ಬೆಂಗಳೂರು: “ಬಿ.ಎಸ್. ಯಡಿಯೂರಪ್ಪನವರು ಸುದೀರ್ಘ ಕಾಲ ವಿರೋಧ ಪಕ್ಷದಲ್ಲಿದ್ದು, ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ಧೀಮಂತ ನಾಯಕ. ಅವರು ಅಧಿಕಾರಕ್ಕಾಗಿ ಎಂದಿಗೂ ಯಾವುದೇ ತತ್ವ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ವಿಧಾನಸಭೆಯಲ್ಲಿ ಅವರು ಒಂಟಿ ಸಲಗನಂತೆ ಏಕಾಂಗಿಯಾಗಿ ಹೋರಾಡಿ ಪಕ್ಷಕ್ಕೆ ಆನೆಬಲ ತಂದಿದ್ದರು” ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಬಣ್ಣಿಸಿದ್ದಾರೆ.
ಚಿತ್ರದುರ್ಗದಲ್ಲಿ ಇತ್ತೀಚೆಗೆ ನಡೆದ ‘ಬಿ.ಎಸ್.ವೈ ಅಭಿಮಾನೋತ್ಸವ’ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಶ್ರಮಿಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗಾಗಿ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ (ಗೇಟ್ ನಂ. 4) ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭ ಮತ್ತು ಔತಣಕೂಟದಲ್ಲಿ ಅವರು ಮಾತನಾಡಿದರು.
ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿಎಸ್ವೈ ಶ್ರಮವೇ ಕಾರಣ: ಕಾರಜೋಳ
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗೋವಿಂದ ಕಾರಜೋಳ ಅವರು ಬಿಎಸ್‍ವೈ ಅವರ ರಾಜಕೀಯ ಜೀವನದ ಹೋರಾಟಗಳನ್ನು ಸ್ಮರಿಸಿದರು. “ಯಡಿಯೂರಪ್ಪನವರ ಅವಿರತ ಶ್ರಮ ಮತ್ತು ಸಂಘಟನಾ ಚಾತುರ್ಯದಿಂದಾಗಿಯೇ ಕರ್ನಾಟಕದಲ್ಲಿ ಹಾಗೂ ಒಟ್ಟಾರೆ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು. ಇಂದು ಆ ಭದ್ರ ಬುನಾದಿಯನ್ನು ಮತ್ತಷ್ಟು ಗಟ್ಟಿಗೊಳಿಸಿ, ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ,” ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
2028ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ‘ಅಭಿಮಾನೋತ್ಸವ’ವೇ ಮೊದಲ ಹೆಜ್ಜೆ: ಬಿ.ವೈ. ವಿಜಯೇಂದ್ರ
ಇದೇ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಈ ಅಭಿಮಾನೋತ್ಸವವು ಕೇವಲ ಒಂದು ಕಾರ್ಯಕ್ರಮವಾಗಿರದೆ, ರಾಜ್ಯ ರಾಜಕಾರಣದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ ಎಂದರು.
”ಚಿತ್ರದುರ್ಗದಲ್ಲಿ ನಡೆದ ಬಿ.ಎಸ್.ವೈ ಅಭಿಮಾನೋತ್ಸವವು ಕೇವಲ ವ್ಯಕ್ತಿ ಪೂಜೆಯಲ್ಲ. ಅದು 2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾರ್ವಭೌಮ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲು ಇಟ್ಟಿರುವ ಮೊದಲ ಮತ್ತು ಅತ್ಯಂತ ಗಟ್ಟಿ ಹೆಜ್ಜೆಯಾಗಿದೆ,” ಎಂದು ವಿಜಯೇಂದ್ರ ಆಶಯ ವ್ಯಕ್ತಪಡಿಸಿದರು.
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಕಾರ್ಯಕ್ರಮ ಮಾಡಿಲ್ಲ: ಬಿ.ವೈ. ವಿಜಯೇಂದ್ರ ಸ್ಪಷ್ಟನೆ
ಅಭಿಮಾನೋತ್ಸವದ ಯೋಜನೆ ರೂಪಿಸುವಾಗ ಪಕ್ಷದ ಒಳಗೂ ಮತ್ತು ಹೊರಗೂ ಹಲವು ಅನುಮಾನ, ಗೊಂದಲಗಳು ವ್ಯಕ್ತವಾಗಿದ್ದವು. ಸದ್ಯಕ್ಕೆ ಯಾವುದೇ ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಗಳು ಹತ್ತಿರ ಇಲ್ಲದಿರುವಾಗ ಇಂತಹ ಬೃಹತ್ ಸಮಾವೇಶದ ಅಗತ್ಯವೇನಿದೆ ಎಂಬ ಪ್ರಶ್ನೆಗಳು ಎದ್ದಿದ್ದವು. ಈ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ ವಿಜಯೇಂದ್ರ, “ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿ ಯಾವುದೇ ರಾಜಕೀಯ ಲಾಭ ಪಡೆದುಕೊಳ್ಳಲು ಅಥವಾ ಬೇಳೆ ಬೇಯಿಸಿಕೊಳ್ಳಲು ಈ ಕಾರ್ಯಕ್ರಮ ಆಯೋಜಿಸಿಲ್ಲ. ರೈತರ ಕಣ್ಣೀರು ಒರೆಸಿದ, ದೀನದಲಿತರಿಗೆ ಸಾಮಾಜಿಕ ನ್ಯಾಯ ಒದಗಿಸಿದ ಮತ್ತು ಬಿಜೆಪಿಯನ್ನು ಹಳ್ಳಿ ಹಳ್ಳಿಗೂ ತಲುಪಿಸಿದ ಅಪ್ರತಿಮ ಹೋರಾಟಗಾರನಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಿತ್ತು,” ಎಂದರು.
