ಬೆಂಗಳೂರು, ನ.6: ಒಬ್ಬ ತಾಯಿಯ ಕಣ್ಣಲ್ಲಿ ಮಗ ವೈದ್ಯನಾಗುವ ಕನಸು ನನಸಾದ ಸಂತಸ. ಮತ್ತೊಬ್ಬ ತಾಯಿಯ ಮುಖದಲ್ಲಿ ಮಗಳು ವಿದೇಶದಲ್ಲಿ ನೃತ್ಯ ಪ್ರದರ್ಶನ ನೀಡಿದ ಹೆಮ್ಮೆ. ಇನ್ನೊಬ್ಬ ಮಹಿಳೆಯ ಬದುಕಿನಲ್ಲಿ ಐದು ಕುರಿಗಳಿಂದ ಆರಂಭವಾದ ಉದ್ಯಮ ಇಂದು 300 ಕುರಿಗಳ ಸಾಕಾಣಿಕೆಯಾಗಿ ಬೆಳೆದ ಸಾಧನೆಯ ಸಂಭ್ರಮ. ಮಗುವಿನ ಭವಿಷ್ಯಕ್ಕಾಗಿ ಕೂಡಿಟ್ಟ ಹಣಕ್ಕೆ ಗೃಹಲಕ್ಷ್ಮಿಯ 2 ಸಾವಿರ ರೂ.ಗಳೂ ಸೇರಿ ಬದುಕಿಗೆ ಹೊಸ ದಾರಿ ತೋರಿದ ಆತ್ಮವಿಶ್ವಾಸ… ಹೀಗೆ ಒಂದೊಂದು ಕಥೆಯೂ ಒಂದೊಂದು ಬದುಕಿನ ಹೋರಾಟದ ಚಿತ್ರಣವಾಗಿತ್ತು. ಕೆಲವರ ಮಾತಿನಲ್ಲಿ ಕೃತಜ್ಞತೆಯ ಕಣ್ಣೀರು ಹರಿದರೆ, ಇನ್ನು ಕೆಲವರ ಮಾತಿನಲ್ಲಿ ಸ್ವಾವಲಂಬನೆಯ ಹೆಮ್ಮೆಯ ನಗು ಅರಳಿತ್ತು. ಅಲ್ಲಿ ಕೇಳಿಬಂದದ್ದು ಕೇವಲ ಸರ್ಕಾರದ ಯೋಜನೆಯ ಗುಣಗಾನವಲ್ಲ, ಆರ್ಥಿಕ ಸಂಕಷ್ಟಗಳ ನಡುವೆಯೂ ಮಹಿಳೆಯರು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುತ್ತಿರುವ ಯಶೋಗಾಥೆಗಳ ಸರಮಾಲೆ!

ಇಂತಹ ಹೃದಯಸ್ಪರ್ಶಿ, ಭಾವುಕ ಹಾಗೂ ಸಂತಸದ ಕ್ಷಣಗಳಿಗೆ ಸಾಕ್ಷಿಯಾದದ್ದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರೊಂದಿಗೆ ನಡೆಸಿದ ಸಂವಾದ, ಸರ್ಕಾರದ ಯೋಜನೆಯಿಂದ ಮಹಿಳೆಯರ ಬದುಕಿನಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಅನಾವರಣಗೊಳಿಸಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳೆಯರು ತಮ್ಮ ಬದುಕಿನ ಅನುಭವಗಳನ್ನು ಹಂಚಿಕೊಂಡರು. ಕೆಲವರು ಮಕ್ಕಳ ಶಿಕ್ಷಣಕ್ಕೆ ಹಣ ಬಳಸಿಕೊಂಡಿದ್ದರೆ, ಇನ್ನು ಕೆಲವರು ಸಣ್ಣ ಉದ್ಯಮ ಆರಂಭಿಸಿ ಕುಟುಂಬಕ್ಕೆ ಆರ್ಥಿಕ ಆಸರೆಯಾಗಿದ್ದರು. ಮತ್ತೊಂದಷ್ಟು ಮಹಿಳೆಯರು ಹಿರಿಯರ ಔಷಧೋಪಚಾರ, ಮನೆ ನಿರ್ವಹಣೆ, ಸಾಲದ ಹೊರೆ ತಗ್ಗಿಸುವುದು ಸೇರಿದಂತೆ ಕುಟುಂಬದ ಅಗತ್ಯಗಳಿಗೆ ಗೃಹಲಕ್ಷ್ಮಿ ಹಣ ಬಳಕೆ ಮಾಡಿಕೊಂಡಿರುವುದನ್ನು ವಿವರಿಸಿದರು.
ಸಂವಾದದ ಆರಂಭದಿಂದ ಅಂತ್ಯದವರೆಗೂ ಮಹಿಳೆಯರ ಉತ್ಸಾಹ, ಆತ್ಮವಿಶ್ವಾಸ ಮತ್ತು ಭಾವನೆಗಳು ಎದ್ದು ಕಾಣುತ್ತಿದ್ದವು. ಮುಖ್ಯಮಂತ್ರಿಗಳು ಮಹಿಳೆಯರ ಮಾತುಗಳನ್ನು ಆಲಿಸುವುದರ ಜತೆಗೆ ಅವರ ಕುಟುಂಬದ ಪರಿಸ್ಥಿತಿ, ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ, ಉದ್ಯಮ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ವಿಚಾರಿಸಿದರು. ಈ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದ ಅವರು, ಯೋಜನೆಯ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ಮರುಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಮಗನ ಎಂಬಿಬಿಎಸ್ ಶುಲ್ಕ ಕಟ್ಟಿದ ತಾಯಿ!
ಸಂವಾದದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಹಿಳೆಯೊಬ್ಬರು ಹಂಚಿಕೊಂಡ ಅನುಭವ ಸಭಾಂಗಣದಲ್ಲಿದ್ದವರ ಮನಸ್ಸನ್ನು ತಟ್ಟಿತು.
“ನನ್ನ ಮಗ ಕೊಪ್ಪಳದಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ. ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಸುಮಾರು 59 ಸಾವಿರ ರೂ.ಗಳ ಕಾಲೇಜು ಶುಲ್ಕ ಪಾವತಿಸಿದ್ದೇನೆ. ಶಕ್ತಿ ಯೋಜನೆಯಿಂದ ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸಲು ಅವಕಾಶವಿರುವುದರಿಂದ ಆಗಾಗ್ಗೆ ಮಗನನ್ನು ನೋಡಿಕೊಂಡು ಬರಲು ಅನುಕೂಲವಾಗಿದೆ” ಎಂದು ಹೇಳಿದರು.
