ಜಾತಿ, ಧರ್ಮದ ಎಲ್ಲೆಗಳನ್ನು ಮೀರಿ ಸಮ ಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಬೇಕು; ಗುರುಪರಂಪರೆಯ ಇತಿಹಾಸ, ಬಸವಣ್ಣನವರ ಸಮಾನತೆಯ ತತ್ವ ಮತ್ತು ಮಠಗಳ ಸಾಮಾಜಿಕ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ: ಸಿ.ಎಸ್. ಷಡಾಕ್ಷರಿ
ಭದ್ರಾವತಿ/ಬಿಳಿಕಿ: ಒಂದು ಕಾಲದಲ್ಲಿ ಹಸಿದ ಹೊಟ್ಟೆಗೆ ಅನ್ನ, ಅಕ್ಷರ ಕಲಿಯಲು ಅವಕಾಶ, ಬದುಕಿನಲ್ಲಿ ಮುನ್ನಡೆಯಲು ಮಾರ್ಗದರ್ಶನವೂ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದ ಅಸಂಖ್ಯಾತ ಕುಟುಂಬಗಳಿಗೆ ವೀರಶೈವ ಲಿಂಗಾಯತ ಮಠಗಳು ಆಶ್ರಯ ನೀಡಿದವು. ಅನ್ನದಾಸೋಹದ ಮೂಲಕ ಹಸಿವು ನೀಗಿಸಿದವು, ಜ್ಞಾನದಾಸೋಹದ ಮೂಲಕ ಅಜ್ಞಾನದ ಕತ್ತಲೆ ದೂರಮಾಡಿದವು, ಸಂಸ್ಕಾರ ಮತ್ತು ಧಾರ್ಮಿಕ ಚಿಂತನೆಯ ಮೂಲಕ ಬದುಕಿಗೆ ಹೊಸ ದಿಕ್ಕು ತೋರಿಸಿದವು. ಮಠಗಳ ನೆರಳಿನಲ್ಲಿ ಬೆಳೆದ ಸಾವಿರಾರು ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಇಂತಹ ಮಠಪರಂಪರೆ ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಅವು ಸಮಾಜವನ್ನು ಒಗ್ಗೂಡಿಸುವ, ಮಾನವೀಯತೆಯನ್ನು ಬೆಳೆಸುವ ಮತ್ತು ಸೌಹಾರ್ದತೆಯನ್ನು ಕಾಪಾಡುವ ಜೀವಂತ ಶಕ್ತಿ ಕೇಂದ್ರಗಳಾಗಿವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ಹೇಳಿದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಬಾಳೆಹೊನ್ನೂರು ಶ್ರೀ ರಂಭಾಪುರಿ ಶಾಖಾ ಹಿರೇಮಠದ ಬಿಳಿಕಿಯಲ್ಲಿ ನಡೆದ ಲಿಂಗೈಕ್ಯ ಶ್ರೀ ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳವರ 59ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗುರುಪರಂಪರೆಯ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಯಬೇಕು: ಸಿ.ಎಸ್. ಷಡಾಕ್ಷರಿ
ಮಹನೀಯರ ಜನ್ಮದಿನ ಅಥವಾ ಪುಣ್ಯಸ್ಮರಣೋತ್ಸವ ಆಚರಿಸುವುದರ ಹಿಂದೆ ಕೇವಲ ಒಂದು ಕಾರ್ಯಕ್ರಮ ನಡೆಸುವ ಉದ್ದೇಶವಿರುವುದಿಲ್ಲ. ಅವರು ಸಮಾಜಕ್ಕೆ ನೀಡಿದ ಕೊಡುಗೆ, ಸಾಧನೆ, ಆದರ್ಶ ಮತ್ತು ಜೀವನದ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಆಶಯವಿರುತ್ತದೆ. ಹಿರಿಯರಿಗೆ ತಮ್ಮ ಕಾಲದ ಗುರುಗಳು, ಮಠಗಳು ಮತ್ತು ಧಾರ್ಮಿಕ ಪರಂಪರೆಯ ಇತಿಹಾಸ ತಿಳಿದಿರುತ್ತದೆ. ಆದರೆ ಇಂದಿನ ಯುವಜನತೆಗೆ ಈ ವಿಚಾರಗಳ ಅರಿವು ಕಡಿಮೆಯಾಗುತ್ತಿದೆ. ಹೀಗಾಗಿ ಇಂತಹ ಧಾರ್ಮಿಕ ಚಿಂತನ ಕಾರ್ಯಕ್ರಮಗಳು ಗುರುಪರಂಪರೆ, ಮಠಗಳ ಇತಿಹಾಸ, ಧರ್ಮದ ಆಶಯ ಮತ್ತು ಸಮಾಜದ ಬೆಳವಣಿಗೆಯಲ್ಲಿ ಮಹಾಸ್ವಾಮಿಗಳು ವಹಿಸಿದ ಪಾತ್ರವನ್ನು ತಿಳಿಸುವ ವೇದಿಕೆಗಳಾಗಬೇಕು ಎಂದರು.
