ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಇರಾನ್–ಇಸ್ರೇಲ್ ಉದ್ವಿಗ್ನತೆ: ಶಾಂತಿಯುತ ಪರಿಹಾರಕ್ಕೆ ಭಾರತದ ಕರೆ – ರಾಜ್ಯಸಭೆಯಲ್ಲಿ ಜೈಶಂಕರ್ ಹೇಳಿಕೆ

On: March 9, 2026 8:14 PM
Follow Us:

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಅಮೆರಿಕಾ–ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದ ಹಿನ್ನೆಲೆ ಕುರಿತು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೋಮವಾರ ರಾಜ್ಯಸಭೆಯಲ್ಲಿ ವಿವರವಾದ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ವಾಸಿಸುತ್ತಿರುವ ಭಾರತೀಯರ ಸುರಕ್ಷತೆ ಸರ್ಕಾರದ ಅತ್ಯಂತ ಪ್ರಮುಖ ಆದ್ಯತೆಯಾಗಿದ್ದು, ಅವರ ರಕ್ಷಣೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯಸಭೆಯಲ್ಲಿ ಮಾತನಾಡಿದ ಸಚಿವರು, ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ವಿಶ್ವದ ರಾಜಕೀಯ ಹಾಗೂ ಆರ್ಥಿಕ ಪರಿಸ್ಥಿತಿಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಭಾರತವು ಯಾವತ್ತೂ ಯುದ್ಧವನ್ನು ಬೆಂಬಲಿಸುವ ದೇಶವಲ್ಲ; ಸಮಸ್ಯೆಗಳಿಗೆ ಶಾಂತಿಯುತ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳೇ ಶಾಶ್ವತ ಪರಿಹಾರವೆಂದು ನಂಬುತ್ತದೆ ಎಂದು ಅವರು ತಿಳಿಸಿದರು. ಆದ್ದರಿಂದ ಈ ಸಂಘರ್ಷವನ್ನು ಶೀಘ್ರದಲ್ಲಿ ಸಂವಾದ ಮತ್ತು ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಪರಿಹರಿಸಬೇಕೆಂದು ಭಾರತವು ಎಲ್ಲಾ ಪಕ್ಷಗಳಿಗೆ ಮನವಿ ಮಾಡುತ್ತಿದೆ ಎಂದು ಹೇಳಿದರು.

ಈ ಯುದ್ಧದ ಪರಿಣಾಮವಾಗಿ ಸಾಮಾನ್ಯ ಜನರ ಬದುಕು, ವ್ಯಾಪಾರ ಚಟುವಟಿಕೆಗಳು ಮತ್ತು ಜಾಗತಿಕ ಪೂರೈಕೆ ಸರಪಳಿ ಮೇಲೆ ಪರಿಣಾಮ ಬೀಳುತ್ತಿರುವುದು ಆತಂಕಕಾರಿ ವಿಷಯವಾಗಿದೆ. ವಿಶೇಷವಾಗಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಭಾರತದ ಇಂಧನ ಅಗತ್ಯಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಜೈಶಂಕರ್ ತಿಳಿಸಿದರು.

ಅವರು ಮುಂದುವರಿದು, ಗಲ್ಫ್ ರಾಷ್ಟ್ರಗಳು ಭಾರತದ ಪ್ರಮುಖ ವ್ಯಾಪಾರ ಪಾಲುದಾರರಾಗಿದ್ದು, ಆ ಪ್ರದೇಶದಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಅವರ ಸುರಕ್ಷತೆ ಮತ್ತು ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದರು. ಸಂಘರ್ಷದಿಂದಾಗಿ ಕೆಲವು ಪ್ರದೇಶಗಳಲ್ಲಿ ಭಾರತೀಯರು ಸಿಲುಕಿರುವ ಹಿನ್ನೆಲೆಯಲ್ಲಿ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.

ಇರಾನ್‌ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಕ್ಕಾಗಿ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘರ್ಷದ ತೀವ್ರತೆಯಿಂದಾಗಿ ಕೆಲವೊಮ್ಮೆ ಇರಾನಿನ ನಾಯಕತ್ವವನ್ನು ಸಂಪರ್ಕಿಸುವುದು ಕಷ್ಟಕರವಾಗಿದ್ದರೂ, ತಾವು ಇರಾನಿನ ವಿದೇಶಾಂಗ ಸಚಿವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವುದಾಗಿ ಜೈಶಂಕರ್ ತಿಳಿಸಿದರು.

