ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಹೆಚ್.ಎಂ.ಸಿ. ಅವರ ಅಂತಿಮ ದರ್ಶನ ಪಡೆದ ಸಾಣೇಹಳ್ಳಿ ಶ್ರೀಗಳು; “ರಾಜಕೀಯದಲ್ಲಿ ಆದರ್ಶ ಮತ್ತು ನಿಷ್ಠೆಗೆ ಮತ್ತೊಂದು ಹೆಸರು ಹೆಚ್.ಎಂ.ಚಂದ್ರಶೇಖರಪ್ಪ”: ಶ್ರೀ ಡಾ. ಪಂಡಿತಾರಾಧ್ಯ ಸ್ವಾಮೀಜಿಯವರ ನುಡಿನಮನ

On: July 27, 2026 9:53 PM
Follow Us:

ಶಿವಮೊಗ್ಗ: ಮಾಜಿ ಶಾಸಕ ಹಾಗೂ ಕರ್ನಾಟಕ ಮಾಜಿ ಶಾಸಕರ ವೇದಿಕೆಯ ರಾಜ್ಯಾಧ್ಯಕ್ಷರಾಗಿದ್ದ ಹೆಚ್.ಎಂ. ಚಂದ್ರಶೇಖರಪ್ಪ ಅವರ ನಿಧನಕ್ಕೆ ಸಾಣೇಹಳ್ಳಿ ತರಳುಬಾಳು ಶಾಖಾಮಠದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ನಗರದ ಬಸವನಗುಡಿಯಲ್ಲಿರುವ ಮೃತರ ನಿವಾಸಕ್ಕೆ ಆಗಮಿಸಿದ ಶ್ರೀಗಳು, ಚಂದ್ರಶೇಖರಪ್ಪ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.

​ಈ ಸಂದರ್ಭದಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಸಾಣೇಹಳ್ಳಿ ಶ್ರೀಗಳು, ಚಂದ್ರಶೇಖರಪ್ಪ ಅವರ ರಾಜಕೀಯ ಹಾಗೂ ಸಾಮಾಜಿಕ ಕೊಡುಗೆಗಳನ್ನು ನೆನಪಿಸಿಕೊಂಡರು.

ಗುರುಗಳ ಆದೇಶ ಪಾಲಿಸಿದ ಶ್ರೇಷ್ಠ ಪರಂಪರೆ: ಮಲ್ಲಿಕಾರ್ಜುನಪ್ಪನವರ ಕುಟುಂಬದ ಕೊಡುಗೆ ನೆನೆದ ಸಾಣೇಹಳ್ಳಿ ಶ್ರೀಗಳು

“ಬಸವಾದಿ ಶಿವಶರಣರನ್ನು ತನುಮನದಲ್ಲಿ ಸ್ಮರಿಸುತ್ತಾ, ಇದು ಕೇವಲ ಮಾತುಗಳನ್ನಾಡುವ ಸಂದರ್ಭವಲ್ಲವಾದರೂ ಅವರ ಸೇವೆಯನ್ನು ನೆನೆಯುವುದು ಅಗತ್ಯವಾಗಿದೆ.

ತರೀಕೆರೆ ತಾಲೂಕಿನ ಹುಣಸಘಟ್ಟ ಗ್ರಾಮದ ಮಲ್ಲಿಕಾರ್ಜುನಪ್ಪನವರ ಕುಟುಂಬ ಸಮಾಜಕ್ಕೆ ಚಿರಪರಿಚಿತ. ಮಲ್ಲಿಕಾರ್ಜುನಪ್ಪನವರು ತರೀಕೆರೆ ಕ್ಷೇತ್ರದಲ್ಲಿ ಶಾಸಕರಾಗಿ, ಲೋಕಸೇವಾ ಆಯೋಗದ (KPSC) ಸದಸ್ಯರಾಗಿ ಅಪಾರ ಸಮಾಜ ಸೇವೆ ಸಲ್ಲಿಸಿದವರು. ಹಿರಿಯ ತರಳುಬಾಳು ಜಗದ್ಗುರುಗಳವರ ಪರಮ ಶಿಷ್ಯರಾಗಿ ಗುರುಗಳ ಆದೇಶವನ್ನು ಚಾಚೂ ತಪ್ಪದೆ ಪಾಲಿಸಿದ ಶ್ರೇಷ್ಠ ಪರಂಪರೆ ಅವರದ್ದಾಗಿತ್ತು” ಎಂದರು.

