ಓಂ ಶ್ರೀ ಗುರುಭ್ಯೋ ನಮಃ
”ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ |
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ||”
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ “ಗುರು”ವಿಗೆ ಪರಮೋಚ್ಚ ಸ್ಥಾನವನ್ನು ನೀಡಲಾಗಿದೆ. “ಹರ ಮುನಿದರೂ ಗುರು ಕರುಣಿಸುವನು” ಎಂಬ ನಂಬಿಕೆ ನಮ್ಮಲ್ಲಿದೆ. ಅಂದರೆ ದೇವರ ಕೋಪಕ್ಕೊಳಗಾದರೂ ಗುರುವಿನ ಕೃಪೆ ಇದ್ದರೆ ಬದುಕಬಹುದು, ಆದರೆ ಗುರುವಿನ ಕೋಪಕ್ಕೆ ಒಳಗಾದರೆ ದೇವರೂ ರಕ್ಷಿಸಲಾರ ಎಂಬುದು ಇದರ ಆಶಯ.
ಖ್ಯಾತ ಹಿಂದಿ ಮಹಾಕವಿ ಸಂತ ತುಳಸೀದಾಸರು ತಮ್ಮ ಕವಿತೆಯೊಂದರಲ್ಲಿ ಗುರುವಿನ ಮಹತ್ವವನ್ನು ಬಣ್ಣಿಸಿದ್ದಾರೆ:
“ಒಮ್ಮೆಲೆ ಗುರು ಮತ್ತು ಗೋವಿಂದ (ದೇವರು) ಎದುರಾದರೆ, ಯಾರಿಗೆ ಮೊದಲು ಪ್ರಣಾಮ ಸಲ್ಲಿಸಬೇಕು?” ಎಂಬ ಪ್ರಶ್ನೆ ಎದುರಾದಾಗ, “ನನಗೆ ಭಗವಂತನನ್ನು ತಲುಪುವ ದಾರಿ, ಭಕ್ತಿ ಮತ್ತು ಶ್ರದ್ಧೆಯನ್ನು ತೋರಿಸಿಕೊಟ್ಟವರು ಗುರು. ಹಾಗಾಗಿ ನಾನು ಮೊದಲು ಗುರುವಿಗೇ ಶಿರಬಾಗಿ ನಮಿಸುತ್ತೇನೆ” ಎಂದು ಉತ್ತರಿಸುತ್ತಾರೆ.

ಗುರು ಶಬ್ದದ ಅರ್ಥ ಮತ್ತು ಮಹತ್ವ
“ವರ್ಣಮಾತ್ರಂ ಕಲಿಸಿದಾತಂ ಗುರು”
ನಮಗೆ ಗೊತ್ತಿಲ್ಲದ ಒಂದೇ ಒಂದು ಅಕ್ಷರವನ್ನು ಕಲಿಸಿದರೂ ಆ ವ್ಯಕ್ತಿ ಮಹೋಪಕಾರಿಯೇ ಸರಿ. ಬದುಕಿನಲ್ಲಿ ಅಕ್ಷರ ಜ್ಞಾನ, ಜೀವನ ಪದ್ಧತಿ, ಸಂಸ್ಕಾರ ಹಾಗೂ ಬದುಕುವ ಕಲೆಯನ್ನು ಹೇಳಿಕೊಡುವ ಪ್ರತಿಯೊಬ್ಬ ವ್ಯಕ್ತಿಯೂ ಗುರುವಿನ ಸ್ಥಾನವನ್ನು ಅಲಂಕರಿಸುತ್ತಾನೆ. ಸಮಾಜದಲ್ಲಿ ದೊಡ್ಡ ಸಾಧನೆ ಮಾಡಿದ ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಆತನಿಗೆ ಅರಿವಿನ ದಾರಿ ತೋರಿದ ಗುರುವಿನ ಕೈಚಳಕವಿರುತ್ತದೆ.
ಸಂಸ್ಕೃತದಲ್ಲಿ “ಗು” ಎಂದರೆ ಅಜ್ಞಾನವೆಂಬ ಕತ್ತಲೆ, “ರು” ಎಂದರೆ ಅದನ್ನು ಹೋಗಲಾಡಿಸುವವನು. ಅಜ್ಞಾನದ ಕತ್ತಲೆಯನ್ನು ಓಡಿಸಿ ಜ್ಞಾನದ ಬೆಳಕನ್ನು ನೀಡುವ ತಮಸೋಮಾ ಜ್ಯೋತಿರ್ಗಮಯದ ಹಾದಿಯೇ ಗುರು.
