ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಜನತೆಗೆ ಚೊಂಬು, ರಾಜ್ಯಕ್ಕೆ ಸಾಲದ ಭಾರ: ಬಜೆಟ್ ವಿರುದ್ಧ ವಿಜಯೇಂದ್ರ ಆಕ್ರೋಶ

On: March 6, 2026 10:04 PM
Follow Us:

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯದ ಆಯವ್ಯಯ ಪತ್ರವು ಯಾವುದೇ ದೂರದೃಷ್ಟಿಯಿಲ್ಲದ, ಅಭಿವೃದ್ಧಿಗೆ ಸ್ಪಷ್ಟ ದಿಕ್ಕು ತೋರಿಸದ ನೀರಸ ಬಜೆಟ್ ಆಗಿದ್ದು, ಇದು ರಾಜ್ಯದ ಜನತೆಗೆ ತೀವ್ರ ನಿರಾಶೆ ಉಂಟು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಜೆಟ್ ಓದಲು ಆರಂಭಿಸಿದಾಗ ಅದನ್ನು ಕೇಳುತ್ತಿದ್ದರೆ ಯಾರೋ ಸಾಹಿತಿಗಳು ಬರೆದು ಕೊಟ್ಟಿರುವಂತ ಅನುಭವವಾಗುತ್ತಿತ್ತು. ಕೇಳಲು ಚೆನ್ನಾಗಿದ್ದರೂ ಅದರಲ್ಲಿರುವ ವಿಷಯಗಳು ಜನರಿಗೆ ಯಾವುದೇ ಪ್ರಯೋಜನ ತರುವಂತಿಲ್ಲ ಎಂದು ಟೀಕಿಸಿದರು. 17ನೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ರಾಜ್ಯದ ಜನತೆಗೆ ಅಭಿವೃದ್ಧಿಯ ಭರವಸೆ ನೀಡುವ ಬದಲು “ಖಾಲಿ ಚೊಂಬು” ನೀಡಿದಂತಾಗಿದೆ ಎಂದು ಕಿಡಿಕಾರಿದರು.

ಕಳೆದ ಮೂರು ಬಜೆಟ್‌ಗಳನ್ನು ಪರಿಶೀಲಿಸಿದರೆ ಸರ್ಕಾರದ ಆರ್ಥಿಕ ನಿರ್ವಹಣೆ ಸ್ಪಷ್ಟವಾಗುತ್ತದೆ. ಹಿಂದಿನ ಬಜೆಟ್‌ನಲ್ಲಿ ಸುಮಾರು 1 ಲಕ್ಷ 16 ಸಾವಿರ ಕೋಟಿ ರೂಪಾಯಿ ಸಾಲ ಮಾಡಲಾಗಿತ್ತು. ಈ ಬಾರಿ 2025-26ನೇ ಸಾಲಿಗೆ 1 ಲಕ್ಷ 32 ಸಾವಿರ ಕೋಟಿ ರೂಪಾಯಿ ಸಾಲ ಮಾಡುವ ನಿರೀಕ್ಷೆ ಇಟ್ಟಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟು ಸುಮಾರು 4 ಲಕ್ಷ 39 ಸಾವಿರ ಕೋಟಿ ರೂಪಾಯಿ ಸಾಲ ಮಾಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ದಾಖಲೆ ಎಂದು ಅವರು ಆರೋಪಿಸಿದರು.

ಅನುಭವಸಂಪನ್ನ ಮುಖ್ಯಮಂತ್ರಿಯಾಗಿ 17ನೇ ಬಜೆಟ್ ಮಂಡಿಸುವ ಸುವರ್ಣಾವಕಾಶ ಸಿದ್ದರಾಮಯ್ಯ ಅವರಿಗೆ ಲಭಿಸಿತ್ತು. ಆದರೆ ಆ ಅವಕಾಶವನ್ನು ಅವರು ಅಭಿವೃದ್ಧಿಗೆ ಬಳಸದೇ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ವಿಜಯೇಂದ್ರ ಟೀಕಿಸಿದರು. ವಿಧಾನಸೌಧದಲ್ಲಿ ಬಜೆಟ್ ಮಂಡನೆಯ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕರನ್ನೇ ಗಮನಿಸಿದ್ದೆ. ಅವರಲ್ಲಿಯೂ ಈ ಬಜೆಟ್ ಬಗ್ಗೆ ಯಾವುದೇ ಉತ್ಸಾಹ ಅಥವಾ ಆಸಕ್ತಿ ಕಾಣಿಸಲಿಲ್ಲ ಎಂದು ಹೇಳಿದರು.

ಕೆಲವು ಆಡಳಿತ ಪಕ್ಷದ ಶಾಸಕರು ಹಿರಿಯ ಶಾಸಕರ ಬಳಿಗೆ ತೆರಳಿ “ಮುಖ್ಯಮಂತ್ರಿಗಳು ನಮಗೆ ಪಂಗನಾಮ ಹಾಕಿದ್ದಾರೆ” ಎಂದು ಹೇಳಿಕೊಂಡಿರುವುದನ್ನು ಗಮನಿಸಿದ್ದೇನೆ ಎಂದು ವಿಜಯೇಂದ್ರ ಹೇಳಿದರು. ಬಜೆಟ್ ಮಂಡನೆಯ ಸಂದರ್ಭದಲ್ಲಿ ಕೆಲವೇ ಸಚಿವರು ಉಪಸ್ಥಿತರಿದ್ದು, ಇತರ ಸಚಿವರು ಹಾಗೂ ಶಾಸಕರಿಗೆ ಕೂಡ ಈ ಬಜೆಟ್ ಬಗ್ಗೆ ಆಸಕ್ತಿ ಕಾಣಿಸಲಿಲ್ಲ ಎಂಬುದನ್ನು ಅವರು ಉಲ್ಲೇಖಿಸಿದರು.