“ಭ್ರಷ್ಟಾಚಾರಕ್ಕೆ ಎಂದೂ ತಲೆಬಾಗದ ಆದರ್ಶ ರಾಜಕಾರಣಿ”: ಹೆಚ್.ಎಂ. ಚಂದ್ರಶೇಖರಪ್ಪ ಅವರ ಸೇವೆಯನ್ನು ಸ್ಮರಿಸಿದ ಸಾಣೇಹಳ್ಳಿ ಶ್ರೀಗಳು

ದಿ.ಮಲ್ಲಿಕಾರ್ಜುನಪ್ಪನವರ ಸುಪುತ್ರ ಹೆಚ್.ಎಂ. ಚಂದ್ರಶೇಖರಪ್ಪನವರು ಶಿವಮೊಗ್ಗದಲ್ಲಿ ನೆಲೆಸಿ, ತಮ್ಮದೇ ಆದ ರಾಜಕೀಯ ಸ್ಥಾನಮಾನವನ್ನು ಕಂಡುಕೊಂಡು ಶಾಸಕರಾಗಿ ಸೇವೆ ಸಲ್ಲಿಸಿದರು. ಶಾಸಕರು ಹಾಗೂ ನಿವೃತ್ತ ಶಾಸಕರ ಹಕ್ಕುಗಳು ಮತ್ತು ಸೌಲಭ್ಯಗಳಿಗಾಗಿ ಸಂಘಟನೆ ಕಟ್ಟಿ ಹೋರಾಟ ನಡೆಸಿದವರು. ಕೇವಲ 10 ದಿನಗಳ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆ ಫಲಿಸದೆ ಇಷ್ಟೊಂದು ಬೇಗ ನಮ್ಮನ್ನಗಲುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ.

ಹುಟ್ಟು-ಸಾವುಗಳ ನಡುವೆ ಮನುಷ್ಯ ಮಾಡುವ ಸಾಧನೆ ಮತ್ತು ಬದುಕುವ ರೀತಿ ಮುಖ್ಯ. ಚಂದ್ರಶೇಖರಪ್ಪನವರು ಅತ್ಯಂತ ನಿಷ್ಠುರವಾದಿಯಾಗಿದ್ದು, ತಮಗೆ ಅನಿಸಿದ್ದನ್ನು ಮುಚ್ಚುಮರೆಯಿಲ್ಲದೆ ನೇರವಾಗಿ ಹೇಳುವ ಸ್ವಭಾವದವರಾಗಿದ್ದರು. ಭ್ರಷ್ಟಾಚಾರಕ್ಕೆ ಎಂದೂ ತಲೆಬಾಗದೆ, ಇಂದಿನ ಕಲುಷಿತ ರಾಜಕಾರಣದ ನಡುವೆಯೂ ಅತ್ಯಂತ ಆದರ್ಶಮಯ ಜೀವನ ನಡೆಸಿದವರು.

“ತಂದೆಯ ಹಾದಿಯಲ್ಲೇ ಸಾಗುತ್ತಿರುವ ಹೆಚ್.ಸಿ. ಯೋಗೀಶ್ ಕಾರ್ಯ ಪ್ರಶಂಸನೀಯ”: ಕುಟುಂಬಕ್ಕೆ ಸಾಂತ್ವನ ಹೇಳಿದ ಸಾಣೇಹಳ್ಳಿ ಶ್ರೀಗಳು

ದಿ.ಹೆಚ್.ಎಂ.ಚಂದ್ರಶೇಖರಪ್ಪನವರ ಪುತ್ರ, ಮುಖಂಡ ಹೆಚ್.ಸಿ. ಯೋಗೀಶ್ ಕೂಡ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ. ರಾಜಕೀಯದಲ್ಲಿ ಸೋಲು-ಗೆಲುವುಗಳು ಸಹಜ. ಸೋತ ತಕ್ಷಣ ಹಿಂಜರಿಯದೆ ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಪ್ರಶಂಸನೀಯ.