ಬಿಳಿಕಿ ಮಠದ ಪೂಜ್ಯ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಇಂತಹ ಕಾರ್ಯಕ್ರಮದ ನೇತೃತ್ವ ವಹಿಸಿರುವುದು ಸಂತಸದ ಸಂಗತಿ. ನಮ್ಮ ಧರ್ಮ, ಸಮಾಜ ಮತ್ತು ಗುರುಪರಂಪರೆಯ ಮಹತ್ವವನ್ನು ಅರಿತುಕೊಳ್ಳುವುದರ ಜೊತೆಗೆ ಅವುಗಳಲ್ಲಿರುವ ಉತ್ತಮ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವೂ ನಡೆಯಬೇಕು ಎಂದು ಹೇಳಿದರು.

ವೀರಶೈವ ಧರ್ಮ ಮಾನವೀಯ ಮೌಲ್ಯಗಳ ಜೀವನ ಪದ್ಧತಿ
ವೀರಶೈವ ಸಮಾಜದಲ್ಲಿ ಜನಿಸಿರುವುದಕ್ಕೆ ನಾವು ಹೆಮ್ಮೆಪಡಬೇಕು. ಆದರೆ ಧರ್ಮ ಎನ್ನುವುದು ಕೇವಲ ಆಚರಣೆಗಳಿಗೆ ಸೀಮಿತವಾದುದಲ್ಲ. ಅದು ಮಾನವೀಯ ಮೌಲ್ಯಗಳು, ಬದುಕಿನ ಸಂಸ್ಕಾರ, ಸೇವಾ ಮನೋಭಾವ, ಸಮಾನತೆ ಮತ್ತು ಸಮಾಜದ ಕಲ್ಯಾಣವನ್ನು ಪ್ರತಿಪಾದಿಸುವ ಜೀವನ ಪದ್ಧತಿಯಾಗಿದೆ.
ನಮ್ಮ ಧರ್ಮದಲ್ಲಿರುವ ಇಷ್ಟಲಿಂಗ ಪೂಜೆ, ಶಿವಭಕ್ತಿ, ಮಂತ್ರಪಠಣ, ಕಾಯಕತತ್ವ, ಗುರು-ಲಿಂಗ-ಜಂಗಮ ಪರಿಕಲ್ಪನೆ ಸೇರಿದಂತೆ ಅನೇಕ ಮೌಲ್ಯಗಳನ್ನು ಅರಿತುಕೊಂಡು ಜೀವನದಲ್ಲಿ ಅನುಷ್ಠಾನಗೊಳಿಸಬೇಕು. ಗುರು-ವಿರಕ್ತರ ಪರಂಪರೆಯ ಜೊತೆಗೆ ಬಸವಣ್ಣನವರ ವಿಚಾರಧಾರೆಗಳನ್ನೂ ಸಮನ್ವಯಗೊಳಿಸಿಕೊಂಡು ಸಮಾಜವನ್ನು ಮುನ್ನಡೆಸುವ ಅಗತ್ಯವಿದೆ ಎಂದರು.
ಧರ್ಮದ ವಿಚಾರದಲ್ಲಿ ಸಮಾಜದಲ್ಲಿ ಹಲವು ಚರ್ಚೆಗಳು, ಗೊಂದಲಗಳಿರಬಹುದು. ಆದರೆ ಅವುಗಳ ಹೆಸರಿನಲ್ಲಿ ಪರಸ್ಪರ ದೂರವಾಗಬಾರದು. ಎಲ್ಲ ಧರ್ಮಗಳು, ಎಲ್ಲ ಸಮಾಜಗಳು ಮತ್ತು ಎಲ್ಲ ಸಮುದಾಯಗಳಲ್ಲಿರುವ ಒಳ್ಳೆಯ ವಿಚಾರಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಾವುದೇ ವ್ಯಕ್ತಿ ಒಂದು ಜಾತಿ, ಧರ್ಮ, ಕುಟುಂಬ ಅಥವಾ ಸಮುದಾಯದ ಸೀಮಿತ ಚೌಕಟ್ಟಿನಲ್ಲಿ ಉಳಿದುಕೊಂಡು ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವವೇ ನಿಜವಾದ ವ್ಯಕ್ತಿತ್ವದ ಅಡಿಪಾಯ ಎಂದು ಷಡಾಕ್ಷರಿ ಅವರು ಹೇಳಿದರು.

ಜಾತಿ, ಧರ್ಮ ಮೀರಿ ಸಮಾಜವನ್ನು ಒಗ್ಗೂಡಿಸಬೇಕು
ನಾವು ಯಾವ ಜಾತಿಯಲ್ಲಿ, ಯಾವ ಧರ್ಮದಲ್ಲಿ ಜನಿಸಬೇಕು ಎಂಬುದನ್ನು ಆಯ್ಕೆ ಮಾಡಿಕೊಂಡು ಹುಟ್ಟಿಲ್ಲ. ಹುಟ್ಟು ಆಕಸ್ಮಿಕ. ಆದರೆ ಹುಟ್ಟಿದ ನಂತರ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ. ಇಂದಿನ ಯುವಜನತೆಯಲ್ಲಿ ಈ ವಿಶಾಲ ಮನೋಭಾವ ಬೆಳೆಸಬೇಕು.