ಇದನ್ನು ಕೇಳಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ನಿಮ್ಮ ಮಗ ಎಷ್ಟು ಅಂಕ ಪಡೆದಿದ್ದಾನೆ ತಾಯಿ?” ಎಂದು ಆತ್ಮೀಯವಾಗಿ ವಿಚಾರಿಸಿದರು. ಅದಕ್ಕೆ ಉತ್ತರಿಸಿದ ಮಹಿಳೆ, “ನನ್ನ ಮಗ ಪಿಯುಸಿಯಲ್ಲಿ ಶೇ.98 ಅಂಕ ಪಡೆದಿದ್ದಾನೆ” ಎಂದು ಹೆಮ್ಮೆಯಿಂದ ಹೇಳಿಕೊಂಡರು. ಮಗನ ಸಾಧನೆಯನ್ನು ನೆನೆದು ತಾಯಿಯ ಮುಖದಲ್ಲಿ ಮೂಡಿದ ಸಂತಸಕ್ಕೆ ಸಭಾಂಗಣದಲ್ಲಿದ್ದ ಮಹಿಳೆಯರು ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಿದರು.
ಒಂದು ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಸಣ್ಣ ಮೊತ್ತವೂ ಎಷ್ಟು ದೊಡ್ಡ ಬದಲಾವಣೆ ತರಬಲ್ಲದು ಎಂಬುದಕ್ಕೆ ಈ ತಾಯಿಯ ಅನುಭವವೇ ಸಾಕ್ಷಿಯಾಗಿತ್ತು.

ಮಗಳ ನೃತ್ಯದ ಕನಸಿಗೆ ಮಲೇಷಿಯಾ ಪ್ರಯಾಣದ ನೆರವು
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮಹಿಳೆಯೊಬ್ಬರು ತಮ್ಮ ಮಗಳ ಸಾಧನೆಯ ಕಥೆಯನ್ನು ಹಂಚಿಕೊಂಡರು.
“ನನ್ನ ಮಗಳ ಹೆಸರು ಆಶಾ. ಆಕೆ ಪಿಯುಸಿ ಓದುತ್ತಿದ್ದಾಳೆ. ಓದಿನ ಜತೆಗೆ ನೃತ್ಯದಲ್ಲಿಯೂ ಹೆಚ್ಚಿನ ಆಸಕ್ತಿ ಹೊಂದಿದ್ದಾಳೆ. ಮಗಳ ಪ್ರತಿಭೆಗೆ ವೇದಿಕೆ ಕಲ್ಪಿಸಬೇಕೆಂಬ ಆಸೆಯಿಂದ ಆಕೆಯನ್ನು ಮಲೇಷಿಯಾಗೆ ನೃತ್ಯ ಪ್ರದರ್ಶನ ನೀಡಲು ಕಳುಹಿಸಿದ್ದೇವೆ. ಇದಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣ ಹಾಗೂ ನಮ್ಮ ಉಳಿತಾಯದ ಮೊತ್ತ ನೆರವಾಯಿತು. ಚನ್ನರಾಯಪಟ್ಟಣದಿಂದ ಮಲೇಷಿಯಾದವರೆಗೆ ಮಗಳ ಪ್ರಯಾಣದ ಕನಸು ನನಸಾಗಲು ಕಾಂಗ್ರೆಸ್ ಸರ್ಕಾರದ ಯೋಜನೆ ಸಹಕಾರಿಯಾಯಿತು” ಎಂದು ತಿಳಿಸಿದರು.
ಮಗಳ ಪ್ರತಿಭೆಗೆ ಪ್ರೋತ್ಸಾಹ ನೀಡಲು ತಾಯಿಯೊಬ್ಬರು ಕೈಗೊಂಡ ಪ್ರಯತ್ನದ ಹಿಂದೆ ಗೃಹಲಕ್ಷ್ಮಿ ಹಣವೂ ನೆರವಾಗಿರುವುದನ್ನು ಕೇಳಿ ಸಭಾಂಗಣದಲ್ಲಿದ್ದವರು ಚಪ್ಪಾಳೆ ತಟ್ಟಿದರು.

ಚಕ್ಕುಲಿ, ಕೋಡುಬಳೆ ಉದ್ಯಮ ವಿದೇಶಗಳಿಗೂ ವಿಸ್ತರಣೆ!
ತುಮಕೂರು ಜಿಲ್ಲೆಯ ತ್ರಿವೇಣಿ ಬಸವರಾಜ್ ಅವರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಂಡವಾಳವಾಗಿಸಿಕೊಂಡು ತಮ್ಮ ಉದ್ಯಮವನ್ನು ವಿಸ್ತರಿಸಿಕೊಂಡಿರುವ ಕಥೆಯನ್ನು ವಿವರಿಸಿದರು.
ಸಿರಿಧಾನ್ಯ, ರಾಗಿ ಉತ್ಪನ್ನಗಳು ಸೇರಿದಂತೆ ಚಕ್ಕುಲಿ, ಕೋಡುಬಳೆ ಮತ್ತಿತರ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಅವರು, ಗೃಹಲಕ್ಷ್ಮಿ ಹಣದೊಂದಿಗೆ ತಮ್ಮ ಉಳಿತಾಯದ ಮೊತ್ತವನ್ನು ಸೇರಿಸಿ ದ್ವಿಚಕ್ರ ವಾಹನ ಖರೀದಿಸಿದ್ದಾರೆ. ಇದರಿಂದ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಅನುಕೂಲವಾಗಿದ್ದು, ವ್ಯಾಪಾರವೂ ವಿಸ್ತರಣೆಯಾಗಿದೆ. ಇದೀಗ ತಾವು ತಯಾರಿಸುವ ಉತ್ಪನ್ನಗಳನ್ನು ಹೊರರಾಜ್ಯಗಳ ಜತೆಗೆ ವಿದೇಶಗಳಿಗೂ ಕಳುಹಿಸುತ್ತಿರುವುದಾಗಿ ಹೆಮ್ಮೆಯಿಂದ ಹೇಳಿದರು.
“ಚಕ್ಕುಲಿ ತಂದಿದ್ದೀರಾ?” ಎಂದು ಮುಖ್ಯಮಂತ್ರಿ ಕೇಳಿದಾಗ, “ನಿಮಗಾಗಿಯೇ ತಂದಿದ್ದೇನೆ” ಎಂದು ಅವರು ಉತ್ತರಿಸಿದರು.