ವ್ಯಾಸ ಪೂರ್ಣಿಮೆ ಮತ್ತು ಇತಿಹಾಸ
ಗುರು ಪೂರ್ಣಿಮೆಯನ್ನು “ವ್ಯಾಸ ಪೂರ್ಣಿಮೆ” ಎಂದೂ ಕರೆಯಲಾಗುತ್ತದೆ. ಇದರ ಹಿಂದೆ ಪೌರಾಣಿಕ ಹಿನ್ನೆಲೆಯೊಂದಿದೆ:
ಪರಾಶರ ಮುನಿಗಳು ಒಮ್ಮೆ ಗಂಗಾನದಿಯನ್ನು ದಾಟುತ್ತಿರುವಾಗ, ದ್ವೀಪವೊಂದರಿಂದ ಕೆಟ್ಟ ವಾಸನೆ ಬರುತ್ತದೆ. ಅಲ್ಲಿಗೆ ಹೋಗಿ ನೋಡಿದಾಗ ಬೆಸ್ತ ಕನ್ಯೆಯಾದ ಸತ್ಯವತಿ ಕಾಣಸಿಗುತ್ತಾಳೆ. ಆಕೆ ತನ್ನ ಮೈಯಿಂದ ಬರುತ್ತಿದ್ದ ದುರ್ಗಂಧಕ್ಕೆ ವಸುದೇವರಿಂದ ದೊರೆತ ಶಾಪವೇ ಕಾರಣವೆಂದು ತಿಳಿಸಿ, ವಿಷ್ಣುವಿನ ಅಂಶಸಂಭೂತರಾದ ಪರಾಶರ ಮುನಿಗಳಲ್ಲಿ ಶಾಪವಿಮೋಚನೆಗಾಗಿ ಬೇಡಿಕೊಳ್ಳುತ್ತಾಳೆ. ಪರಾಶರ ಮುನಿಗಳು ಆಕೆಯ ಶಾಪವನ್ನು ವಿಮೋಚನೆಗೊಳಿಸಿ, ಗಾಂಧರ್ವ ವಿವಾಹವಾಗುತ್ತಾರೆ.
ಈ ಪರಾಶರ ಮುನಿ ಮತ್ತು ಸತ್ಯವತಿಯ ದಂಪತಿಗೆ ಜನ್ಮತಾಳಿದ ಮಗನೇ ‘ಕೃಷ್ಣದ್ವೈಪಾಯನ’. ಈತನು ಮುಂದೆ ಮನುಷ್ಯನ ಪರಮ ಗುರಿಯಾದ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ತಲುಪುವ ಮಾರ್ಗವನ್ನು ಜಗತ್ತಿಗೆ ಬೋಧಿಸಿದನು. ಅನಂತವಾಗಿ ಹರಡಿದ್ದ ವೇದಗಳನ್ನು ವಿಂಗಡಿಸಿ, ಕ್ರಮಬದ್ಧವಾಗಿ ಚತುರ್ವೇದಗಳನ್ನಾಗಿ (ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ) ವಿಂಗಡಿಸಿದ ಕಾರಣ ಈತನಿಗೆ ‘ವೇದವ್ಯಾಸ’ ಎಂಬ ಹೆಸರು ಬಂತು. ಭಾರತೀಯ ಭವ್ಯ ಪರಂಪರೆಯಲ್ಲಿ ವೇದಗಳಿಗೆ ಅಗ್ರಸ್ಥಾನವಿದೆ. ಇಂತಹ ಮಹತ್ಕಾರ್ಯವನ್ನು ಮಾಡಿದ್ದಕ್ಕಾಗಿ ವ್ಯಾಸರನ್ನು “ಮಹಾಗುರು” ಎಂದು ಪೂಜಿಸಲಾಯಿತು. ಅವರ ಜನ್ಮದಿನವನ್ನೇ ‘ಗುರು ಪೂರ್ಣಿಮೆ’ಯಾಗಿ ಆಚರಿಸಲಾಗುತ್ತದೆ.
