ಚಿತ್ರದುರ್ಗ/ಶಿವಮೊಗ್ಗ: ಬಯಲುಸೀಮೆ ಹಾಗೂ ಬರಪೀಡಿತ ಪ್ರದೇಶಗಳ ಜೀವನಾಡಿಯಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಜಾರಿಗೆ ತರಬೇಕೆಂಬ ಉದ್ದೇಶದಿಂದ ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಜಗದ್ಗುರುಗಳಾದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಯುಗಾದಿ ಹಬ್ಬದ ಆಚರಣೆಯನ್ನು ಬಿಟ್ಟು ದೆಹಲಿಗೆ ಪ್ರಯಾಣ ಬೆಳೆಸಿರುವುದು ರೈತರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ಸಿರಿಗೆರೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ
2026ರ ಫೆಬ್ರವರಿ 27ರಂದು ಸಿರಿಗೆರೆ ಬೃಹನ್ಮಠದಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದು, ಸಭೆಯಲ್ಲಿ ಸಂಸತ್ ಸದಸ್ಯರು, ಶಾಸಕರು, ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರು, ಹಿರಿಯ ಅಧಿಕಾರಿಗಳು ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ರೈತ ಮುಖಂಡರು ಹಾಗೂ ಪತ್ರಕರ್ತರು ಭಾಗವಹಿಸಿದ್ದರು. ಈ ಸಭೆಯಲ್ಲಿ ಯೋಜನೆಯ ಪ್ರಗತಿ, ಅಡಚಣೆಗಳು ಹಾಗೂ ಕೇಂದ್ರದ ಮಟ್ಟದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರ ಚರ್ಚೆ ನಡೆಯಿತು.

ಕೃಷಿ ಸಿಂಚಾಯಿ ಯೋಜನೆಗೆ ಸೇರ್ಪಡೆ ಯತ್ನ
ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಭದ್ರಾ ಮೇಲ್ದಂಡೆ ಯೋಜನೆಯನ್ನು ಈಗಿರುವ ರಾಷ್ಟ್ರೀಯ ಯೋಜನೆಯಿಂದ ಕೃಷಿ ಸಿಂಚಾಯಿ ಯೋಜನೆಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಯೋಜನೆಗೆ ಅಗತ್ಯವಿರುವ ಎಲ್ಲಾ ಮಾನದಂಡಗಳು ಪೂರ್ತಿಯಾಗಿರುವುದರಿಂದ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಜಾರಿಗೆ ತರಲು ಸಾಧ್ಯತೆ ಇದೆ ಎಂದು ವಿವರಿಸಲಾಯಿತು.

₹10,000 ಕೋಟಿ ವೆಚ್ಚದ ಮಹತ್ವಾಕಾಂಕ್ಷಿ ಯೋಜನೆ
ಪೂರ್ಣ ಯೋಜನೆ ಜಾರಿಗೆ ಸುಮಾರು ₹10,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಇದರಲ್ಲಿ ಶೇಕಡಾ 60ರಷ್ಟು (₹6,000 ಕೋಟಿ) ಹಣವನ್ನು ಕೇಂದ್ರ ಸರ್ಕಾರ ಹಾಗೂ ಉಳಿದ ಶೇಕಡಾ 40ರಷ್ಟು (₹4,000 ಕೋಟಿ) ಹಣವನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರವು ಅಗತ್ಯ ಮಾಹಿತಿಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.

ಮಾರ್ಚ್ 20, 2026ರಂದು ಮಧ್ಯಾಹ್ನ 3 ಗಂಟೆಗೆ ದೆಹಲಿಯಲ್ಲಿ ತಾಂತ್ರಿಕ ನೀರಾವರಿ ಸಲಹಾ ಸಮಿತಿ ಸಭೆ ನಿಗದಿಯಾಗಿದ್ದು, ಈ ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಕೃಷಿ ಸಿಂಚಾಯಿ ಯೋಜನೆಗೆ ಸೇರ್ಪಡಿಸುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಈ ಹಿನ್ನೆಲೆ, ಸಂಬಂಧಿತ ಕೇಂದ್ರ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಪೂರ್ವಭಾವಿ ಚರ್ಚೆ ನಡೆಸಲು ಜಗದ್ಗುರುಗಳವರು ಮಾರ್ಚ್ 17ರಂದುಲೇ ದೆಹಲಿಗೆ ತೆರಳಿರುವುದು ವಿಶೇಷವಾಗಿದೆ.
ಬಯಲುಸೀಮೆ ಭಾಗದಲ್ಲಿ ಉಂಟಾಗಿರುವ ನೀರಿನ ಕೊರತೆ, ನಿರಂತರ ಬರ ಪರಿಸ್ಥಿತಿ ಹಾಗೂ ರೈತರ ಸಂಕಷ್ಟಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಯೋಜನೆಗೆ ವೇಗ ನೀಡುವ ನಿಟ್ಟಿನಲ್ಲಿ ಜಗದ್ಗುರುಗಳವರು ಶ್ರಮಿಸುತ್ತಿದ್ದಾರೆ. ಈ ನಡೆ ರೈತರ ಹಿತಾಸಕ್ತಿಯ ಬಗ್ಗೆ ಅವರಿಗಿರುವ ಅಪಾರ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ.