“ಈ ಯೋಜನೆಯಿಂದಾಗಿ ಇಂದು ನಿಮ್ಮನ್ನು ಭೇಟಿಯಾಗುವ ಅವಕಾಶ ನಮಗೆ ಸಿಕ್ಕಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ತರೀಕೆರೆ ಭಾಗದ ಲಂಬಾಣಿ ಸಮಾಜದ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣದಿಂದ ಲಂಬಾಣಿ ಕಸೂತಿ ಉದ್ಯಮವನ್ನು ದೊಡ್ಡಮಟ್ಟದಲ್ಲಿ ಆರಂಭಿಸಲು ಸಾಧ್ಯವಾಯಿತು ಎಂದು ತಿಳಿಸಿದರು. ಶಕ್ತಿ ಯೋಜನೆಯಿಂದ ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬದ ಓಡಾಟಕ್ಕೆ ಅನುಕೂಲವಾಗಿದೆ ಎಂದು ಹೇಳಿ, ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಶ್ಲಾಘಿಸಿದರು.

ಮೊಮ್ಮಗಳಿಗೆ ತೊಟ್ಟಿಲು ಖರೀದಿಸಿದ ಮುಖ್ಯಮಂತ್ರಿ!
ಕಲಬುರಗಿ ಜಿಲ್ಲೆಯ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಂಡವಾಳವನ್ನಾಗಿ ಮಾಡಿಕೊಂಡು ಕರಕುಶಲ ವಸ್ತುಗಳ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ತಾವು ತಯಾರಿಸಿದ ತೊಟ್ಟಿಲು, ದೀಪ ಸೇರಿದಂತೆ ವಿವಿಧ ವಸ್ತುಗಳನ್ನು ಮುಖ್ಯಮಂತ್ರಿಗಳಿಗೆ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡಿ, ಅವರ ಮೊಮ್ಮಗಳಿಗೆ ಶುಭವಾಗಲಿ ಎಂದು ಹಾರೈಸಿದರು.
ಆಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ತೊಟ್ಟಿಲು ನನಗೆ ಕೊಡಿ. ನನ್ನ ಮೊಮ್ಮಗಳಿಗೆ ಕೊಡುತ್ತೇನೆ. ಇದಕ್ಕೆ ಎಷ್ಟು ರೂಪಾಯಿ ಆಗುತ್ತದೆ?” ಎಂದು ಕೇಳಿ, 500 ರೂ. ನೀಡಿ ಆಟಿಕೆ ತೊಟ್ಟಿಲನ್ನು ಖರೀದಿಸಿದರು. ಮಹಿಳೆಯ ಉದ್ಯಮಕ್ಕೆ ಪ್ರೋತ್ಸಾಹ ನೀಡಿದ ಮುಖ್ಯಮಂತ್ರಿಗಳ ಈ ನಡೆ ಸಭಾಂಗಣದಲ್ಲಿ ಸಂತಸದ ವಾತಾವರಣ ಮೂಡಿಸಿತು.
ಕಲಬುರಗಿ ಜಿಲ್ಲೆಯ ಅಫಜಲಪುರದ ಶ್ರೀದೇವಿ ಪಾಟೀಲ ಅವರು ಗೃಹಲಕ್ಷ್ಮಿ ಯೋಜನೆಯಿಂದ ಬಡ ಮಹಿಳೆಯರಿಗೆ ಆರ್ಥಿಕ ನೆರವು ದೊರೆತಿದೆ ಎಂದು ತಿಳಿಸಿದರು. ತಾವು ನಡೆಸುತ್ತಿರುವ ಸಮಾಜಸೇವಾ ಕಾರ್ಯಗಳ ಕುರಿತು ವಿವರಿಸಿದ ಅವರು, ಅಂಗನವಾಡಿ ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಿಸಿರುವುದಾಗಿ ಹೇಳಿದರು. “ತಾಯಿಯಾಗಿ ನಿಮ್ಮ ಸರ್ಕಾರಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ” ಎಂದು ಭರವಸೆ ನೀಡಿದರು.

ಪಕ್ಷಾತೀತವಾಗಿ ಮಹಿಳೆಯರಿಗೆ ನೆರವಾದ ಯೋಜನೆ
ಉಡುಪಿ ಜಿಲ್ಲೆಯ ಕಾಂಗ್ರೆಸ್ ಮುಖಂಡೆಯೊಬ್ಬರು, ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಆದರೆ ಗೃಹಲಕ್ಷ್ಮಿ ಫಲಾನುಭವಿಯಾಗಿ ಇಂದು ನೇರವಾಗಿ ಭೇಟಿಯಾಗುವ ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದು ಹೇಳಿದರು. ಸಮಾಜಸೇವಾ ಚಟುವಟಿಕೆಗಳಿಗೆ ತೆರಳಲು ಶಕ್ತಿ ಯೋಜನೆ ನೆರವಾಗುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ, “ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ರಾಜಕೀಯ ಪ್ರಾಬಲ್ಯ ಇಲ್ಲ. ಆದರೂ ಗೃಹಲಕ್ಷ್ಮಿ ಯೋಜನೆಯನ್ನು ಪಕ್ಷಾತೀತವಾಗಿ ಜಾರಿಗೊಳಿಸಿದ್ದೇವೆ. ಅಲ್ಲಿನ ಮಹಿಳೆಯರು ಈ ಯೋಜನೆಯನ್ನು ಹೇಗೆ ಸ್ವೀಕರಿಸಿದ್ದಾರೆ?” ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮಹಿಳೆ, ಸ್ಥಳೀಯ ಮಹಿಳೆಯರಲ್ಲಿ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಬಗ್ಗೆ ಉತ್ತಮ ಅಭಿಪ್ರಾಯವಿದೆ ಎಂದು ತಿಳಿಸಿದರು.
ಬಸ್ ಸೌಲಭ್ಯಕ್ಕಾಗಿ ಮಹಿಳೆಯ ಮನವಿ
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದ ಕೂಲಿ ಕಾರ್ಮಿಕ ಮಹಿಳೆಯೊಬ್ಬರು, ಗೃಹಲಕ್ಷ್ಮಿ ಹಣದಿಂದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು. ಆದರೆ ತಮ್ಮ ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ಪ್ರತಿದಿನ ಸುಮಾರು 5 ಕಿ.ಮೀ. ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.