ಒಬ್ಬ ಚಂದ್ರಶೇಖರಪ್ಪನವರ ಅಗಲಿಕೆಯಿಂದ ಸಮಾಜಕ್ಕೆ ಹಾಗೂ ಕುಟುಂಬಕ್ಕೆ ಭರಿಸಲಾರದ ನಷ್ಟವಾಗಿದೆ. ಆದರೆ ಒಬ್ಬ ಚಂದ್ರಶೇಖರಪ್ಪ ಹೋದರೆ, ಅವರ ಹಾದಿಯಲ್ಲಿ ನಡೆಯುವ ಹತ್ತು ಹಲವು ಚಂದ್ರಶೇಖರಪ್ಪನವರು ಆ ಮನೆತನದಲ್ಲಿ, ಸಮಾಜದಲ್ಲಿ ಹುಟ್ಟಿದಾಗ ಮಾತ್ರ ಆ ಬದುಕಿಗೆ ನಿಜವಾದ ಭವ್ಯತೆ ಸಿಗುತ್ತದೆ. ಭಗವಂತ ಹಾಗೂ ಬಸವಾದಿ ಶಿವಶರಣರು ಅವರ ಕುಟುಂಬಕ್ಕೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ” ಎಂದು ಸಂತಾಪ ವ್ಯಕ್ತಪಡಿಸಿದರು.

ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಅವರ ಅಗಲಿಕೆಗೆ ಶಿವಮೊಗ್ಗ ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿಗಳು, ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿಗಳು ಹಾಗೂ ಬಿಳಕಿ ಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿಗಳು, ಸುತ್ತೂರು ಶಾಖಾ ಮಠದ ಶ್ರೀಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

​ಶಿವಮೊಗ್ಗ ನಗರದ ಬಸವನಗುಡಿಯಲ್ಲಿರುವ ಮೃತರ ನಿವಾಸಕ್ಕೆ ಶ್ರೀಗಳು ಭೇಟಿ ನೀಡಿ, ಚಂದ್ರಶೇಖರಪ್ಪ ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು. ಬಳಿಕ ಮಾಜಿ ಶಾಸಕರ ಸುಪುತ್ರರಾದ ಹೆಚ್.ಸಿ. ಯೋಗೀಶ್, ಶರಣ್ ಹಾಗೂ ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.

ನಮ್ಮ ಪ್ರೀತಿಯ ಮಾಜಿ ಶಾಸಕರಾದ ಹೆಚ್.ಎಂ. ಚಂದ್ರಶೇಖರಪ್ಪನವರು ಅನಾರೋಗ್ಯದಿಂದ ನಮ್ಮನ್ನೆಲ್ಲ ಅಗಲಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ. ಅವರ ಸಾಮಾಜಿಕ ಕಳಕಳಿ ಮತ್ತು ನೇರ ನುಡಿಯ ಸ್ವಭಾವ ಜನರಿಗೆ ಅತ್ಯಂತ ಆಪ್ತವಾಗಿತ್ತು. ಇಂದು ಇಲ್ಲಿ ನೆರೆದಿರುವ ಅಪಾರ ಜನಸಾಗರವೇ ಅವರು ಸಮಾಜದಲ್ಲಿ ಗಳಿಸಿದ್ದ ಗೌರವ ಮತ್ತು ಮನ್ನಣೆಗೆ ಸಾಕ್ಷಿಯಾಗಿದೆ.

​ಹುಣಸಘಟ್ಟ ಮಲ್ಲಿಕಾರ್ಜುನಪ್ಪನವರ ಕುಟುಂಬ ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ಪ್ರಭಾವಿ ಹಾಗೂ ದೊಡ್ಡ ಕುಟುಂಬ. ಅಂತಹ ಶ್ರೇಷ್ಠ ಕುಟುಂಬದಿಂದ ಬಂದ ಚಂದ್ರಶೇಖರಪ್ಪನವರು ಸಮಾಜ ಸೇವೆಯಲ್ಲಿ ಅತ್ಯಂತ ಯಶಸ್ವಿಯಾಗಿ, ಕಳಕಳಿಯಿಂದ ಕಾರ್ಯನಿರ್ವಹಿಸಿದರು.