ನಾನು ಭಾರತೀಯ, ಹೆಮ್ಮೆಯ ಕನ್ನಡಿಗ, ಶಿವಮೊಗ್ಗದ ಸತ್ಪ್ರಜೆ. ಧರ್ಮದ ವಿಚಾರದಲ್ಲಿ ಹಿಂದೂ, ಸಮುದಾಯದ ವಿಚಾರದಲ್ಲಿ ವೀರಶೈವ-ಲಿಂಗಾಯತ ಎಂದು ಗುರುತಿಸಿಕೊಳ್ಳುತ್ತೇನೆ. ಆದರೆ ಈ ಗುರುತುಗಳು ಮತ್ತೊಬ್ಬರನ್ನು ದೂರವಿಡಲು ಅಥವಾ ಕೀಳಾಗಿ ಕಾಣಲು ಕಾರಣವಾಗಬಾರದು. ಜಾತಿ, ಧರ್ಮ ಮತ್ತು ಉಪಪಂಗಡಗಳ ವಿಚಾರದಲ್ಲಿ ಪರಸ್ಪರ ಸಂಘರ್ಷಕ್ಕಿಳಿಯುವುದಕ್ಕಿಂತ ಮಾನವೀಯತೆಯನ್ನು ಮುಖ್ಯವಾಗಿಟ್ಟುಕೊಂಡು ಬದುಕಬೇಕು.
ಸಮಾಜದ ಓರೆಕೋರೆಗಳನ್ನು ತಿದ್ದುವುದು, ಸಮಾನತೆಯ ಸಮಾಜ ನಿರ್ಮಿಸುವುದು, ಧಾರ್ಮಿಕ ಸೌಹಾರ್ದತೆ ಬೆಳೆಸುವುದು ಮತ್ತು ನಮ್ಮ ಸಮುದಾಯದ ಜೊತೆಗೆ ಇತರ ಸಮಾಜಗಳಲ್ಲಿರುವ ಉತ್ತಮ ವಿಚಾರಗಳನ್ನೂ ಸ್ವೀಕರಿಸುವ ಮನೋಭಾವ ಬೆಳೆಸುವುದು ಇಂದಿನ ಯುವಜನತೆಯ ಜವಾಬ್ದಾರಿಯಾಗಿದೆ ಎಂದರು.

ಬಸವಣ್ಣನವರ ಅನುಭವ ಮಂಟಪ ವಿಶ್ವಕ್ಕೆ ಸಮಾನತೆಯ ಸಂದೇಶ ನೀಡಿದ ವೇದಿಕೆ
ಬಸವಣ್ಣನವರು ಪ್ರತಿಪಾದಿಸಿದ ‘ಕಾಯಕವೇ ಕೈಲಾಸ‘ ತತ್ವ ಇಂದಿಗೂ ಪ್ರಸ್ತುತವಾಗಿದೆ. ಅನುಭವ ಮಂಟಪದ ಮೂಲಕ ಜಾತಿ, ಲಿಂಗ ಮತ್ತು ಸಾಮಾಜಿಕ ತಾರತಮ್ಯಗಳನ್ನು ಮೀರಿ ಎಲ್ಲರಿಗೂ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸಿದ ಮಹಾನ್ ಪರಂಪರೆಯನ್ನು ಬಸವಣ್ಣನವರು ಜಗತ್ತಿಗೆ ಪರಿಚಯಿಸಿದರು. ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಆಧಾರದಲ್ಲಿ ಸಮಾಜವನ್ನು ಕಟ್ಟುವ ವಿಚಾರದಲ್ಲಿ ಬಸವಣ್ಣನವರ ಕೊಡುಗೆ ಅಪಾರವಾಗಿದೆ.
ಬಸವಣ್ಣನವರ ವಿಚಾರಧಾರೆ ಹಾಗೂ ಪಂಚಪೀಠಗಳ ಗುರುಪರಂಪರೆಯಲ್ಲಿರುವ ಉತ್ತಮ ಮೌಲ್ಯಗಳನ್ನು ಒಟ್ಟಾಗಿ ಸ್ವೀಕರಿಸಿ ಮುನ್ನಡೆಯುವ ಕೆಲಸವನ್ನು ಬಿಳಿಕಿ ಶ್ರೀಗಳು ಮಾಡುತ್ತಿರುವುದು ಶ್ಲಾಘನೀಯ. ಸಮಾನತೆ, ಸೌಹಾರ್ದತೆ ಮತ್ತು ಸಾಮಾಜಿಕ ಸಾಮರಸ್ಯದ ವಿಚಾರದಲ್ಲಿ ಇಂತಹ ಸಮನ್ವಯದ ಪ್ರಯತ್ನಗಳು ಮತ್ತಷ್ಟು ವಿಸ್ತಾರಗೊಳ್ಳಬೇಕು ಎಂದು ಹೇಳಿದರು.