ಶ್ರೀ ತರಳಬಾಳು ಜಗದ್ಗುರು – “ಆಧುನಿಕ ಭಗೀರಥ”ರಿಂದ ಭದ್ರಾ ಯೋಜನೆಗೆ ವೇಗ, ರೈತರಲ್ಲಿ ವಿಶ್ವಾಸ
ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಈಗಾಗಲೇ ಅನೇಕ ಏತನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ “ಆಧುನಿಕ ಭಗೀರಥ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ಭದ್ರಾ ಮೇಲ್ದಂಡೆ ಯೋಜನೆಯನ್ನು ತಮ್ಮ ಹಸ್ತಕ್ಕೆ ತೆಗೆದುಕೊಂಡಿರುವುದರಿಂದ, ಯೋಜನೆ ಶೀಘ್ರದಲ್ಲೇ ಜಾರಿಗೆ ಬರುತ್ತದೆ ಎಂಬ ವಿಶ್ವಾಸ ರೈತರಲ್ಲಿ ವ್ಯಕ್ತವಾಗಿದೆ.
ಇದಲ್ಲದೆ, ರೈತರಿಗೆ ಅನುಕೂಲಕರವಾಗಿಲ್ಲವೆಂದು ಟೀಕೆಗೆ ಗುರಿಯಾದ ಫಸಲ್ ಬಿಮಾ ಯೋಜನೆಯ ಸಮಸ್ಯೆಗಳ ಕುರಿತು ಕೇಂದ್ರ ಕೃಷಿ ಸಚಿವರ ಗಮನ ಸೆಳೆಯುವ ಜೊತೆಗೆ, ಕಾರ್ಮಿಕರ ಹಿತದೃಷ್ಟಿಯಿಂದ VISL ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಉಕ್ಕು ಮತ್ತು ಗಣಿ, ಬೃಹತ್ ಕೈಗಾರಿಕಾ ಹಾಗೂ ಹಣಕಾಸು ಸಚಿವರೊಂದಿಗೆ ಚರ್ಚಿಸಲು ಜಗದ್ಗುರುಗಳವರು ಮುಂದಾಗಿದ್ದಾರೆ.
ಪೂಜ್ಯರ ಈ ಸಮಗ್ರ ಪ್ರಯತ್ನಗಳಿಗೆ ರಾಜ್ಯದ ರೈತ ಸಮುದಾಯ ಕೃತಜ್ಞತೆ ಸಲ್ಲಿಸುತ್ತಿದ್ದು, ಅವರ ನಾಯಕತ್ವದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಶೀಘ್ರದಲ್ಲೇ ಸಾಕಾರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 27ರಂದು ಸಿರಿಗೆರೆಯಲ್ಲಿ ನಡೆದ ಸಭೆಯಲ್ಲಿ ಸಂಸತ್ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ರೈತ ಮುಖಂಡರ ಸಮ್ಮುಖದಲ್ಲಿ ಜಗದ್ಗುರುಗಳವರು ಸಕ್ರಿಯವಾಗಿ ಪಾಲ್ಗೊಂಡು ಮಾರ್ಗದರ್ಶನ ನೀಡಿರುವುದು ಈ ಯೋಜನೆಗೆ ಮತ್ತಷ್ಟು ಬಲ ತುಂಬಿದೆ.

ಭದ್ರಾ ಮೇಲ್ದಂಡೆ ಜಾರಿಗೆ ಶ್ರೀಗಳ ಹೋರಾಟಕ್ಕೆ ರೈತ ಸಂಘದ ಬೆಂಬಲ: ಹೆಚ್.ಆರ್. ಬಸವರಾಜಪ್ಪ ಹೇಳಿಕೆ
ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಜಾರಿಯಾಗುವುದು ಬಯಲುಸೀಮೆಯ ಲಕ್ಷಾಂತರ ರೈತರ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ತರಲಿದೆ. ಈ ಹಿನ್ನೆಲೆಯಲ್ಲಿ ಪೂಜ್ಯ ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಜಗದ್ಗುರುಗಳಾದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಯುಗಾದಿ ಹಬ್ಬದಂತಹ ಮಹತ್ವದ ಆಚರಣೆಯನ್ನು ಬಿಟ್ಟು ದೆಹಲಿಗೆ ತೆರಳಿ ಕೇಂದ್ರದ ಮಟ್ಟದಲ್ಲಿ ತೀವ್ರ ಪ್ರಯತ್ನ ನಡೆಸುತ್ತಿರುವುದು ಅಭಿನಂದನೀಯ. ರೈತರ ಸಂಕಷ್ಟವನ್ನು ಹತ್ತಿರದಿಂದ ಅರಿತು, ಸಂಬಂಧಿತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆದು ಯೋಜನೆಗೆ ವೇಗ ನೀಡಲು ಕೈಗೊಂಡಿರುವ ಈ ಕ್ರಮವು ಶ್ಲಾಘನೀಯ. ಅವರ ನೇತೃತ್ವದಲ್ಲಿ ಈ ಯೋಜನೆ ಶೀಘ್ರದಲ್ಲೇ ಜಾರಿಗೆ ಬಂದು ಬಯಲುಸೀಮೆ ಭಾಗಕ್ಕೆ ಶಾಶ್ವತ ನೀರಾವರಿ ಪರಿಹಾರ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ಹೇಳಿದ್ದಾರೆ.