​ಅವರ ಸುಪುತ್ರರಾದ ಹೆಚ್.ಸಿ. ಯೋಗೀಶ್ ಹಾಗೂ ಶರಣ್ ಅವರು ಕೂಡ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ. ಯೋಗೀಶ್ ಅವರು ನಗರಸಭೆ ಹಾಗೂ ಮಹಾನಗರ ಪಾಲಿಕೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಉತ್ಸಾಹ ಅವರಲ್ಲಿದೆ.

​ಚಂದ್ರಶೇಖರಪ್ಪನವರು ಅಗಲಿರುವ ಈ ಸಂದರ್ಭದಲ್ಲಿ, ಅವರ ಅಪಾರ ಬಂಧು-ಬಳಗ ಮತ್ತು ಸಾರ್ವಜನಿಕರ ಬೆಂಬಲ ಅವರ ಕುಟುಂಬದೊಂದಿಗಿರಲಿ. ಭಗವಂತನು ಅವರ ದುಃಖತಪ್ತ ಕುಟುಂಬಕ್ಕೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ” ಎಂದು ಎಸ್. ರುದ್ರೇಗೌಡ್ರು ಪ್ರಾರ್ಥಿಸಿದರು.

ಮಾಜಿ ಶಾಸಕ ಹಾಗೂ ಕರ್ನಾಟಕ ಮಾಜಿ ಶಾಸಕರ ವೇದಿಕೆಯ ರಾಜ್ಯಾಧ್ಯಕ್ಷರಾಗಿದ್ದ ಹೆಚ್.ಎಂ. ಚಂದ್ರಶೇಖರಪ್ಪ ಅವರ ಅಗಲಿಕೆಗೆ ಮಾಜಿ ಸಂಸದರಾದ ಆಯನೂರು ಮಂಜುನಾಥ್ ಅವರು ಕಂಬನಿ ಮಿಡಿದಿದ್ದಾರೆ. ಮೃತರ ನಿವಾಸಕ್ಕೆ ಭೇಟಿ ನೀಡಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಚಂದ್ರಣ್ಣ ಅವರ ಅಗಲಿಕೆ ಅತ್ಯಂತ ಬೇಸರ ತಂದಿದೆ. ಅವರು ಕಳೆದ 40 ವರ್ಷಗಳಿಂದ ನಮಗೆ ಅತ್ಯಂತ ಆಪ್ತರಾಗಿದ್ದರು. ನಾವಿಬ್ಬರೂ ಒಂದೇ ಕಾಲಘಟ್ಟದಲ್ಲಿ, ಒಟ್ಟಿಗೆ ಚುನಾವಣೆಗಳಲ್ಲೂ ಸ್ಪರ್ಧೆ ಮಾಡಿದ್ದೆವು.

​ಚಂದ್ರಣ್ಣ ಅವರದ್ದು ಅತ್ಯಂತ ಮುಕ್ತ ಮನಸ್ಸಿನ ಮತ್ತು ನೇರ ನುಡಿಯ (Open Heart & Open Mouth) ಸ್ವಭಾವ. ಯಾವುದೇ ಫಿಲ್ಟರ್‌ಗಳನ್ನು ಇಟ್ಟುಕೊಳ್ಳದೆ, ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಅಪರೂಪದ ವ್ಯಕ್ತಿತ್ವ ಅವರದ್ದಾಗಿತ್ತು. ಇಂದಿನ ರಾಜಕಾರಣದಲ್ಲಿ ಎದುರಿಗೆ ಸಿಹಿಯಾಗಿ ಮಾತನಾಡುವ, ವಂಚನೆಯ ಸ್ವಭಾವಗಳ ನಡುವೆ, ತಮಗೆ ಸರಿ ಅನಿಸಿದ್ದನ್ನು ನೇರವಾಗಿ ಪ್ರಶಂಸಿಸುವ ಅಥವಾ ತಪ್ಪಿದ್ದಲ್ಲಿ ಖಂಡಿಸುವ ಗುಣವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟ. ಅಂತಹ ಅಪರೂಪದ ಗುಣವನ್ನು ಚಂದ್ರಣ್ಣ ಹೊಂದಿದ್ದರು.

