ಬೆಳಗಾವಿ: ರಾಜ್ಯ ರಾಜಕಾರಣದ ನಡೆಗಳು ಒಂದು ರೀತಿಯಾದ್ರೆ, ಬೆಳಗಾವಿ ರಾಜಕಾರಣದ ಆಗುಹೋಗುಗಳು ಮಾತ್ರ ಇನ್ನೊಂದು ರೀತಿಯದ್ದು. ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ಹಿಡಿತವನ್ನು ಅಷ್ಟು ಸುಲಭವಾಗಿ ಅಲುಗಾಡಿಸಲು ಯಾರಿಗೂ ಆಗೋದಿಲ್ಲ ಅನ್ನೋದು ಇಡೀ ರಾಜ್ಯ ರಾಜಕೀಯಕ್ಕೆ ಗೊತ್ತಿರೋ ಸಂಗತಿ. ಇದೀಗ ಬೆಳಗಾವಿ ರಾಜಕಾರಣದಲ್ಲೂ ಕೂಡ ಹೊಸ ಟ್ವಿಸ್ಟ್ ಸಿಕ್ಕಿದೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ (DCC Bank Election) ಕಾವು ಏರುತ್ತಿರುವ ಸಮಯದಲ್ಲೇ ಈ ಡಿಸಿಸಿ ಚುನಾವಣೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಜಾರಕಿಹೊಳಿ ಸಹೋದರರ ವಿರುದ್ಧ ಹೋರಾಟಕ್ಕೆ ವೇದಿಕೆ ಸಜ್ಜುಗೊಂಡಿದೆ. ಜಾರಕಿಹೊಳಿ ಸಹೋದರರ ವಿರುದ್ಧ ಲಿಂಗಾಯತ ನಾಯಕರು ಒಗ್ಗಟ್ಟಿನಿಂದ ಹೋರಾಟಕ್ಕೆ ಪ್ಲ್ಯಾನ್ ಮಾಡಿದ್ದು, ಮಹಾರಾಷ್ಟ್ರದ ಪ್ರಮುಖ ಮಠವೊಂದರಲ್ಲಿ ಸೀಕ್ರೆಟ್ ಸಭೆ ನಡೆಸಲಾಗಿದೆ ಎಂಬ ಅಚ್ಚರಿಯ ಮಾಹಿತಿ ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಬೆಳಗಾವಿ ಜಿಲ್ಲೆಯ ಬಹುತೇಕ ಲಿಂಗಾಯತ ನಾಯಕರು ಮಹಾರಾಷ್ಟ್ರದ ಪ್ರಮುಖ ಮಠವೊಂದರಲ್ಲಿ ನಡೆದ ಸೀಕ್ರೆಟ್ ಸಭೆಯಲ್ಲಿ ಭಾಗಿಯಾಗಿದ್ದು, ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಸೇರಿದಂತೆ ಪಕ್ಷಾತೀತವಾಗಿ ಲಿಂಗಾಯತ ನಾಯಕರು ಈ ಸಭೆಯಲ್ಲಿ ಹಾಜರಾಗಿ ಜಾರಕಿಹೊಳಿ ಸಹೋದರರ ಕೋಟೆಯನ್ನು ಛಿದ್ರಗೊಳಿಸಲು ರಣತಂತ್ರ ಹೂಡಿದ್ದಾರೆ ಎನ್ನಲಾಗಿದೆ.
ಅಚ್ಚರಿಯ ಸಂಗತಿ ಏನೆಂದರೆ ಜಾರಕಿಹೊಳಿ ಸಹೋದರರ ಗುಂಪಿನಲ್ಲಿ ಗುರುತಿಸಿಕೊಂಡ ನಾಯಕರು ಕೂಡ ಮಹಾರಾಷ್ಟ್ರದ ಪ್ರಮುಖ ಮಠವೊಂದರಲ್ಲಿ ನಡೆದ ಸೀಕ್ರೆಟ್ ಸಭೆಯಲ್ಲಿ ಭಾಗಿಯಾಗಿದ್ದಾರೆ. ಪ್ರಮುಖ ವಿಚಾರಗಳ ಬಗ್ಗೆ ಮಹತ್ವದ ಚರ್ಚೆ ನಡೆಲಾಗಿದ್ದು, ವಿಶೇಷವಾಗಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಒಂದೆಡೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಬಾಲಚಂದ್ರ ಜಾರಕಿಹೊಳಿ, ಸತೀಶ ಜಾರಕಿಹೊಳಿ ಮುಂದಾಗಿದ್ದಾರೆ. ಇದೀಗ ಜಾರಕಿಹೊಳಿ ಬಣಕ್ಕೆ ಮತ್ತೊಂದು ಪರ್ಯಾಯ ಬಣ ಸೃಷ್ಠಿಯಾಗೋ ಸಾಧ್ಯತೆ ಇದ್ದು, ಇದಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರದ ಪ್ರಮುಖ ಮಠವೊಂದರಲ್ಲಿ ನಡೆದ ಸೀಕ್ರೆಟ್ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ.
ಆ ಮೂಲಕ ಡಿಸಿಸಿ ಬ್ಯಾಂಕ್ ಚುನಾವಣೆಗೆ ಮಹತ್ವದ ಟ್ವಿಸ್ಟ್ ಅನ್ನು ಈ ಸಭೆ ಕೊಟ್ಟಿದ್ದು, ಮುಖ್ಯವಾಗಿ ಸಭೆಯ ಬಗ್ಗೆ ಯಾವುದೇ ಮಾಹಿತಿ ಲಿಕ್ ಆಗದಂತೆ ಎಚ್ಚರಿಕೆಯನ್ನು ಕೂಡ ನಾಯಕರು ವಹಿಸಿದ್ದಾರೆ ಎಂದು ತಿಳಿದು ಬಂದಿದೆ.