ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮಾನವೀಯತೆಯ ಬೆಳವಣಿಗೆಯೇ ಸಮಾಜದ ಶಕ್ತಿ; ಧರ್ಮ ಪ್ರಜ್ಞೆಯನ್ನು ಆಚರಣೆಯಲ್ಲಿ ಅಳವಡಿಸಿಕೊಂಡಾಗಲೇ ಶಾಂತಿ ಸಾಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

On: August 9, 2026 10:21 PM
Follow Us:

ದಾವಣಗೆರೆ, ಆ.9: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ, ಅದಕ್ಕೆ ಅನುಗುಣವಾಗಿ ಮಾನವನ ಭಾವನೆಗಳು ಹಾಗೂ ಮಾನವೀಯ ಮೌಲ್ಯಗಳು ವಿಸ್ತಾರಗೊಳ್ಳುತ್ತಿಲ್ಲ. ಸತ್ಯ, ಶುದ್ಧ ಜ್ಞಾನ ಮತ್ತು ಕ್ರಿಯಾತ್ಮಕ ಧರ್ಮ ಪಾಲನೆಯ ಮೂಲಕ ಮಾತ್ರ ಜಗತ್ತಿನಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ಭಾನುವಾರ ನಡೆದ ಜನಜಾಗೃತಿ ಧರ್ಮ ಸಮಾರಂಭದ ನಾಲ್ಕನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಜ್ಞಾನಕ್ಕೆ ಕ್ರಿಯಾಶೀಲತೆಯ ಸ್ಪರ್ಶ ದೊರೆತಾಗಲೇ ಧರ್ಮ ಸಾರ್ಥಕ: ಶ್ರೀ ರಂಭಾಪುರಿ ಜಗದ್ಗುರುಗಳು


ಭಾರತೀಯ ಧರ್ಮ ಮತ್ತು ಸಂಸ್ಕೃತಿಯು ಮಾನವನ ಬದುಕಿಗೆ ಸದ್ಗುಣ, ಸಂಸ್ಕಾರ ಮತ್ತು ಮೌಲ್ಯಗಳನ್ನು ತುಂಬುವ ಶಕ್ತಿಯನ್ನು ಹೊಂದಿದೆ. ಸಾಹಿತ್ಯ ಮತ್ತು ಸಂಸ್ಕೃತಿ ಈ ನಾಡಿನ ಅಮೂಲ್ಯ ಸಂಪತ್ತಾಗಿದ್ದು, ಧರ್ಮ ಮತ್ತು ಆಧ್ಯಾತ್ಮಿಕತೆ ಮಾನವ ಬದುಕಿಗೆ ಆಶಾಕಿರಣದಂತಿವೆ. ಆತ್ಮಸಂಯಮವೇ ಆಧ್ಯಾತ್ಮಿಕ ಬದುಕಿನ ಮೂಲಾಧಾರ. ವ್ಯಕ್ತಿಯ ಆಂತರಿಕ ಶುದ್ಧತೆ, ಸದಾಚಾರ ಹಾಗೂ ಮಾನವೀಯ ಗುಣಗಳ ಬೆಳವಣಿಗೆಯಿಂದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಮೂಡುತ್ತದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು.

ವೀರಶೈವ ಧರ್ಮದಲ್ಲಿ ಅಪಾರವಾದ ಆಧ್ಯಾತ್ಮಿಕ ಸಂಪತ್ತು ಅಡಗಿದೆ. ಜೀವನದ ಉಜ್ವಲ ಭವಿಷ್ಯಕ್ಕೆ ಜ್ಞಾನ ಎಷ್ಟು ಅಗತ್ಯವೋ, ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯುವ ಕ್ರಿಯಾತ್ಮಕ ಜೀವನವೂ ಅಷ್ಟೇ ಮುಖ್ಯ. ಜ್ಞಾನವನ್ನು ಕೇವಲ ತಿಳಿದುಕೊಳ್ಳುವುದರಿಂದ ಪ್ರಯೋಜನವಿಲ್ಲ, ಅದನ್ನು ಜೀವನದಲ್ಲಿ ಅನುಷ್ಠಾನಗೊಳಿಸಿದಾಗ ಮಾತ್ರ ಅದರ ಸಾರ್ಥಕತೆ ದೊರೆಯುತ್ತದೆ ಎಂದರು.

ಸಾಮಾಜಿಕ ಸಂವೇದನಾಶೀಲ ಗುಣಗಳನ್ನು ಬೆಳೆಸಿಕೊಂಡು, ಧರ್ಮದ ಮೌಲ್ಯಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬರೂ ಸಮಾಜದ ಒಳಿತಿಗಾಗಿ ಬದುಕಬೇಕು. ಇದರಿಂದ ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರ ಹಾಗೂ ಸಾಮರಸ್ಯ ಬೆಳೆದು ಸಮಾಜದ ಬದುಕಿನಲ್ಲಿ ಬೆಳಕು ಮೂಡುತ್ತದೆ ಎಂದು ಶ್ರೀಗಳು ತಿಳಿಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಶಿವಾದ್ವೈತ ತತ್ವಸಿದ್ಧಾಂತದಲ್ಲಿ ಅಂಗ ಲಿಂಗವಾಗುವ, ನರ ಹರನಾಗುವ, ಭವಿ ಭಕ್ತನಾಗುವ ಆದರ್ಶ ಮೌಲ್ಯಗಳನ್ನು ಕಾಣಬಹುದು. ಈ ತತ್ವಗಳು ಮಾನವನ ಬದುಕನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಮಾರ್ಗದರ್ಶನ ನೀಡುತ್ತವೆ. ಧರ್ಮದ ತತ್ವಗಳನ್ನು ಅರಿತು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವ್ಯಕ್ತಿತ್ವ ವಿಕಸನದೊಂದಿಗೆ ಸಮಾಜದ ಪ್ರಗತಿಯೂ ಸಾಧ್ಯವಾಗುತ್ತದೆ ಎಂದು ಜಗದ್ಗುರುಗಳು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಜೆಪಿ ಎಸ್‌ಟಿ ಮೋರ್ಚದ ರಾಜ್ಯಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ, ಪ್ರತಿಯೊಂದು ಸಂಸ್ಕಾರವೂ ಮಾನವನ ಜೀವನದ ಉನ್ನತಿ ಮತ್ತು ಶ್ರೇಯಸ್ಸಿಗೆ ಕಾರಣವಾಗುತ್ತದೆ. ವೀರಶೈವ ಧರ್ಮದ ದಾರ್ಶನಿಕ ಚಿಂತನೆಗಳು ಎಲ್ಲ ಜನರಿಗೂ ದಾರಿದೀಪವಾಗಿವೆ ಎಂದು ಹೇಳಿದರು.

ಧರ್ಮ ಎನ್ನುವುದು ಕೇವಲ ಆಚರಣೆಗಳಿಗೆ ಸೀಮಿತವಾಗಿರಬಾರದು. ಹಸಿದವನಿಗೆ ಅನ್ನ ನೀಡುವುದು, ದಾಹಗೊಂಡವನಿಗೆ ನೀರು ನೀಡುವುದು, ಸಂಕಷ್ಟದಲ್ಲಿರುವವರಿಗೆ ನೆರವಾಗುವುದು, ದುರ್ಬಲರನ್ನು ಕೈಹಿಡಿಯುವುದು ಸೇರಿದಂತೆ ಮಾನವೀಯತೆಯ ಪ್ರತಿಯೊಂದು ಕಾರ್ಯವೂ ಧರ್ಮದ ಭಾಗವಾಗಿದೆ. ಧರ್ಮದ ನಿಜವಾದ ಉದ್ದೇಶ ಮನುಷ್ಯನ ಬದುಕಿನಲ್ಲಿ ಮಾನವೀಯತೆ, ಕರುಣೆ ಮತ್ತು ಸೇವಾ ಮನೋಭಾವವನ್ನು ಬೆಳೆಸುವುದಾಗಿದೆ ಎಂದರು.

