ಚಿತ್ರದುರ್ಗ: “ಬಿ.ಎಸ್. ಯಡಿಯೂರಪ್ಪ ಅವರ ಐದು ದಶಕಗಳ ಸಾರ್ವಜನಿಕ ಜೀವನ ಮತ್ತು ನಿರಂತರ ಹೋರಾಟದ ಹಾದಿಯು ಇಂದಿನ ಯುವಜನತೆಗೆ ಒಂದು ಅತ್ಯುತ್ತಮ ಮಾದರಿಯಾಗಿದೆ,” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದರು. ಕೋಟೆನಾಡು ಚಿತ್ರದುರ್ಗದಲ್ಲಿ ಆಯೋಜಿಸಲಾಗಿದ್ದ ಬಿ.ಎಸ್.ವೈ ರಾಜಕೀಯ ಜೀವನದ ಸುವರ್ಣೋತ್ಸವದ ‘ಅಭಿಮಾನೋತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಡಿಯೂರಪ್ಪ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಪುಸ್ತಕ ಬಿಡುಗಡೆ ಮತ್ತು ಸಾಧನೆಯ ಮೆಲುಕು
ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಜೀವನ ಮತ್ತು ಹೋರಾಟದ ಕುರಿತಾದ ‘ಕೆಂದಾವರೆ- ಕಮಲ ಅರಳಿದ ಕಥೆ’ ಹಾಗೂ ಅವರ ಸಂಸದೀಯ ಭಾಷಣಗಳ ಸಂಗ್ರಹವಾದ ‘ಸದನ ಶಿಕಾರಿ- ಯಡಿಯೂರಪ್ಪನವರ ಗುಡುಗಿನ ನುಡಿಗಳು’ ಪುಸ್ತಕಗಳನ್ನು ಅಮಿತ್ ಶಾ ಬಿಡುಗಡೆ ಮಾಡಿದರು. “ಯಡಿಯೂರಪ್ಪ ಅವರು ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ. ಜನಸೇವೆ ಮತ್ತು ರೈತರ ಕಲ್ಯಾಣವನ್ನೇ ಉಸಿರಾಗಿಸಿಕೊಂಡವರು. ಒಬ್ಬ ಸಾಧಾರಣ ಕುಟುಂಬದಿಂದ ಬಂದ ವ್ಯಕ್ತಿ, ತನ್ನ ದೃಢ ಇಚ್ಛಾಶಕ್ತಿ, ರಾಷ್ಟ್ರಭಕ್ತಿ ಮತ್ತು ಸಂಘದ ಸಂಸ್ಕಾರದಿಂದ ಹೇಗೆ ಉನ್ನತ ಸ್ಥಾನಕ್ಕೇರಬಹುದು ಎಂಬುದಕ್ಕೆ ಅವರೇ ಸಾಕ್ಷಿ,” ಎಂದು ಶಾ ನುಡಿದರು.

ಹೋರಾಟದ ಹಾದಿ: ಸೈಕಲ್ನಿಂದ ಸೌಧದವರೆಗೆ
ಯಡಿಯೂರಪ್ಪ ಅವರ ಆರಂಭಿಕ ದಿನಗಳನ್ನು ಸ್ಮರಿಸಿದ ಅಮಿತ್ ಶಾ, “ಬಿಜೆಪಿಯನ್ನು ಕಟ್ಟಲು ಅವರು ಪಟ್ಟ ಶ್ರಮ ಅಪಾರ. ಅಂದು ಸಾರಿಗೆ ಸೌಲಭ್ಯಗಳಿಲ್ಲದ ಕಾಲದಲ್ಲಿ ಬಸ್ ಸಿಗದಿದ್ದರೆ ಸೈಕಲ್ ಏರಿ ಹಳ್ಳಿ ಹಳ್ಳಿಗಳಿಗೆ ಸಂಚರಿಸುತ್ತಿದ್ದರು. ಸಾವಿರಾರು ಕಿಲೋಮೀಟರ್ ಪಾದಯಾತ್ರೆ ನಡೆಸಿ ರೈತರ ಪರ ಧ್ವನಿ ಎತ್ತಿದರು. ಈ ಹೋರಾಟದ ಹಾದಿಯಲ್ಲಿ ಅವರು ಜೈಲುವಾಸವನ್ನೂ ಅನುಭವಿಸಿದರು. ಇಂದು ಅವರು ದಕ್ಷಿಣ ಭಾರತದ ಅಪ್ರತಿಮ ರೈತ ನಾಯಕರಾಗಿ ಹೊರಹೊಮ್ಮಿದ್ದಾರೆ,” ಎಂದರು.