ಹಳ್ಳಿ ಹಳ್ಳಿಗೆ ತಲುಪಿದ ಬಿಜೆಪಿ
ಒಂದು ಕಾಲದಲ್ಲಿ ಬಿಜೆಪಿ ಕೇವಲ ನಗರ ಕೇಂದ್ರಿತ ಪಕ್ಷ ಎಂಬ ಹಣೆಪಟ್ಟಿ ಹೊಂದಿತ್ತು. ಆದರೆ ಯಡಿಯೂರಪ್ಪನವರೂ ಸೇರಿದಂತೆ ಅನೇಕ ಹಿರಿಯ ನಾಯಕರ ತಪಸ್ಸು ಹಾಗೂ ಲಕ್ಷಾಂತರ ಕಾರ್ಯಕರ್ತರ ಪರಿಶ್ರಮದಿಂದಾಗಿ ಇಂದು ಬಿಜೆಪಿ ರಾಜ್ಯದ ಮೂಲೆ ಮೂಲೆಗೂ ವಿಸ್ತರಿಸಿದೆ. ಬಿಎಸ್‍ವೈ ಅವರ ಪ್ರಾಮಾಣಿಕತೆ, ಹೋರಾಟದ ಹಾದಿ ಮತ್ತು ಧೀಮಂತ ವ್ಯಕ್ತಿತ್ವವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಮತ್ತು ಅವರಲ್ಲಿ ಹೊಸ ರಾಜಕೀಯ ಚೈತನ್ಯ ತುಂಬುವ ಉದ್ದೇಶದಿಂದ ಈ ಅಭಿಮಾನೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಅವರು ವಿವರಿಸಿದರು.
ಹತ್ತು ಲಕ್ಷಕ್ಕೂ ಅಧಿಕ ಜನಸಾಗರ: ಅಮಿತ್ ಶಾ ಪ್ರಶಂಸೆ
ಚಿತ್ರದುರ್ಗದ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಹರಿದುಬಂದಿದ್ದರು. ಜನರು ಯಡಿಯೂರಪ್ಪನವರನ್ನು ಕೇವಲ ಒಬ್ಬ ನಾಯಕನಾಗಿ ನೋಡುತ್ತಿಲ್ಲ, ಬದಲಿಗೆ ಅವರಲ್ಲೊಂದು ಅದಮ್ಯ ಶಕ್ತಿಯನ್ನು ಕಾಣುತ್ತಿದ್ದಾರೆ ಎಂಬುದಕ್ಕೆ ಈ ಜನಸಾಗರವೇ ಸಾಕ್ಷಿ ಎಂದು ವಿಜಯೇಂದ್ರ ಹೆಮ್ಮೆಯಿಂದ ಹೇಳಿದರು.
“ಕರ್ನಾಟಕದ ಇತಿಹಾಸದಲ್ಲೇ ಇಂತಹ ಅಭೂತಪೂರ್ವ ಮತ್ತು ಶಿಸ್ತುಬದ್ಧ ಕಾರ್ಯಕ್ರಮ ನಡೆದಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ರಾಜ್ಯದ ಎಲ್ಲಾ ಸಮುದಾಯಗಳ ಜಗದ್ಗುರುಗಳು, ಪೂಜ್ಯ ಸ್ವಾಮೀಜಿಗಳು ಒಂದೇ ವೇದಿಕೆಯಲ್ಲಿ ಒಟ್ಟಿಗೆ ಉಪಸ್ಥಿತರಾಗಿದ್ದು ಯಡಿಯೂರಪ್ಪನವರ ಮೇಲಿರುವ ಸಾರ್ವತ್ರಿಕ ಗೌರವಕ್ಕೆ ಹಿಡಿದ ಕೈಗನ್ನಡಿಯಾಗಿದೆ,” ಎಂದು ವಿಜಯೇಂದ್ರ ಉಲ್ಲೇಖಿಸಿದರು. ಯುವ ಜನತೆಗೆ ಸ್ಪಷ್ಟ ರಾಜಕೀಯ ಸಂದೇಶ ರವಾನಿಸುವಲ್ಲಿ ಈ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿದೆ ಎಂದು ಅವರು ನುಡಿದರು.
ಈ ಕೃತಜ್ಞತಾ ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಆರ್. ವಿಶ್ವನಾಥ್ ಸೇರಿದಂತೆ ರಾಜ್ಯದ ಪ್ರಮುಖ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ನೂರಾರು ಪ್ರಮುಖ ಪದಾಧಿಕಾರಿಗಳು ಭಾಗವಹಿಸಿದ್ದರು.