ಮೊಬೈಲ್, ರೀಲ್ಸ್ಗಳ ಜಗತ್ತಿನಿಂದ ಹೊರಬಂದು ಸಮಾಜದ ಜವಾಬ್ದಾರಿ ಅರಿಯಲಿ
ಇಂದಿನ ಯುವಜನತೆ ಧಾರ್ಮಿಕ, ಸಾಮಾಜಿಕ ಮತ್ತು ಚಿಂತನಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಆಸಕ್ತಿ ತೋರಿಸುತ್ತಿಲ್ಲ ಎಂಬುದು ಆತಂಕಕಾರಿ ಸಂಗತಿ. ಸಿನಿಮಾ ನಟರು ಬಂದರೆ, ಕ್ರಿಕೆಟ್ ತಾರೆಗಳು ಬಂದರೆ ಸಾವಿರಾರು ಸಂಖ್ಯೆಯಲ್ಲಿ ಸೇರುವ ಯುವಕರು, ಸಮಾಜದ ಭವಿಷ್ಯದ ಬಗ್ಗೆ ಚಿಂತನೆ ನಡೆಸುವ ಧಾರ್ಮಿಕ ಕಾರ್ಯಕ್ರಮಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಅರ್ಜುನ್ ಜನ್ಯ ಬರುತ್ತಾರೆಯೇ? ವಿರಾಟ್ ಕೊಹ್ಲಿ ಬರುತ್ತಾರೆಯೇ? ಎಂದು ಕಾಯುವ ಯುವಜನತೆ, ಸಮಾಜದ ಒಳಿತಿಗಾಗಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಏಕೆ ಆಸಕ್ತಿ ತೋರಿಸುತ್ತಿಲ್ಲ ಎಂಬುದನ್ನು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಇಂದು ಮಕ್ಕಳು ಮನೆಯಲ್ಲಿಯೇ ಕುಳಿತು ಮೊಬೈಲ್, ರೀಲ್ಸ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಯೂಟ್ಯೂಬ್ನಲ್ಲಿ ಕಾರ್ಯಕ್ರಮ ವೀಕ್ಷಿಸುವುದಕ್ಕಿಂತ ನೇರವಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಿಚಾರಗಳನ್ನು ಆಲಿಸುವ, ಚರ್ಚಿಸುವ ಮತ್ತು ಸಮಾಜದೊಂದಿಗೆ ಬೆರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಸಮಾಜದ ಜವಾಬ್ದಾರಿ ಕೇವಲ ಹಿರಿಯರು, ಮಠಾಧೀಶರು ಅಥವಾ ರಾಜಕಾರಣಿಗಳ ಮೇಲಿದೆ ಎಂದು ಭಾವಿಸಬಾರದು. ಯುವಕರು ಮತ್ತು ಮಹಿಳೆಯರೂ ಸೇರಿದಂತೆ ಪ್ರತಿಯೊಬ್ಬರೂ ಸಮಾಜ ನಿರ್ಮಾಣದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಷಡಾಕ್ಷರಿ ಅವರು ಕರೆ ನೀಡಿದರು.

ಮಠಗಳಿಲ್ಲದಿದ್ದರೆ ಲಕ್ಷಾಂತರ ವಿದ್ಯಾರ್ಥಿಗಳ ಬದುಕು ರೂಪುಗೊಳ್ಳುತ್ತಿರಲಿಲ್ಲ
ಕಾವಿಧಾರಿ ಸ್ವಾಮೀಜಿಗಳು ತಮ್ಮ ವೈಯಕ್ತಿಕ ಬದುಕು ಮತ್ತು ಲೌಕಿಕ ಆಕಾಂಕ್ಷೆಗಳನ್ನು ಬದಿಗಿಟ್ಟು ಸಮಾಜದ ಪರಿವರ್ತನೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ. ಅವರು ಬಯಸಿದ್ದರೆ ಅಧಿಕಾರಿಗಳಾಗಬಹುದಿತ್ತು, ಉದ್ಯಮಿಗಳಾಗಬಹುದಿತ್ತು, ಪ್ರಗತಿಪರ ಕೃಷಿಕರಾಗಬಹುದಿತ್ತು. ಆದರೆ ಸಮಾಜದಲ್ಲಿ ಬದಲಾವಣೆ ತರಬೇಕು, ಜನರ ಬದುಕಿನಲ್ಲಿ ಸುಧಾರಣೆ ತರಬೇಕು, ಸಮುದಾಯವನ್ನು ಒಗ್ಗೂಡಿಸಬೇಕು ಎಂಬ ಉದ್ದೇಶದಿಂದ ಮಠಪರಂಪರೆಯ ಜವಾಬ್ದಾರಿಯನ್ನು ಸ್ವೀಕರಿಸಿದ್ದಾರೆ.
