ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡಿಗನ ಸಾಧನೆ: ಡೀನ್ ಆಗಿ ಪ್ರೋ. ಲಿಂಗಪ್ಪ ಗೊನಾಳ ನೇಮಕ

On: January 7, 2026 8:14 PM
Follow Us:

ಹೈದರಾಬಾದ್ : ನೂರು ವರ್ಷಗಳ ಘನ ಇತಿಹಾಸ ಹೊಂದಿರುವ ಪ್ರತಿಷ್ಠಿತ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡಿಗರಾದ ಕಲಬುರಗಿ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವರಗೊನಾಳ ಗ್ರಾಮದ ನಿವಾಸಿ ಪ್ರೋ. ಲಿಂಗಪ್ಪ ಗೊನಾಳ ಅವರನ್ನು ಆರ್ಟ್ಸ್ ಕಾಲೇಜಿನ ಡೀನ್ ಆಗಿ ನೇಮಕ ಮಾಡಿರುವುದು ಕೇವಲ ವೈಯಕ್ತಿಕ ಸಾಧನೆ ಮಾತ್ರವಲ್ಲ, ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ.

ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಶೋಧನೆ ಕ್ಷೇತ್ರದಲ್ಲಿ ದಶಕಗಳ ಕಾಲ ಅನನ್ಯ ಸೇವೆ ಸಲ್ಲಿಸಿರುವ ಪ್ರೋ. ಲಿಂಗಪ್ಪ ಗೊನಾಳ ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ತಮ್ಮ ಆಡಳಿತಾತ್ಮಕ ಸಾಮರ್ಥ್ಯ, ಶೈಕ್ಷಣಿಕ ಬದ್ಧತೆ ಹಾಗೂ ವಿದ್ಯಾರ್ಥಿ ಸ್ನೇಹಿ ನಿಲುವಿನ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅವರ ಈ ನಿಷ್ಠಾವಂತ ಸೇವೆಯನ್ನು ಗುರುತಿಸಿದ ಉಪಕುಲಪತಿ ಅವರು ಆರ್ಟ್ಸ್ ಕಾಲೇಜಿನ ಡೀನ್ ಎಂಬ ಮಹತ್ವದ ಜವಾಬ್ದಾರಿಯನ್ನು ಅವರಿಗೆ ವಹಿಸಿರುವುದು ಅತ್ಯಂತ ಯೋಗ್ಯ ಹಾಗೂ ಶ್ಲಾಘನೀಯ ನಿರ್ಧಾರವಾಗಿದೆ.

ಎಲ್ಲಾ ಕನ್ನಡಿಗರ ಪರವಾಗಿ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘದ ನಿಯೋಗವು ಪ್ರೋ. ಲಿಂಗಪ್ಪ ಗೊನಾಳ ಅವರನ್ನು ಭೇಟಿಯಾಗಿ ಭವ್ಯವಾಗಿ ಸನ್ಮಾನಿಸಿ ಗೌರವ ಸಲ್ಲಿಸಿತು. ಸಂಘದ ಅಧ್ಯಕ್ಷ ಧರ್ಮೇಂದ್ರ ಪೂಜಾರಿ, ಉಪಾಧ್ಯಕ್ಷ ಬಸವರಾಜ ಹಂಜನಾಳೆ, ಕೀರ್ತಿಕುಮಾರ ಮಾನ್ವಿಕರ, ಪ್ರಭು ಪೂಜಾರಿ, ಅಮರನಾಥ ಹಿರೋಡೆ, ರಾಜಕುಮಾರ ಮನ್ನಳಿ, ಜಗನ್ನಾಥ ತೊಂಡಾರೆ, ಮಾರುತಿ ಮೇತ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರೋ. ಲಿಂಗಪ್ಪ ಗೊನಾಳ ಅವರಿಗೆ ಕನ್ನಡ ಶ್ಯಾಲು ಹೊದಿಸಿ, ಕನ್ನಡ ಪುಸ್ತಕವನ್ನು ನೀಡಿ ಶುಭಾಶಯ ಕೋರಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, “ರಾಜ್ಯ ಗಡಿಗಳನ್ನು ದಾಟಿಯೂ ಕನ್ನಡದ ಕಂಪನ್ನು ಉಳಿಸಿ ಬೆಳೆಸುತ್ತಿರುವ ಪ್ರೋ. ಲಿಂಗಪ್ಪ ಗೊನಾಳ ಅವರಂತಹ ವ್ಯಕ್ತಿತ್ವಗಳು ಕನ್ನಡದ ನಿಜವಾದ ರಾಯಭಾರಿಗಳು. ಅವರ ಸಾಧನೆ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ನಮ್ಮ ಕನ್ನಡ ದೇಶದ ಎಲ್ಲ ಕಡೆ ಇಂತಹ ಮಹನೀಯರು ಬೆಳಗಲಿ, ಅವರಿಂದ ಕನ್ನಡ ಭಾಷೆ ಹಾಗೂ ಸಂಸ್ಕೃತಿ ಇನ್ನಷ್ಟು ಎತ್ತರಕ್ಕೆ ಏರಲಿ” ಎಂದು ಹಾರೈಸಿದರು.

ಒಟ್ಟಾರೆ, ಉಸ್ಮಾನಿಯಾ ವಿಶ್ವವಿದ್ಯಾಲಯದಂತಹ ಐತಿಹಾಸಿಕ ಸಂಸ್ಥೆಯಲ್ಲಿ ಕನ್ನಡಿಗನೊಬ್ಬ ಡೀನ್ ಆಗಿ ನೇಮಕವಾಗಿರುವುದು ಕನ್ನಡಿಗರ ಶೈಕ್ಷಣಿಕ, ಸಾಂಸ್ಕೃತಿಕ ಶಕ್ತಿಯನ್ನು ಜಗತ್ತಿಗೆ ತೋರಿಸುವ ಮಹತ್ವದ ಘಟ್ಟವಾಗಿದ್ದು, ಇದು ಮುಂದಿನ ತಲೆಮಾರಿಗೆ ಹೊಸ ಉತ್ಸಾಹ ಹಾಗೂ ಆತ್ಮವಿಶ್ವಾಸ ನೀಡುವ ಸಾಧನೆಯಾಗಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment