ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಶಿವಮೊಗ್ಗದಲ್ಲಿ ಮಾದಿಗ ಸಮುದಾಯದ ಎಚ್ಚರಿಕೆ: ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

On: March 16, 2026 2:26 PM
Follow Us:

ಶಿವಮೊಗ್ಗ: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಮಹಾಸಭಾ ಜಿಲ್ಲಾ ಸಮಿತಿ ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಲಾಯಿತು. ಒಳ ಮೀಸಲಾತಿ ಜಾರಿಗೊಳಿಸದೇ ಸರ್ಕಾರ ಮುಂದುವರಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆ ಬಳಿಕ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಂಘಟನೆಗಳ ಮುಖಂಡರು, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಯನ್ನು ಜಾರಿಗೆ ತರುವುದು ಸರ್ಕಾರದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಪ್ರಮುಖ ಭರವಸೆಯಾಗಿತ್ತು. ಆದರೆ ಸರ್ಕಾರ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳದೆ ಕಾಲಹರಣ ಮಾಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾದಿಗ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ತಲತಲಾಂತರಗಳಿಂದ ಅನ್ಯಾಯ ಮತ್ತು ಶೋಷಣೆಗೆ ಒಳಗಾಗಿದ್ದು, ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಕಳೆದ 35 ವರ್ಷಗಳಿಂದ ಹೋರಾಟದ ಮೂಲಕ ಮುಂದಿಟ್ಟುಕೊಂಡು ಬಂದಿದೆ. ಈ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಕೂಡ ಮಾನ್ಯತೆ ನೀಡಿದ್ದು, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ಐತಿಹಾಸಿಕ ತೀರ್ಪನ್ನು 2024ರ ಆಗಸ್ಟ್ 1ರಂದು ನೀಡಿದೆ ಎಂದು ಅವರು ಹೇಳಿದರು.

ಆದರೆ ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರವೂ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ವಿಷಯದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರದೆ ಮೀನಾಮೇಷ ಎಣಿಸುತ್ತಿರುವುದು ಸಾಮಾಜಿಕ ನ್ಯಾಯದ ಪರವಾಗಿ ಹೋರಾಡುತ್ತಿರುವ ಸಮುದಾಯಗಳಿಗೆ ದೊಡ್ಡ ನಿರಾಶೆಯನ್ನುಂಟು ಮಾಡಿದೆ ಎಂದು ಮುಖಂಡರು ದೂರಿದರು.

ಜಸ್ಟೀಸ್ ನಾಗಮೋಹನ್ ದಾಸ್ ಅವರ ವರದಿಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಸ್ಪಷ್ಟ ಶಿಫಾರಸುಗಳು ನೀಡಲಾಗಿದೆ. ಶೇ.17ರಷ್ಟು ಮೀಸಲಾತಿ ಸಂಬಂಧಿಸಿದ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇರುವುದನ್ನು ಅವರು ಉಲ್ಲೇಖಿಸಿದರೂ, ಈಗಿರುವ ಶೇ.15ರಷ್ಟು ಮೀಸಲಾತಿಯಲ್ಲಿಯೇ ಒಳ ಮೀಸಲಾತಿ ಜಾರಿಗೆ ಯಾವುದೇ ಕಾನೂನು ಅಡ್ಡಿಯಿಲ್ಲ ಎಂದು ರಾಜ್ಯದ ಅಡ್ವಕೇಟ್ ಜನರಲ್ ಕೂಡ ಸ್ಪಷ್ಟಪಡಿಸಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಇಂತಹ ಪರಿಸ್ಥಿತಿಯಲ್ಲಿಯೇ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸದೇ ಸುಮಾರು 56,342 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಮುಂದಾಗಿರುವುದು ಪರಿಶಿಷ್ಟ ಜಾತಿಗಳಲ್ಲಿನ ಅಸ್ಪೃಶ್ಯ ಸಮುದಾಯಗಳ ಪಾಲಿಗೆ ಮರಣಶಾಸನದಂತಾಗಿದೆ ಎಂದು ಅವರು ಆರೋಪಿಸಿದರು. ಒಳ ಮೀಸಲಾತಿ ಇಲ್ಲದ ಮೀಸಲಾತಿ ವ್ಯರ್ಥವಾಗುತ್ತದೆ ಮತ್ತು ಅದು ಘೋರ ಸಾಮಾಜಿಕ ಅನ್ಯಾಯವಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.