ಇಂದು ಸಿದ್ದಗಂಗಾ ಮಠದಲ್ಲಿ ಸುಮಾರು 1 ಕೋಟಿ 60 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ ಎಂಬ ಅಂಕಿ ಅಂಶವನ್ನು ಗಮನಿಸಿದರೆ ಮಠಗಳ ಶೈಕ್ಷಣಿಕ ಸೇವೆಯ ಅಗಾಧತೆ ಅರ್ಥವಾಗುತ್ತದೆ. ಅಲ್ಲಿಂದ ಶಿಕ್ಷಣ ಪಡೆದವರು ಇಂದು ಉದ್ಯಮಿಗಳು, ರಾಜಕಾರಣಿಗಳು, ಅಧಿಕಾರಿಗಳು, ಕೃಷಿಕರು ಮತ್ತು ವಿವಿಧ ಕ್ಷೇತ್ರಗಳ ನೌಕರರಾಗಿ ಬೆಳೆದಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಸಮಾಜಕ್ಕೆ ಉಪಯುಕ್ತವಾದ ಸತ್ಪ್ರಜೆಗಳಾಗಿದ್ದಾರೆ.
ಸುತ್ತೂರು ಮಠ, ಸಿದ್ದಗಂಗಾ ಮಠ, ಸಿರಿಗೆರೆ ಮಠ, ಪಂಚಪೀಠಗಳು, ಕೊಪ್ಪಳದ ಗವಿಮಠ ಸೇರಿದಂತೆ ಅನೇಕ ಮಠಗಳು ಶಿಕ್ಷಣ, ಅನ್ನದಾಸೋಹ ಮತ್ತು ಜ್ಞಾನದಾಸೋಹದ ಮೂಲಕ ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯವಾಗಿದೆ.
ಒಂದು ಕಾಲದಲ್ಲಿ ಕುಟುಂಬದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ಅನೇಕ ಕುಟುಂಬಗಳು ವಾರಾನ್ನದ ನೆರವಿಗಾಗಿ ಮಠಗಳನ್ನು ಆಶ್ರಯಿಸುತ್ತಿದ್ದವು. ಮಠಗಳಲ್ಲಿ ಆಶ್ರಯ ಪಡೆದು ಶಿಕ್ಷಣ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಅನ್ನದಾಸೋಹ, ಅಕ್ಷರದಾಸೋಹ ಮತ್ತು ಜ್ಞಾನದಾಸೋಹದ ಮೂಲಕ ಮಠಗಳು ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿವೆ ಎಂದು ಸ್ಮರಿಸಿದರು.

ಸಮಾಜದಲ್ಲಿ ಸೌಹಾರ್ದತೆ ಕಾಪಾಡುವಲ್ಲಿ ಮಠಗಳ ಪಾತ್ರ ಅನನ್ಯ
ರಾಜ್ಯದಲ್ಲಿ ಮತ್ತು ದೇಶದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ವಾತಾವರಣ ಉಳಿಯುವಲ್ಲಿ ಮಠಾಧೀಶರು ಮತ್ತು ಧಾರ್ಮಿಕ ಮುಖಂಡರ ಪಾತ್ರ ಬಹಳ ದೊಡ್ಡದಾಗಿದೆ. ಕೇವಲ ಪೊಲೀಸ್ ವ್ಯವಸ್ಥೆ, ಕಾನೂನು ಮತ್ತು ಜಿಲ್ಲಾಡಳಿತದ ಮೂಲಕ ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ. ಜನರ ಮನಸ್ಸಿನಲ್ಲಿ ಪರಸ್ಪರ ಗೌರವ, ಸಹನೆ ಮತ್ತು ಮಾನವೀಯತೆಯ ಭಾವನೆ ಮೂಡಬೇಕು.
ಈ ಕೆಲಸವನ್ನು ಧಾರ್ಮಿಕ ಮುಖಂಡರು ಮತ್ತು ಮಠಾಧೀಶರು ನಿರಂತರವಾಗಿ ಮಾಡುತ್ತಿದ್ದಾರೆ. ಜನರಲ್ಲಿ ನೈತಿಕ ಪ್ರಜ್ಞೆ ಬೆಳೆಸುವ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುತ್ತಿದ್ದಾರೆ. ಮಠಮಂದಿರಗಳು ಇಲ್ಲದಿದ್ದರೆ ಸಮಾಜದ ನೈತಿಕ ಮತ್ತು ಮಾನವೀಯ ಬದುಕಿನ ಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ನಾವು ಯೋಚಿಸಬೇಕು. ಸಂಕಷ್ಟದ ಸಂದರ್ಭದಲ್ಲಿ ದೇವಸ್ಥಾನ ಮತ್ತು ಮಠಗಳಿಗೆ ಹೋದಾಗ ಜನರಿಗೆ ಸಿಗುವ ನೆಮ್ಮದಿ, ಮಾನಸಿಕ ಶಾಂತಿ ಮತ್ತು ಆತ್ಮಸ್ಥೈರ್ಯವೂ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಮಠಪರಂಪರೆಯ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದರು.