ರಾಜ್ಯದ ಪ್ರಮುಖ ಆದ್ಯತಾ ಕ್ಷೇತ್ರಗಳಲ್ಲಿ ಒಂದಾದ ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿ ಕಡಿಮೆ ಅನುದಾನ ನೀಡಲಾಗಿದೆ ಎಂದು ಅವರು ಆರೋಪಿಸಿದರು. ಕಳೆದ ಬಾರಿ ಶಿಕ್ಷಣಕ್ಕೆ ಸುಮಾರು ಶೇ.12 ಅನುದಾನ ನೀಡಲಾಗಿತ್ತು. ಆದರೆ ಈ ಬಾರಿ ಅದಕ್ಕಿಂತ ಕಡಿಮೆ ಅನುದಾನ ನೀಡಿರುವುದು ಸರ್ಕಾರದ ಶಿಕ್ಷಣದ ಮೇಲಿನ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಹೇಳಿದರು. ಬಂಡವಾಳ ಹೂಡಿಕೆ, ಉದ್ಯಮೋದ್ಯಮ ವೃದ್ಧಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಈ ಬಜೆಟ್‌ನಲ್ಲಿ ಸಮರ್ಪಕ ಆದ್ಯತೆ ನೀಡಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ರೈತರ ಕಲ್ಯಾಣಕ್ಕೂ ಈ ಬಜೆಟ್‌ನಲ್ಲಿ ಯಾವುದೇ ವಿಶೇಷ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಿಜಯೇಂದ್ರ ದೂರಿದರು. ಯುವಜನತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ದೃಷ್ಟಿಯಿಂದ ವಿಶೇಷ ಯೋಜನೆಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ಆ ನಿರೀಕ್ಷೆಗಳು ಈಡೇರಿಲ್ಲ. ಸರ್ಕಾರ ತನ್ನ ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಅಬಕಾರಿ ಇಲಾಖೆಯ ಆದಾಯದ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಅವರು ಟೀಕಿಸಿದರು.

ಕುಡುಕರ ರಾಜ್ಯ ಮಾಡುವ ಪ್ರಯತ್ನ

ಈ ಬಾರಿಯೂ ಅಬಕಾರಿ ಇಲಾಖೆಯಿಂದ ಸುಮಾರು 45 ಸಾವಿರ ಕೋಟಿ ರೂಪಾಯಿ ಆದಾಯದ ನಿರೀಕ್ಷೆ ಇಟ್ಟಿರುವುದು ಗಮನಾರ್ಹ. ಈ ಮೂಲಕ ಸರ್ಕಾರ ರಾಜ್ಯವನ್ನು ಕುಡುಕರ ರಾಜ್ಯವಾಗಿ ಮಾಡಲು ಹೊರಟಂತಿದೆ ಎಂದು ವಿಜಯೇಂದ್ರ ಆರೋಪಿಸಿದರು. ಆರೋಗ್ಯ ಕ್ಷೇತ್ರ ಹಾಗೂ ನೀರಾವರಿ ಯೋಜನೆಗಳಿಗೆ ಸೂಕ್ತ ಗಮನ ನೀಡಲಾಗಿಲ್ಲ ಎಂಬುದನ್ನೂ ಅವರು ಸೂಚಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಸರ್ಕಾರ ಯಾವುದೇ ಕಾಳಜಿ ತೋರಿಸಿಲ್ಲ ಎಂದು ಅವರು ಹೇಳಿದರು. ಅಲ್ಲದೆ ಮುಖ್ಯಮಂತ್ರಿಗಳ ಸ್ವಂತ ಜಿಲ್ಲೆಯಾದ ಮೈಸೂರು ಜಿಲ್ಲೆಗೂ ಈ ಬಜೆಟ್‌ನಲ್ಲಿ ಗಮನಾರ್ಹ ಕೊಡುಗೆ ನೀಡಿಲ್ಲ ಎಂದು ಟೀಕಿಸಿದರು. ಕರಾವಳಿ ಭಾಗವು ಬಿಜೆಪಿಗೆ ಶಕ್ತಿ ನೀಡಿದ ಪ್ರದೇಶ ಎಂಬ ಕಾರಣಕ್ಕೆ ಅದನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎನ್ನುವ ಭಾವನೆ ಮೂಡುತ್ತದೆ ಎಂದು ಹೇಳಿದರು.

ಒಟ್ಟಿನಲ್ಲಿ ಕರಾವಳಿ ಭಾಗ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡ ದೃಷ್ಟಿಕೋನ ಈ ಬಜೆಟ್‌ನಲ್ಲಿ ಕಾಣಿಸುವುದಿಲ್ಲ. ಆದ್ದರಿಂದ ಇದು ಅಭಿವೃದ್ಧಿಗೆ ದಿಕ್ಕು ತೋರದ, ಜನರ ನಿರೀಕ್ಷೆಗಳನ್ನು ಈಡೇರಿಸದ ಬಜೆಟ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದರು.

K.M.Sathish Gowda

Join WhatsApp

Join Now

Facebook

Join Now

Leave a Comment