ಶ್ರೀ ರಂಭಾಪುರಿ ಜಗದ್ಗುರುಗಳ ಧರ್ಮ ಸಮಾರಂಭಗಳು ಸಮಾಜದಲ್ಲಿ ಸದಾ ಸಮಷ್ಟಿ ಪ್ರಜ್ಞೆಯನ್ನು ಮೂಡಿಸುವ ಕಾರ್ಯ ಮಾಡುತ್ತಿವೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಧಾರ್ಮಿಕ ಜಾಗೃತಿ, ಸಾಮಾಜಿಕ ಜವಾಬ್ದಾರಿ ಹಾಗೂ ಸಂಸ್ಕಾರದ ಅರಿವು ಹೆಚ್ಚುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯನು ತನ್ನೊಬ್ಬನಿಗಾಗಿ ಮಾತ್ರ ಬದುಕದೆ ಎಲ್ಲರ ಒಳಿತಿಗಾಗಿ ಬದುಕುವುದೇ ನಿಜವಾದ ಧರ್ಮ. ಎಲ್ಲರೂ ತನಗಾಗಿ ಬದುಕಬೇಕೆಂದು ಬಯಸುವುದು ಅಧರ್ಮದ ಮಾರ್ಗವಾಗಿದೆ. ಸಮಾಜದ ಒಳಿತಿಗಾಗಿ ತನ್ನ ಬದುಕನ್ನು ಸಮರ್ಪಿಸಿಕೊಳ್ಳುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಜಾಗತಿಕ ಶಾಂತಿಗೆ ಧರ್ಮದ ಕೊಡುಗೆ ಅಪಾರವಾಗಿದೆ. ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಸಿದ್ಧಾಂತ ಶಿಖಾಮಣಿಯಲ್ಲಿ ಸುಖಮಯ ಜೀವನದ ಅನೇಕ ಸೂತ್ರಗಳನ್ನು ಅರ್ಥಪೂರ್ಣವಾಗಿ ನಿರೂಪಿಸಲಾಗಿದೆ. ಅವುಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡರೆ ಮನುಷ್ಯನ ಬದುಕು ಸಾರ್ಥಕವಾಗುತ್ತದೆ ಎಂದರು.

ಮರಿಯಮ್ಮನಹಳ್ಳಿ ಗುರುಪಾದೇಶ್ವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮವು ಮನುಷ್ಯನ ಅಂತರಂಗ ಮತ್ತು ಬಹಿರಂಗ ಶುದ್ಧತೆಗೆ ಹೆಚ್ಚಿನ ಮಹತ್ವ ನೀಡಿದೆ. ವ್ಯಕ್ತಿತ್ವ ವಿಕಸನವೇ ಧರ್ಮದ ಮೂಲ ಗುರಿಯಾಗಿದ್ದು, ಸೌಜನ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಆಧ್ಯಾತ್ಮಿಕ ಅರಿವು ಹಾಗೂ ಉತ್ತಮ ಆಚರಣೆಗಳು ಅಗತ್ಯವಾಗಿವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಾಕ್‌ಶ್ರವಣ ಸಂಸ್ಥೆಯ ಅಂಗವಿಕಲ ಶಿಕ್ಷಕಿ ಶ್ರೀಮತಿ ಶೋಭಾ ಆರ್. ಅವರಿಗೆ ‘ಸಮಾಜ ಸೇವಾ ಚಂದ್ರಿಕೆ’ ಪ್ರಶಸ್ತಿ ನೀಡಿ ಜಗದ್ಗುರುಗಳು ಆಶೀರ್ವದಿಸಿದರು. ಸಮಾಜ ಸೇವೆ, ಶಿಕ್ಷಣ ಹಾಗೂ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಗೌರವಿಸುವ ಮೂಲಕ ಇತರರಲ್ಲಿಯೂ ಸೇವಾ ಮನೋಭಾವ ಬೆಳೆಸುವ ಕಾರ್ಯ ನಡೆಯುತ್ತಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

ಸಂಗೊಳ್ಳಿ ಶ್ರೀ, ಪುಣ್ಯಕೋಟಿ ಶ್ರೀ, ಹಗರಿಬೊಮ್ಮನಹಳ್ಳಿ ಶ್ರೀ, ಅಡವಿಹಳ್ಳಿ ಶ್ರೀ ಹಾಗೂ ಹರನಹಳ್ಳಿ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಪೂಜ್ಯರು ಉಪಸ್ಥಿತರಿದ್ದು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ಟಿಂಕರ್ ಮಂಜಣ್ಣ ಅವರು ಜಗದ್ಗುರುಗಳಿಗೆ ಗೌರವ ಮಾಲಾರ್ಪಣೆ ಮಾಡಿದರು. ಟಿ.ಜಿ. ಸುರೇಶ್ ಸ್ವಾಗತಿಸಿದರು. ಶಿವಪ್ಪ ಮುಳ್ಳೂರು ಕಾರ್ಯಕ್ರಮ ನಿರೂಪಿಸಿದರು.

