ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಜೋರಾಗಿರುವ ನಡುವೆ, ಆರ್ಯವೈಶ್ಯ ಸಮುದಾಯದ ಸಂಘ ಸಂಸ್ಥೆಗಳ ಸಮೂಹದಿಂದ ಆಯೋಜಿಸಲಾದ “ಆರ್ಯವೈಶ್ಯ ಬಂಧುಗಳ ಸ್ನೇಹ ಮಿಲನ” ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು. ಈ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಘಾಟಿಸಿ, ಕಾರ್ಯಕರ್ತರು ಮತ್ತು ಸಮುದಾಯದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.

ಆರ್ಯವೈಶ್ಯ ಸಮುದಾಯದ ಕೊಡುಗೆಗೆ ಮೆಚ್ಚುಗೆ, ಬಿಎಸ್ವೈಯಿಂದ ಅಭ್ಯರ್ಥಿಗೆ ಬೆಂಬಲದ ಕರೆ
ಮಾತನಾಡಿದ ಅವರು, ಸಮಾಜದ ಐಕ್ಯತೆ ಮತ್ತು ಅಭಿವೃದ್ಧಿಗೆ ಆರ್ಯವೈಶ್ಯ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಪ್ರಶಂಸಿಸಿದರು. ಇದೇ ವೇಳೆ ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರ ಪರವಾಗಿ ಮತಯಾಚನೆ ಮಾಡಿ, ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ರಾಜ್ಯದ ಅಭಿವೃದ್ಧಿಗೆ ಸ್ಥಿರ ಮತ್ತು ಅನುಭವಸಂಪನ್ನ ನಾಯಕತ್ವ ಅಗತ್ಯವಿದ್ದು, ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ, ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ್, ಮಾಜಿ ಸಚಿವ ಮತ್ತು ಶಾಸಕ ಸಿ.ಸಿ. ಪಾಟೀಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ನಾಗಪ್ಪ, ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಹಾಗೂ ಶ್ರೀಮತಿ ಭಾರತಿ ಶೆಟ್ಟಿ ಸೇರಿದಂತೆ ಪಕ್ಷದ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಯಶವಂತ ರಾವ್ ಜಾಧವ್, ಅಜಯ್ ಕುಮಾರ್, ಶಿವಕುಮಾರ್, ವಿಜೇಂದ್ರ ಡಿ.ಟಿ., ವೀರೇಶ್, ಶಿವಪ್ರಕಾಶ, ನಾಗಪ್ರಕಾಶ್ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸಮಾರಂಭದಲ್ಲಿ ಆರ್ಯವೈಶ್ಯ ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಅಭ್ಯರ್ಥಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಕಾರ್ಯಕ್ರಮವು ಸಮುದಾಯದ ಐಕ್ಯತೆಯನ್ನು ಪ್ರತಿಬಿಂಬಿಸುವುದರ ಜೊತೆಗೆ, ಚುನಾವಣಾ ರಣರಂಗದಲ್ಲಿ ಬಿಜೆಪಿ ಪರ ಶಕ್ತಿಯ ಪ್ರದರ್ಶನವಾಗಿಯೂ ಪರಿಣಮಿಸಿತು.