​ಚಂದ್ರಣ್ಣ ಅವರಿಗೆ ಅನಾರೋಗ್ಯವಾಗಿದೆ ಎಂದು ಕೇಳಿ ವಿಚಾರಿಸುತ್ತಿರುವಾಗಲೇ, ಅವರು ಇಹಲೋಕ ತ್ಯಜಿಸಿದ ಸುದ್ದಿ ಬಂದದ್ದು ದಿಢೀರ್ ಆಘಾತ ತಂದಿದೆ. ಭಗವಂತನು ಮೃತರ ಆತ್ಮಕ್ಕೆ ಸದ್ಗತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ” ಎಂದು ಆಯನೂರು ಮಂಜುನಾಥ್ ಅವರು ಪ್ರಾರ್ಥಿಸಿದರು.

ಮಾಜಿ ಶಾಸಕರು ಹಾಗೂ ಕರ್ನಾಟಕ ಮಾಜಿ ಶಾಸಕರ ವೇದಿಕೆಯ ರಾಜ್ಯಾಧ್ಯಕ್ಷರಾಗಿದ್ದ ಹೆಚ್.ಎಂ. ಚಂದ್ರಶೇಖರಪ್ಪ ಅವರ ಅಗಲಿಕೆ ನಮಗೆ ತೀವ್ರ ಆಘಾತ ಮತ್ತು ನೋವನ್ನು ತಂದಿದೆ. ನಮ್ಮ ‘ಡಿಟೆಕ್ಟಿವ್ ನ್ಯೂಸ್ 24’ ಮಾಧ್ಯಮ ಸಂಸ್ಥೆಯೊಂದಿಗೆ ಅವರು ಅತ್ಯಂತ ಆತ್ಮೀಯ ಒಡನಾಟವನ್ನು ಹೊಂದಿದ್ದರು. ಸಮಾಜದ ಪ್ರಸ್ತುತ ವಿದ್ಯಮಾನಗಳು, ರಾಜಕೀಯದ ಮೌಲ್ಯಗಳು ಹಾಗೂ ಬಸವಾದಿ ಶರಣರ ತತ್ವಾದರ್ಶಗಳ ಕುರಿತು ಅವರಿಗೆ ಇದ್ದ ಅಪಾರ ತಿಳುವಳಿಕೆ ಮತ್ತು ಸ್ಪಷ್ಟ ದೃಷ್ಟಿಕೋನ ಸದಾ ಮಾರ್ಗದರ್ಶಕವಾಗಿತ್ತು.

ನೇರ ನಡೆ-ನುಡಿಯ ಮೂಲಕ ಸಮಾಜದ ಹಿತಕ್ಕಾಗಿ ಧ್ವನಿಯೆತ್ತುತ್ತಿದ್ದ ಅಪರೂಪದ ನಾಯಕರಾಗಿದ್ದ ಚಂದ್ರಶೇಖರಪ್ಪ ಅವರ ನಿಧನದಿಂದ ಸಮಾಜ ಹಾಗೂ ಮಾಧ್ಯಮ ಕ್ಷೇತ್ರಕ್ಕೆ ಒಬ್ಬ ಹಿರಿಯ ಮಾರ್ಗದರ್ಶಕ ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ದುಃಖತಪ್ತ ಕುಟುಂಬಕ್ಕೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.

– ಕೆ.ಎಂ. ಸತೀಶ್ ಗೌಡ
ಮುಖ್ಯ ಸಂಪಾದಕರು, ಡಿಟೆಕ್ಟಿವ್ ನ್ಯೂಸ್ 24, ಶಿವಮೊಗ್ಗ

ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಆಯನೂರು ಮಂಜುನಾಥ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ವಿಧಾನ ಪರಿಷತ್ ಸದಸ್ಯರಾದ ಧನಂಜಯ್ ಸರ್ಜಿ, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಲಿಕಟ್ಟೆ, ಜಿಲ್ಲಾ ರಕ್ಷಣಾಧಿಕಾರಿಗಳಾದ ನಿಖಿಲ್ ಬಿ., ಪ್ರಮುಖರಾದ ಹೆಚ್.ಆರ್.ಬಸವರಾಜಪ್ಪ, ಬಿ.ಕೆ. ಶಿವಕುಮಾರ್, ನಂಜಪ್ಪ ಆಸ್ಪತ್ರೆಯ ಬೆನಕಪ್ಪ, ಹೊಳಲೂರು ಕಲ್ಯಾಣಪ್ಪ, ಶಿವ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಜಗದೀಶ್, ತೇವರಚಟ್ನಹಳ್ಳಿ ಕರಿಬಸಪ್ಪ, ಹೊಳಲೂರು ಮೈಲಾರಪ್ಪ, ಅರಕೆರೆ ಹೆಚ್.ಎಲ್. ಷಡಾಕ್ಷರಿ, ಎಸ್.ಪಿ.ದಿನೇಶ್, ಸಾಧು ವೀರಶೈವ ಸಮಾಜದ ಅಧ್ಯಕ್ಷರಾದ ಅಣಜಿ ರುದ್ರಪ್ಪ, ಸೋಮಿನಕೊಪ್ಪದ ಷಣ್ಮುಖಪ್ಪ, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಬಾಳೇಕಾಯಿ ಮೋಹನ್, ಎಂ.ಪಿ.ಆನಂದಮೂರ್ತಿ, ಅರುಣ್‌ ಹಂಪಣ್ಣ, ರಾಜಶೇಖರ್ ಹೆಚ್.ಕೆ, ಪ್ರವೀಣ್, ಸೇರಿದಂತೆ ವಿವಿಧ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ನಿಧನ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಎಸ್. ಮಧು ಬಂಗಾರಪ್ಪರಿಂದ ಸಂತಾಪ

​ಕುವೆಂಪು ವಿವಿಯಲ್ಲಿ ಅವ್ಯವಸ್ಥೆ, ಭ್ರಷ್ಟಾಚಾರದ ಆರೋಪ; ಕುಲಪತಿಗಳ ವಜಾಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ!: ಪ್ರಭಾರ ರಿಜಿಸ್ಟ್ರಾರ್‌ಗೆ ಮನವಿ ಸಲ್ಲಿಕೆ

ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಅಗಲಿಕೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ಸಂತಾಪ

ಶಿವಮೊಗ್ಗದ ಮಾಜಿ ಶಾಸಕ, ಕರ್ನಾಟಕ ಮಾಜಿ ಶಾಸಕರ ವೇದಿಕೆ ರಾಜ್ಯಾಧ್ಯಕ್ಷರಾದ ಹೆಚ್.ಎಂ. ಚಂದ್ರಶೇಖರಪ್ಪ ನಿಧನ

ಮಣ್ಣಿನ ಅಡಿಯಲ್ಲಿರುವ ಇತಿಹಾಸವನ್ನು ಸಮಾಜದ ಮುಂದೆ ತರುತ್ತಿರುವ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆಯ ಕಾರ್ಯ ಶ್ಲಾಘನೀಯ; ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ: ಕೆ.ಎಸ್. ಈಶ್ವರಪ್ಪ

ಧರ್ಮೇಂದ್ರ ಪ್ರಧಾನ ನಿರ್ಧಾರ ವಿದ್ಯಾರ್ಥಿಗಳ ಹಿತಕ್ಕಾಗಿ; ಪರೀಕ್ಷಾ ವ್ಯವಸ್ಥೆಯಲ್ಲಿ ಮೋದಿ ಸರ್ಕಾರ ಮಹತ್ವದ ಸುಧಾರಣೆ ತಂದಿದೆ, ಕಾಂಗ್ರೆಸ್ ಮಾತ್ರ ರಾಜಕೀಯ ಮಾಡುತ್ತಿದೆ: ಬಿ.ವೈ. ವಿಜಯೇಂದ್ರ

Leave a Comment