36 ವರ್ಷಗಳ ಬಳಿಕ ಶಿವಮೊಗ್ಗದಲ್ಲಿ ಪಂಚಪೀಠಗಳ ಐತಿಹಾಸಿಕ ಸಮಾಗಮ
ಇತ್ತೀಚೆಗೆ ಬಿಳಿಕಿ ಶ್ರೀಗಳ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ನಡೆದ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಉತ್ಸವವು ಸಮಾಜದ ಒಗ್ಗಟ್ಟಿನ ದೃಷ್ಟಿಯಿಂದ ಮಹತ್ವದ ಕಾರ್ಯಕ್ರಮವಾಗಿದೆ. ಸುಮಾರು 36 ವರ್ಷಗಳ ಬಳಿಕ ಪಂಚಪೀಠಾಧಿಪತಿಗಳನ್ನು ಒಟ್ಟುಗೂಡಿಸಿ, ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧಾರ್ಮಿಕ ಸಭೆಯ ಮೂಲಕ ಹಿಂದೆಂದೂ ಕಂಡಿರದ ರೀತಿಯಲ್ಲಿ ಸಮಾಜವನ್ನು ಸಂಘಟಿಸುವ ಪ್ರಯತ್ನ ನಡೆದಿದೆ.
ಬಿಳಿಕಿ ಶ್ರೀಗಳು, ತಾವರೆಕೆರೆ ಶ್ರೀಗಳು ಹಾಗೂ ಪಂಚಪೀಠಾಧಿಪತಿಗಳ ಮಾರ್ಗದರ್ಶನದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆದ ಸಿದ್ಧತೆಗಳು ಶಿವಮೊಗ್ಗದ ಇತಿಹಾಸದಲ್ಲಿ ಸ್ಮರಣೀಯವಾಗಿ ಉಳಿಯಲಿವೆ. ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಅನೇಕ ಸಮಾಜದ ಮುಖಂಡರು, ಕಾರ್ಯಕರ್ತರು ಮತ್ತು ಭಕ್ತರು ಶ್ರಮಿಸಿದ್ದಾರೆ. ನಾವೂ ಕೂಡ ನಮ್ಮ ಕೈಲಾದ ಸಹಕಾರ ನೀಡಿದ್ದೇವೆ ಎಂಬ ಸಂತೋಷವಿದೆ.
ಕಾರ್ಯಕ್ರಮದ ಸಿದ್ಧತೆ ಸಂದರ್ಭದಲ್ಲಿ ಹಲವು ಆರ್ಥಿಕ ಸಮಸ್ಯೆಗಳು ಎದುರಾದರೂ ಅವುಗಳಿಗೆ ಹೆದರದೆ ಎಲ್ಲರೂ ಒಟ್ಟಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ಸಮಾಜದ ಸಂಘಟನಾ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಒಗ್ಗಟ್ಟಿನ ಸಂದೇಶ ನೀಡುತ್ತವೆ. ಮುಂದಿನ ದಿನಗಳಲ್ಲಿಯೂ ಯಾವುದೇ ಮಠವಾಗಲಿ, ಯಾವುದೇ ಸ್ವಾಮೀಜಿಗಳಾಗಲಿ, ಸಮಾಜದ ಹಿತದ ವಿಚಾರ ಬಂದಾಗ ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಪತ್ರಕರ್ತ ಸತೀಶ್ ಗೌಡರ ಜಾತ್ಯತೀತ ಮನೋಭಾವಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳ ಮೆಚ್ಚುಗೆ
ಸಮಾಜದಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ವ್ಯಕ್ತಿಗಳನ್ನು ಗುರುತಿಸಿ ಒಲೈಕೆ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ರಾಜಕೀಯ ಕ್ಷೇತ್ರದಲ್ಲಿ ಮಾತ್ರವಲ್ಲ, ಮಾಧ್ಯಮ ಕ್ಷೇತ್ರದಲ್ಲಿಯೂ ಕೆಲವೊಮ್ಮೆ ಇಂತಹ ಮನೋಭಾವಗಳು ಕಾಣಿಸುತ್ತಿವೆ. ಇವನು ನಮ್ಮ ಜಾತಿಯವನು, ನಮ್ಮ ಧರ್ಮದವನು, ನಮ್ಮ ಶಾಸಕ, ನಮ್ಮ ಸ್ವಾಮೀಜಿ ಎಂಬ ಸೀಮಿತ ದೃಷ್ಟಿಕೋನದಿಂದ ವ್ಯಕ್ತಿಗಳನ್ನು ಅಳೆಯುವ ಪ್ರವೃತ್ತಿ ಸರಿಯಲ್ಲ.
ಇತ್ತೀಚೆಗೆ ಜಮಖಂಡಿಯಲ್ಲಿ ಸತೀಶ್ ಗೌಡರಿಗೆ ಸಾಧನ ಸಿರಿ ಪ್ರಶಸ್ತಿ ವಿತರಣೆ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಸತೀಶ್ ಗೌಡರ ಕುರಿತು ಮಾತನಾಡುವ ಸಂದರ್ಭದಲ್ಲಿ, ಅವರು ಎಲ್ಲ ಧರ್ಮ ಮತ್ತು ಸಮಾಜದ ಜನರನ್ನು ಒಟ್ಟಾಗಿ ಕರೆದೊಯ್ಯುವ ಜಾತ್ಯತೀತ ಮನೋಭಾವದ ಯುವ ನಾಯಕ ಎಂದು ಉಲ್ಲೇಖಿಸಿರುವುದು ನನಗೆ ಸಂತೋಷ ತಂದಿದೆ.
ಸಮಾಜದ ಎಲ್ಲ ವರ್ಗಗಳ ಜನರೊಂದಿಗೆ ಬೆರೆತು, ಜಾತಿ-ಧರ್ಮದ ಬೇಧವಿಲ್ಲದೆ ಕೆಲಸ ಮಾಡುವ ಮನೋಭಾವವೇ ನಿಜವಾದ ನಾಯಕತ್ವದ ಗುಣವಾಗಿದೆ. ಇಂತಹ ವಿಶಾಲ ಮನೋಭಾವವನ್ನು ಇಂದಿನ ಯುವಕರು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಬಿಳಿಕಿ ಮಠದ ಅಭಿವೃದ್ಧಿಗೆ ಯಡಿಯೂರಪ್ಪ, ರಾಘವೇಂದ್ರ ಕೊಡುಗೆ ಸ್ಮರಣೀಯ
ಬಿಳಿಕಿ ಮಠಕ್ಕೆ ಇಂದು ಉತ್ತಮ ರಸ್ತೆ, ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗಿರುವುದರ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ.
ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಅನೇಕ ಮಠಮಂದಿರಗಳ ಅಭಿವೃದ್ಧಿಗೆ ಅನುದಾನ ಒದಗಿಸುವ ಮೂಲಕ ಮಠಗಳ ಗೌರವ ಮತ್ತು ಅಭಿವೃದ್ಧಿಗೆ ಯಡಿಯೂರಪ್ಪನವರು ಶ್ರಮಿಸಿದ್ದಾರೆ. ಬಿಳಿಕಿ ಮಠದ ಅಭಿವೃದ್ಧಿಗೂ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಸಮಾಜದ ಮುಖಂಡ ಬಸವೇಶ್ವರ ಸೇರಿದಂತೆ ಅನೇಕರು ನೀಡಿರುವ ಆರ್ಥಿಕ ಸಹಕಾರವನ್ನು ಸ್ಮರಿಸಿದ ಅವರು, ಸಮಾಜದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಇಂತಹ ಸಂಸ್ಥೆಗಳು ಬೆಳೆಯಲು ಸಾಧ್ಯ ಎಂದು ಹೇಳಿದರು.

ಮಠದ ಪ್ರತಿಯೊಂದು ಇಟ್ಟಿಗೆಯಲ್ಲೂ ಸಮಾಜದ ಕೊಡುಗೆ ಇರಲಿ
ಮಠಮಂದಿರಗಳ ಅಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಕೇವಲ ಕೆಲವರ ಜವಾಬ್ದಾರಿಯಾಗಬಾರದು. ಸಮಾಜದ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತನು, ಮನ, ಧನದ ಸಹಕಾರ ನೀಡಬೇಕು.
ನಾಳೆ ನಮ್ಮ ಮಕ್ಕಳು, ಮೊಮ್ಮಕ್ಕಳನ್ನು ಕರೆದುಕೊಂಡು ಮಠಕ್ಕೆ ಬಂದಾಗ ಈ ಕಟ್ಟಡದ ನಿರ್ಮಾಣದಲ್ಲಿ ನಮ್ಮದೂ ಒಂದು ಪಾಲಿದೆ. ಇಲ್ಲಿನ ಪ್ರತಿಯೊಂದು ಇಟ್ಟಿಗೆಯಲ್ಲಿಯೂ ನಮ್ಮ ಶ್ರಮ ಮತ್ತು ಸಹಕಾರವಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅವಕಾಶ ಸಿಗಬೇಕು. ಅದಕ್ಕಾಗಿ ಇಂದೇ ಸಮಾಜದ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು.
ಭಗವಂತ ನಮಗೆ ವರವನ್ನೂ ನೀಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ; ಅವಕಾಶಗಳನ್ನು ಮಾತ್ರ ನೀಡುತ್ತಾನೆ. ಆ ಅವಕಾಶಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ನಮ್ಮ ಸಾಮರ್ಥ್ಯ ಮತ್ತು ಅವಕಾಶಗಳನ್ನು ಸಮಾಜದ ಒಳಿತಿಗಾಗಿ ಅರ್ಪಿಸಿದಾಗ ಸಮಾಜವೂ ನಮಗೆ ಗೌರವ, ಸ್ಥಾನಮಾನ ಮತ್ತು ಪ್ರೀತಿಯ ರೂಪದಲ್ಲಿ ಪ್ರತಿಫಲ ನೀಡುತ್ತದೆ. ಆದ್ದರಿಂದ ಸಮಾಜದ ಅಭಿವೃದ್ಧಿಗೆ ನಾವೆಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.