ಗುರು ಪೂರ್ಣಿಮೆಯ ಆಚರಣೆ ಮತ್ತು ವೈಶಿಷ್ಟ್ಯ
ಸಾಮಾನ್ಯವಾಗಿ ಆಷಾಢ ಮಾಸದ ಶುಕ್ಲ ಪಕ್ಷದ ಪೌರ್ಣಿಮೆಯಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ದಿನವು ಋಷಿಮುನಿಗಳಿಗೆ, ಸನ್ಯಾಸಿಗಳಿಗೆ ಹಾಗೂ ವೇದಾಧ್ಯಯನ ಮಾಡುವವರಿಗೆ ಅತ್ಯಂತ ಪವಿತ್ರವಾದದ್ದು. ಈ ದಿನದಿಂದಲೇ ಸನ್ಯಾಸಿಗಳು ಮತ್ತು ಯತಿಗಳು ಚಾತುರ್ಮಾಸ್ಯ ವ್ರತವನ್ನು ಶ್ರದ್ಧಾಭಕ್ತಿಗಳಿಂದ ಆರಂಭಿಸುತ್ತಾರೆ. ಮಹಾಭಾರತದ ಕಥೆಯಂತೆ, ಏಕಲವ್ಯನು ತನ್ನ ಗುರು ದ್ರೋಣಾಚಾರ್ಯರಿಗೆ ಗುರುದಕ್ಷಿಣೆಯಾಗಿ ತನ್ನ ಬಲಗೈನ ಹೆಬ್ಬೆರಳನ್ನೇ ಕಾಣಕೆಯಾಗಿ ನೀಡಿದ ಪವಿತ್ರ ದಿನವೂ ಇದೇ ಎಂದ ಹೇಳಲಾಗುತ್ತದೆ.
- ಬಸವಣ್ಣನವರ ವಾಣಿ: ಭಕ್ತಿ ಭಂಡಾರಿ ಬಸವಣ್ಣನವರು “ಶಿವಪಥವನರಿವಡೆ ಗುರುಪಥವೇ ಮೊದಲು” ಎಂದಿದ್ದಾರೆ. ಅಂದರೆ ದೇವರೆಂಬ ಸತ್ಯವನ್ನು ತಿಳಿಯಬೇಕಾದರೆ ಗುರುವಿನ ಮಾರ್ಗದರ್ಶನವೇ ಮೊದಲ ಮೆಟ್ಟಿಲು.
- ಆಧ್ಯಾತ್ಮಿಕ ನೋಟ: ಜ್ಞಾನವಿಲ್ಲದ ಜೀವನವು ಬರೀ ‘ಅಸ್ತಿತ್ವ’ ಅಷ್ಟೇ, ಅದು ಪರಿಪೂರ್ಣ ಜೀವನವೆನಿಸುವುದಿಲ್ಲ. ಜೀವನವು ಜ್ಞಾನದಿಂದ ಆರಂಭವಾಗುತ್ತದೆ. ಹುಣ್ಣಿಮೆಯು ಚಂದ್ರನ ಪರಿಪೂರ್ಣತೆ ಮತ್ತು ಸಫಲತೆಯ ಸಂಕೇತ. ಆದ್ದರಿಂದ ಗುರು ಪೂರ್ಣಿಮೆಯು ಅಜ್ಞಾನವನ್ನು ತೊರೆದು ಜ್ಞಾನದ ಕಡೆಗೆ ಸಂಕಲ್ಪ ಮಾಡುವ ದಿನವೆಂದು ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ತಿಳಿಸುತ್ತಾರೆ.
ಸಾರ್ವತ್ರಿಕತೆ ಮತ್ತು ಸಂಸ್ಕೃತಿ
ಗುರು ಪೂರ್ಣಿಮೆಯು ಕೇವಲ ವೈದಿಕ ಅಥವಾ ಸನಾತನ ಸಂಪ್ರದಾಯಕ್ಕೆ ಸೀಮಿತವಾಗಿರದೆ ಜೈನ ಮತ್ತು ಬೌದ್ಧ ಧರ್ಮಗಳಲ್ಲೂ ಪ್ರಮುಖ ಸ್ಥಾನ ಪಡೆದಿದೆ. ಭಗವಾನ್ ಬುದ್ಧರು ತಮ್ಮ ಜ್ಞಾನೋದಯದ ನಂತರ ಮೊದಲ ಉಪದೇಶವನ್ನು (ಧಮ್ಮಚಕ್ಕಪ್ಪವತ್ತನ ಸುತ್) ನೀಡಿದ್ದು ಹಾಗೂ ಮಹಾವೀರರು ತಮ್ಮ ಮೊದಲ ಶಿಷ್ಯ ಇಂದ್ರಭೂತಿ ಗೌತಮನಿಗೆ ಜ್ಞಾನಬೋಧೆ ಮಾಡಿದ್ದು ಇದೇ ಪೌರ್ಣಿಮೆಯಂದು ಎಂಬ ನಂಬಿಕೆಯಿದೆ.
