ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ವೀರಶೈವ-ಲಿಂಗಾಯತ ಸಮಾಜ ಒಳಪಂಗಡಗಳ ಭೇದ ಮರೆತು ಒಂದಾಗಲಿ; ಸಮಾಜದಲ್ಲಿ ಸಂಘಟನೆಗಳು ಬೆಳೆಯಬೇಕೇ ಹೊರತು ಸಂಘರ್ಷಗಳು ನಡೆಯಬಾರದು: ಶ್ರೀ ರಂಭಾಪುರಿ ಜಗದ್ಗುರುಗಳು

On: July 20, 2026 10:23 AM
Follow Us:

ಬೆಂಗಳೂರು: “ಭಾರತ ದೇಶವು ಹಲವಾರು ಧರ್ಮ, ಸಂಪ್ರದಾಯ ಹಾಗೂ ಪರಂಪರೆಗಳ ನೆಲೆಬೀಡಾಗಿದೆ. ಸಮಾಜದ ಅಭಿವೃದ್ಧಿಗೆ ಮತ್ತು ಸನ್ಮಾರ್ಗಕ್ಕೆ ಉತ್ತಮವಾದ ಸಂಘಟನೆಗಳು ಬೆಳೆದು ಬರುವ ಅಗತ್ಯವಿದೆ. ಆದರೆ, ಸಂಘಟನೆಯ ಹೆಸರಿನಲ್ಲಿ ಸಮಾಜದಲ್ಲಿ ಸಂಘರ್ಷಗಳು ಹಾಗೂ ಅಪನಂಬಿಕೆಗಳು ನಡೆಯಬಾರದು” ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

​ಬೆಂಗಳೂರು ಮಹಾನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಆಯೋಜಿಸಲಾಗಿದ್ದ ಜನಜಾಗೃತಿ ಧರ್ಮ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

“ಸತ್ಸಂಸ್ಕಾರದಿಂದಲೇ ಆದರ್ಶ ಮಾನವ ಹಾಗೂ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ”: ಶ್ರೀ ರಂಭಾಪುರಿ ಜಗದ್ಗುರುಗಳು

“ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಸಜ್ಜನರ ಅಗತ್ಯತೆ ಬಹಳಷ್ಟಿದೆ. ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಸರಿಯಾದ ನೀತಿ ಸಂಹಿತೆ ಇಲ್ಲದ ಕಾರಣ, ಮಾನವ ಇಂದು ದಿಕ್ಕು ತಪ್ಪಿ ನಡೆಯುತ್ತಿದ್ದಾನೆ. ಹುಟ್ಟುತ್ತಲೇ ಯಾರೂ ಅಯೋಗ್ಯರಲ್ಲ; ಸೂಕ್ತವಾದ ಸಂಸ್ಕಾರ ಮತ್ತು ಮಾರ್ಗದರ್ಶನ ದೊರೆತರೆ ಪ್ರತಿಯೊಬ್ಬರೂ ಯೋಗ್ಯರಾಗಬಲ್ಲರು. ಸೌಹಾರ್ದಯುತ ಸಹಬಾಳ್ವೆ ಜೀವನದ ಉಸಿರಾಗಬೇಕು. ಪ್ರತಿಯೊಬ್ಬರೂ ಸಹನೆ ಹಾಗೂ ಸಹಕಾರ ಮನೋಭಾವದಿಂದ ಸಂಘಟಿತರಾಗಿ ಬದುಕಿದರೆ ಜನ್ಮ ಸಾರ್ಥಕಗೊಳ್ಳುತ್ತದೆ” ಎಂದು ಹೇಳಿದರು.