ಇದೇ ವೇಳೆ ಇರಾನ್‌ನ ಮನವಿಯ ಮೇರೆಗೆ ಭಾರತವು ಒಂದು ಇರಾನಿನ ಹಡಗಿಗೆ ಆಶ್ರಯ ನೀಡಿದ್ದು, ಈ ಮಾನವೀಯ ಸಹಾಯಕ್ಕಾಗಿ ಇರಾನಿನ ವಿದೇಶಾಂಗ ಸಚಿವರು ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಸಂಘರ್ಷದ ಹಿನ್ನೆಲೆ ಭಾರತವು ರಾಜತಾಂತ್ರಿಕ ಮಾರ್ಗಗಳ ಮೂಲಕ ಅಮೆರಿಕ ಸೇರಿದಂತೆ ಸಂಬಂಧಿತ ದೇಶಗಳೊಂದಿಗೆ ಸಂಪರ್ಕದಲ್ಲಿದೆ. ಈ ಬಿಕ್ಕಟ್ಟನ್ನು ಶೀಘ್ರದಲ್ಲಿ ಶಾಂತಿಯುತವಾಗಿ ಪರಿಹರಿಸುವುದು ಅಗತ್ಯವೆಂದು ಭಾರತ ಅಭಿಪ್ರಾಯಪಟ್ಟಿದೆ ಎಂದು ಅವರು ಹೇಳಿದರು.

ಇನ್ನೂ ಸಂಘರ್ಷದ ಪರಿಣಾಮವಾಗಿ ಕೆಲವು ಭಾರತೀಯರನ್ನು ಅರ್ಮೇನಿಯಾ ಮಾರ್ಗವಾಗಿ ಸ್ಥಳಾಂತರಿಸುವ ಕಾರ್ಯವೂ ನಡೆದಿದೆ. ಇರಾನ್‌ನಿಂದ ಹೊರಬರುವ ಬಗ್ಗೆ ಭಾರತೀಯರಿಗೆ ಮುಂಚಿತವಾಗಿಯೇ ಸಲಹೆ ನೀಡಲಾಗಿದ್ದು, ಜನವರಿಯಲ್ಲೇ ಈ ಬಗ್ಗೆ ಸರ್ಕಾರ ಎಚ್ಚರಿಕೆ ಸೂಚಿಸಿತ್ತು ಎಂದು ಸಚಿವರು ಹೇಳಿದರು. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಲ್ಲಿನ ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ಸಹಾಯ ಒದಗಿಸುತ್ತಿದೆ ಎಂದು ಅವರು ತಿಳಿಸಿದರು.

ಈ ಯುದ್ಧದಲ್ಲಿ ಮೃತಪಟ್ಟಿರುವ ಗಲ್ಫ್ ರಾಷ್ಟ್ರಗಳ ನಾಗರಿಕರ ಕುಟುಂಬಗಳಿಗೆ ಭಾರತ ತನ್ನ ಸಂತಾಪವನ್ನು ವ್ಯಕ್ತಪಡಿಸುತ್ತದೆ ಎಂದು ಹೇಳಿದ ಜೈಶಂಕರ್, ಶಾಂತಿ ಮತ್ತು ಸ್ಥಿರತೆ ಕಾಪಾಡಲು ಎಲ್ಲಾ ರಾಷ್ಟ್ರಗಳು ಸಂಯಮ ವಹಿಸಬೇಕು ಎಂದು ಕರೆ ನೀಡಿದರು.

ಜೈಶಂಕರ್ ಭಾಷಣದ ಪ್ರಮುಖ ಅಂಶಗಳು:

  1. ಭಾರತವು ಯಾವಾಗಲೂ ಶಾಂತಿ, ಸಂವಾದ ಮತ್ತು ರಾಜತಾಂತ್ರಿಕ ಪರಿಹಾರವನ್ನು ಬೆಂಬಲಿಸುತ್ತದೆ.
  2. ಉದ್ವಿಗ್ನತೆ ಕಡಿಮೆ ಮಾಡುವುದು ಮತ್ತು ಸಾಮಾನ್ಯ ಜನರ ಸುರಕ್ಷತೆ ಖಚಿತಪಡಿಸುವುದು ಅಗತ್ಯ.
  3. ಇರಾನಿನ ನಾಯಕತ್ವವನ್ನು ಸಂಪರ್ಕಿಸುವುದು ಕಷ್ಟಕರವಾದರೂ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ.
  4. ಪಶ್ಚಿಮ ಏಷ್ಯಾದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ಕ್ರಮಗಳು ಕೈಗೊಳ್ಳಲಾಗಿದೆ.
  5. ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 1 ಕೋಟಿ ಭಾರತೀಯರು ವಾಸಿಸುತ್ತಿದ್ದು, ಅವರ ಸುರಕ್ಷತೆ ಸರ್ಕಾರದ ಪ್ರಮುಖ ಆದ್ಯತೆ.
  6. ಸಂಘರ್ಷದಿಂದ ಜಾಗತಿಕ ಪೂರೈಕೆ ಸರಪಳಿ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಪರಿಣಾಮ.
  7. ಇಂಧನ ಅಗತ್ಯಗಳ ಮೇಲಿನ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಪರಿಸ್ಥಿತಿಯನ್ನು ನಿಗಾ ಇಡುತ್ತಿದೆ.
  8. ಸಂಘರ್ಷದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಭಾರತ ಸಂತಾಪ ಸೂಚಿಸಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment