ಸಾಣೇಹಳ್ಳಿ: ಬಾಲ್ಯದ ಮುಗ್ಧತೆಯಲ್ಲಿ ತಪ್ಪು ಮಾಡಿದರೂ ಅದನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ ಇರುತ್ತದೆ. ಆದರೆ ವಯಸ್ಸು, ಅನುಭವ ಮತ್ತು ಬದುಕಿನ ಓಟ ಹೆಚ್ಚಾದಂತೆ ಮನುಷ್ಯನಲ್ಲಿ ಸ್ವಾರ್ಥವೂ ಬೆಳೆಯುತ್ತದೆ. ತನ್ನ ಸುಖವನ್ನೇ ಮುಖ್ಯವೆಂದು ಭಾವಿಸುವ ಮನೋಭಾವ ಬಲಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಯ ಬದುಕಿನಲ್ಲಿ ಮತ್ತೆ ಪ್ರಾಮಾಣಿಕತೆ, ಮಾನವೀಯತೆ ಮತ್ತು ಲೋಕಕಲ್ಯಾಣದ ಆಶಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಶರಣರು ಕಂಡ ಸರ್ವೋದಯ ಸಮಾಜದ ಕನಸನ್ನು ನನಸಾಗಿಸಲು ಪ್ರತಿಯೊಬ್ಬರೂ ತಮ್ಮ ಬದುಕನ್ನು ತಿದ್ದಿಕೊಳ್ಳಬೇಕು ಎಂದು ಹಿರಿಯ ಲೇಖಕ ಬಸವಲಿಂಗ ಶಿವನಕೆರೆ ಅವರು ಹೇಳಿದರು.
ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ನಾಟಕೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ವಿಚಾರಸಂಕಿರಣದಲ್ಲಿ ‘ಪ್ರಾಮಾಣಿಕತೆಯಿಂದ ಪರಮಾನಂದ’ ವಿಷಯವಾಗಿ ಅವರು ಉಪನ್ಯಾಸ ನೀಡಿದರು.
ಸರ್ವೋದಯ ಸಮಾಜದ ಕನಸು ಕಂಡವರು ಬಸವಾದಿ ಶರಣರು. ಸಮಾಜದ ಎಲ್ಲ ವರ್ಗದ ಜನರೂ ಸಮಾನತೆಯಿಂದ, ಗೌರವದಿಂದ ಮತ್ತು ನೆಮ್ಮದಿಯಿಂದ ಬದುಕುವ ಕಲ್ಯಾಣ ಸಮಾಜ ನಿರ್ಮಾಣಕ್ಕಾಗಿ ಅವರು ನಿರಂತರವಾಗಿ ಶ್ರಮಿಸಿದರು. ವ್ಯಕ್ತಿಯ ಉನ್ನತಿಯಷ್ಟೇ ಸಮಾಜದ ಉನ್ನತಿಯೂ ಮುಖ್ಯ ಎಂಬುದನ್ನು ತಮ್ಮ ನಡೆ-ನುಡಿಗಳ ಮೂಲಕ ತೋರಿಸಿಕೊಟ್ಟರು. ಅಂತಹ ಶರಣರ ಆಶಯದಂತೆ ಇಂದಿನ ಸಮಾಜದಲ್ಲಿಯೂ ಸರ್ವೋದಯದ ಚಿಂತನೆ ಬೆಳೆದು ಬರಬೇಕಿದೆ. ಇದಕ್ಕಾಗಿ ಪ್ರತಿಯೊಬ್ಬರೂ ತಮ್ಮಲ್ಲಿ ಗುಣಸಂಪಾದನೆ ಮಾಡಿಕೊಳ್ಳಬೇಕು. ಸ್ವಾರ್ಥದ ಬದಲು ಲೋಕಕಲ್ಯಾಣದ ಕಡೆಗೆ ಮನಸ್ಸು ತುಡಿಯಬೇಕು. ಪ್ರಾಮಾಣಿಕವಾಗಿ ಬದುಕಲು ನಿರಂತರ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಬಾಲ್ಯದಲ್ಲಿ ನಾವು ಮಾಡಿದ ಸಣ್ಣ ತಪ್ಪುಗಳನ್ನೂ ಮುಚ್ಚಿಡದೆ ಒಪ್ಪಿಕೊಳ್ಳುತ್ತಿದ್ದೆವು. ಆದರೆ ದೊಡ್ಡವರಾಗುತ್ತಿದ್ದಂತೆ ನಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುವ, ಇತರರ ಮೇಲೆ ಹೊಣೆ ಹೊರಿಸುವ ಪ್ರವೃತ್ತಿ ಬೆಳೆಯುತ್ತದೆ. ಇದು ವ್ಯಕ್ತಿಯ ವ್ಯಕ್ತಿತ್ವವನ್ನು ದುರ್ಬಲಗೊಳಿಸುತ್ತದೆ. ನಿಜವಾದ ಸಂತೋಷ ಹೊರಗಿನ ಸಂಪತ್ತು, ಅಧಿಕಾರ ಅಥವಾ ಸ್ಥಾನಮಾನಗಳಲ್ಲಿ ಇಲ್ಲ. ನಮ್ಮ ಅಂತರಂಗದ ಶುದ್ಧತೆ ಮತ್ತು ಪ್ರಾಮಾಣಿಕ ಬದುಕಿನಲ್ಲಿದೆ. ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಬದುಕುವುದೇ ನಿಜವಾದ ಪರಮಾನಂದಕ್ಕೆ ದಾರಿ ಎಂದರು.
ಚಿತ್ರದುರ್ಗದ ಜಯದೇವ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾಮಠದ ಶಿವಕುಮಾರ ಸ್ವಾಮೀಜಿ ಅವರು ಪ್ರಾಮಾಣಿಕ ಬದುಕಿಗೆ ಮಾದರಿಯಾದವರು. ಅವರಿಗಿಂತ ಮೊದಲು ಮಹಾತ್ಮ ಗಾಂಧೀಜಿ ಅವರು ಸತ್ಯ, ಪ್ರೀತಿ, ಅಹಿಂಸೆ ಮತ್ತು ಪ್ರಾಮಾಣಿಕತೆಯನ್ನು ಜೀವನದ ಮೌಲ್ಯಗಳನ್ನಾಗಿ ಅಳವಡಿಸಿಕೊಂಡು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದರು. ಅದಕ್ಕೂ ಹಿಂದೆಯೇ ಬಸವಾದಿ ಶರಣರು ತಮ್ಮ ಬದುಕಿನ ಮೂಲಕ ಪ್ರಾಮಾಣಿಕತೆಯ ಮಹತ್ವವನ್ನು ಜಗತ್ತಿಗೆ ಸಾರಿದ್ದರು.
ಬಸವಣ್ಣನವರು ಪ್ರತಿಪಾದಿಸಿದ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಸೇರಿದಂತೆ ಶರಣರ ವಚನಗಳಲ್ಲಿರುವ ನೈತಿಕ ಮೌಲ್ಯಗಳು ಇಂದಿಗೂ ಬದುಕಿಗೆ ದಾರಿದೀಪವಾಗಿವೆ. ಇವು ಕೇವಲ ಉಪದೇಶದ ಮಾತುಗಳಲ್ಲ, ಮನುಷ್ಯ ತನ್ನ ದೈನಂದಿನ ಬದುಕಿನಲ್ಲಿ ಪಾಲಿಸಬೇಕಾದ ಜೀವನಸೂತ್ರಗಳು. ಇಂತಹ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ. ಪ್ರಾಮಾಣಿಕತೆ ವ್ಯಕ್ತಿಯ ಬದುಕನ್ನು ಮಾತ್ರವಲ್ಲ, ಇಡೀ ಸಮಾಜದ ಸ್ವರೂಪವನ್ನೇ ಬದಲಿಸುವ ಶಕ್ತಿ ಹೊಂದಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಲೇಖಕ ಎಚ್.ಎಸ್. ನವೀನಕುಮಾರ್ ಅವರ ‘ನಿನ್ನ ಬದುಕಿಗೆ ನೀನೇ ನಾವಿಕ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ನಂತರ ಮಾತನಾಡಿದ ಕೃತಿಯ ಲೇಖಕ ಎಚ್.ಎಸ್. ನವೀನಕುಮಾರ್, ಜಗತ್ತಿನಲ್ಲಿರುವ ಅನೇಕ ಸಂಗತಿಗಳನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿ ತೊಡಗಿರುವ ನಾವು ನಮ್ಮನ್ನು ನಾವೇ ಅರಿತುಕೊಳ್ಳುವಲ್ಲಿ ಹಿಂದೆ ಉಳಿದಿದ್ದೇವೆ. ಇತರರ ಬದುಕು, ಸಾಧನೆ ಮತ್ತು ಯಶಸ್ಸಿನ ಬಗ್ಗೆ ತಿಳಿದಿದ್ದರೂ ನಮ್ಮೊಳಗಿನ ಶಕ್ತಿಯನ್ನು ಗುರುತಿಸಿಕೊಳ್ಳುವುದಿಲ್ಲ. ನಮ್ಮ ಆತ್ಮಸುಖ ಎಲ್ಲಿದೆ, ನಿಜವಾದ ನೆಮ್ಮದಿ ಯಾವುದರಲ್ಲಿ ಸಿಗುತ್ತದೆ ಎಂಬುದನ್ನು ಅರಿಯಲು ಸಾಧ್ಯವಾಗುತ್ತಿಲ್ಲ. ನಮ್ಮೊಳಗೆ ಪ್ರಾಮಾಣಿಕವಾಗಿ ಬದುಕುವ ಶಕ್ತಿ ಇದ್ದರೆ ಅದೇ ಆನಂದದ ಮೂಲವಾಗುತ್ತದೆ ಎಂದು ಹೇಳಿದರು.
ಇದಕ್ಕೆ ಉದಾಹರಣೆಯಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸಿ.ವಿ. ರಾಮನ್ ಅವರ ಬದುಕಿನಲ್ಲಿ ನಡೆದ ಘಟನೆಯೊಂದನ್ನು ವಿವರಿಸಿದರು.
ಸಿ.ವಿ. ರಾಮನ್ ಅವರು ಐವರು ವಿಜ್ಞಾನಿಗಳನ್ನು ಆಯ್ಕೆ ಮಾಡಿಕೊಳ್ಳಲು ಸಂದರ್ಶನ ಏರ್ಪಡಿಸಿದ್ದರು. ಸಂದರ್ಶನ ಮುಗಿದ ಬಳಿಕ ಯುವಕನೊಬ್ಬ ಮರದ ಕೆಳಗೆ ಕುಳಿತು ಕಾಯುತ್ತಿರುವುದನ್ನು ಅವರು ಗಮನಿಸಿದರು. ಏಕೆ ಅಲ್ಲಿಯೇ ಕಾಯುತ್ತಿದ್ದೀಯ ಎಂದು ಪ್ರಶ್ನಿಸಿದಾಗ, ಪ್ರಯಾಣ ವೆಚ್ಚಕ್ಕಾಗಿ ನೀಡಿದ್ದ ಹಣದಲ್ಲಿ ಏಳು ರೂಪಾಯಿ ಹೆಚ್ಚುವರಿಯಾಗಿ ನೀಡಲಾಗಿದೆ. ಅದನ್ನು ಹಿಂದಿರುಗಿಸಲು ಕಾಯುತ್ತಿದ್ದೇನೆ ಎಂದು ಯುವಕ ಉತ್ತರಿಸಿದ.
ಯುವಕನ ಈ ಪ್ರಾಮಾಣಿಕತೆ ಸಿ.ವಿ. ರಾಮನ್ ಅವರ ಗಮನ ಸೆಳೆಯಿತು. ಮರುದಿನ ಕಚೇರಿಗೆ ಬರುವಂತೆ ಸೂಚಿಸಿದರು. ಅದರಂತೆ ಬಂದ ಯುವಕನನ್ನು ಸ್ವತಃ ರಾಮನ್ ಅವರೇ ಆತ್ಮೀಯವಾಗಿ ಸ್ವಾಗತಿಸಿ ಉದ್ಯೋಗಕ್ಕೆ ನೇಮಕ ಮಾಡಿಕೊಂಡರು. ಆ ಯುವಕ ಮುಂದೆ ಖಗೋಳ ವಿಜ್ಞಾನಿಯಾಗಿ ಗುರುತಿಸಿಕೊಂಡ ಚಂದ್ರಶೇಖರನ್. ತಮ್ಮ ಪ್ರಾಮಾಣಿಕತೆಯಿಂದ ಬದುಕಿನಲ್ಲಿ ಮಹತ್ವದ ತಿರುವು ಪಡೆದ ಅವರು, ನಂತರ ‘ನನ್ನ ಬದುಕನ್ನು ಬದಲಿಸಿದ ಏಳು ರೂಪಾಯಿ’ ಎಂಬ ಪುಸ್ತಕವನ್ನೂ ಬರೆದರು ಎಂದು ನವೀನಕುಮಾರ್ ತಿಳಿಸಿದರು.
ಏಳು ರೂಪಾಯಿಯ ಮೊತ್ತ ದೊಡ್ಡದಲ್ಲ. ಆದರೆ ಆ ಹಣವನ್ನು ಹಿಂದಿರುಗಿಸಬೇಕೆಂಬ ಯುವಕನ ಮನಸ್ಸಿನ ಪ್ರಾಮಾಣಿಕತೆ ದೊಡ್ಡದು. ಬದುಕಿನಲ್ಲಿ ಕೆಲವೊಮ್ಮೆ ಸಣ್ಣ ಘಟನೆಗಳೇ ದೊಡ್ಡ ಬದಲಾವಣೆಗೆ ಕಾರಣವಾಗುತ್ತವೆ. ಪ್ರಾಮಾಣಿಕತೆ ಎನ್ನುವುದು ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತವಾದ ಗುಣವಲ್ಲ. ಅದು ವ್ಯಕ್ತಿಯ ವ್ಯಕ್ತಿತ್ವ, ನಡವಳಿಕೆ ಮತ್ತು ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಪ್ರತಿಫಲಿಸಬೇಕು. ನಮ್ಮ ಬದುಕಿನ ನಾವಿಕರು ನಾವೇ ಆಗಿರುವುದರಿಂದ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು ಎಂಬ ಸಂದೇಶವನ್ನು ಅವರು ನೀಡಿದರು.
ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಎಚ್.ಡಿ. ತಮ್ಮಯ್ಯ, ಡಿ.ಜಿ. ಶಾಂತನಗೌಡ, ಡಾ. ಧನಂಜಯ ಸರ್ಜಿ, ಕೆ. ಕಲ್ಯಾಣ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.










