ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗದಲ್ಲಿ ಪಶುಪತಿನಾಥ ಪಂಚಮುಖಿ ದೇಗುಲ ಲೋಕಾರ್ಪಣೆ: ಬದುಕು ಸಮೃದ್ಧಿಯಾಗಲು ದೇವರ ಕರುಣೆಯ ಕಿರಣ ಅಗತ್ಯ- ಶ್ರೀ ರಂಭಾಪುರಿ ಜಗದ್ಗುರುಗಳು

On: April 29, 2026 7:33 PM
Follow Us:

ಶಿವಮೊಗ್ಗ, ಏಪ್ರಿಲ್ 29: ಮಾನವ ಜೀವನದಲ್ಲಿ ಜ್ಞಾನ, ಭಕ್ತಿ ಮತ್ತು ಸದಾಚಾರಗಳು ಸಮನ್ವಯಗೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಜೀವನವನ್ನು ಸಮೃದ್ಧಗೊಳಿಸಲು ದೇವರ ಕೃಪೆ ಅತ್ಯಗತ್ಯ ಎಂಬುದಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸಂದೇಶ ನೀಡಿದರು.

ನಗರದ ಶ್ರೀ ವೀರಶೈವ ಸಾಂಸ್ಕೃತಿಕ ಭವನದ ಸಮೀಪ ನೂತನವಾಗಿ ನಿರ್ಮಿಸಲಾದ ಪಶುಪತಿನಾಥ ಪಂಚಮುಖಿ ಶಿವಲಿಂಗ ದೇವಾಲಯದ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

​ಜೀವನದಲ್ಲಿ ಮನುಷ್ಯ ಎಂದಿಗೂ ಮರೆಯಬಾರದ ಎರಡು ವಿಷಯಗಳೆಂದರೆ ಅದು ದೇವರು ಮತ್ತು ಮರಣ. “ಉಪಕಾರ ಮತ್ತು ಅಪಕಾರಗಳನ್ನು ಮರೆತು, ದ್ವೇಷವನ್ನು ತೊರೆದು ಬಾಳಿದರೆ ಮಾತ್ರ ಜೀವನ ಉಜ್ವಲಗೊಳ್ಳುತ್ತದೆ. ಮನಸ್ಸಿನ ಸಕ್ರಿಯ ಪರಿಪಾಠವೇ ನಿಜವಾದ ಅಧ್ಯಾತ್ಮ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ದಶ ಸೂತ್ರಗಳು ಎಲ್ಲರ ಬಾಳಿಗೆ ಬೆಳಕಾಗಿವೆ,” ಎಂದು ಶ್ರೀಗಳು ನುಡಿದರು. ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರದ ರಚನಾತ್ಮಕ ಕಾರ್ಯಗಳನ್ನು ಶ್ಲಾಘಿಸಿದ ಅವರು, ಸುಂದರವಾಗಿ ನಿರ್ಮಾಣಗೊಂಡಿರುವ ಪಶುಪತಿನಾಥ ದೇವಾಲಯವು ಭಕ್ತರ ಮನಸ್ಸಿಗೆ ಶಾಂತಿ ನೀಡಲಿ ಎಂದು ಹರಸಿದರು.

​ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, “ಆಧುನಿಕ ನಾಗರಿಕತೆಯ ಹೆಸರಿನಲ್ಲಿ ಜೀವನದ ಮೌಲ್ಯಗಳು ಕಣ್ಮರೆಯಾಗಬಾರದು. ಅರಿವು ಮತ್ತು ಆಚಾರಗಳ ಸಂಗಮದಿಂದ ಮಾತ್ರ ಸುಂದರ ಜೀವನ ಸಾಧ್ಯ. ಮಂತ್ರ, ತೀರ್ಥ, ಗುರು ಮತ್ತು ವೈದ್ಯರ ಮೇಲೆ ನಾವು ಇಡುವ ನಂಬಿಕೆಯೇ ನಮಗೆ ಯೋಗ್ಯ ಫಲವನ್ನು ನೀಡುತ್ತದೆ,” ಎಂದರು. ಅಲ್ಲದೆ, ಮೇ 17ರಂದು ನಡೆಯಲಿರುವ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸೋಣ ಎಂದು ಕರೆ ನೀಡಿದರು.