ಖಾಕಿ, ಖಾದಿ ಮತ್ತು ಕಾವಿ ಒಗ್ಗೂಡಿದರೆ ಲೋಕ ಕಲ್ಯಾಣ

“ಖಾಕಿ, ಖಾದಿ ಮತ್ತು ಕಾವಿ ಜನಾಂಗವು ನಿರ್ಮಲ ಮನಸ್ಸಿನಿಂದ ಒಗ್ಗೂಡಿ ಶ್ರಮಿಸಿದರೆ, ಜನಕಲ್ಯಾಣದ ಜೊತೆಗೆ ಲೋಕ ಕಲ್ಯಾಣ ಕಾರ್ಯಗಳು ನಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರಕೃತಿ ಮಾನವನನ್ನು ಸೃಷ್ಟಿಸಿದರೆ, ಸಂಸ್ಕಾರವು ಆದರ್ಶ ಮಾನವರನ್ನು ಸೃಷ್ಟಿಸುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ತ್ವ ಸಿದ್ಧಾಂತ ಹಾಗೂ 12ನೇ ಶತಮಾನದ ಬಸವಾದಿ ಶರಣರ ಶ್ರಮವನ್ನು ಸಮಾಜ ಬಾಂಧವರು ಎಂದಿಗೂ ಮರೆಯಬಾರದು” ಎಂದು ಜಗದ್ಗುರುಗಳು ಕರೆ ನೀಡಿದರು.

ನೈತಿಕ ಮೌಲ್ಯಗಳು ಎಂದಿಗೂ ಶಾಶ್ವತ: ಮಾಜಿ ಸಚಿವ ಸಿ.ಎಸ್. ನಾಡಗೌಡ

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಚಿವ ಹಾಗೂ ಶಾಸಕರಾದ ಸಿ.ಎಸ್. ನಾಡಗೌಡ ಅವರು ಮಾತನಾಡಿ, “ಕಾಲಕ್ರಮೇಣ ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು, ಆದರೆ ನೈತಿಕ ಮೌಲ್ಯಗಳು ಎಂದಿಗೂ ಶಾಶ್ವತವಾಗಿರುತ್ತವೆ. ಇಂದು ಮನುಷ್ಯನಲ್ಲಿ ತಾಳ್ಮೆ ಮತ್ತು ಸಹನೆಯ ಗುಣ ಇಲ್ಲದಿರುವುದೇ ಅಶಾಂತಿ ಹಾಗೂ ಅತೃಪ್ತಿಗೆ ಮುಖ್ಯ ಕಾರಣ. ಮನೆ-ಮನಗಳಲ್ಲಿ ಒಗ್ಗಟ್ಟು ಮೂಡಿ, ಭಿನ್ನಾಭಿಪ್ರಾಯಗಳು ದೂರವಾದಾಗ ಯಾವುದೇ ಸಾಧನೆ ಮಾಡಲು ಸಾಧ್ಯ. ಶ್ರೀ ರಂಭಾಪುರಿ ಜಗದ್ಗುರುಗಳು ನಿರಂತರವಾಗಿ ಜನಜಾಗೃತಿ ಮೂಡಿಸುತ್ತಾ, ಧರ್ಮ ಪ್ರಜ್ಞೆ ಮತ್ತು ರಾಷ್ಟ್ರ ಪ್ರಜ್ಞೆಯನ್ನು ಬೆಳೆಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ” ಎಂದು ಹರ್ಷ ವ್ಯಕ್ತಪಡಿಸಿದರು.