“ಸಾ ವಿದ್ಯಾ ಯಾ ವಿಮುಕ್ತಯೇ” (ಯಾವುದು ನಮ್ಮನ್ನು ಬಂಧನದಿಂದ ಮುಕ್ತಗೊಳಿಸುತ್ತದೆಯೋ ಅದೇ ವಿದ್ಯೆ)
“ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ” (ಜ್ಞಾನಕ್ಕಿಂತ ಪವಿತ್ರವಾದದ್ದು ಈ ಲೋಕದಲ್ಲಿ ಬೇರೇನೂ ಇಲ್ಲ)
ಜೇಡಿಮಣ್ಣಿನಂತಿರುವ ಶಿಷ್ಯನನ್ನು ತಿದ್ದಿ, ತೀಡಿ, ಸುಂದರ ಮೂರ್ತಿಯನ್ನಾಗಿ ರೂಪಿಸುವ ಶಿಲ್ಪಿ ಗುರು. ಪ್ರಾಚೀನ ಗುರುಕುಲ ಪದ್ಧತಿಯಲ್ಲಿ ಶಿಷ್ಯನು ಗುರುವಿನ ಚರಣ ತಲದಲ್ಲಿ ಕುಳಿತು ಜ್ಞಾನಾರ್ಜನೆ ಮಾಡುತ್ತಿದ್ದನು.
ಕೃತಜ್ಞತಾ ಭಾವ
ಸಂತ ಶಿಶುನಾಳ ಶರೀಫರು ತಮ್ಮ ತತ್ತ್ವಪದದಲ್ಲಿ “ಹಾಕಿದ ಜನಿವಾರವಾ ಸದ್ಗುರುನಾಥ ನೂಕಿದ ಭವ ಭಾರವಾ…” ಎಂದು ಗುರುವಿನ ಕೃಪೆಯಿಂದ ತಮ್ಮ ಸಂಸಾರ ಬಂಧನ ಕಳೆಯಿತೆಂದು ಹಾಡಿದ್ದಾರೆ. ಅಂತೆಯೇ ದಾಸಶ್ರೇಷ್ಠರು “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದು ಗಾನಮಾಡಿದ್ದಾರೆ.
ಗುರು ಎಂದರೆ ಬರಿ ರಕ್ತಮಾಂಸಗಳ ಮಾನವನಲ್ಲ, ಆತ ನಡೆದಾಡುವ ದೇವರು; ಸಾಕ್ಷಾತ್ ಈಶ್ವರನ ಪ್ರತ್ಯಕ್ಷ ರೂಪ. ನಮ್ಮ ಬದುಕಿಗೆ ವಿದ್ಯೆ, ವಿವೇಕ, ಉತ್ತಮ ಸಂಸ್ಕಾರ ನೀಡಿ, ಭವಸಾಗರವನ್ನು ದಾಟಿಸುವ ಮಹಾನ್ ಗುರುಗಳಿಗೆ ಗುರುಪೂರ್ಣಿಮೆಯ ಈ ಶುಭದಿನದಂದು ಶಿರಬಾಗಿ ನಮಿಸೋಣ. ಗುರುಗಳ ದರ್ಶನ ಪಡೆದು, ಅವರ ಆಶೀರ್ವಾದಕ್ಕೆ ಪಾತ್ರರಾಗಿ ನಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳೋಣ.
ರಚನೆ: ಸಂತೋಷ್ ಬಿದರಗಡ್ಡೆ
ಶಿಕ್ಷಕರು ಹಾಗೂ ಸಾಹಿತಿಗಳು, ಶಿವಮೊಗ್ಗ