​ಮಾಜಿ ಸಂಸದ ಅಯನೂರು ಮಂಜುನಾಥ್ ಮಾತನಾಡಿ, “ನೇಪಾಳದ ಕಠ್ಮಂಡುವನ್ನು ಬಿಟ್ಟರೆ, ಅಂತಹದ್ದೇ ಶಕ್ತಿಯುಳ್ಳ ಪಶುಪತಿನಾಥ ಪಂಚಮುಖಿ ಶಿವಲಿಂಗವು ಶಿವಮೊಗ್ಗದಲ್ಲಿ ಸ್ಥಾಪನೆಯಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಪಂಚಮುಖಿಗೂ ಮತ್ತು ಪಂಚಾಚಾರ್ಯರಿಗೂ ಅವಿನಾಭಾವ ಸಂಬಂಧವಿದೆ,” ಎಂದು ಸ್ಮರಿಸಿದರು.

​ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವೀರಶೈವ ಧರ್ಮವು ಸಾಮಾಜಿಕ ಸಂವೇದನಾಶೀಲ ಗುಣಗಳನ್ನು ಹೊಂದಿದ್ದು, ಜ್ಞಾನ ಮತ್ತು ಕ್ರಿಯೆಯ ಸಂಗಮವಾಗಿದೆ ಎಂದರು. ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು ಮತ್ತು ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಧರ್ಮ ಸಂಸ್ಕೃತಿಯ ಕುರಿತು ಮಾತನಾಡಿದರು.

ಪಂಚಮುಖಿ ಶಿವಲಿಂಗ ದೇವಾಲಯದ ನಿರ್ಮಾಣವು ಅತಿ ಸುಂದರವಾಗಿ ನಡೆದಿದ್ದು, ಇದು ಭಕ್ತರ ಆಧ್ಯಾತ್ಮಿಕ ಚೇತನೆಯನ್ನು ಹೆಚ್ಚಿಸುವ ಕೇಂದ್ರವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮೇ 17ರಂದು ನಡೆಯಲಿರುವ ಪಂಚಪೀಠಾಧೀಶ್ವರರ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವಂತೆ ಕರೆ ನೀಡಿದರು.

ದೇವಸ್ಥಾನದ ನಿರ್ಮಾಣಕ್ಕೆ ಧನಸಹಾಯ ಮಾಡಿದ ದಾನಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವೀರಶೈವ ಕಲ್ಯಾಣ ಮಂದಿರದ ಅಧ್ಯಕ್ಷ ಜೆ. ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ಹೆಚ್.ಎಲ್. ರವಿ ಸ್ವಾಗತಿಸಿದರು, ಸಂದೀಪ್ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಎಸ್.ಎಸ್. ಜ್ಯೋತಿ ಪ್ರಕಾಶ್, ವಿರೂಪಾಕ್ಷಪ್ಪ, ಬಳ್ಳೇಕೆರೆ ಸಂತೋಷ್, ಶಿವಮೊಗ್ಗ ಕಲ್ಯಾಣ ಮಂಟಪಗಳ ಒಕ್ಕೂಟದ ಅಧ್ಯಕ್ಷ ಕಟ್ಟೆ ಶ್ರೀನಿವಾಸ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎಸ್. ಷಡಕ್ಷರಿ, ಸೂಡಾ ಅಧ್ಯಕ್ಷ ಸುಂದರೇಶ್, ವೈ.ಹೆಚ್.ನಾಗರಾಜ್, ಪರಮೇಶ್, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

Leave a Comment