ಶಿವಮೊಗ್ಗ: ಘಾಟಿ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಗಳು ಸಾಮಾನ್ಯ ಅಭಿವೃದ್ಧಿ ಕಾರ್ಯಗಳಲ್ಲ. ವಿಶೇಷವಾಗಿ ಹೇರ್‌ಪಿನ್ ತಿರುವುಗಳಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನ, ಸೂಕ್ಷ್ಮ ಯೋಜನೆ ಹಾಗೂ ಅನುಭವಿ ತಜ್ಞರ ಮಾರ್ಗದರ್ಶನ ಅತ್ಯಗತ್ಯ. ಇಂತಹ ಪ್ರದೇಶಗಳಲ್ಲಿ ಆಗುವ ಸಣ್ಣ ಪ್ರಮಾದವೂ ಭೂಕುಸಿತ, ರಸ್ತೆ ಕುಸಿತ ಅಥವಾ ಸಂಪೂರ್ಣ ಸಂಪರ್ಕ ವ್ಯತ್ಯಯದಂತಹ ಗಂಭೀರ ಪರಿಣಾಮಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.
ಹುಲಿಕಲ್ ಘಾಟ್‌ನ ಪ್ರಸ್ತುತ ಸ್ಥಿತಿ ಸ್ಥಿರ
ಹುಲಿಕಲ್ ಘಾಟ್‌ನ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಶ್ರೀ ಚಂಡಿಕಾಂಬ ದೇವಸ್ಥಾನದ ಬಳಿಯಿರುವ ಪ್ರಮುಖ ಹೇರ್‌ಪಿನ್ ತಿರುವು ಹೊರತುಪಡಿಸಿ, ಉಳಿದ ಭಾಗದಲ್ಲಿ ರಸ್ತೆ ಸಂಪರ್ಕವು ಉತ್ತಮ ಮತ್ತು ಸುರಕ್ಷಿತವಾಗಿದೆ. ಭಾರೀ ವಾಹನಗಳೂ ಸೇರಿದಂತೆ ದಿನಪೂರ್ತಿ ಸಂಚಾರಕ್ಕೆ ಯೋಗ್ಯವಾಗಿರುವ ಈ ಮಾರ್ಗವು ಬಯಲುಸೀಮೆ ಮತ್ತು ಕರಾವಳಿ ಪ್ರದೇಶಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಕಳೆದ ಮಳೆಗಾಲದಲ್ಲಿ ಕೆಲವೆಡೆ ಭೂಕುಸಿತ ಸಂಭವಿಸಿದರೂ, ಸಂಚಾರಕ್ಕೆ ದೊಡ್ಡ ಮಟ್ಟದ ಅಡ್ಡಿಯುಂಟಾಗಿರಲಿಲ್ಲ ಎಂಬುದು ಗಮನಾರ್ಹ ಸಂಗತಿ.

₹4.35 ಕೋಟಿ ಯೋಜನೆಗೆ ವೈಜ್ಞಾನಿಕ ವಿಧಾನ ಅಗತ್ಯ
ಈ ಹಿನ್ನೆಲೆಯಲ್ಲಿ, ಲೋಕೋಪಯೋಗಿ ಇಲಾಖೆ ಸುಮಾರು ₹4.35 ಕೋಟಿ ವೆಚ್ಚದಲ್ಲಿ ಭೂಕುಸಿತ ತಡೆಗೋಡೆ ನಿರ್ಮಾಣ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೊಳ್ಳಲು ಮುಂದಾಗಿರುವುದು ಶ್ಲಾಘನೀಯ. ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಅಗತ್ಯವೂ ಹೌದು. ಆದರೆ, ಪಶ್ಚಿಮ ಘಟ್ಟಗಳಂತಹ ಅತಿಸೂಕ್ಷ್ಮ ಪರಿಸರದಲ್ಲಿ ಸಾಮಾನ್ಯ ರಸ್ತೆ ಅಗಲೀಕರಣ ಕ್ರಮಗಳನ್ನು ಅನುಸರಿಸುವುದು ಅಪಾಯಕಾರಿ ಆಗಬಹುದು. ಇಲ್ಲಿ ಭೂವೈಜ್ಞಾನಿಕ ಅಧ್ಯಯನ, ಜಲವೈಜ್ಞಾನಿಕ ವಿಶ್ಲೇಷಣೆ ಹಾಗೂ ಪರಿಸರ ಸಮತೋಲನವನ್ನು ಕಾಪಾಡುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.