ಜಾತೀಯತೆ ತೊರೆದು ಸೌಹಾರ್ದತೆ ಬೆಳೆಸೋಣ: ಪತ್ರಕರ್ತ ಪ್ರಶಾಂತ್ ರಿಪ್ಪನ್‌ಪೇಟೆ

ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ ಪ್ರಶಾಂತ್ ರಿಪ್ಪನ್‌ಪೇಟೆ ಅವರು, “ವೀರಶೈವ-ಲಿಂಗಾಯತ ಸಮಾಜದಲ್ಲಿ ಸಂಘಟನೆ ಮತ್ತು ಸಾಮರಸ್ಯ ಬೆಳೆಯುವುದು ಇಂದಿನ ಅನಿವಾರ್ಯ ಅಗತ್ಯವಾಗಿದೆ. ಜಾತೀಯ ಭೇದಭಾವ ತೊರೆದು ಸ್ನೇಹ, ಸೌಜನ್ಯ ಮತ್ತು ಸಹೋದರತ್ವದ ಮನೋಭಾವ ಬೆಳೆಸಿಕೊಳ್ಳಬೇಕು. ನೀತಿ-ನಿಯಮಗಳಿಲ್ಲದೆ ಸಮಾಜವಾಗಲಿ, ನಾಡಾಗಲಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಸತ್ಯ ಮತ್ತು ಶಾಂತಿ ಧರ್ಮದ ಎರಡು ಕಣ್ಣುಗಳಾಗಿವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಗೂ ಬಸವಾದಿ ಶರಣರ ವಿಚಾರಧಾರೆ ಒಂದೇ ಆಗಿದ್ದು, ಅವುಗಳ ಯಶಸ್ಸಿಗೆ ಎಲ್ಲರೂ ಸಹಕರಿಸಿ ಮುನ್ನಡೆಯಬೇಕು” ಎಂದು ಕರೆ ನೀಡಿದರು.

​​ಸಿದ್ದರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿ, “ವೀರಶೈವ-ಲಿಂಗಾಯತ ಸಮಾಜವು ಒಳಪಂಗಡಗಳನ್ನು ಮರೆತು ಒಂದಾಗಬೇಕು. ಭೌತಿಕ ಬದುಕಿನೊಂದಿಗೆ ಧರ್ಮ ಪ್ರಜ್ಞೆ ಮತ್ತು ರಾಷ್ಟ್ರ ಪ್ರಜ್ಞೆಯನ್ನು ಜಾಗೃತಗೊಳಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು” ಎಂದರು.

ನಾಗಲಾಪುರದ ತೇಜೇಶ್ವರಲಿಂಗ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿ, “ವೀರಶೈವ ಧರ್ಮವು ವಿಶ್ವ ಧರ್ಮವಾಗಿದೆ. ಜ್ಞಾನ ಮತ್ತು ಕ್ರಿಯಾತ್ಮಕವಾದ ಧರ್ಮಾಚರಣೆಯಿಂದ ಜಗತ್ತಿನಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸಲು ಸಾಧ್ಯ” ಎಂದರು. ಸಮಾರಂಭದಲ್ಲಿ ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು ಉಪಸ್ಥಿತರಿದ್ದರು.

​ಸಮಾರಂಭದ ಅಂಗವಾಗಿ ಹೆಸರಾಂತ ಹೃದಯ ತಜ್ಞರಾದ ಡಾ. ಮಹಾಂತೇಶ ಚರಂತಿಮಠ ಹಾಗೂ ಅವರ ವೈದ್ಯರ ತಂಡದಿಂದ ಸಾರ್ವಜನಿಕರಿಗೆ ಉಚಿತವಾಗಿ ರಕ್ತ ಪರೀಕ್ಷೆ, ಇಸಿಜಿ (ECG) ಮತ್ತು ಇಕೋ (ECHO) ತಪಾಸಣೆ ನಡೆಸಲಾಯಿತು. ಸುಮಾರು 200ಕ್ಕೂ ಹೆಚ್ಚು ಜನರಿಗೆ ಉಚಿತ ಔಷಧ ಹಾಗೂ ವೈದ್ಯಕೀಯ ಸಲಹೆಗಳನ್ನು ನೀಡಲಾಯಿತು.

​ಕಾರ್ಯಕ್ರಮದಲ್ಲಿ ಶಿವಶಂಕರ ಶಾಸ್ತ್ರಿಗಳಿಂದ ಭಕ್ತಿಗೀತೆ ಗಾಯನ ಹಾಗೂ ಎಸ್.ಜೆ.ಆರ್. ಕೆಂಗೇರಿ ಪಬ್ಲಿಕ್ ಶಾಲೆಯ ಮಕ್ಕಳಿಂದ ಪ್ರಾರ್ಥನೆ ಮತ್ತು ಭರತನಾಟ್ಯ ಪ್ರದರ್ಶನ ಜರುಗಿತು. ಕನ್ನಡ ಹೋರಾಟಗಾರ ಫಾಲನೇತ್ರ ಸ್ವಾಗತಿಸಿದರೆ, ಹಾಲ್ಜೇನು ವೀರಭದ್ರಯ್ಯ ಕಾರ್ಯಕ್ರಮ ನಿರೂಪಿಸಿದರು.