ವಿಜಯಪುರ ಜಿಲ್ಲೆಯ ಚಡಚಣದ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣದಲ್ಲಿ ಜರ್ಸಿ ಹಸು ಖರೀದಿಸಿ ಹೈನುಗಾರಿಕೆ ಆರಂಭಿಸಿರುವುದಾಗಿ ತಿಳಿಸಿದರು. ಜತೆಗೆ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಹಾಗೂ ಶಾಲಾ ಬ್ಯಾಗ್ಗಳನ್ನು ವಿತರಿಸಿರುವುದಾಗಿ ವಿವರಿಸಿದರು.
ಗದಗ ಜಿಲ್ಲೆಯ ಕಪ್ಪತ್ತಗಿರಿಯ ಲಂಬಾಣಿ ಮಹಿಳೆಯೊಬ್ಬರು, ತಮ್ಮ ಊರಿನ ಮಹಿಳೆಯರು ಗೃಹಲಕ್ಷ್ಮಿ ಹಣಕ್ಕಾಗಿ ತವರುಮನೆಯಿಂದ ಬರುವ ಉಡುಗೊರೆಯನ್ನು ಕಾಯುವಂತೆ ಕಾಯುತ್ತಾರೆ ಎಂದು ಹೇಳಿದಾಗ ಸಭಾಂಗಣದಲ್ಲಿದ್ದ ಮಹಿಳೆಯರು ನಗುತ್ತಾ ಸಮ್ಮತಿ ಸೂಚಿಸಿದರು.
ರೊಟ್ಟಿ ಯಂತ್ರ ಖರೀದಿಸಿ ಬದುಕು ಕಟ್ಟಿಕೊಂಡ ವಿಧವೆ
ಚಿತ್ರದುರ್ಗ ಜಿಲ್ಲೆಯ ವಿಧವೆಯೊಬ್ಬರು ತಮ್ಮ ಬದುಕಿನ ಹೋರಾಟದ ಕಥೆಯನ್ನು ಹಂಚಿಕೊಂಡರು. ಕುಟುಂಬದ ಜವಾಬ್ದಾರಿಯನ್ನು ಒಬ್ಬರೇ ನಿಭಾಯಿಸುತ್ತಾ ರೊಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಅವರು, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಸಿ ರೊಟ್ಟಿ ತಯಾರಿಸುವ ಯಂತ್ರ ಖರೀದಿಸಿದ್ದಾರೆ. ಇದೀಗ ಇಬ್ಬರು ಸಹಾಯಕಿಯರ ನೆರವಿನಿಂದ ಉದ್ಯಮ ನಡೆಸುತ್ತಿದ್ದು, ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಬಳ್ಳಾರಿಯ ಆಸ್ಪತ್ರೆಯೊಂದರಲ್ಲಿ ಕೆಳಹಂತದ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಮಹೇಶ್ವರಿ ಅವರು, ಗೃಹಲಕ್ಷ್ಮಿ ಹಣದಿಂದ ವಾಷಿಂಗ್ ಮಷಿನ್, ಟಿವಿ ಸೇರಿದಂತೆ ಮನೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಸಾಧ್ಯವಾಗಿದೆ. ಇದರಿಂದ ಮನೆಗೆಲಸದ ಹೊರೆ ಕಡಿಮೆಯಾಗಿದೆ ಎಂದು ಹೇಳಿದರು.
ರಾಯಚೂರು ಜಿಲ್ಲೆಯ ಮಹಿಳೆಯೊಬ್ಬರು ಹೊಲಿಗೆ ಯಂತ್ರ ಖರೀದಿಸಿ ಸ್ವಂತ ಉದ್ಯಮ ಆರಂಭಿಸಿದ್ದಲ್ಲದೆ, ಮತ್ತೂ ಮೂವರಿಗೆ ಉದ್ಯೋಗ ನೀಡಿದ್ದಾರೆ. ದಿನಕ್ಕೆ ಸುಮಾರು 1,000ರಿಂದ 2,000 ರೂ.ಗಳವರೆಗೆ ಆದಾಯ ಗಳಿಸುತ್ತಿದ್ದು, ಇದರಿಂದ ಕುಟುಂಬದಲ್ಲಿ ಗೌರವ ಮತ್ತು ಆತ್ಮವಿಶ್ವಾಸ ಹೆಚ್ಚಾಗಿದೆ. ಪತಿ ಹಾಗೂ ಅತ್ತೆ-ಮಾವಂದಿರ ಪ್ರೀತಿಯೂ ಹೆಚ್ಚಾಗಿದೆ ಎಂದು ಸಂತಸ ಹಂಚಿಕೊಂಡರು.
ವಿಜಯಪುರ ಜಿಲ್ಲೆಯ ಮತ್ತೊಬ್ಬ ಮಹಿಳೆ ತಮ್ಮ ಮಗಳ ಕ್ರೀಡಾ ತರಬೇತಿಯ ಶುಲ್ಕ ಪಾವತಿಸಲು ಗೃಹಲಕ್ಷ್ಮಿ ಹಣ ನೆರವಾಗಿದೆ ಎಂದು ತಿಳಿಸಿದರು. ಇದೀಗ ಮಗಳು ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯ ಕೂಲಿ ಕಾರ್ಮಿಕ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣದ ನೆರವಿನಿಂದ ಚಿಕನ್ ವ್ಯಾಪಾರ ಆರಂಭಿಸಿ ಆದಾಯ ಗಳಿಸುತ್ತಿರುವ ತಮ್ಮ ಅನುಭವವನ್ನು ಹಂಚಿಕೊಂಡರು.
ಐದು ಕುರಿಗಳಿಂದ 300 ಕುರಿಗಳವರೆಗೆ ಬೆಳೆದ ಉದ್ಯಮ!
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗಂಡಬೊಮ್ಮನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮಹಿಳೆಯೊಬ್ಬರು ಹೇಳಿದ ಯಶೋಗಾಥೆ ಎಲ್ಲರ ಗಮನ ಸೆಳೆಯಿತು.