ಜನಕಲ್ಯಾಣ ಹಾಗೂ ವಿಶ್ವಶಾಂತಿಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಬೆಳಗ್ಗೆ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತರಿಗೆ ಶುಭಹಾರೈಸಿದರು. ಧರ್ಮ ಸಮಾರಂಭದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ಧಾರ್ಮಿಕ ಜ್ಞಾನ, ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ಸೇವಾ ಮನೋಭಾವವನ್ನು ಜನರಲ್ಲಿ ಬೆಳೆಸುವ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯ ಮೂಡಿಸುವುದು ಇಂತಹ ಧರ್ಮ ಸಮಾರಂಭಗಳ ಪ್ರಮುಖ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯ ಎಚ್.ಎಚ್. ಕುಬೇರಪ್ಪ, ಮತ್ತಿಹಳ್ಳಿ ಸಂತೋಷ್, ಎಸ್. ನೀಲಕಂಠಪ್ಪ, ಶೋಭಾ ಮಂಜುನಾಥಯ್ಯ, ಸ್ಫೂರ್ತಿ ಬಿಜಾಪುರ, ಶ್ರೀದೇವಿ, ರುದ್ರಪ್ಪ ಎಚ್.ವಿ., ಮಹೇಶ್, ದ್ರಾಕ್ಷಾಯಣಮ್ಮ, ಸುಗಂಧಮ್ಮ, ನಿರ್ಮಲಾ ತುರವನೂರು, ಉಮಾದೇವಿ, ಮೈಲಾರಪ್ಪ, ಮಹಾಲಿಂಗಪ್ಪ, ಮಂಜುನಾಥ ಪಿ., ಸರ್ವೇಶ್ ಕುಮಾರ್ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಸ್ವಾರ್ಥ ತೊರೆದು ಸತ್ಯದ ಹಾದಿಯಲ್ಲಿ ನಡೆದರೆ ಬದುಕು ಸಾರ್ಥಕ: ಶ್ರೀ ರಂಭಾಪುರಿ ಜಗದ್ಗುರುಗಳು

ದಾವಣಗೆರೆಯಲ್ಲಿ ವೈಭವದ ‘ಜನಜಾಗೃತಿ ಧರ್ಮ ಸಮಾರಂಭ’; ಬದಲಾವಣೆಯ ಹಾದಿಯಲ್ಲಿ ಬೆಳವಣಿಗೆ ಸಾಧಿಸಿ ಮೌಲ್ಯಯುತ ಬದುಕು ರೂಪಿಸಿಕೊಳ್ಳಿ: ಶ್ರೀ ರಂಭಾಪುರಿ ಜಗದ್ಗುರುಗಳು

ಧರ್ಮ ಮತ್ತು ಆಧ್ಯಾತ್ಮಿಕ ಮೌಲ್ಯಗಳೇ ಸುಖ-ಶಾಂತಿಯ ಬದುಕಿನ ಅಡಿಪಾಯ: ಶ್ರೀ ರಂಭಾಪುರಿ ಜಗದ್ಗುರುಗಳು

‘ಹಣವಲ್ಲ, ಅನ್ನ ಮತ್ತು ಸಂಸ್ಕಾರವೇ ಬದುಕಿನ ನಿಜವಾದ ಸಂಪತ್ತು’; ಚಿನ್ನವಿಲ್ಲದೇ ಬದುಕಬಹುದು, ಆದರೆ ಅನ್ನವಿಲ್ಲದೇ ಬದುಕಲು ಸಾಧ್ಯವಿಲ್ಲ: ಶ್ರೀ ರಂಭಾಪುರಿ ಜಗದ್ಗುರುಗಳು

ಸತ್ಯ, ದಯೆ ಮತ್ತು ಸೇವೆಯೇ ಬದುಕಿನ ನಿಜವಾದ ಧರ್ಮ; ಸನ್ಮಾನಕ್ಕಿಂತ ಸಂಸ್ಕಾರ ಮತ್ತು ಸಂಸ್ಕೃತಿ ಮುಖ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಹೆತ್ತ ತಾಯಿ, ಜ್ಞಾನ ನೀಡಿದ ಗುರುವನ್ನು ಎಂದಿಗೂ ಮರೆಯಬಾರದು: ಶ್ರೀ ರಂಭಾಪುರಿ ಜಗದ್ಗುರುಗಳು

Leave a Comment