ಈ ಹಿನ್ನೆಲೆಯಲ್ಲಿ ಮಾರ್ಚ್ 27ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಯಾವುದೇ ಉಪಸಮಿತಿ ಅಥವಾ ಹೊಸ ಸಮಿತಿ ರಚಿಸುವ ಅವಶ್ಯಕತೆ ಇಲ್ಲ, ಏಕೆಂದರೆ ಜಸ್ಟೀಸ್ ನಾಗಮೋಹನ್ ದಾಸ್ ವರದಿಯಲ್ಲಿ ಎಲ್ಲ ವಿಷಯಗಳು ಸ್ಪಷ್ಟವಾಗಿ ಉಲ್ಲೇಖಗೊಂಡಿವೆ ಎಂದು ಮುಖಂಡರು ಒತ್ತಾಯಿಸಿದರು.

ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ತೀರ್ಮಾನ ಕೈಗೊಂಡು, ಒಳ ಮೀಸಲಾತಿಯ ಅನ್ವಯವೇ 56,342 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಇಲ್ಲವಾದರೆ ಮಾದಿಗ ಮಹಾಸಭಾ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟಗಳು ರಾಜ್ಯಾದ್ಯಂತ ತೀವ್ರ ಉಗ್ರ ಹೋರಾಟ ನಡೆಸಲು ತಯಾರಾಗಿವೆ ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ಕೆಲ ಹೋರಾಟಗಾರರು ಜಿಲ್ಲಾಧಿಕಾರಿ ಕಚೇರಿಯ ಒಳಗೆ ನುಗ್ಗಲು ಪ್ರಯತ್ನಿಸಿದರು. ಆದರೆ ಪೊಲೀಸರು ತಕ್ಷಣವೇ ಅವರನ್ನು ತಡೆದು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದರೂ ನಂತರ ಪರಿಸ್ಥಿತಿ ಶಾಂತಗೊಂಡಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಹೆಚ್. ಶಿವಾಜಿ, ಜಿಲ್ಲಾ ಉಪಾಧ್ಯಕ್ಷ ರಮೇಶ್ ಇ, ಪ್ರಕಾರ್ಯದರ್ಶಿ ತೇಜಸ್ ಆರ್, ಜಿಲ್ಲಾ ಖಜಾಂಚಿ ಎಂ. ಶಿವಲಿಂಗಪ್ಪ, ಜಿಲ್ಲಾ ಮುಖಂಡ ತಿಮ್ಲಾಪುರ ಲೋಕೇಶಪ್ಪ, ಮಾಜಿ ನಗರಸಭಾ ಸದಸ್ಯ ಆರ್. ಶಿವಣ್ಣ, ಡಿಎಸ್ ಸಂಚಾಲಕ ಚಿನ್ನಯ್ಯ, ಸಮಾಜದ ಪ್ರಮುಖರಾದ ಮಂಜುನಾಥ ಎಸ್, ಸೂಲಯ್ಯ, ಅಣ್ಣಪ್ಪ ಪಿ, ಟಿ.ಹೆಚ್. ಹಾಲೇಶಪ್ಪ, ಅಣ್ಣಪ್ಪ ಎ.ಕೆ, ಹೆಚ್.ಎನ್. ಪ್ರಭು, ಮಂಜಪ್ಪ ಬೀರನಕೆರೆ, ನಗರಾಧ್ಯಕ್ಷ ಅಣ್ಣಪ್ಪ ಕೆ, ಶಿಕಾರಿಪುರ ಅಧ್ಯಕ್ಷ ಮುಗಳಗೆರೆ ಬಸವರಾಜ್, ಗ್ರಾಮಾಂತರ ಅಧ್ಯಕ್ಷರಾದ ನೀಲಪ್ಪ, ರಘು, ತೀರ್ಥಹಳ್ಳಿ ತಾಲೂಕು ಅಧ್ಯಕ್ಷ ನಾಗರಾಜ್, ಭದ್ರಾವತಿ ತಾಲೂಕು ಅಧ್ಯಕ್ಷ ಮೈಲಾರಪ್ಪ, ಸೊರಬ ತಾಲೂಕು ಅಧ್ಯಕ್ಷ ಗಿಡ್ಡಪ್ಪ, ಯುವ ಘಟಕ ಜಿಲ್ಲಾಧ್ಯಕ್ಷ ನಿಖಿಲ್ ಮೂರ್ತಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಶ್ರೀಮತಿ ಕೆಂಪಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಜಪಾನ್‌ನ ನಗರ ಸಾರಿಗೆ ಮಾದರಿಗಳತ್ತ ಕರ್ನಾಟಕದ ಚಿತ್ತ; ರಾಜ್ಯದಲ್ಲೇ ‘ಜೆಪಿಎನ್ ಟ್ಯಾಕ್ಸಿ’ ತಯಾರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ಆಸಕ್ತಿ