ಕೃಷಿ ಬಜೆಟ್ ಮತ್ತು ದಕ್ಷಿಣ ಭಾರತದ ಬಿಜೆಪಿ ಭದ್ರಕೋಟೆ
ಬಿಜೆಪಿಯ ಇತಿಹಾಸದಲ್ಲಿ ಯಡಿಯೂರಪ್ಪ ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಉಳಿಯಲಿದೆ ಎಂದ ಶಾ, “ದಕ್ಷಿಣ ಭಾರತದಲ್ಲಿ ಕಮಲ ಅರಳಿಸುವಲ್ಲಿ ಅವರ ಪಾತ್ರ ದೊಡ್ಡದು. ಕೃಷಿಕರ ಬಗ್ಗೆ ಅವರಿಗಿದ್ದ ಕಾಳಜಿಯಿಂದಾಗಿಯೇ ಅವರು ಹಸಿರು ಶಾಲು ಹೊದ್ದು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಐತಿಹಾಸಿಕ ಸಂದರ್ಭ ಮತ್ತು ವೀರಭೂಮಿಯ ಸ್ಮರಣೆ
ಕಾಕತಾಳೀಯ ಎಂಬಂತೆ, ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಮುಖ್ಯಮಂತ್ರಿಯ ಪದಗ್ರಹಣ ನಡೆದ ದಿನದಂದೇ ಬಿ.ಎಸ್.ವೈ ಅವರ ಸುವರ್ಣೋತ್ಸವ ನಡೆಯುತ್ತಿರುವುದು ಹೊಸ ಶಕೆಯ ಆರಂಭ ಎಂದು ಶಾ ಅಭಿಪ್ರಾಯಪಟ್ಟರು. ಇದೇ ವೇಳೆ ಚಿತ್ರದುರ್ಗದ ಇತಿಹಾಸವನ್ನು ಸ್ಮರಿಸಿದ ಅವರು, ಹೈದರಾಲಿಯನ್ನು ಎದುರಿಸಿದ ರಾಜಾ ಮದಕರಿ ನಾಯಕ ಮತ್ತು ಸಾಹಸದ ಸಂಕೇತವಾದ ವೀರನಾರಿ ಓಬವ್ವ ಅವರ ಶೌರ್ಯ ಯುವಜನರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಟಿ. ರವಿ ಅವರು ಯಡಿಯೂರಪ್ಪ ಅವರ 50 ವರ್ಷಗಳ ಸಾಧನೆಯ ವಿವರಗಳನ್ನು ಸಭೆಯ ಮುಂದಿಟ್ಟರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ವಿವಿಧ ಮಠಾಧೀಶರು ಹಾಗೂ ಗಣ್ಯರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು. ವೇದಿಕೆಯ ಮೇಲೆ ಅಮಿತ್ ಶಾ ಅವರಿಗೆ ಆತ್ಮೀಯ ಗೌರವ ಸಲ್ಲಿಸಲಾಯಿತು.
ಯಡಿಯೂರಪ್ಪ ಅವರು ಶತಾಯುಷಿಗಳಾಗಿ ಬಾಳಲಿ ಮತ್ತು ನಾಡಿನ ಸೇವೆಗೆ ಅವರ ಮಾರ್ಗದರ್ಶನ ಸದಾ ಇರಲಿ ಎಂದು ಅಮಿತ್ ಶಾ ಹಾರೈಸಿದರು.







