ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಹುತಾತ್ಮ ಯೋಧರ ಪತ್ನಿಯ ತ್ಯಾಗವೇ ಶ್ರೇಷ್ಠತೆ: ತರಳಬಾಳು ಜಗದ್ಗುರುಗಳ ಹೃದಯಸ್ಪರ್ಶಿ ಸಂದೇಶ

On: February 2, 2026 10:35 PM
Follow Us:

ಭದ್ರಾವತಿ: ಭಕ್ತಿ, ತ್ಯಾಗ ಮತ್ತು ಮಾನವೀಯತೆಯ ಮಹಾ ಸಂಭ್ರಮವಾಗಿ ಭದ್ರಾವತಿ ಪಟ್ಟಣದಲ್ಲಿ ಜನವರಿ 24ರಿಂದ ಫೆಬ್ರವರಿ 1ರವರೆಗೆ ಆಯೋಜನೆಗೊಂಡಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವು ಐದು ಲಕ್ಷಕ್ಕೂ ಅಧಿಕ ಭಕ್ತಾದಿಗಳ ಅಪೂರ್ವ ಸಮಾಗಮದೊಂದಿಗೆ ಭಕ್ತಿಯ ಮಹಾಪರ್ವವಾಗಿ ಅದ್ದೂರಿಯಾಗಿ ಸಂಪನ್ನಗೊಂಡಿತು.

ಉಕ್ಕಿನ ನಗರಿ ಭದ್ರಾವತಿ ಕಳೆದ ಒಂಬತ್ತು ದಿನಗಳ ಕಾಲ ಭಕ್ತಿ, ಜ್ಞಾನ ಹಾಗೂ ಸಂಸ್ಕೃತಿಯ ಮಹಾಸಂಗಮಕ್ಕೆ ಸಾಕ್ಷಿಯಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು, ಸಾಧುಸಂತರು, ಗಣ್ಯರು ಹಾಗೂ ಸಾರ್ವಜನಿಕರ ಸಾನ್ನಿಧ್ಯದಲ್ಲಿ ನಡೆದ ಈ ಮಹೋತ್ಸವಕ್ಕೆ ಭಾನುವಾರ ಭವ್ಯ ಸಮಾರೋಪ ನೆರವೇರಿತು.

ಸಮಾರೋಪದ ಪಾವನ ಕ್ಷಣದಲ್ಲಿ ಸಿರಿಗೆರೆ ಜಗದ್ಗುರುಗಳಾದ ಪೂಜ್ಯ ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮದ್ಯಾಹ್ನ ಸಾಲಂಕೃತ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು, ಸಂಜೆ ಸದ್ದರ್ಮ ಸಿಂಹಾಸನಾರೋಹಣದಲ್ಲಿ ಕುಳಿತು ಭಕ್ತಕೋಟಿಗೆ ದರ್ಶನ ನೀಡಿ ಆಶೀರ್ವಚನ ದಯಪಾಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು,
“ಮಠಕ್ಕೆ ಪೀಠಾಧಿಪತಿಯಾಗುವುದು ದೊಡ್ಡ ವಿಷಯವಲ್ಲ. ಆದರೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರಯೋಧರ ಪತ್ನಿಯಾಗಿರುವುದು ಅತ್ಯಂತ ದೊಡ್ಡ ಗೌರವ. ಯೋಧನ ಪತ್ನಿಯ ತ್ಯಾಗ, ಸಹನೆ ಮತ್ತು ಧೈರ್ಯಕ್ಕೆ ಸಮಾನವಾದುದು ಮತ್ತೊಂದಿಲ್ಲ” ಎಂದು ಭಾವುಕವಾಗಿ ಹೇಳಿದರು.

ಪ್ರತಿ ವರ್ಷ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹತ್ತು ಹುತಾತ್ಮ ವೀರಯೋಧರ ಕುಟುಂಬಗಳಿಗೆ ಸಿರಿಗೆರೆ ತರಳಬಾಳು ಬೃಹನ್ಮಠದಿಂದ ತಲಾ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದ್ದು, ಈ ವರ್ಷವೂ ಅದೇ ಪರಂಪರೆಯನ್ನು ಮುಂದುವರಿಸಲಾಗಿದೆ ಎಂದು ತಿಳಿಸಿದರು. “ಹಣದಿಂದ ಯೋಧನ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ಅವರ ಕುಟುಂಬಗಳಿಗೆ ನಮ್ಮ ಸಮಾಜದ ಕೃತಜ್ಞತೆಯ ಸಂಕೇತವಾಗಿ ನೆರವು ನೀಡುವುದು ನಮ್ಮ ಕರ್ತವ್ಯ” ಎಂದರು.

ವೇದಿಕೆಯ ಮೇಲೆ ಹುತಾತ್ಮ ಯೋಧರ ಕುಟುಂಬಗಳಿಗೆ ಶಾಲು ಹೊದಿಸಿ ಗೌರವ ಸಲ್ಲಿಸುವ ಸಂದರ್ಭದಲ್ಲಿ ಅಲ್ಲಿದ್ದ ಗಣ್ಯರ ಕಣ್ಣುಗಳು ತೇವವಾಯಿತು. ಹತ್ತಾರು ಸಾವಿರ ಜನರ ಸಮ್ಮುಖದಲ್ಲಿ ನಡೆದ ಆ ಕ್ಷಣ ಭಾವನಾತ್ಮಕವಾಗಿ ಎಲ್ಲರ ಮನಸ್ಸನ್ನು ತಟ್ಟಿತು.

ಸಭಾಂಗಣದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ತಮ್ಮ ಕೈಯಲ್ಲಿದ್ದ ಮೊಬೈಲ್ ದೀಪಗಳನ್ನು ಬೆಳಗಿಸಿ ಹುತಾತ್ಮ ವೀರರಿಗೆ ಗೌರವ ಸಲ್ಲಿಸಿದ ದೃಶ್ಯ ಅತ್ಯಂತ ಮನೋಜ್ಞವಾಗಿತ್ತು. “ವೀರ ಯೋಧರ ಪತ್ನಿಯರನ್ನು ‘ವಿಧವೆ’ ಎಂದು ಕರೆಯುವುದು ಅವಮಾನಕಾರಿ. ಅವರನ್ನೂ ಶುಭ ಸಮಾರಂಭಗಳಿಗೆ ಆಹ್ವಾನಿಸಿ, ಆಶೀರ್ವಾದ ಪಡೆಯುವ ಪರಂಪರೆ ಬೆಳೆಸಬೇಕು. ನಿಮ್ಮ ಮಕ್ಕಳ ಮದುವೆಗಳಲ್ಲಿ ಅವರನ್ನು ಗೌರವದಿಂದ ಕರೆಸಿ ಮಾನ್ಯತೆ ನೀಡಬೇಕು” ಎಂದು ಶ್ರೀಗಳು ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಿದರು.

ಯೋಧರು ಗಡಿಯಲ್ಲಿ ಎದೆಕೊಟ್ಟು ದೇಶ ಕಾಯುವುದರಿಂದಲೇ ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ. “ಜೈ ಜವಾನ್ – ಜೈ ಕಿಸಾನ್” ಎಂಬುದು ಕೇವಲ ಘೋಷಣೆಯಾಗಿ ಉಳಿಯದೆ, ಸಂಕಷ್ಟದ ಸಂದರ್ಭಗಳಲ್ಲಿ ರೈತರು ಹಾಗೂ ಸೈನಿಕರ ಕುಟುಂಬಗಳಿಗೆ ನೆರವಾಗುವುದೇ ನಿಜವಾದ ಮಾನವೀಯತೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು, ನಿಂದನಾತ್ಮಕ ಸುದ್ದಿಗಳಿಂದ ಅನೇಕ ಕುಟುಂಬಗಳು ನಾಶವಾಗುತ್ತಿವೆ. ಸರ್ಕಾರವು ಈ ಕೂಡಲೇ ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಕಠಿಣ ಕಾಯ್ದೆಗಳನ್ನು ತರಬೇಕು ಎಂದು ಶ್ರೀಗಳು ಒತ್ತಾಯಿಸಿದರು.