ಸಮಾಜದ ಕೆಲಸದಲ್ಲಿ ಶಾಸಕರಾದ ಸಂಗಣ್ಣ ಅವರೊಂದಿಗೆ ಸದಾ ಸಹಕಾರ
ಕಳೆದ 20 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿದ್ದು, ಸಂಗಣ್ಣ ಅವರೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವ ವ್ಯಕ್ತಿಗಳಿಗೆ ಬೆಂಬಲ ನೀಡುವುದು ನಮ್ಮ ಕರ್ತವ್ಯ. ವೈಯಕ್ತಿಕ ಬದುಕು ಮತ್ತು ಸಂಘಟನಾ ಕ್ಷೇತ್ರದಲ್ಲಿ ಅವರು ನನಗೆ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿದ್ದಾರೆ. ನಾನೂ ಅವರ ಕುಟುಂಬದೊಂದಿಗೆ ಸದಾ ಒಡನಾಟ ಮತ್ತು ಸಹಕಾರ ಹೊಂದಿದ್ದೇನೆ.
ಮುಂದಿನ ದಿನಗಳಲ್ಲಿಯೂ ಸಮಾಜ, ಸಮುದಾಯ ಮತ್ತು ಮಠಮಂದಿರಗಳ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಸಮಾಜದ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ದೃಷ್ಟಿಯಿಂದ ಯುವ ಮುಖಂಡರು ಮುಂದೆ ಬರಬೇಕು. ಪೂಜ್ಯ ಬಿಳಿಕಿ ಶ್ರೀಗಳು ನೀಡುವ ಜವಾಬ್ದಾರಿಗಳನ್ನು ಸಂತೋಷದಿಂದ ಸ್ವೀಕರಿಸಿ ಸಂಸ್ಥೆಗಳ ಬೆಳವಣಿಗೆಗೆ ಶ್ರಮಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು.

ಲಿಂಗೈಕ್ಯ ಶ್ರೀ ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳವರ 59ನೇ ವರ್ಷದ ಪುಣ್ಯಸ್ಮರಣೋತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರುವುದು ಸಂತೋಷದ ಸಂಗತಿ. ಪೂಜ್ಯ ಗುರುಗಳ ಆಹ್ವಾನದ ಮೇರೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದು, ವೇದಿಕೆಯಲ್ಲಿರುವ ಎಲ್ಲ ಪೂಜ್ಯರಿಗೂ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ರಟ್ಟಿಹಳ್ಳಿಯ ಕಬ್ಬಿಣಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು, ದಿಂಡದಹಳ್ಳಿ ಕ್ಷೇತ್ರದ ಹಿರೇಮಠದ ಶ್ರೀ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ತಾವರೆಕೆರೆಯ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ದೊಡ್ಡಮೇಟಿಕುರ್ಕೆಯ ವಿರಕ್ತಮಠದ ಶ್ರೀ ಶಶಿಶೇಖರ ಸಿದ್ಧಬಸವ ಸ್ವಾಮಿಗಳು, ಮಡಿವಾಳೇಶ್ವರ ಮಠದ ಶ್ರೀ ಶಿವಪಂಚಾಕ್ಷರಿ ಸ್ವಾಮಿಗಳು ಹಾಗೂ ಬಿಳಿಕಿ ಹಿರೇಮಠದ ಶ್ರೀ ಗುರುಪ್ರಸಾದ್ ದೇವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಭದ್ರಾವತಿ ಶಾಸಕರ ಪುತ್ರ ಬಸವೇಶ್, ಭದ್ರಾವತಿ ವೀರಶೈವ ಸೇವಾ ಸಮಿತಿಯ ಅಧ್ಯಕ್ಷ ಆರ್. ಮಹೇಶ್ ಕುಮಾರ್, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಶಿವಮೊಗ್ಗ ಜಂಗಮ ಸಮಾಜದ ಅಧ್ಯಕ್ಷ ಪಿ.ಇ. ಶಿವಕುಮಾರ್, ಸಾಗರದ ನಿವೃತ್ತ ಪ್ರಾಂಶುಪಾಲ ವೇ. ಪಂಚಾಕ್ಷರಯ್ಯ ಹಿರೇಮಠ, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಸದಸ್ಯರಾದ ರೇಣುಕಾರಾಧ್ಯ, ವೀರಶೈವ ಲಿಂಗಾಯತ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಎಲಿ ಸೇರಿದಂತೆ ಶ್ರೀ ಮಠದ ಭಕ್ತರು, ಸಮಾಜದ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.