ತಮ್ಮ ಸ್ವಸಹಾಯ ಗುಂಪಿನ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಳಸಿಕೊಂಡು ಕುರಿ ಸಾಕಾಣಿಕೆ ಆರಂಭಿಸಿರುವುದಾಗಿ ಅವರು ತಿಳಿಸಿದರು. ಆರಂಭದಲ್ಲಿ ಕೇವಲ ಐದು ಕುರಿಗಳೊಂದಿಗೆ ಶುರುವಾದ ಉದ್ಯಮ ಇಂದು ಬರೋಬ್ಬರಿ 300 ಕುರಿಗಳ ಸಾಕಾಣಿಕೆಯಾಗಿ ಬೆಳೆದಿದೆ. ಈ ಉದ್ಯಮದ ಮೂಲಕ ಐವರು ಪುರುಷರಿಗೆ ಕುರಿ ಮೇಯಿಸುವ ಕೆಲಸ ನೀಡಿ ಉದ್ಯೋಗ ಕಲ್ಪಿಸಿರುವುದಾಗಿಯೂ ಹೇಳಿದರು.
ಒಂದು ಸಣ್ಣ ಆರ್ಥಿಕ ನೆರವು ಮಹಿಳೆಯರ ಕೈಯಲ್ಲಿ ಉದ್ಯಮವಾಗಿ ಬೆಳೆದು, ಇತರರಿಗೂ ಉದ್ಯೋಗ ಕಲ್ಪಿಸಿರುವುದನ್ನು ಕೇಳಿದ ಮುಖ್ಯಮಂತ್ರಿ ಸೇರಿದಂತೆ ಸಭಾಂಗಣದಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟಿದರು.
ಇದೇ ರೀತಿ ಮತ್ತೊಬ್ಬ ಮಹಿಳೆ ಗೃಹಲಕ್ಷ್ಮಿ ಹಣದಲ್ಲಿ ಹೊಲಿಗೆ ಯಂತ್ರ ಖರೀದಿಸಿ ಸ್ವಂತ ಉದ್ಯಮ ಆರಂಭಿಸಿರುವುದಾಗಿ ಹೇಳಿದರು. ಮತ್ತೊಬ್ಬರು ಬಟ್ಟೆ ವ್ಯಾಪಾರಕ್ಕೆ ಬಂಡವಾಳವಾಗಿ ಬಳಸಿಕೊಂಡಿರುವುದಾಗಿ ತಿಳಿಸಿದರು. ಕೆಲವರು ಗ್ಯಾಸ್ ಸಂಪರ್ಕ ಹಾಗೂ ಮನೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಿ ಕುಟುಂಬದ ಜೀವನಮಟ್ಟ ಸುಧಾರಿಸಿಕೊಂಡಿರುವುದಾಗಿ ವಿವರಿಸಿದರು.
ಒಟ್ಟಿನಲ್ಲಿ ಮಕ್ಕಳ ಶಿಕ್ಷಣ, ಕ್ರೀಡಾ ತರಬೇತಿ, ಮಹಿಳೆಯರ ಉದ್ಯಮ, ಹೈನುಗಾರಿಕೆ, ಕುರಿ ಸಾಕಾಣಿಕೆ, ಹೊಲಿಗೆ, ಆಹಾರ ಉತ್ಪನ್ನಗಳ ತಯಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬಳಕೆಯಾಗಿರುವುದನ್ನು ಮಹಿಳೆಯರು ವಿವರಿಸಿದರು.
ಸಂವಾದದ ಕೊನೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಫೋಟೋ ತೆಗೆಸಿಕೊಳ್ಳಲು ಮಹಿಳೆಯರು ಉತ್ಸಾಹದಿಂದ ಮುಗಿಬಿದ್ದರು. ತಮ್ಮ ಬದುಕಿನ ಅನುಭವಗಳನ್ನು ನೇರವಾಗಿ ಮುಖ್ಯಮಂತ್ರಿಗಳ ಮುಂದೆ ಹೇಳಿಕೊಂಡ ತೃಪ್ತಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಜಾನಪದ ಗೀತೆಯ ಸಾಲುಗಳಿಂದ ಹುಟ್ಟಿದ ಗೃಹಲಕ್ಷ್ಮಿ ಯೋಜನೆ!
ಗೃಹಲಕ್ಷ್ಮಿ ಯೋಜನೆಯ ಹಿಂದಿನ ಪ್ರೇರಣೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದೇ ಸಂದರ್ಭದಲ್ಲಿ ಬಿಚ್ಚಿಟ್ಟರು.
“ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದವ್ವ, ನಾಯಿಗಿಂತ ಕಡೆಯಾಗಿ ಹೋಯಿತೇ ನನ್ನ ಬಾಳು ಕೇಳವ್ವ…” ಎಂಬ ಜಾನಪದ ಗೀತೆಯ ಸಾಲುಗಳು ಗೃಹಲಕ್ಷ್ಮಿ ಯೋಜನೆಯ ಪರಿಕಲ್ಪನೆ ಮೂಡಲು ಕಾರಣವಾದವು ಎಂದು ತಿಳಿಸಿದರು.
“ಒಂದು ರಾತ್ರಿ ನನ್ನ ಸಂಬಂಧಿಯೊಬ್ಬರು ಈ ಜಾನಪದ ಹಾಡನ್ನು ಹಾಡುತ್ತಿದ್ದರು. ಆ ಹಾಡಿನ ಸಾಲುಗಳು ನನ್ನ ಮನಸ್ಸನ್ನು ತಟ್ಟಿದವು. ತವರುಮನೆಯಿಂದ ದೂರವಾಗಿ ಗಂಡನ ಮನೆಗೆ ಬಂದ ಹೆಣ್ಣುಮಕ್ಕಳು ಸಂಕಷ್ಟದಲ್ಲಿದ್ದಾಗ ಅವರಿಗೆ ಆಸರೆಯಾಗುವವರು ಯಾರು ಎಂಬ ಆಲೋಚನೆ ಮೂಡಿತು. ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಬೇಕು ಎಂಬ ಉದ್ದೇಶದಿಂದ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾಯಿತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆಗಳನ್ನು ಜಾರಿಗೊಳಿಸಿದೆ. ಇಂದು ಮಹಿಳೆಯರ ಬದುಕಿನಲ್ಲಿ ಆಗಿರುವ ಬದಲಾವಣೆಗಳನ್ನು ನೋಡಿದಾಗ ಆತ್ಮತೃಪ್ತಿ ಉಂಟಾಗುತ್ತಿದೆ” ಎಂದು ಹೇಳಿದರು.