ರಾಜಕೀಯ ನಾಯಕರಿಗೆ ಸಂದೇಶ ನೀಡಿದ ಅವರು,
“ಸಿದ್ದೇಶ್ವರ, ಮಲ್ಲಿಕಾರ್ಜುನ ಹಾಗೂ ಬಿ.ಪಿ. ಹರೀಶ್ ಸೇರಿದಂತೆ ಎಲ್ಲಾ ನಾಯಕರು ಪರಸ್ಪರ ಟೀಕೆ, ನಿಂದನೆಗಳನ್ನು ಕೈಬಿಟ್ಟು, ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ನಡೆದುಕೊಳ್ಳಬೇಕು. ವೀರಯೋಧರ ಕುಟುಂಬಗಳಿಗೆ ಗೌರವ ನೀಡುವುದು ರಾಜಕೀಯಕ್ಕಿಂತ ಮೇಲಿನ ವಿಷಯ” ಎಂದು ಸಲಹೆ ನೀಡಿದರು.

ಮುಂದಿನ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಸೊಲ್ಲಾಪುರದಲ್ಲಿ ಆಯೋಜಿಸಲಾಗುವುದು ಎಂದು ಶ್ರೀಗಳು ಘೋಷಿಸಿದರು. ಭಕ್ತಿ, ತ್ಯಾಗ ಮತ್ತು ರಾಷ್ಟ್ರಭಕ್ತಿಯ ಸಂದೇಶವನ್ನು ಹೊತ್ತು ಸಾಗಿದ ಈ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವವು ಭದ್ರಾವತಿಯ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿ ಉಳಿಯಲಿದೆ.

K.M.Sathish Gowda

Join WhatsApp

Join Now

Facebook

Join Now

Read more

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ: ಆದರ್ಶ ಡೆವಲಪರ್ಸ್‌ನ ಜಯಶಂಕರ್‌ಗೆ ‘ಶ್ರೀ ವೀರಭದ್ರೇಶ್ವರ ಪ್ರಶಸ್ತಿ’ ಪ್ರಧಾನ: ‘ವೀರಭದ್ರನಾಗಿ ಬದುಕಿದರೆ ಸಮಾಜ ಸುಭದ್ರವಾಗುತ್ತದೆ’: ಶ್ರೀ ರಂಭಾಪುರಿ ಜಗದ್ಗುರುಗಳು

ಪ್ರತಿಭೆಯ ಹಣೆಗೆ ವಿಭೂತಿಯಂತೆ ಹೊಳೆಯಲಿ ಸಂಸ್ಕಾರ: ಅಂಕಗಳ ಬೆನ್ನಟ್ಟುವ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಬದುಕಿಗೂ ಆದ್ಯತೆ ಅಗತ್ಯ: ಸಿದ್ಧಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ

ಸಂಸ್ಕಾರಯುತ ಶಿಕ್ಷಣವೇ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ: ಶ್ರೀ ರಂಭಾಪುರಿ ಜಗದ್ಗುರುಗಳು

ಸಿರಿಗೆರೆಯಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ: ‘ತರಳಬಾಳು’ ನಮ್ಮ ಮಠದ ಸಂವಿಧಾನ!: ಸಮಾಜಮುಖಿ ಆಡಳಿತಕ್ಕೆ ಗುರುಗಳ ಆದರ್ಶ ಅನುಸರಿಸಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ತೂಕಬದ್ಧ ನಡವಳಿಕೆಗೆ ಶ್ರೀ ತರಳಬಾಳು ಜಗದ್ಗುರುಗಳ ಮೆಚ್ಚುಗೆ

ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದಿಲ್ಲ ಎಂಬ ಸಂಕಲ್ಪ ಮಾಡಿಕೊಳ್ಳಿ: ಮಕ್ಕಳಿಗೆ ಸಂಸ್ಕಾರ ನೀಡುವುದೇ ದಂಪತಿಗಳ ದೊಡ್ಡ ಕರ್ತವ್ಯ: ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು

ಗುರುಗಳ ಶ್ರದ್ಧಾಂಜಲಿಗೆ ನಿಜವಾದ ಗೌರವವೆಂದರೆ ದುಶ್ಚಟಗಳಿಂದ ದೂರವಿರುವ ಸಂಕಲ್ಪ: ಬಸವಣ್ಣನವರ ವಚನವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸಿದ ಲಿಂ. ಶ್ರೀ ಶಿವಕುಮಾರ ಮಹಾಸ್ವಾಮೀಜಿ: ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

Leave a Comment