ಶ್ರೀ ರಂಭಾಪುರಿ ಪೀಠ/ ಬಾಳೆಹೊನ್ನೂರು:
ಜಗತ್ತಿನ ಶ್ರೇಷ್ಠ ಜ್ಞಾನಿಗಳು, ಮಹಾನುಭಾವರು ಹಾಗೂ ಅನುಭಾವಿಗಳು ತಾವು ಕಂಡ ಸತ್ಯದ ಬೆಳಕನ್ನು ಸಮಾಜಕ್ಕೆ ತೋರಿಸಿ ಮಾನವಕುಲದ ಉದ್ಧಾರಕ್ಕಾಗಿ ಬದುಕಿದ್ದಾರೆ. ಲೋಕದ ಭೌತಿಕ ಆಸೆ-ಆಕಾಂಕ್ಷೆಗಳನ್ನು ಈಡೇರಿಸುವವರು ಅನೇಕರಿದ್ದರೂ, ಆತ್ಮಜ್ಞಾನವನ್ನು ನೀಡುವ ಮೂಲಕ ಆಧ್ಯಾತ್ಮಿಕ ಜೀವನದ ದಾರಿಯನ್ನು ತೋರಿಸಿ, ಅಮರ ಸಂಪತ್ತಾದ ಜ್ಞಾನವನ್ನು ಕರುಣಿಸುವವರೇ ನಿಜವಾದ ಶ್ರೀಗುರು ಎಂದು ಬಾಳೆಹೊನ್ನೂರಿನ ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಅವರು ಬುಧವಾರ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ಆಯೋಜಿಸಿದ್ದ ವಿಶೇಷ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.


ಅನುಭಾವದ ಮಹತ್ವ ಮತ್ತು ಗುರು ತತ್ವ
ತಮ್ಮ ಆಶೀರ್ವಚನದಲ್ಲಿ ಗುರುವಿನ ಮಹಿಮೆಯನ್ನು ಬಣ್ಣಿಸಿದ ಶ್ರೀ ರಂಭಾಪುರಿ ಜಗದ್ಗುರುಗಳು, ಬಲ್ಲವರ ಮತ್ತು ಹಿರಿಯರ ನುಡಿಗಳನ್ನು ಆಲಿಸುವುದು ಹಾಗೂ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪರಮ ತಪಸ್ಸಿಗೆ ಸಮಾನ. ಒಳ್ಳೆಯವರ ಜೊತೆಗೆ ಪಾಲ್ಗೊಂಡಾಗ ಮನುಷ್ಯ ಜಾತಿ, ಮತ, ಸ್ಥಾನಮಾನ ಹಾಗೂ ಅಹಂಕಾರದ ಗೌರವಗಳನ್ನು ಮರೆತು ಒಂದಾಗುತ್ತಾನೆ. ಈ ಜಗತ್ತಿನಲ್ಲಿ ಪ್ರಾಪಂಚಿಕ ಸಂಪತ್ತು ಮತ್ತು ಪಾರಮಾರ್ಥಿಕ ಸಂಪತ್ತು ಎಂಬ ಎರಡು ಮುಖ್ಯ ನಿಧಿಗಳಿವೆ. ಪ್ರಾಪಂಚಿಕ ಸಂಪತ್ತನ್ನು ಗಳಿಸಿದಾಗ ನಮ್ಮ ಬದುಕು ‘ವೈಭವಪೂರ್ಣ’ವಾಗುತ್ತದೆ, ಆದರೆ ಪಾರಮಾರ್ಥಿಕ ಅಥವಾ ಅಧ್ಯಾತ್ಮದ ಸಂಪತ್ತನ್ನು ಗಳಿಸಿದಾಗ ಮಾತ್ರ ನಮ್ಮ ಬದುಕು ‘ಅನುಭಾವಪೂರ್ಣ’ವಾಗುತ್ತದೆ, ಎಂದರು.
“ಹೃದಯದಲ್ಲಿ ಅನುಭಾವಾಮೃತವನ್ನು ತುಂಬಿಕೊಂಡವನೇ ಶ್ರೀ ಗುರು. ‘ನಾನ್’ ಎಂಬ ಅಹಂಕಾರವನ್ನು ದೂರಮಾಡಿ, ಜನರನ್ನು ಲೌಕಿಕ ಬಂಧನದಿಂದ ಮುಕ್ತಗೊಳಿಸುವ ದಿವ್ಯ ಶಕ್ತಿ ಗುರುವಿನಲ್ಲಿದೆ. ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಜಗತ್ತಿಗೆ ‘ವಿಶ್ವಬಂಧುತ್ವ’ ಮತ್ತು ‘ವೈಶಿಷ್ಟ್ಯ ತತ್ತ್ವ ಸಿದ್ಧಾಂತ’ಗಳನ್ನು ಬೋಧಿಸಿ ಸನ್ಮಾರ್ಗ ತೋರಿಸಿದ್ದಾರೆ,” ಎಂದು ಸ್ಮರಿಸಿದರು.


ಗುರು ಪೂರ್ಣಿಮೆಯ ಅಂಗವಾಗಿ ಭಕ್ತರು ಶ್ರೀ ಜಗದ್ಗುರುಗಳ ಪಾದಪೂಜೆ ನೆರವೇರಿಸಿ, ಪುಷ್ಪಾರ್ಚನೆ ಸಲ್ಲಿಸಿ ಆಶೀರ್ವಾದ ಪಡೆದರು. ವಿವಿಧ ಮಠಾಧೀಶರು, ಶಿವಾಚಾರ್ಯರು ಹಾಗೂ ಭಕ್ತರು ಗುರುಗಳಿಗೆ ಗೌರವ ಸಮರ್ಪಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.


ಕಾರ್ಯಕ್ರಮದಲ್ಲಿ ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಹುಡುಗಿ ಸೋಮೇಶ್ವರ ಶಿವಾಚಾರ್ಯರು, ಬೇರುಗಂಡಿ ರೇಣುಕ ಮಹಾಂತ ಶಿವಾಚಾರ್ಯರು, ಕಾಜುರ್ವಳ್ಳಿ ಸದಾಶಿವ ಶಿವಾಚಾರ್ಯರು, ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯರು, ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ತಾವರೆಕೆರೆ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಹಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು ಸೇರಿದಂತೆ ಅನೇಕ ಮಠಾಧೀಶರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಚಿಪ್ಪಲಕಟ್ಟಿ ಕಲ್ಲಯ್ಯಸ್ವಾಮಿ ಹಿರೇಮಠ, ನಾಂದೇಡದ ವಿನಾಯಕ ಮಾಳವದೆ, ಕಲಬುರಗಿಯ ರೇವಯ್ಯಸ್ವಾಮಿ ಹಿರೇಮಠ, ಕನಕಗಿರಿಯ ಸಂಗಪ್ಪ ಸಜ್ಜನ, ಚಿಕ್ಕಮಗಳೂರಿನ ಯು. ಎಂ. ಬಸವರಾಜ್, ಮಲೇಬೆನ್ನೂರಿನ ವಾಗೀಶಸ್ವಾಮಿ, ಶ್ರೀ ರಂಭಾಪುರಿ ಪೀಠದ ಸಂಪರ್ಕಾಧಿಕಾರಿ ಪ್ರಭುದೇವ ಕಲ್ಮಠ, ಮತ್ತು ಗುರುಕುಲದ ಕುಲಪತಿ ಬೆಳಗಾಲಪೇಟೆಯ ಸಿದ್ಧಲಿಂಗ ಶಾಸ್ತ್ರಿಗಳು ಹಿರೇಮಠ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.

