ಮಹಿಳೆಯರಿಗೆ ಸರ್ಕಾರ ತವರಿನ ಪ್ರೀತಿ, ವಾತ್ಸಲ್ಯ ಮತ್ತು ಆರ್ಥಿಕ ಭದ್ರತೆಯನ್ನು ನೀಡಬೇಕು ಎಂಬ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆಯರು, ಗೃಹಲಕ್ಷ್ಮಿ ಯೋಜನೆಯ ಹಣ ನಮಗೆ ತವರುಮನೆಯಿಂದ ಬರುವ ಉಡುಗೊರೆಯಂತಿದೆ ಎಂದು ಭಾವುಕರಾಗಿ ಹೇಳಿದರು.
86 ಸಾವಿರ ಕೋಟಿ ರೂ. ವೆಚ್ಚ; ಜಿಲ್ಲೆ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿಯರ ಸಮಾವೇಶ
ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದ ಕುರಿತು ಮಾತನಾಡಿದ ಮುಖ್ಯಮಂತ್ರಿ, “ಈ ಯೋಜನೆಗಾಗಿ ಇದುವರೆಗೆ ಸುಮಾರು 86 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ಯೋಜನೆಯ ಒಟ್ಟು ವೆಚ್ಚ 1 ಲಕ್ಷ ಕೋಟಿ ರೂ. ತಲುಪಿದ ಸಂದರ್ಭದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗೃಹಲಕ್ಷ್ಮಿಯರ ಬೃಹತ್ ಸಮಾವೇಶಗಳನ್ನು ಆಯೋಜಿಸಲಾಗುವುದು” ಎಂದು ಘೋಷಿಸಿದರು.
“ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ನಾನು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2,000 ರೂ.ಗಳನ್ನು ಇಟ್ಟು, ಈ ಯೋಜನೆಯನ್ನು ಜಾರಿಗೆ ತರುವ ಶಕ್ತಿಯನ್ನು ನೀಡುವಂತೆ ಪ್ರಾರ್ಥಿಸಿದ್ದೆವು. ರಾಜ್ಯದ ಜನರು ನಮಗೆ 136 ಸ್ಥಾನಗಳನ್ನು ನೀಡಿ ಆಶೀರ್ವದಿಸಿದರು. ಮಹಿಳೆಯರ ಬದುಕಿನಲ್ಲಿ ಬದಲಾವಣೆ ತರಬೇಕೆಂಬ ಸಂಕಲ್ಪದೊಂದಿಗೆ ಯೋಜನೆಯನ್ನು ಜಾರಿಗೊಳಿಸಿದ್ದೇವೆ” ಎಂದರು.
ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನೇತೃತ್ವದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಪ್ರಸ್ತುತ ರಾಜ್ಯದ 1.24 ಕೋಟಿ ಮಹಿಳೆಯರಿಗೆ ಯೋಜನೆಯ ಸೌಲಭ್ಯ ತಲುಪುತ್ತಿದೆ ಎಂದು ತಿಳಿಸಿದರು.
ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದಂತೆ ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಬೆಳಗಾವಿಯಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲಾಗಿದ್ದು, ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಯುವನಿಧಿ ಯೋಜನೆ ಹಾಗೂ ಪ್ರಿಯಾಂಕಾ ಗಾಂಧಿ ಅವರ ಭೇಟಿಯ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಸ್ಮರಿಸಿದರು.
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ
“ನಾವು ಜನರಿಗೆ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಅವುಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಇಂದಿರಾ ಗಾಂಧಿಯವರು ಜಾರಿಗೆ ತಂದ ವೃದ್ಧಾಪ್ಯ ವೇತನ ಯೋಜನೆಯನ್ನು ಯಾರಾದರೂ ನಿಲ್ಲಿಸಲು ಸಾಧ್ಯವಾಯಿತೇ? ಅದೇ ರೀತಿ ಜನರ ಬದುಕಿಗೆ ನೆರವಾಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಬೇರೆ ರಾಜ್ಯಗಳಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ಅನುಸರಿಸುವ ಪ್ರಯತ್ನ ನಡೆದಿದ್ದರೂ, ಕರ್ನಾಟಕದಲ್ಲಿ ಜಾರಿಗೊಳಿಸಿದ ರೀತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಗೃಹಲಕ್ಷ್ಮಿ ಫಲಾನುಭವಿಗಳ ಮರುಪರಿಶೀಲನೆಗೆ ಮುಂದಾದ ಸರ್ಕಾರ
ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮರುಪರಿಶೀಲನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
“ಇತ್ತೀಚೆಗೆ ಗೃಹಜ್ಯೋತಿ ಯೋಜನೆಯ ಕುರಿತು ಸಮೀಕ್ಷೆ ನಡೆಸಿದಾಗ ಕೆಲವರು ಯೋಜನೆಯ ಸೌಲಭ್ಯ ಬೇಡವೆಂದು ತಿಳಿಸಿದ್ದಾರೆ. ಇನ್ನೂ ಕೆಲವರು ಅಗತ್ಯ ದಾಖಲೆಗಳನ್ನು ನೀಡಲು ಹಿಂದೇಟು ಹಾಕಿದ್ದಾರೆ. ಇದೇ ರೀತಿ ಗೃಹಲಕ್ಷ್ಮಿ ಯೋಜನೆಯಲ್ಲಿಯೂ ಕೆಲವು ಲೋಪಗಳು ಕಂಡುಬಂದಿವೆ” ಎಂದರು.
“ಒಂದು ಲಕ್ಷಕ್ಕೂ ಹೆಚ್ಚು ಮೃತ ವ್ಯಕ್ತಿಗಳ ಖಾತೆಗಳಿಗೆ ಹಣ ವರ್ಗಾವಣೆಯಾಗುತ್ತಿರುವುದು, ಬೇರೆ ರಾಜ್ಯಗಳ ಮಹಿಳೆಯರು ಯೋಜನೆಯ ಸೌಲಭ್ಯ ಪಡೆಯುತ್ತಿರುವುದು ಹಾಗೂ ಫಲಾನುಭವಿಗಳ ಮೊಬೈಲ್ ಸಂಖ್ಯೆಯಲ್ಲಿ ವ್ಯತ್ಯಾಸಗಳಿರುವುದು ಗಮನಕ್ಕೆ ಬಂದಿದೆ. ಬಾಗಲಕೋಟೆಯ ಫಲಾನುಭವಿಯೊಬ್ಬರ ವಿವರ ಪರಿಶೀಲಿಸಿದಾಗ ಮೊಬೈಲ್ ಸಂಖ್ಯೆ ಒಂದು ಊರಿನದ್ದಾಗಿದ್ದು, ಹಣ ಬೇರೆಯವರಿಗೆ ತಲುಪುತ್ತಿರುವುದು ಕಂಡುಬಂದಿದೆ. ಕೆಲವು ಫಲಾನುಭವಿಗಳ ಖಾತೆಗೆ ಜಮೆಯಾಗುವ ಹಣ ಸಾಲದ ಕಂತಿನ ರೂಪದಲ್ಲಿ ಕಡಿತವಾಗುತ್ತಿರುವ ದೂರುಗಳೂ ಬಂದಿವೆ” ಎಂದು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸಲು ವಿಶೇಷ ಫಾರಂ ಸಿದ್ಧಪಡಿಸಲಾಗಿದೆ. ಫಲಾನುಭವಿಗಳು ತಮ್ಮದೇ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಸರ್ಕಾರದಿಂದ ಬರುವ ಸಂದೇಶಗಳು ನೇರವಾಗಿ ಫಲಾನುಭವಿಗಳಿಗೆ ತಲುಪುವಂತಾಗಬೇಕು ಎಂದು ಮನವಿ ಮಾಡಿದರು.
ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಆದ್ಯತೆ
“ಗುರುವಾರ ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷ ಪೂರ್ಣಗೊಂಡಿವೆ. ಮಹಿಳೆಯರು ಕುಟುಂಬದ ಕಣ್ಣು ಎಂಬ ಮಾತಿದೆ. ಬಹುತೇಕ ಮಹಿಳೆಯರು ಗೃಹಲಕ್ಷ್ಮಿ ಹಣವನ್ನು ಮಕ್ಕಳ ಶಿಕ್ಷಣ, ಕುಟುಂಬದ ನಿರ್ವಹಣೆ, ಸಾಲ ಮರುಪಾವತಿ ಹಾಗೂ ಸ್ವಂತ ಉದ್ಯಮಗಳಿಗೆ ಬಳಸಿಕೊಂಡಿದ್ದಾರೆ. ಇನ್ನೂ ಕೆಲವರು ತಮ್ಮ ಅಗತ್ಯಗಳಿಗಾಗಿ ಬಳಸಿಕೊಂಡಿದ್ದಾರೆ. ಈ ಹಣ ಸದ್ಬಳಕೆಯಾಗಬೇಕು ಎಂಬುದು ಸರ್ಕಾರದ ಉದ್ದೇಶ” ಎಂದು ಹೇಳಿದರು.
ಯೋಜನೆಯ ಹಣವನ್ನು ಮಹಿಳೆಯರು ಯಾವ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಅವರಿಗೆ ಎದುರಾಗುತ್ತಿರುವ ಸಮಸ್ಯೆಗಳೇನು ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದಲೇ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸಲಾಗುತ್ತಿದೆ. ಪಂಚಾಯಿತಿ ಮಟ್ಟದಲ್ಲಿಯೂ ಗ್ಯಾರಂಟಿ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಸಮಿತಿಯ ಸದಸ್ಯರು ಫಲಾನುಭವಿಗಳ ಸಂಪರ್ಕದಲ್ಲಿದ್ದು ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ ಎಂದರು.
ಮುಂದಿನ ಅಧಿವೇಶನಕ್ಕೂ ಮುನ್ನ ಮಹಿಳೆಗೆ ಸಚಿವ ಸ್ಥಾನ
“ಮುಂದಿನ ವಿಧಾನಮಂಡಲ ಅಧಿವೇಶನಕ್ಕೂ ಮೊದಲೇ ಒಬ್ಬ ಮಹಿಳೆಯನ್ನು ಸಚಿವರನ್ನಾಗಿ ನೇಮಕ ಮಾಡಲಾಗುವುದು” ಎಂದು ಮುಖ್ಯಮಂತ್ರಿ ತಿಳಿಸಿದರು.
ಗೃಹಲಕ್ಷ್ಮಿ ಫಲಾನುಭವಿಗಳ ಮರುಪರಿಶೀಲನೆ ಸಂದರ್ಭದಲ್ಲಿ ಸರಿಯಾದ ಮಾಹಿತಿಯನ್ನು ನೀಡಬೇಕು. ಅದರಲ್ಲೂ ತಮ್ಮದೇ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಸರ್ಕಾರದ ಸಂದೇಶಗಳು ಫಲಾನುಭವಿಗಳಿಗೆ ನೇರವಾಗಿ ತಲುಪುವಂತಾಗಬೇಕು ಎಂದು ಮನವಿ ಮಾಡಿದರು.
“ಗೃಹಲಕ್ಷ್ಮಿ ಹಣದಿಂದ ಮಹಿಳೆಯರು ಉದ್ಯಮ ಆರಂಭಿಸಿರುವುದು, ಮಕ್ಕಳ ಶಿಕ್ಷಣಕ್ಕೆ ಬಳಸಿಕೊಂಡಿರುವುದು ಸಂತಸ ತಂದಿದೆ. ವಿದ್ಯೆ ಎನ್ನುವುದು ಬಹುದೊಡ್ಡ ಆಸ್ತಿ. ಮಕ್ಕಳ ಭವಿಷ್ಯಕ್ಕಾಗಿ ಹಣ ವಿನಿಯೋಗಿಸುವುದು ಒಳ್ಳೆಯ ಬೆಳವಣಿಗೆ. ಆದರೆ ಈ ಹಣವನ್ನು ಮೀಟರ್ ಬಡ್ಡಿ ಅಥವಾ ಚೀಟಿ ವ್ಯವಹಾರಗಳಲ್ಲಿ ಹೂಡಿಕೆ ಮಾಡಬೇಡಿ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. 2028ರಲ್ಲಿಯೂ ಮತ್ತೆ ಅಧಿಕಾರಕ್ಕೆ ಬರಲು ನಿಮ್ಮ ಬೆಂಬಲ ಬೇಕು. ಈ ಯೋಜನೆಗಳ ಕುರಿತು ನಿಮ್ಮ ಪತಿ ಹಾಗೂ ಗೆಳತಿಯರಿಗೂ ಅರಿವು ಮೂಡಿಸಿ” ಎಂದು ಹೇಳಿದರು.
