ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಸಚಿವ ಕೆ ಎನ್ ರಾಜಣ್ಣ ನೀಡಿರುವ ‘ಸೆಪ್ಟಂಬರ್ ಕ್ರಾಂತಿ’ ಹೇಳಿಕೆಯೊಂದು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ತನ್ನ ಮಾತಿಗೆ ನಾನು ಬದ್ಧ ಎಂದು ರಾಜಣ್ಣ ಅವರು ಪದೇ ಪದೇ ಉಲ್ಲೇಖಿಸುತ್ತಿದ್ದಾರೆ. ಆದರೆ ಸೆಪ್ಟಂಬರ್ ನಲ್ಲಿ ಏನು ಕ್ರಾಂತಿ ನಡೆಯಲಿದೆ ಎಂಬ ಪ್ರಶ್ನೆಗೆ ಅವರು ಸ್ಪಷ್ಟವಾದ ಉತ್ತರ ಕೊಡುತ್ತಿಲ್ಲ. ಹಾಗಿದ್ದರೂ ಸದ್ಯ ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಬದಲಾವಣೆಯ ಸುಳಿವನ್ನೇ ರಾಜಣ್ಣ ನೀಡುತ್ತಿದ್ದಾರಾ? ಎಂಬ ಅನುಮಾನಗಳು ವ್ಯಕ್ತವಾಗಿದೆ.
ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಬಗ್ಗೆ ಕೆ ಎನ್ ರಾಜಣ್ಣ ಅವರಿಗೆ ಅಸಮಾಧಾನ ಇದೆ. ಸುರ್ಜೇವಾಲ ರಾಜ್ಯದಲ್ಲಿ ಶಾಸಕರು ಮತ್ತು ಸಚಿವರ ಸಭೆಯನ್ನು ನಡೆಸಿದ್ದರು. ಶಾಸಕರು ಜೊತೆಗೆ 3 ಸುತ್ತಿನ ಸಭೆಯನ್ನು ನಡೆಸಿದರೆ ಬಳಿಕ ಸಚಿವರ ಜೊತೆಗೂ ಮೂರು ಸುತ್ತಿನ ಸಭೆಯನ್ನು ನಡೆಸಿದ್ದರು. ಈ ವೇಳೆ ಕೆಲವು ಶಾಸಕರು ತಮ್ಮ ಅಸಮಾಧಾನವನ್ನು ಸುರ್ಜೇವಾಲ ಅವರ ಬಳಿಕ ತೋಡಿಕೊಂಡಿದ್ದರು.
ಗೈರಾಗಿದ್ದ ರಾಜಣ್ಣ
ಸಚಿವರ ಸಭೆಗೆ ಕೆ ಎನ್ ರಾಜಣ್ಣ ಗೈರಾಗಿದ್ದರು. ಸಭೆಯ ಸಂದರ್ಭದಲ್ಲೇ ಅವರು ವಿದೇಶ ಪ್ರವಾಸಕ್ಕೆ ಕುಟುಂಬದ ಜೊತೆಗೆ ತೆರಳಿದ್ದರು. ಈ ವಿಚಾರವಾಗಿ ಅವರು ಸ್ಪಷ್ಟನೆ ನೀಡಿದ್ದಾರೆ. ಸಭೆಗೆ ಕರೆದಿಲ್ಲ, ಅದಕ್ಕೆ ಹಾಜರಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಕಾರ್ಯವೈಖರಿಯ ಬಗ್ಗೆಯೂ ರಾಜಣ್ಣ ಅಸಮಾಧಾನವನ್ನು ಹೊರ ಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸುರ್ಜೇವಾಲ ಬದಲಾವಣೆ ಕೂಗು!
ಈಗಾಗಲೇ ಒಂದು ಬಣ ಸುರ್ಜೇವಾಲ ಅವರನ್ನು ಬದಲಾವಣೆ ಮಾಡಬೇಕು ಎಂದು ಪಟ್ಟು ಹಿಡಿದಿದೆ. ರಣದೀಪ್ ಸಿಂಗ್ ಸುರ್ಜೇವಾಲ ಅವರು ಏಕ ಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ, ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳುತ್ತಿಲ್ಲ ಎಂಬುವುದು ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಸುರ್ಜೇವಾಲ ಅವರ ವಿರುದ್ಧ ಸಹಿ ಸಂಗ್ರಹ ಮಾಡಲಾಗಿತ್ತು. ಆದರೆ ಅಧಿಕೃತವಾಗಿ ಹೈಕಮಾಂಡ್‌ಗೆ ದೂರು ಸಲ್ಲಿಕೆ ಮಾಡಲಾಗುವುದು ಎಂದು ಕೆಲವು ಶಾಸಕರು ಹೇಳಿಕೊಂಡಿದ್ದರು.