ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ರಾಹುಲ್ ಗಾಂಧಿ ಸಮಯ ಕೂಡ ಕೊಟ್ಟಿಲ್ಲ. ಹೀಗಾಗಿ ಕಾಂಗ್ರೆಸ್ ಗೆ ಸವಾಲು ಹಾಕಲು ಸಾಧನಾ ಸಮಾವೇಶ ಮಾಡ್ತಿದ್ದಾರೆ.
ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಊಹಪೋಹಾಗಳು ನಡೆಯುತ್ತಿರುವಂತೆಯೇ ಈ ವರ್ಷದ ಕೊನೆಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶುಕ್ರವಾರ ಹೇಳಿದ್ದಾರೆ.
ಜುಲೈ 19 ರಂದು ಮೈಸೂರಿನಲ್ಲಿ ಸರ್ಕಾರದ ‘ಸಾಧನ ಸಮಾವೇಶ’ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಮಂತ್ರಿ ಸ್ಥಾನದ ಕುರ್ಚಿ ಅಲುಗಾಡುವ ಸಂದರ್ಭ ಎದುರಾದಾಗಲೆಲ್ಲಾ ಅವರು ಸಮಾವೇಶ ನಡೆಸುತ್ತಾರೆ. ಅಹಿಂದ ವೋಟ್ ಬ್ಯಾಂಕ್ ಬಳಸಿಕೊಂಡು, ಸಿಎಂ ಸ್ಥಾನದಿಂದ ತನ್ನನ್ನು ಬದಲಾಯಿಸದಂತೆ ಪಕ್ಷದ ಹೈಕಮಾಂಡ್ ಬೆದರಿಸುವ ತಂತ್ರ ಮಾಡುತ್ತಾರೆ ಎಂದರು.
ನೋಡ್ತಾ ಇರಿ, ನವೆಂಬರ್ ಅಥವಾ ಬಿಹಾರ ಚುನಾವಣೆಗೂ ಮೊದಲು ಅಥವಾ ನಂತರ ರಾಜ್ಯದಲ್ಲಿ ಮಹತ್ವದ ರಾಜಕೀಯ ಬದಲಾವಣೆಯಾಗಲಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ರಾಹುಲ್ ಗಾಂಧಿ ಸಮಯ ಕೂಡ ಕೊಟ್ಟಿಲ್ಲ. ಹೀಗಾಗಿ ಕಾಂಗ್ರೆಸ್ ಗೆ ಸವಾಲು ಹಾಕಲು ಸಾಧನಾ ಸಮಾವೇಶ ಮಾಡ್ತಿದ್ದಾರೆ. ಇದು ಸಾಧನಾ ಸಮಾವೇಶ ಅಲ್ಲ. ಕಾಂಗ್ರೆಸ್ ಹೈಕಮಾಂಡ್ ಗೆ ಮಾಡುತ್ತಿರುವ ಬ್ಲ್ಯಾಕ್ ಮೇಲ್ ಸಮಾವೇಶ. ರಾಜ್ಯಕ್ಕಾಗಿ ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂದು ಸಮಾವೇಶ ಮಾಡುತ್ತಿದ್ದಾರೆ? ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಮಯ ಬಂದಿದೆ. ಹೀಗಾಗಿ ಹೈಕಮಾಂಡ್ ಬೆದರಿಸಲು ಸಿಎಂ ಸಮಾವೇಶ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹೊಣೆಗಾರರು, ಆದರೆ ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ. ಈ ಕುರಿತು ತನಿಖೆ ನಡೆಸಿದ ಕುನ್ಹಾ ಆಯೋಗ ಈ ತಪ್ಪು ಮುಚ್ಚಿಕೊಳ್ಳಲು ಆರ್ ಸಿ ಬಿ ತಂಡವನ್ನು ಬಲಿ ಪಶು ಮಾಡಿದ್ದಾರೆ. ಈ ವರದಿ ಸಮರ್ಪಕ ಮತ್ತು ನ್ಯಾಯಯುತವಾಗಿಲ್ಲ. ಸಿಎಂ ಗೆ ಪ್ರಾಮಾಣಿಕತೆ ಇದ್ದಿದ್ದರೇ ಇಂತಹ ವರದಿಯನ್ನು ನ್ಯಾಯಾಲಯದ ಮುಂದೆ ಇಡುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.