ಮೀಟರ್ ಬಡ್ಡಿ ವ್ಯವಹಾರದಿಂದ ದೂರವಿರಿ
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಕೆಲವರು ತುರ್ತು ಹಣಕಾಸಿನ ಅಗತ್ಯಕ್ಕಾಗಿ ಮೀಟರ್ ಬಡ್ಡಿ ವ್ಯವಹಾರಕ್ಕೆ ಸಿಲುಕುತ್ತಿರುವುದು ಆತಂಕಕಾರಿ ಸಂಗತಿ ಎಂದು ಮುಖ್ಯಮಂತ್ರಿ ಹೇಳಿದರು.
“ಕೆಲವರು ಬೆಳಿಗ್ಗೆ ಮಾರುಕಟ್ಟೆಗೆ ಹೋಗುವಾಗ 2,000 ರೂ. ಸಾಲ ಪಡೆದು, ಸಂಜೆ ಹಣ ಹಿಂದಿರುಗಿಸುವಾಗ ಶೇ.10ರಷ್ಟು ಬಡ್ಡಿ ನೀಡುವಂತಹ ವ್ಯವಹಾರ ನಡೆಸುತ್ತಿದ್ದಾರೆ. ಶೇ.5ರಿಂದ 10ರಷ್ಟು ಬಡ್ಡಿ ವಸೂಲಿ ಮಾಡುವ ಪದ್ಧತಿಯೂ ಇದೆ. ಇಂತಹ ಅತಿಯಾದ ಬಡ್ಡಿ ವ್ಯವಹಾರಗಳಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೆಲವೊಮ್ಮೆ ಇವು ಅಪರಾಧ ಪ್ರಕರಣಗಳಿಗೂ ಕಾರಣವಾಗುತ್ತಿವೆ. ಆದರೆ, ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಇಂತಹ ವ್ಯವಹಾರಗಳಿಂದ ದೂರವಿರುವಂತೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಅಗತ್ಯಬಿದ್ದರೆ ಇಂತಹ ವ್ಯವಹಾರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಚೀಟಿ ವ್ಯವಹಾರದಲ್ಲೂ ಎಚ್ಚರಿಕೆ ಅಗತ್ಯ
ಚೀಟಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇಂತಹ ವ್ಯವಹಾರಗಳಲ್ಲಿ ಹಣ ಹೂಡುವವರು ಎಚ್ಚರಿಕೆಯಿಂದ ಇರಬೇಕು ಎಂದರು.
“ಚೀಟಿ ವ್ಯವಹಾರಗಳಲ್ಲಿ ಕೊನೆಯಲ್ಲಿ ಹಣ ಕಟ್ಟಿದವರಿಗೆ ಹಣ ಸಿಗದೆ ಹೋಗುವ ಸಾಧ್ಯತೆಗಳಿವೆ. ಇದರಿಂದ ಆರ್ಥಿಕ ನಷ್ಟದ ಜತೆಗೆ ಕಾನೂನು ಸಮಸ್ಯೆಗಳೂ ಎದುರಾಗಬಹುದು. ಹೀಗಾಗಿ, ಮಹಿಳೆಯರು ಇಂತಹ ವ್ಯವಹಾರಗಳಲ್ಲಿ ಹಣ ತೊಡಗಿಸುವ ಮೊದಲು ಎಚ್ಚರಿಕೆ ವಹಿಸಬೇಕು. ಗೃಹಲಕ್ಷ್ಮಿ ಹಣವನ್ನು ಕುಟುಂಬದ ಅಭಿವೃದ್ಧಿ, ಮಕ್ಕಳ ಶಿಕ್ಷಣ ಹಾಗೂ ಸ್ವಾವಲಂಬಿ ಉದ್ಯಮಗಳಿಗೆ ಬಳಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಒಂದೇ ದಿನ 7 ಸಾವಿರ ಕೋಟಿ ರೂ. ಬಿಡುಗಡೆ
ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
“ದೀಪಾವಳಿ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಗೆ 36 ತಿಂಗಳು, ಅಂದರೆ ಮೂರು ವರ್ಷ ಪೂರ್ಣಗೊಂಡಿವೆ. ಗುರುವಾರ ಒಂದೇ ದಿನ ಸುಮಾರು 7 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಫಲಾನುಭವಿಗಳಿಗೆ ಹಣ ತಲುಪುವಲ್ಲಿ ಏನಾದರೂ ಸಮಸ್ಯೆಗಳಿವೆಯೇ ಎಂಬುದನ್ನು ತಿಳಿದುಕೊಳ್ಳಲು ಈ ಸಂವಾದ ನಡೆಸಿದ್ದೇನೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಆಗಿರುವ ಅನುಕೂಲಗಳ ಬಗ್ಗೆಯೂ ಅವರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಉಳಿದ ಫಲಾನುಭವಿಗಳೊಂದಿಗೂ ಮಾತನಾಡಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯ ಮೂರು ವರ್ಷದ ಪಯಣದಲ್ಲಿ 2 ಸಾವಿರ ರೂ.ಗಳ ಮಾಸಿಕ ನೆರವು ಮಹಿಳೆಯರ ಕೈಗೆ ಆರ್ಥಿಕ ಶಕ್ತಿಯನ್ನು ನೀಡಿರುವುದರ ಜತೆಗೆ, ಕುಟುಂಬದ ನಿರ್ಧಾರಗಳಲ್ಲಿ ಅವರ ಪಾತ್ರವನ್ನು ಹೆಚ್ಚಿಸಿದೆ ಎಂಬುದು ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಸಾರವಾಗಿತ್ತು. ಒಬ್ಬ ತಾಯಿ ಮಗನ ವೈದ್ಯಕೀಯ ಶಿಕ್ಷಣಕ್ಕೆ ನೆರವಾದರೆ, ಮತ್ತೊಬ್ಬಳು ಮಗಳ ವಿದೇಶಿ ಕನಸಿಗೆ ಬೆನ್ನೆಲುಬಾಗಿದ್ದಾಳೆ. ಇನ್ನೊಬ್ಬ ಮಹಿಳೆ ಉದ್ಯಮ ಆರಂಭಿಸಿ ಇತರರಿಗೆ ಉದ್ಯೋಗ ನೀಡಿದ್ದಾಳೆ. ಹೀಗೆ ಕೃಷ್ಣಾದಲ್ಲಿ ಅನಾವರಣಗೊಂಡ ಮಹಿಳೆಯರ ಯಶೋಗಾಥೆಗಳು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಬದುಕಿನ ವಿವಿಧ ಮುಖಗಳನ್ನು ತೆರೆದಿಟ್ಟವು.
ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು, ಮಹಿಳಾ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.