​ದಾಸರಹಳ್ಳಿ ನಂಜುಂಡಯ್ಯ, ಪಿ.ಎಸ್. ಸಿದ್ಧಗಂಗಯ್ಯ ಹಾಗೂ ಎ.ಎಸ್. ಆನಂದಪ್ಪ ಅವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಡಾ. ಪ್ರಶಾಂತ್ ಪಿ.ಕೆ.ಎಮ್. ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸಮಿತಿಯ ಸದಸ್ಯರಾದ ಮಲ್ಲಿಕಾರ್ಜುನಯ್ಯಸ್ವಾಮಿ ಹಿರೇಮಠ, ಪೂಜಾ ಸಮಿತಿ ಅಧ್ಯಕ್ಷ ಟಿ.ಎಸ್. ಉಮಾಶಂಕರ್, ಆರ್.ಆರ್.ಹಿರೇಮಠ್ ಸೇರಿದಂತೆ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

K.M.Sathish Gowda

Join WhatsApp

Join Now

Facebook

Join Now

Read more

ಹಣದ ಜೊತೆಗೆ ಗುಣವಿದ್ದರೆ ಬದುಕು ಸಾರ್ಥಕ; ಗುಣವಿದ್ದರೆ ಭಗವಂತ ಸದಾ ಜೊತೆಯಲ್ಲಿರುತ್ತಾನೆ: ಶ್ರೀ ರಂಭಾಪುರಿ ಜಗದ್ಗುರುಗಳು

ಅಂತರಂಗ ಶುದ್ಧಿಯಾದಾಗಲೇ ಸಮಾಜದಲ್ಲಿ ಶಾಂತಿ-ಸಮಾನತೆ ನೆಲೆಸುತ್ತದೆ: ಶಿವಗಂಗಾ ಶ್ರೀ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ

ವೀರಶೈವ-ಲಿಂಗಾಯತ ಸಮಾಜ ಒಡೆಯುವ ದುಷ್ಟಶಕ್ತಿಗಳಿಗೆ ಎಚ್ಚರಿಕೆ: ಸಮಾಜ ಒಗ್ಗಟ್ಟಿನಿಂದ ಸಾಗಿದರೆ ಮಾತ್ರ ಇನ್ನಷ್ಟು ಬಲಿಷ್ಠ – ಬಿ.ವೈ. ವಿಜಯೇಂದ್ರ

ವೀರಶೈವ ಧರ್ಮ ಸಂಸ್ಕೃತಿಯ ರಕ್ಷಣೆ ಹಾಗೂ ಸಮಾಜದ ಒಗ್ಗಟ್ಟಿನಿಂದ ಮಾತ್ರ ಉಜ್ವಲ ಭವಿಷ್ಯ ಸಾಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಸಂಪತ್ತಿಗಿಂತ ಸಂಸ್ಕಾರವೇ ಮನುಷ್ಯನ ನಿಜವಾದ ಸಂಪತ್ತು; ಧರ್ಮಾಚರಣೆ ಯಿಂದಷ್ಟೇ ವ್ಯಕ್ತಿತ್ವಕ್ಕೆ ಗೌರವ ಮತ್ತು ಮೌಲ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಯಶಸ್ವಿ ಬದುಕಿಗೆ ವಿದ್ಯಾಭ್ಯಾಸ, ಪರಿಶ್ರಮ ಹಾಗೂ ತಾಳ್ಮೆ ಅಗತ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

Leave a Comment