಾಸ ಇದೆ. ನನಗಂತೂ ಈಗಾಗಲೇ ಸ್ಪಷ್ಟತೆ ಸಿಕ್ಕಿದೆ. ರಾಜ್ಯಾಧ್ಯಕ್ಷರಾಗಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿ, ಮುಂದುವರಿಕೆಯ ಬಗ್ಗೆ ಪರೋಕ್ಷವಾಗಿ ಸಂದೇಶ ನೀಡಿದರು.
ಬಿಹಾರದ ಗೆಲುವು ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ “ಭ್ರಷ್ಟ ಸರ್ಕಾರದ” ವಿರುದ್ಧ ಹೋರಾಟಕ್ಕೆ ಬಿಜೆಪಿ ಹೆಚ್ಚು ಶಕ್ತಿ ಪಡೆಯುವಂತಹ ರಾಜಕೀಯ ಸಂದೇಶ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟರು. ನಮ್ಮ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಿ ಅಧಿಕಾರದಿಂದ ಕೆಳಗಿಳಿಸಲಾಯಿತು. ಆದರೆ ಈಗ ಅವರೇ ಗ್ಯಾರಂಟಿ ಯೋಜನೆಗಳಿಂದ ಸೋಲು ಕಂಡಿದ್ದಾರೆ. ಇದೀಗ ತಮ್ಮ ವಿಫಲತೆಯನ್ನು ಮುಚ್ಚಲು ಕೇಂದ್ರದತ್ತ ಬೆರಳು ತೋರಿಸುತ್ತಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡ ವಿಜಯೇಂದ್ರ ಅವರು, ರಾಹುಲ್ ಗಾಂಧಿ ಎಲ್ಲಿ ಕಾಲಿಟ್ಟರೂ ಅಲ್ಲಿ ಕಾಂಗ್ರೆಸ್ ಉದ್ಧಾರವಾಗುವುದಿಲ್ಲ, ಅವರು ನಿಜಕ್ಕೂ “ಐರನ್ ಲೆಗ್” ಎಂಬುದು ಬಿಹಾರ ಚುನಾವಣೆ ಫಲಿತಾಂಶದಿಂದ ಮತ್ತಷ್ಟು ಸಾಬೀತಾಗಿದೆ ಎಂದು ವ್ಯಂಗ್ಯವಾಡಿದರು. ವೋಟ್ ಚೋರಿ ಎಂಬ ಖಾಲಿ ಆರೋಪವನ್ನು ಹಿಡಿದುಕೊಂಡು, ದೇಶದೊಳಗೂ ಹೊರಗೂ ಭಾರತ ವಿರೋಧಿ, ಬಿಜೆಪಿ ವಿರೋಧಿ ಹೇಳಿಕೆ ನೀಡುತ್ತಿರುವುದು ಅವರ ರಾಜಕೀಯದ ದೌರ್ಬಲ್ಯವಾಗಿದೆ. ಬಿಹಾರದ ಜನರು ಅವರ ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಈ ಗೆಲುವು ನಮಗೆ “ಆನೆ ಬಲ” ನೀಡಿದೆ ಎಂದು ಹೇಳಿದರು.
ಮುಂದುವರಿದು ಅವರು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ ನೀರಿನ ಹೆಜ್ಜೆ ಪುಸ್ತಕಕ್ಕೂ ಪ್ರಶ್ನೆ ಎತ್ತಿದರು. ಅದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಬರೆದ ಕೃತಿ ಅಲ್ಲ. ಬೇರೆ ಯಾರೋ ಬರೆದ ಪುಸ್ತಕಕ್ಕೆ ಅವರ ಚಿತ್ರವನ್ನಷ್ಟೇ ಹಾಕಲಾಗಿದೆ. ಪುಸ್ತಕವನ್ನು ಬಿಟ್ಟು, ರಾಜ್ಯಕ್ಕೆ ಜಲಸಂಪನ್ಮೂಲ ಸಚಿವರಾಗಿ ಅವರ ನೈಜ ಕೊಡುಗೆ ಏನು ಎಂಬುದನ್ನು ಜನರಿಗೆ ವಿವರಿಸಬೇಕು ಎಂದು ವಿಜಯೇಂದ್ರ ಪ್ರಶ್ನಿಸಿದರು.