ನಿರಂತರ ನಿಗಾ ಮತ್ತು ತಜ್ಞರ ಮೇಲ್ವಿಚಾರಣೆ ಅನಿವಾರ್ಯ: L&T ಯಂತಹ ಸಂಸ್ಥೆ ತಜ್ಞರ ಸಲಹೆ ಪಡೆಯುವುದು ಸೂಕ್ತ
ಇದಲ್ಲದೆ, ಕಾಮಗಾರಿ ನಡೆಯುವ ಅವಧಿಯಲ್ಲಿ ನಿರಂತರ ನಿಗಾವಹಿಸುವ ವ್ಯವಸ್ಥೆ, ತಕ್ಷಣದ ತಾಂತ್ರಿಕ ಪರಿಹಾರಗಳನ್ನು ಒದಗಿಸುವ ತಂಡ ಹಾಗೂ ಅಪಾಯ ನಿರ್ವಹಣಾ ವ್ಯವಸ್ಥೆಗಳನ್ನು ರೂಪಿಸಬೇಕಾಗಿದೆ. ಇಲಾಖೆಯಲ್ಲೇ ಅಗತ್ಯ ತಜ್ಞರು ಲಭ್ಯವಿಲ್ಲದಿದ್ದಲ್ಲಿ, ದೇಶದ ವಿವಿಧ ಭಾಗಗಳಲ್ಲಿ ಸಂಕೀರ್ಣ ಮೂಲಸೌಕರ್ಯ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ Larsen & Toubro (L&T) ಮುಂತಾದ ಪ್ರತಿಷ್ಠಿತ ಸಂಸ್ಥೆಗಳ ತಜ್ಞರ ಸಲಹೆ ಹಾಗೂ ಅನುಭವವನ್ನು ಪಡೆದುಕೊಳ್ಳುವುದು ಸೂಕ್ತವಾಗಿದೆ.
ಅಚಾತುರ್ಯ ತಪ್ಪಿದರೆ ಮಾತ್ರ ಭವಿಷ್ಯ ಸುರಕ್ಷಿತ
ಒಟ್ಟಿನಲ್ಲಿ, ಹುಲಿಕಲ್ ಘಾಟ್‌ನ ಈ ಪ್ರಮುಖ ಹೇರ್‌ಪಿನ್ ತಿರುವಿನಲ್ಲಿ ನಡೆಯುತ್ತಿರುವ ಕಾಮಗಾರಿ ಯಾವುದೇ ರೀತಿಯ ಅಚಾತುರ್ಯದಿಂದ ಭವಿಷ್ಯದಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಗದಂತೆ ಅತ್ಯಂತ ಜಾಗ್ರತೆಯಿಂದ ಕೈಗೊಳ್ಳಬೇಕು. ಪ್ರಸ್ತುತ ಸುರಕ್ಷತಾ ಕಾರಣಗಳಿಂದ ಸಾರಿಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿರುವುದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದರ ಜೊತೆಗೆ, ವ್ಯಾಪಾರ ಹಾಗೂ ರಾಜ್ಯದ ಆರ್ಥಿಕ ಚಟುವಟಿಕೆಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ.
ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ
ಆದ್ದರಿಂದ, ಶೀಘ್ರದಲ್ಲೇ ಯೋಗ್ಯ, ವೈಜ್ಞಾನಿಕ ಹಾಗೂ ಸುರಕ್ಷಿತ ರೀತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಸಾರಿಗೆ ಸಂಚಾರವನ್ನು ಪುನರಾರಂಭಿಸುವುದು ಅತ್ಯವಶ್ಯಕ. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಈ ಯೋಜನೆ ಯಶಸ್ವಿಯಾಗಲಿ ಎಂಬುದು ಎಲ್ಲರ ಆಶಯ.
ಲೇಖನ: ತ್ಯಾಗರಾಜ ಮಿತ್ಯಾಂತ, ಶಿವಮೊಗ್ಗ