ಆಸ್ತಿ-ಅಂತಸ್ತಿಗಿಂತ ಮಕ್ಕಳಿಗೆ ಬಸವತತ್ವ ಮತ್ತು ವಚನ ಸಂಸ್ಕಾರ ಕಲಿಸುವುದು ಮುಖ್ಯ; ಸಂಸ್ಕಾರದ ಸ್ಪರ್ಶದಿಂದ ಸಾಮಾನ್ಯ ಶಂಖವೂ ಪಾಂಚಜನ್ಯವಾಗುತ್ತದೆ, ತತ್ವಜ್ಞಾನದಿಂದ ಬದುಕು ಬೆಳಗುತ್ತದೆ: ಹರ್ಷ ಕಾಮತ್

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಉಡಾನ್ ಟೆಂಡರ್‌ನಲ್ಲಿ ಸ್ಥಾನ; ವಿಮಾನಯಾನ ಸೇವೆಗೆ ಹೊಸ ಭರವಸೆ! ಮೂರು ತಿಂಗಳ ಮಧ್ಯಂತರದಲ್ಲಿ ರಾಜ್ಯ ಸರ್ಕಾರದಿಂದ ತಾತ್ಕಾಲಿಕ ವಿಜಿ‌ಎಫ್ ನೆರವಿಗೆ ಸಂಸದ ಬಿ.ವೈ. ರಾಘವೇಂದ್ರ ಒತ್ತಾಯ

ಬೆಂಗಳೂರಿನಿಂದಾಚೆಗೂ ಕೈಗಾರಿಕಾ ಬೆಳವಣಿಗೆ; ಕರ್ನಾಟಕಕ್ಕೆ ಹೊಸ ಹೂಡಿಕೆ ಆಕರ್ಷಿಸುವ ಸಂಕಲ್ಪ: ಸಿಎಂ ಡಿ.ಕೆ. ಶಿವಕುಮಾರ್

ಘೋಷಣೆಗಳ ಸರ್ಕಾರಕ್ಕೆ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಬಿಸಿ ಮುಟ್ಟಿಸಲಿದೆ; ಡಿ.ಕೆ. ಶಿವಕುಮಾರ್ ಆಡಳಿತದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ

ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಸಹಿಸಲಾಗದು; ಅವಹೇಳನಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಬೆಕ್ಕಿನಕಲ್ಮಠ ಶ್ರೀಗಳ ಆಗ್ರಹ

Leave a Comment